2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?
Incentive scheme for small ticket UPI transactions: ಗ್ರಾಹಕರಿಂದ ಸಣ್ಣ ವ್ಯಾಪಾರಿಗಳಿಗೆ ಮಾಡಲಾಗುವ ಸಣ್ಣ ಮೊತ್ತದ ಯುಪಿಐ ಹಣ ಪಾವತಿಗಳಿಗೆ ಉತ್ತೇಜಿಸಲು ಸರ್ಕಾರ 1,500 ಕೋಟಿ ರೂ ಯೋಜನೆ ಘೋಷಿಸಿದೆ. ಈ ಇನ್ಸೆಂಟಿವ್ ಸ್ಕೀಮ್ಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದು 2024-25ರ ಹಣಕಾಸು ವರ್ಷಕ್ಕೆ ಅನ್ವಯ ಆಗುವ ಯೋಜನೆಯಾಗಿದೆ. ಸಣ್ಣ ವ್ಯಾಪಾರಿಗಳಿಗೆ ಗ್ರಾಹಕರು ಮಾಡುವ 2,000 ರೂ ಒಳಗಿನ ಪಾವತಿಗಳಿಗೆ ಶೇ. 0.15ರಷ್ಟು ಇನ್ಸೆಂಟಿವ್ ವ್ಯಾಪಾರಿಗಳಿಗೆ ಸಿಗುತ್ತದೆ.

ನವದೆಹಲಿ, ಮಾರ್ಚ್ 24: ಪ್ರಸಕ್ತ ಹಣಕಾಸು ವರ್ಷಕ್ಕೆ ಕಡಿಮೆ ಮೌಲ್ಯದ ಭೀಮ್ ಯುಪಿಐ ಹಣ ಪಾವತಿಗಳಿಗೆ (BHIM- UPI transactions) ಉತ್ತೇಜನ ನೀಡುವ ಯೋಜನೆಗೆ ಕೇಂದ್ರ ಸಂಪುಟ ಇಂದು ಸೋಮವಾರ ಅನುಮೋದನೆ ನೀಡಿದೆ. ಸಣ್ಣ ವ್ಯಾಪಾರಿಗಳಿಗೆ ಗ್ರಾಹಕರಿಂದ ಯುಪಿಐ ಮೂಲಕ ಮಾಡಲಾಗುವ ಪಾವತಿಗಳಿಗೆ 1,500 ಕೋಟಿ ರೂ ಮೊತ್ತದ ಈ ಯೋಜನೆ ಅನ್ವಯ ಆಗುತ್ತದೆ. ಸಣ್ಣ ವ್ಯಾಪಾರಿಗಳಿಗೆ (small merchants) ಯುಪಿಐ ಬಳಕೆ ಉತ್ತೇಜಿಸಲು ಇರುವ ಈ ಯೋಜನೆಯು 2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರ ಅವಧಿಯ ಯುಪಿಐ ಪಾವತಿಗಳಿಗೆ ಅನ್ವಯ ಆಗುತ್ತದೆ.
ಏನಿದು ಸ್ಕೀಮ್? ಯಾರಿಗೆ ಸಿಗುತ್ತೆ ಇನ್ಸೆಂಟಿವ್?
ಕೆಳ ಸ್ತರದ ವ್ಯಾಪಾರಗಳಲ್ಲಿ ಈಗಲೂ ಕ್ಯಾಷ್ ಮೂಲಕ ಸಾಕಷ್ಟು ಪಾವತಿಗಳಾಗುತ್ತಿವೆ. ಇಲ್ಲಿ ಯುಪಿಐ ಅಳವಡಿಕೆ ಹೆಚ್ಚಿಸಲು ಸರ್ಕಾರವು ಇನ್ಸೆಂಟಿವ್ ಸ್ಕೀಮ್ ತಂದಿದೆ. ಇದು ಸಣ್ಣ ವ್ಯಾಪಾರಿಗಳಿಗೆ ಗ್ರಾಹಕರು ಮಾಡುವ ಸಣ್ಣ ಪಾವತಿಗಳಿಗೆ ಪ್ರೋತ್ಸಾಹಕ ಧನ ನೀಡಲಾಗುತ್ತದೆ. ಇಲ್ಲಿ ಸಣ್ಣ ಪಾವತಿ ಎಂದರೆ 2,000 ರೂ ಒಳಗಿನ ಪಾವತಿ.
ಗ್ರಾಹಕರು ಸಣ್ಣ ವ್ಯಾಪಾರಿಗಳಿಗೆ ಸಣ್ಣ ಮೊತ್ತದ ಹಣ ಪಾವತಿಸಿದಾಗ ಆ ಹಣಕ್ಕೆ ಶೇ. 0.15ರಷ್ಟು ಇನ್ಸೆಂಟಿವ್ ನೀಡಲಾಗುತ್ತದೆ. ಇದು ವ್ಯಾಪಾರಿಗಳಿಗೆ ನೀಡುವ ಇನ್ಸೆಂಟಿವ್. ಉದಾಹರಣೆಗೆ, ಗ್ರಾಹಕರೊಬ್ಬರು 1,000 ರೂ ಹಣ ಪಾವತಿಸಿದಾಗ, ವ್ಯಾಪಾರಿಗೆ ಒಂದೂವರೆ ರೂ ಹೆಚ್ಚುವರಿ ಹಣ ಸಿಗುತ್ತದೆ.
ಇದನ್ನೂ ಓದಿ: ಸರ್ಕಾರಿ ಬ್ಯಾಂಕುಗಳ ಕಥೆ.. ಅಂದು ದಾಖಲೆಯ ನಷ್ಟ; ಇಂದು 27,830 ಕೋಟಿ ರೂ ಲಾಭಾಂಶ ಬಿಡುಗಡೆ
ಝೀರೋ ಎಂಡಿಆರ್ ಮತ್ತು ಇನ್ಸೆಂಟಿವ್
ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ಹಣ ಪಾವತಿ ವೇಳೆ ಬ್ಯಾಂಕುಗಳು ವ್ಯಾಪಾರಿಗಳಿಂದ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ವಿಧಿಸುತ್ತವೆ. ಆದರೆ, ಎಲ್ಲಾ ಯುಪಿಐ ಪಾವತಿಗಳಿಗೆ ಎಂಡಿಆರ್ ವಿಧಿಸುವಂತಿಲ್ಲ ಎಂದು ಪೇಮೆಂಟ್ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಹೀಗಾಗಿ, ಯುಪಿಐ ಪಾವತಿಗೆ ಗ್ರಾಹಕರಾಗಲೀ, ವರ್ತಕರಾಗಲೀ ಈಗ ಯಾವುದೇ ಶುಲ್ಕ ತೆರುವ ಅವಶ್ಯಕತೆ ಇಲ್ಲ.
ಇದರ ಜೊತೆಗೆ ಈಗ ಸಣ್ಣ ವ್ಯಾಪಾರಿಗಳಿಗೆ ಸಣ್ಣ ಮೊತ್ತದ ಯುಪಿಐ ಪಾವತಿಗಳಿಗೆ ಹೆಚ್ಚುವರಿಯಾಗಿ ಶೇ. 0.15ರಷ್ಟು ಇನ್ಸೆಂಟಿವ್ ಇದೆ. ಹಣ ಪಾವತಿ ಮೌಲ್ಯ 2,000 ರೂಗಿಂತ ಹೆಚ್ಚಿದ್ದರೆ ಆಗ ಇನ್ಸೆಂಟಿವ್ ಸಿಗುವುದಿಲ್ಲ. ಎಂಡಿಆರ್ ಕೂಡ ಇರುವುದಿಲ್ಲ.
ದೊಡ್ಡ ವರ್ತಕರಿಗೂ ಕೂಡ ಯಾವುದೇ ಎಂಡಿಆರ್ ಶುಲ್ಕ ಇರುವುದಿಲ್ಲ. ಆದರೆ, 2,000 ರೂ ಒಳಗಿನ ಹಣ ಪಾವತಿಗಳಿಗೆ ಇನ್ಸೆಂಟಿವ್ ಸಿಗುವುದಿಲ್ಲ.
ಈ ಇನ್ಸೆಂಟಿವ್ ಯಾರು ಯಾವಾಗ ಒದಗಿಸುತ್ತಾರೆ?
ಈ ಸ್ಕೀಮ್ ಅಡಿಯಲ್ಲಿ, ಸಣ್ಣ ವ್ಯಾಪಾರಿಗಳಿಗೆ ಪೇಮೆಂಟ್ ಕಂಪನಿಗಳಿಂದ ಇನ್ಸೆಂಟಿವ್ ಹಣ ಸಂದಾಯವಾಗುತ್ತದೆ. ನಂತರ, ಆ ಬ್ಯಾಂಕುಗಳು ಸರ್ಕಾರದ ಬಳಿ ರೀಇಂಬುರ್ಸ್ಮೆಂಟ್ ಪಡೆಯಬಹುದು.
ಇದನ್ನೂ ಓದಿ: ಟ್ವಿಟ್ಟರ್ ಲೋಗೋ ಹರಾಜು, 30 ಲಕ್ಷ ರೂಗೆ ಮಾರಾಟ; ಈ ಲೋಗೋ ಹಿಂದಿದೆ ಸಣ್ಣ ಸ್ವಾರಸ್ಯಕರ ಕಥೆ
ಸಣ್ಣ ಮೊತ್ತದ ಯುಪಿಐ ಪಾವತಿಗಳ ಪಟ್ಟಿಯನ್ನು ಬ್ಯಾಂಕುಗಳು ಸರ್ಕಾರಕ್ಕೆ ನೀಡುತ್ತವೆ. ಪ್ರತೀ ಕ್ವಾರ್ಟರ್ನಲ್ಲೂ ಸರ್ಕಾರ ಶೇ. 80ರಷ್ಟು ಮೊತ್ತದ ಇನ್ಸೆಂಟಿವ್ಗಳನ್ನು ಭರಿಸುತ್ತದೆ. ಉಳಿದ ಶೇ. 20 ಹಣಕ್ಕೆ ಸರ್ಕಾರ ಎರಡು ಪ್ರಮುಖ ಷರತ್ತುಗಳನ್ನು ಹಾಕಿದೆ.
- ತಾಂತ್ರಿಕ ದೋಷದಿಂದ ಪಾವತಿ ನಿರಾಕರಣೆ ಆಗುವ ಪ್ರಕರಣ ಪ್ರಮಾಣ ಶೇ. 0.75ಕ್ಕಿಂತ ಕಡಿಮೆ ಇದ್ದಾಗ ಮಾತ್ರ ಆ ಬ್ಯಾಂಕ್ ಶೇ. 10 ಕ್ಲೇಮ್ ಹಣ ಪಡೆಯಬಹುದು.
- ಬ್ಯಾಂಕ್ನ ಸಿಸ್ಟಂ ಅಪ್ಟೈಮ್ ಶೇ. 99.50ಕ್ಕಿಂತ ಹೆಚ್ಚು ಇದ್ದರೆ ಆಗ ಉಳಿದ ಶೇ. 10 ಕ್ಲೇಮ್ ಹಣ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Mon, 24 March 25