ಮುಂಬೈ, ಅಕ್ಟೋಬರ್ 13: ಎರಡು ದಿನಗಳ ಹಿಂದೆ ವಿವಿಧ ಸಹಕಾರಿ ಬ್ಯಾಂಕುಗಳಿಗೆ ದಂಡ ವಿಧಿಸಿದ್ದ ಆರ್ಬಿಐ ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಮೇಲೆ ಪೆನಾಲ್ಟಿ ಹಾಕಿದೆ. ಕೆವೈಸಿ ಸೇರಿದಂತೆ ಕೆಲ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ 5.39 ಕೋಟಿ ರೂ ಮೊತ್ತದ ದಂಡ ಹಾಕಿರುವುದಾಗಿ ಆರ್ಬಿಐ ಗುರುವಾರ (ಅ. 13) ಹೇಳಿದೆ.
ಕೆವೈಸಿ ನಿಯಮಗಳಲ್ಲದೇ ಇನ್ನೂ ಕೆಲ ಸಂಗತಿಗಳಲ್ಲಿ ಪೇಟಿಎಂ ಬ್ಯಾಂಕ್ ತಪ್ಪೆಸಗಿರುವುದು ತಿಳಿದುಬಂದಿದೆ. ಪೇಟಿಎಂ ಬ್ಯಾಂಕ್ಸ್ನ ಪರವಾನಿಗೆ ವಿಚಾರದಲ್ಲಿ ಆರ್ಬಿಐನ ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯಾಗಿದೆ. ಸೈಬರ್ ಸೆಕ್ಯೂರಿಟಿ ಫ್ರೇಮ್ವರ್ಕ್ ನಿಯಮಗಳ ಉಲ್ಲಂಘನೆಯಾಗಿದೆ. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ಗಳ ಸುರಕ್ಷತೆಯ ನಿಯಮಗಳಲ್ಲಿ ಉಲ್ಲಂಘನೆ ಆಗಿದೆ ಎಂಬುದು ಆರ್ಬಿಐ ಪ್ರಕಟಣೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ. 5.02ಕ್ಕೆ ಇಳಿಕೆ; 3 ತಿಂಗಳಲ್ಲೇ ಕನಿಷ್ಠ ದರ
ಆರ್ಬಿಐನಿಂದ ನಿಗದಿಪಡಿಸಿದ ಆಡಿಟರ್ಗಳು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಕೆವೈಸಿ ಇತ್ಯಾದಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ 5 ಕೋಟಿ ರೂಗಿಂತ ಹೆಚ್ಚು ಮೊತ್ತದ ದಂಡ ವಿಧಿಸಲಾಗಿದೆ.
ಅಕ್ಟೋಬರ್ 9ರಂದು ಆರ್ಬಿಐ ದೇಶದ ವಿವಿಧೆಡೆ ಇರುವ ಐದು ಸಹಕಾರಿ ಬ್ಯಾಂಕುಗಳ ಮೇಲೂ ನಿಯಮ ಉಲ್ಲಂಘನೆಗಳ ಕಾರಣಕ್ಕೆ ದಂಡ ವಿಧಿಸಿತ್ತು. ಎಸ್ಬಿಪಿಪಿ ಕೋ ಆಪರೇಟಿವ್ ಬ್ಯಾಂಕ್, ಸಹ್ಯಾದ್ರಿ ಸಹಕಾರಿ ಬ್ಯಾಂಕ್, ರಹೀಮತ್ಪುರ್ ಸಹಕಾರಿ ಬ್ಯಾಂಕ್, ಗಾಧಿಂಗ್ಲಜ್ ಅರ್ಬನ್ ಕೋ ಆಪರೇಟಿಂವ್ ಬ್ಯಾಂಕ್, ಕಲ್ಯಾಣ್ ಜನತಾ ಸಹಕಾರಿ ಬ್ಯಾಂಕ್, ಈ ಐದು ಬ್ಯಾಂಕುಗಳು ಆರ್ಬಿಐನಿಂದ ದಂಡ ಎದುರಿಸಿವೆ.
ಇದನ್ನೂ ಓದಿ: ಗಂಗಾನದಿಯ ನೀರು ಮತ್ತು ಪೂಜಾ ಸಾಮಗ್ರಿ ಮೇಲೆ ಶೇ. 18ರಷ್ಟು ಜಿಎಸ್ಟಿ ಇದೆಯಾ? ಇಲ್ಲಿದೆ ಕೇಂದ್ರ ಸರ್ಕಾರ ಸ್ಪಷ್ಟನೆ
ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿರುವ ಈ ಸಹಕಾರಿ ಬ್ಯಾಂಕುಗಳಿಗೆ 1 ಲಕ್ಷ ರೂನಿಂದ ಹಿಡಿದು 13 ಲಕ್ಷ ರೂವರೆಗೆ ಆರ್ಬಿಐ ದಂಡ ಹಾಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Thu, 12 October 23