ಯುಪಿಐ, ರುಪೇ ಕಾರ್ಡ್ ಪಾವತಿಗೆ ಸರ್ಕಾರದ ಸಬ್ಸಿಡಿಯಲ್ಲಿ ಖೋತಾ; ಪೇಮೆಂಟ್ ಉದ್ಯಮ ಕಂಗಾಲು
Govt stops subsidy for Rupay debit card: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ಹಣ ಪಾವತಿ ಸೇವೆ ನಿಭಾಯಿಸಲು ಪೇಮೆಂಟ್ ಕಂಪನಿಗಳಿಗೆ ಸಾಕಷ್ಟು ವೆಚ್ಚವಾಗುತ್ತದೆ. ಇದನ್ನು ಮರ್ಚಂಟ್ ಡಿಸ್ಕೌಂಟ್ ರೇಟ್ ಅಥವಾ ಎಂಡಿಆರ್ ಶುಲ್ಕದ ಮೂಲಕ ಈ ಪೇಮೆಂಟ್ ಕಂಪನಿಗಳು ವೆಚ್ಚ ಭರಿಸುತ್ತವೆ. ಸರ್ಕಾರವು ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ಗಳಿಗೆ ಪ್ರೋತ್ಸಾಹ ನೀಡಲು ಎಂಡಿಆರ್ ಶುಲ್ಕ ತೆರದಂತೆ ನಿರ್ಬಂಧಿಸಿದೆ. ಅದಕ್ಕೆ ಬದಲಾಗಿ ಪೇಮೆಂಟ್ ಕಂಪನಿಗಳಿಗೆ ಸಬ್ಸಿಡಿ ನೀಡುತ್ತದೆ. ಈಗ ಈ ಸಬ್ಸಿಡಿಯನ್ನು ಸರ್ಕಾರ ಸಾಕಷ್ಟು ಮೊಟಕುಗೊಳಿಸಿರುವುದು ಪೇಮೆಂಟ್ ಉದ್ಯಮಕ್ಕೆ ಚಿಂತೆಯ ವಿಷಯವಾಗಿದೆ.

ನವದೆಹಲಿ, ಮಾರ್ಚ್ 21: ರುಪೇ ಡೆಬಿಟ್ ಕಾರ್ಡ್ಗಳಿಗೆ (RuPay debit card) ಸರ್ಕಾರ ಸಬ್ಸಿಡಿ ನೆರವು ಹಿಂಪಡೆದಿರುವುದು ಈಗ ಡಿಜಿಟಲ್ ಪೇಮೆಂಟ್ ಉದ್ಯಮಕ್ಕೆ ನಷ್ಟದ ಚಿಂತೆ ಹುಟ್ಟಿಸಿದೆ. ಒಂದು ಅಂದಾಜು ಪ್ರಕಾರ, ಈ ಉದ್ಯಮಕ್ಕೆ 500-600 ಕೋಟಿ ರೂ ನಷ್ಟ ಆಗುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. 2024-25ರ ಹಣಕಾಸು ವರ್ಷಕ್ಕೆ ಸರ್ಕಾರ ಸಣ್ಣ ವರ್ತಕರ ಯುಪಿಐ ಪಾವತಿಗಳಿಗೆ ಮಾತ್ರವೇ 1,500 ಕೋಟಿ ರೂ ಸಬ್ಸಿಡಿ ನೀಡುತ್ತಿದೆ. ಹಿಂದಿನ ವರ್ಷಕ್ಕೆ ಸರ್ಕಾರ 3,681 ಕೋಟಿ ರೂ ಸಬ್ಸಿಡಿ ಒದಗಿಸಿತ್ತು. ಈ ಬಾರಿ ಸಬ್ಸಿಡಿ ಸುಮಾರು 5,500 ಕೋಟಿ ರೂಗೆ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಡಿಜಿಟಲ್ ಪೇಮೆಂಟ್ಸ್ ಉದ್ಯಮ, ಹಿಂದಿನ ವರ್ಷದಕ್ಕಿಂತಲೂ ಸಬ್ಸಿಡಿ ಕಡಿಮೆ ಆಗಿರುವುದು ನಿರಾಸೆಗೊಂಡಿದೆ.
ಏನಿದು ಯುಪಿಐ ಪೇಮೆಂಟ್ ಸಬ್ಸಿಡಿ ಸ್ಕೀಮ್?
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ವರ್ತಕರಿಗೆ ಹಣ ಪಾವತಿಸಿದಾಗ, ಅದಕ್ಕೆ ಬ್ಯಾಂಕುಗಳು ಆ ವರ್ತಕರಿಗೆ ನಿರ್ದಿಷ್ಟ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕವನ್ನು ವಿಧಿಸುತ್ತವೆ. ಯುಪಿಐ ಟ್ರಾನ್ಸಾಕ್ಷನ್ಗೂ ಎಂಡಿಆರ್ ಶುಲ್ಕ ಇರುತ್ತದೆ. ಅಂದರೆ, ವರ್ತಕರು ಬ್ಯಾಂಕುಗಳಿಗೆ ಈ ಶುಲ್ಕ ತೆರಬೇಕು. ಸರ್ಕಾರವು ಯುಪಿಐ ಹಣ ಪಾವತಿ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಝೀರೋ ಎಂಡಿಆರ್ ಸೌಲಭ್ಯ ತಂದಿತು. ಅಂದರೆ, ಬ್ಯಾಂಕುಗಳು ವರ್ತಕರಿಗೆ ಶುಲ್ಕ ವಿಧಿಸಬಾರದು. ಆ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಇದಕ್ಕಾಗಿ ಸರ್ಕಾರವು ಸಬ್ಸಿಡಿ ಸ್ಕೀಮ್ ಆರಂಭಿಸಿತು. ಈಗ ಈ ಸಬ್ಸಿಡಿಯನ್ನು ಸರ್ಕಾರ ಮೊಟಕುಗೊಳಿಸಿರುವುದು ಬ್ಯಾಂಕುಗಳಿಗೆ ಚಿಂತೆ ತಂದಿದೆ.
ಇದನ್ನೂ ಓದಿ: ಭಾರತ ಸರ್ಕಾರ ವಿರುದ್ಧ ತಿರುಗಿನಿಂತ ಇಲಾನ್ ಮಸ್ಕ್ ಕಂಪನಿ; ಕರ್ನಾಟಕ ಹೈಕೋರ್ಟ್ನಲ್ಲಿ ಎಕ್ಸ್ನಿಂದ ಮೊಕದ್ದಮೆ
ಯುಪಿಐ ಮಾತ್ರವಲ್ಲ, ರುಪೇ ಡೆಬಿಟ್ ಕಾರ್ಡ್ಗಳ ಮೂಲಕ ಆಗುವ ಪಾವತಿಗೂ ಸರ್ಕಾರ ಎಂಡಿಆರ್ ಶುಲ್ಕ ರದ್ದುಗೊಳಿಸಿತ್ತು. ಸರ್ಕಾರದಿಂದ ಎಂಡಿಆರ್ ವೆಚ್ಚಕ್ಕೆ ಸಬ್ಸಿಡಿ ಸಿಗುತ್ತಿಲ್ಲವಾದ್ದರಿಂದ ಹಲವು ಬ್ಯಾಂಕುಗಳು ರುಪೇ ಕಾರ್ಡ್ ವಿತರಣೆಯನ್ನೇ ನಿಲ್ಲಿಸಿವೆಯಂತೆ. ಮಾಸ್ಟರ್ಕಾರ್ಡ್ ಮತ್ತು ವೀಸಾ ಡೆಬಿಟ್ ಕಾರ್ಡ್ಗಳನ್ನು ಇವು ವಿತರಿಸಲು ಆದ್ಯತೆ ನೀಡುತ್ತಿವೆ ಎಂದು ಹೇಳಲಾಗುತ್ತಿದೆ.
ಸರ್ಕಾರದ 1,500 ಕೋಟಿ ರೂ ಸಬ್ಸಿಡಿ ಯಾತಕ್ಕಾಗಿ?
ಮೊನ್ನೆ ಸರ್ಕಾರವು 2024-25ರ ಹಣಕಾಸು ವರ್ಷಕ್ಕೆ ಸಣ್ಣ ಯುಪಿಐ ಪಾವತಿಗಳಿಗೆ 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್ ಘೋಷಿಸಿತು. ಇದು ಸಣ್ಣ ವರ್ತಕರಿಗೆ ಗ್ರಾಹಕರು ಯುಪಿಐ ಮೂಲಕ ಮಾಡುವ 2,000 ರೂ ಒಳಗಿನ ಹಣ ಪಾವತಿಗೆ ಸರ್ಕಾರ ನೀಡುವ ಸಬ್ಸಿಡಿ. ಟ್ರಾನ್ಸಾಕ್ಷನ್ ಹಣಕ್ಕೆ ಸರ್ಕಾರ ಶೇ. 0.15ರಷ್ಟು ಇನ್ಸೆಂಟಿವ್ ಅನ್ನು ನೀಡುತ್ತದೆ. ಇದನ್ನು ಬ್ಯಾಂಕುಗಳಿಗೆ ಸರ್ಕಾರ ನೀಡುವ ಸಬ್ಸಿಡಿಯಾಗಿರುತ್ತದೆ.
ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಇತರ ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ಹಣ ಪಾವತಿಗಳಿಂದ ಪೇಮೆಂಟ್ ಕಂಪನಿಗಳಿಗೆ ಏನೂ ಆದಾಯ ಬರದಂತಾಗುತ್ತದೆ. ಇದು ಆ ಉದ್ಯಮದವರ ಅಳಲಾಗಿದೆ. ವರ್ತಕರಿಗೆ ಎಂಡಿಆರ್ ಶುಲ್ಕ ವಿಧಿಸಲು ಅವಕಾಶ ಕೊಡಿ ಅಥವಾ ಸಬ್ಸಿಡಿ ಹಣ ಹೆಚ್ಚಿಸಿ ಎಂಬುದು ಅವರ ಬೇಡಿಕೆ ಆಗಿದೆ. ಈ ಬಗ್ಗೆ ಹಣಕಾಸು ಸಚಿವಾಲಯಕ್ಕೆ ಒತ್ತಾಯ ತರಲು ಉದ್ಯಮದವರು ಆಲೋಚಿಸುತ್ತಿದ್ದಾರೆ.
ಒಂದು ವೇಳೆ, ಪೇಮೆಂಟ್ ಉದ್ಯಮದವರ ಬೇಡಿಕೆಗೆ ಸರ್ಕಾರ ಒಪ್ಪಿಕೊಂಡರೆ ಡೆಬಿಟ್ ಕಾರ್ಡ್ಗಳ ಮೂಲಕ ಆಗುವ ಪಾವತಿಯ ಹಣದ ಮೇಲೆ ಶೇ. 0.25ರಷ್ಟು ಎಂಡಿಆರ್ ಶುಲ್ಕ ಜಾರಿಗೆ ಬರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ