ಸೆಪ್ಟೆಂಬರ್ನಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ. 5.02ಕ್ಕೆ ಇಳಿಕೆ; 3 ತಿಂಗಳಲ್ಲೇ ಕನಿಷ್ಠ ದರ
September 2023 Inflation: ಜುಲೈ ತಿಂಗಳಲ್ಲಿ ಹಣದುಬ್ಬರ ಶೇ. 7.44ರಷ್ಟಿತ್ತು. ಆಗಸ್ಟ್ ತಿಂಗಳಲ್ಲಿ ಶೇ. 6.83ಕ್ಕೆ ಇಳಿದಿತ್ತು. ಈಗ ಸೆಪ್ಟೆಂಬರ್ನಲ್ಲಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿ ಶೇ. 5.02ಕ್ಕೆ ಬಂದಿದೆ. ಕಳೆದ ಮೂರು ತಿಂಗಳಲ್ಲೇ ಇದು ಅತಿಕಡಿಮೆ ಹಣದುಬ್ಬರ ದರವಾಗಿದೆ. ಸೆಪ್ಟೆಂಬರ್ನಲ್ಲಿ ಹಣದುಬ್ಬರ ಶೇ. 5.40ರಷ್ಟಿರಬಹುದು ಎಂದು ಈ ಹಿಂದೆ ವಿವಿಧ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಹಣದುಬ್ಬರ ದರ ನಿರೀಕ್ಷೆಮೀರಿ ಕಡಿಮೆ ಆಗಿದೆ.
ನವದೆಹಲಿ, ಅಕ್ಟೋಬರ್ 12: ಸೆಪ್ಟೆಂಬರ್ ತಿಂಗಳ ಹಣದುಬ್ಬರ ದರ (Inflation Rate 2023 September) ನಿರೀಕ್ಷೆಮೀರಿ ಕಡಿಮೆ ಆಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಇಂದು ಪ್ರಕಟಿಸಿದ ಮಾಹಿತಿ ಪ್ರಕಾರ, ತರಕಾರಿ ಬೆಲೆಗಳ ಇಳಿಕೆಯ ಪರಿಣಾಮವಾಗಿ ಹಣದಬ್ಬರ ದರ ಶೇ. 5.02ಕ್ಕೆ ಇಳಿದಿದೆ. ಜುಲೈ ತಿಂಗಳಲ್ಲಿ ಹಣದುಬ್ಬರ ಶೇ. 7.44ರಷ್ಟಿತ್ತು. ಆಗಸ್ಟ್ ತಿಂಗಳಲ್ಲಿ ಶೇ. 6.83ಕ್ಕೆ ಇಳಿದಿತ್ತು. ಈಗ ಸೆಪ್ಟೆಂಬರ್ನಲ್ಲಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿ ಶೇ. 5.02ಕ್ಕೆ ಬಂದಿದೆ. ಕಳೆದ ಮೂರು ತಿಂಗಳಲ್ಲೇ ಇದು ಅತಿಕಡಿಮೆ ಹಣದುಬ್ಬರ ದರವಾಗಿದೆ.
ಸೆಪ್ಟೆಂಬರ್ನಲ್ಲಿ ಹಣದುಬ್ಬರ ಶೇ. 5.40ರಷ್ಟಿರಬಹುದು ಎಂದು ಈ ಹಿಂದೆ ವಿವಿಧ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಕಳೆದ ವಾರ (ಅ. 6) ಆರ್ಬಿಐ ಪ್ರಕಟಿಸಿದ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 4.8ರಿಂದ ಶೇ. 5ರಷ್ಟಿರಬಹುದು ಎಂದು ಅಂದಾಜು ಮಾಡಿತ್ತು. ಅಂತಿಮವಾಗಿ ಸೆಪ್ಟೆಂಬರ್ನ ಗ್ರಾಹಕ ಅನುಸೂಚಿ ದರ ಆಧಾರಿತ ಹಣದುಬ್ಬರವು ಆರ್ಬಿಐನ ಅಂದಾಜಿಗೆ ಸಮೀಪ ಇದೆ.
ಗಮನಾರ್ಹ ಎಂದರೆ, ಆರ್ಬಿಐನ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 2ರಿಂದ ಶೇ. 6ರವರ ಗಡಿಯೊಳಗೆ ಬಂದಿದೆ. ಆದರೆ, ಆರ್ಬಿಐನ ಮೂಲ ಹಣದುಬ್ಬರ ಮಿತಿ ಗುರಿಯಾದ ಶೇ. 4ರ ಗಡಿಗಿಂತ ಬಹಳ ದೂರವೇ ಇದೆ. ಶೇ. 4ರ ಹಣದುಬ್ಬರ ಗಡಿ ಆಚೆ ಹೋಗಿ ನಾಲ್ಕು ವರ್ಷಗಳೇ ಆಗಿವೆ. ಕಳೆದ ವಾರದ ಎಂಪಿಸಿ ಸಭೆಯಲ್ಲಿ ಹಣದುಬ್ಬರವನ್ನು ತಾಳಿಕೆ ಮಿತಿಯಾದ ಶೇ. 6ರ ಬದಲು ಶೇ. 4ರ ಮಟ್ಟಕ್ಕೆ ಇಳಿಸುವ ಗುರಿ ಇಟ್ಟುಕೊಳ್ಳಲು ಆರ್ಬಿಐ ನಿರ್ಧರಿಸಿದೆ. ಈ ನಿಟ್ಟಿಯಲ್ಲಿ ವಿವಿಧ ಕ್ರಮಗಳನ್ನು ಮುಂಬರುವ ಎಂಪಿಸಿ ಸಭೆಗಳಲ್ಲಿ ಕೈಗೊಳ್ಳುವ ನಿರೀಕ್ಷೆಇದೆ.
ಇದನ್ನೂ ಓದಿ: Pranjali Awasthi: 16 ವರ್ಷದ ಬಾಲಕಿ ಪ್ರಾಂಜಲಿ ಅವಸ್ಥಿ ಬಳಿ 100 ಕೋಟಿ ರೂ ಮೌಲ್ಯದ ಕಂಪನಿ
2022ರಲ್ಲಿ ಹಣದುಬ್ಬರ ಶೇ. 7.44ರಷ್ಟಕ್ಕೆ ಹೋಗಿತ್ತು. ಆಗಿನಿಂದ ಆರ್ಬಿಐ ಏಳೆಂಟು ಬಾರಿ ತನ್ನ ಬಡ್ಡಿದರಗಳನ್ನು ಸತತವಾಗಿ ಏರಿಸಿದೆ. ಈಗ ಬಡ್ಡಿದರ ಶೇ. 6.5ಕ್ಕೆ ಬಂದಿದೆ. ಈಗ್ಗೆ ಮೂರು ಬಾರಿಯಿಂದ ಇದೇ ದರವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಮುಂಬರುವ ದಿನಗಳಲ್ಲೂ ಬಡ್ಡಿದರ ಇಳಿಸುವ ಸಾಧ್ಯತೆ ಇಲ್ಲ. ಬಡ್ಡಿದರ ಮತ್ತಷ್ಟು ಏರಿಕೆ ಮಾಡುವುದು ಆರ್ಬಿಐನ ಕೊನೆಯ ಅಸ್ತ್ರವಾಗಬಹುದು. ಅದಕ್ಕೆ ಮುಂಚೆ ಹಣದ ಹರಿವು ಹಿಂಪಡೆಯುವ ನೀತಿ ಇತ್ಯಾದಿ ಕ್ರಮಗಳ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಆರ್ಬಿಐ ಪ್ರಯೋಗಿಸಿ ನೋಡುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ