ಸರ್ಕಾರಿ ಬ್ಯಾಂಕುಗಳ ಕಥೆ.. ಅಂದು ದಾಖಲೆಯ ನಷ್ಟ; ಇಂದು 27,830 ಕೋಟಿ ರೂ ಲಾಭಾಂಶ ಬಿಡುಗಡೆ
Public Sector Banks' huge dividend payout: ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು 2017-18ರಲ್ಲಿ 85,390 ಕೋಟಿ ರೂ ದಾಖಲೆ ನಷ್ಟ ಕಂಡಿದ್ದವು. ಈಗ 2023-24ರಲ್ಲಿ 1.41 ಲಕ್ಷ ಕೋಟಿ ರೂ ನಿವ್ವಳ ಲಾಭ ಮಾಡಿವೆ. ಆ ಹಣಕಾಸು ವರ್ಷದಲ್ಲಿ ಬರೋಬ್ಬರಿ 27,830 ಕೋಟಿ ರೂ ಡಿವಿಡೆಂಡ್ ಬಿಡುಗಡೆ ಮಾಡಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಮೊದಲ 9 ತಿಂಗಳಲ್ಲೇ ಈ ಬ್ಯಾಂಕುಗಳು 1.29 ಲಕ್ಷ ಕೋಟಿ ರೂ ನಿವ್ವಳ ಲಾಭ ಮಾಡಿವೆ.

ನವದೆಹಲಿ, ಮಾರ್ಚ್ 24: ಒಂದು ಕಾಲದಲ್ಲಿ ನಷ್ಟದ ಕೂಪಗಳಂತಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು (Public sector banks) ಇವತ್ತು ಲಾಭದ ಕುದುರೆ ಹತ್ತಿದಂತಿವೆ. 2023-24ರ ಹಣಕಾಸು ವರ್ಷದಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ತಮ್ಮ ಷೇರುದಾರರಿಗೆ ಬಿಡುಗಡೆ ಮಾಡಿರುವ ಡಿವಿಡೆಂಡ್ ಅಥವಾ ಲಾಭಾಂಶಗಳ ಒಟ್ಟು ಮೊತ್ತ 27,830 ಕೋಟಿ ರೂ. ಹಿಂದಿನ ಹಣಕಾಸು ವರ್ಷದಲ್ಲಿ ಅಂದರೆ 2022-23ರಲ್ಲಿ 20,964 ಕೋಟಿ ರೂ ಡಿವಿಡೆಂಡ್ ಬಿಡುಗಡೆ ಆಗಿತ್ತು. ಅಂದರೆ, ಡಿವಿಡೆಂಡ್ ಪೇಔಟ್ನಲ್ಲಿ ಶೇ. 33ರಷ್ಟು ಹೆಚ್ಚಳ ಆಗಿದೆ. 2017-18ರ ಹಣಕಾಸು ವರ್ಷದಲ್ಲಿ ಸರ್ಕಾರಿ ಬ್ಯಾಂಕುಗಳು ಒಟ್ಟಾರೆ 85,390 ಕೋಟಿ ರೂ ನಷ್ಟ ಅನುಭವಿಸಿದ್ದುವು. ಆ ದಾಖಲೆ ನಷ್ಟದ ಬಳಿಕ ಈ ಬ್ಯಾಂಕುಗಳು ಫೀನಿಕ್ಸ್ನಂತೆ ತಿರುಗಿ ಎದ್ದಿವೆ. ಈಗ ದಾಖಲೆಯ ಲಾಭ ಮಾಡುತ್ತಿವೆ.
2023-24ರಲ್ಲಿ ಈ ಸರ್ಕಾರಿ ಬ್ಯಾಂಕುಗಳು ಬಿಡುಗಡೆ ಮಾಡಿದ 27,830 ಕೋಟಿ ರೂ ಡಿವಿಡೆಂಡ್ ಮೊತ್ತದಲ್ಲಿ ಶೇ. 65ರಷ್ಟು ಪಾಲು ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಈ ಬ್ಯಾಂಕುಗಳಲ್ಲಿ ಸರ್ಕಾರದ ಷೇರುದಾರಿಕೆ ಶೇ. 65ರ ಆಸುಪಾಸಿನಲ್ಲಿದೆ. ಒಟ್ಟಾರೆ ಈ ಹಣಕಾಸು ವರ್ಷದಲ್ಲಿ ಸರ್ಕಾರಿ ಬ್ಯಾಂಕುಗಳಿಂದ ಸರ್ಕಾರಕ್ಕೆ ಸಂದಾಯವಾದ ಹಣ ಬರೋಬ್ಬರಿ 18,013 ಕೋಟಿ ರೂ.
ಇದನ್ನೂ ಓದಿ: ಚೀನಾದಲ್ಲಿ ಒಂದಿಡೀ ನಗರದಷ್ಟು ಬೃಹತ್ ಮೆಗಾಫ್ಯಾಕ್ಟರಿ; ಘೋಸ್ಟ್ ಸಿಟಿಯಾಗುತ್ತಾ ಈ ಕಾರ್ಖಾನೆ?
2022-23ರ ಹಣಕಾಸು ವರ್ಷದಲ್ಲಿ ಸರ್ಕಾರಿ ಬ್ಯಾಂಕುಗಳಿಂದ 20,964 ಕೋಟಿ ರೂನಷ್ಟು ಡಿವಿಡೆಂಡ್ ಬಿಡುಗಡೆಯಾಗಿತ್ತು. ಇದರಲ್ಲಿ ಸರ್ಕಾರಕ್ಕೆ 13,804 ಕೋಟಿ ರೂ ಸಂದಾಯವಾಗಿತ್ತು.
1.41 ಲಕ್ಷ ಕೋಟಿ ರೂ ನಿವ್ವಳ ಲಾಭ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೇರಿದಂತೆ ದೇಶದ 12 ಸಾರ್ವಜನಿಕ ವಲಯ ಬ್ಯಾಂಕುಗಳು 2023-24ರಲ್ಲಿ ಗಳಿಸಿದ ನಿವ್ವಳ ಲಾಭ 1.41 ಲಕ್ಷ ಕೋಟಿ ರೂ. ಇದು ಹೊಸ ದಾಖಲೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಅಂದರೆ 2024-25ರಲ್ಲಿ ಈ ಬ್ಯಾಂಕುಗಳು ಇನ್ನೂ ಹೆಚ್ಚಿನ ಲಾಭ ಮಾಡುವ ಸಾಧ್ಯತೆ ಇದೆ. ಯಾಕೆಂದರೆ, ಈ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ, ಅಂದರೆ, 2024ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ ಸರ್ಕಾರಿ ಬ್ಯಾಂಕುಗಳು ಗಳಿಸಿದ ನಿವ್ವಳ ಲಾಭ 1.29 ಲಕ್ಷ ಕೋಟಿ ರೂ. ಇನ್ನೂ ಮೂರು ತಿಂಗಳಲ್ಲಿ ಇವುಗಳ ಲಾಭ 1.41 ಲಕ್ಷ ಗಡಿ ದಾಟುವ ಎಲ್ಲಾ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರತದ ಆರ್ಥಿಕತೆ 4.3 ಟ್ರಿಲಿಯನ್ ಡಾಲರ್; 10 ವರ್ಷದಲ್ಲಿ ಡಿಜಿಪಿ ಡಬಲ್; ಜಪಾನ್ ಅನ್ನೂ ಹಿಂದಿಕ್ಕಿದೆಯಾ ಭಾರತ?
2023-24ರಲ್ಲಿ ಸರ್ಕಾರಿ ಬ್ಯಾಂಕುಗಳು ಗಳಿಸಿದ 1.41 ಲಕ್ಷ ಕೋಟಿ ರೂ ಲಾಭದಲ್ಲಿ ಶೇ 40ರಷ್ಟು ಪಾಲು ಎಸ್ಬಿಐನದ್ದಾಗಿದೆ. ದೇಶದ ನಂಬರ್ ಒನ್ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆ ವರ್ಷ ಬರೋಬ್ಬರಿ 61,077 ಕೋಟಿ ರೂನಷ್ಟು ನಿವ್ವಳ ಲಾಭ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ