ಚೀನಾದಲ್ಲಿ ಒಂದಿಡೀ ನಗರದಷ್ಟು ಬೃಹತ್ ಮೆಗಾಫ್ಯಾಕ್ಟರಿ; ಘೋಸ್ಟ್ ಸಿಟಿಯಾಗುತ್ತಾ ಈ ಕಾರ್ಖಾನೆ?
BYD megafactory in China's Zheng Zhou: ಚೀನಾದ ಹಾಗೂ ವಿಶ್ವದ ನಂಬರ್ ಒನ್ ಕಾರ್ ಕಂಪನಿಯಾದ ಬಿವೈಡಿ ಝೆಂಗ್ಝೌ ನಗರದಲ್ಲಿ ಒಂದು ದೊಡ್ಡ ಮೆಗಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಇದು ಸುಮಾರು 80 ಚದರ ಕಿಮೀಯಷ್ಟು ವಿಶಾಲವಾಗಿದೆ. ಭಾರತದ ನೋಯ್ಡಾ ನಗರದಷ್ಟು ದೊಡ್ಡದು ಈ ಫ್ಯಾಕ್ಟರಿ. ಇಲ್ಲಿ ಕೆಲಸ ಮಾಡುವ ನೌಕರರಿಗೆ ವಸತಿ ಸಮುಚ್ಚಯಗಳು, ಮನರಂಜನೆ ಅಡ್ಡೆ, ಶಾಪಿಂಗ್ ಸ್ಥಳಗಳು, ಕ್ರೀಡಾಂಗಣಗಳು ಇತ್ಯಾದಿ ಸೌಲಭ್ಯಗಳಿವೆ.

ಬೀಜಿಂಗ್, ಮಾರ್ಚ್ 23: ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭದಲ್ಲಿ ಬಹಳ ದೊಡ್ಡದಾದ ಟೆಂಟ್ ಸಿಟಿಯನ್ನೇ ನಿರ್ಮಿಸಲಾಗಿತ್ತು. ಅದಕ್ಕಿಂತ ಎರಡು ಪಟ್ಟು ದೊಡ್ಡದಾದ ಫ್ಯಾಕ್ಟರಿಯೊಂದನ್ನು ಚೀನಾದಲ್ಲಿ ನಿರ್ಮಿಸಲಾಗುತ್ತಿದೆ. ವಿಶ್ವದ ನಂಬರ್ ಒನ್ ಕಾರ್ ಕಂಪನಿ ಎನಿಸಿದ ಚೀನಾದ ಬಿವೈಡಿ ಈ ಮೆಗಾಫ್ಯಾಕ್ಟರಿ (BYD mega factory) ಕಟ್ಟುತ್ತಿದೆ. ಚೀನಾದ ಹೇನನ್ ಪ್ರಾಂತ್ಯದ ಝೆಂಗ್ಝೋ ಎಂಬ ನಗರದಲ್ಲಿ ಕಟ್ಟಲಾಗುತ್ತಿರುವ ಈ ಫ್ಯಾಕ್ಟರಿ 50 ಚದರ ಮೈಲಿಯಷ್ಟು ವಿಶಾಲವಾಗಿದೆ. ಅಂದರೆ ಬರೋಬ್ಬರಿ 80 ಚದರ ಕಿಮೀಯಷ್ಟು ಬೃಹತ್ತಾಗಿದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕಿಂತಲೂ ಈ ಫ್ಯಾಕ್ಟರಿ ಸ್ಥಳವೇ ದೊಡ್ಡದು. ಮಹಾಕುಂಭದಲ್ಲಿ ನಿರ್ಮಿಸಲಾಗಿದ್ದ ಟೆಂಟ್ ಸಿಟಿ 40 ಚದರ ಕಿಮೀಯಷ್ಟಿತ್ತು. ಬಿವೈಡಿ ಫ್ಯಾಕ್ಟರಿ ಅದಕ್ಕಿಂತಲೂ ಎರಡು ಪಟ್ಟು ದೊಡ್ಡದಾಗಿರುತ್ತದೆ. ಹಲವು ಕಂಪನಿಗಳಿಗೆ ಆಶ್ರಯವಾಗಿರುವ ನೋಯ್ಡಾ ನಗರದಷ್ಟು ಅದು ವಿಶಾಲವಾಗಿದೆ.
ಬಿವೈಡಿ ಮೆಗಾ ಫ್ಯಾಕ್ಟರಿಯಲ್ಲಿ 10 ಲಕ್ಷ ಇವಿಗಳ ತಯಾರಿಕೆ ಸಾಧ್ಯತೆ
ಝೆಂಗ್ಝೌ ನಗರದಲ್ಲಿ ನಿರ್ಮಾಣವಾಗುತ್ತಿರುವ ಬಿವೈಡಿ ಮೆಗಾಫ್ಯಾಕ್ಟರಿಯಲ್ಲಿ ವರ್ಷಕ್ಕೆ ಹತ್ತು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವಷ್ಟು ಸಾಮರ್ಥ ಇರಲಿದೆ. ಈಗಾಗಲೇ ಈ ಫ್ಯಾಕ್ಟರಿ ನಿರ್ಮಾಣ ಅಂತಿಮ ಹಂತದಲ್ಲಿದೆ. ಸಾವಿರಾರು ಕಾರ್ಮಿಕರು ಇಲ್ಲಿ ನೆಲೆಗೊಂಡಿದ್ದಾರೆ.
ಇಲ್ಲಿ ಬಿವೈಡಿ ವಾಹನಗಳನ್ನು ತಯಾರಿಸಲು ವಿವಿಧ ಘಟಕಗಳು, ಕೆಲಸ ಮಾಡುವ ಕಾರ್ಮಿಕರಿಗೆ ವಸತಿ ಸಮುಚ್ಚಯ, ಫುಟ್ಬಾಲ್ ಅಂಗಣಗಳು, ಟೆನಿಸ್ ಕೋರ್ಟ್ಗಳು, ಶಾಪಿಂಗ್ ಸೆಂಟರ್ಗಳು ಹೀಗೆ ಅವಶ್ಯಕ ಮೂಲಭೂತ ಮತ್ತು ಐಷಾರಾಮಿ ವ್ಯವಸ್ಥೆಗಳು ನಿರ್ಮಿತಗೊಂಡಿವೆ.
ಇದನ್ನೂ ಓದಿ: ಭಾರತದ ಬೆಳವಣಿಗೆಯ ದಾರಿಗೆ ಚೀನಾ ಕಲ್ಲು, ಮುಳ್ಳು ತುಂಬುತ್ತಿದೆಯಾ? ನೆರೆ ದೇಶದ ತಂತ್ರಗಳು ಹೇಗಿವೆ ಗೊತ್ತಾ?
ವರದಿಗಳ ಪ್ರಕಾರ, ಸದ್ಯ ಈ ಬಿವೈಡಿ ಫ್ಯಾಕ್ಟರಿಗಳಲ್ಲಿ 60,000 ಮಂದಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಎರಡು ಲಕ್ಷದಷ್ಟು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಇಲ್ಲಿ ಕೆಲ ಘಟಕಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಕಾರ್ಯ ನಡೆಯುತ್ತಿದೆ.
ಟೆಸ್ಲಾದ ಬೆವರಿಳಿಸಿದ ಬಿವೈಡಿ…
ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಚೀನಾದಲ್ಲಿ ತಯಾರಿಕೆ ಶುರು ಮಾಡಿದಾಗ ಅದಕ್ಕೆ ಪ್ರತಿಸ್ಪರ್ಧಿಗಳು ಇದ್ದದ್ದು ಕಡಿಮೆ. ಆದರೆ, ಕೆಲ ವರ್ಷಗಳಿಂದ ಬಿವೈಡಿ ಮೊದಲಾದ ಚೀನೀ ವಾಹನ ಕಂಪನಿಗಳು ಇವಿ ತಯಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಚೀನಾದಲ್ಲಿ ಅತಿಹೆಚ್ಚು ಇವಿಗಳ ಮಾರಾಟ ಮಾಡಿದ ಕಂಪನಿಗಳ ಪಟ್ಟಿಯಲ್ಲಿ ಟೆಸ್ಲಾ 4ನೇ ಸ್ಥಾನಕ್ಕೆ ಕುಸಿದಿದೆ. ಸ್ವತಃ ಇಲಾನ್ ಮಸ್ಕ್ ಅವರೆಯೇ, ಚೀನೀ ಕಂಪನಿಗಳೊಂದಿಗೆ ಟೆಸ್ಲಾ ಸ್ಪರ್ಧಿಸುವುದು ಕಷ್ಟಸಾಧ್ಯ ಎಂದು ಒಪ್ಪಿಕೊಂಡಿದ್ದಾರೆ.
ಬಿವೈಡಿ ಸಂಸ್ಥೆ 20224ರಲ್ಲಿ 42 ಲಕ್ಷಕ್ಕೂ ಅಧಿಕ ಇವಿಗಳನ್ನು ಮಾರಾಟ ಮಾಡಿ ಹೊಸ ದಾಖಲೆಯನ್ನೇ ಬರೆದಿದೆ. ಚೀನಾದ ವಿವಿಧ ಪ್ರಾಂತ್ಯಗಳಲ್ಲಿ, ಹಾಗೂ ಜಾಗತಿಕವಾಗಿ ಬೇರೆ ಬೇರೆ ದೇಶಗಳಲ್ಲಿ ಬಿವೈಡಿ ಫ್ಯಾಕ್ಟರಿಗಳಿವೆ. ಆದರೆ, ಝೆಂಗ್ಝೌ ನಗರದಲ್ಲಿ 80 ಚದರ ಕಿಮೀ ವಿಸ್ತೀರ್ಣದಲ್ಲಿ ಮಿನಿ ಸಿಟಿಯಂತೆ ನಿರ್ಮಾಣವಾಗುತ್ತಿರುವ ಬಿವೈಡಿ ಫ್ಯಾಕ್ಟರಿಗಳಲ್ಲಿ ವರ್ಷಕ್ಕೆ 10 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತಿದೆ. ಟೆಸ್ಲಾ ಸಂಸ್ಥೆ ಜಾಗತಿಕವಾಗಿ ತಯಾರಿಸುವ ಇವಿಗಳ ಸಂಖ್ಯೆ 18 ಲಕ್ಷ ಮಾತ್ರ.
ಇದನ್ನೂ ಓದಿ: ರೈಲು ಎಂಜಿನ್ ವಾಹನಗಳ ತಯಾರಿಕೆಯಲ್ಲಿ ಅಮೆರಿಕ, ಯೂರೋಪ್ ಅನ್ನು ಮೀರಿಸಿದ ಭಾರತ
ಘೋಸ್ಟ್ ಸಿಟಿಯಾಗುತ್ತಾ ಬಿವೈಡಿ ಫ್ಯಾಕ್ಟರಿ…?
ಚೀನಾದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಬಬಲ್ಗಳು ಸೃಷ್ಟಿಯಾಗಿವೆ. ಅಂದರೆ, ಕೆಲ ಯೋಜನೆಗಳು ಅಪಾರ ನಿರೀಕ್ಷೆಯೊಂದಿಗೆ ಪ್ರಾರಂಭವಾಗಿ, ಬಳಿಕ ನಿಂತು ಹೋದ ಉದಾಹರಣೆಗಳು ಹಲವುಂಟು. ಅಂತೆಯೇ, ವಿವಿಧ ನಗರಗಳಲ್ಲಿ ಬೃಹತ್ ಅಪಾರ್ಟ್ಮೆಂಟ್ಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಬಿವೈಡಿಯ ಮೆಗಾಫ್ಯಾಕ್ಟರಿಗೂ ಅದೇ ಗತಿ ಬರಬಹುದಾ ಎನ್ನುವ ಪ್ರಶ್ನೆ ಇದೆ. ಇವಿಗಳಿಗೆ ಬೇಡಿಕೆ ಕಡಿಮೆ ಆದರೆ ಬಿವೈಡಿಯ ಮೆಗಾಫ್ಯಾಕ್ಟರಿಯಲ್ಲಿ ಕಾರು ಮ್ಯಾನುಫ್ಯಾಕ್ಚರಿಂಗ್ ನಿಂತು ಹೋಗಬಹುದು. ಅಲ್ಲಿ ಉದ್ಯೋಗಿಗಳು ತಮ್ಮತಮ್ಮ ಊರುಗಳಿಗೆ ಮರಳಿ ಹೋಗಬಹುದು. ಇದರಿಂದ ಇಡೀ ನಗರವೇ ನಿರ್ಜನ ಪ್ರದೇಶವಾಗಬಹುದು. ಆ ಸಾಧ್ಯತೆ ಇಲ್ಲದೇ ಇಲ್ಲ.
ಬಿವೈಡಿ ಫ್ಯಾಕ್ಟರಿ ಅಗಾಧತೆ ಬಗ್ಗೆ ಸ್ಪಷ್ಟತೆ ಇಲ್ಲ…
ಇದೇ ವೇಳೆ, ಬಿವೈಡಿ ಫ್ಯಾಕ್ಟರಿ 80 ಚದರ ಕಿಮೀಯಷ್ಟು ವಿಶಾಲವಾಗಿದೆ ಎಂಬುದು ಕೆಲ ವೈರಲ್ ವಿಡಿಯೋಗಳಿಂದ ಗೊತ್ತಾಗಿರುವ ಸಂಗತಿ. ಡ್ರೋನ್ಗಳು ಸೆರೆ ಹಿಡಿದಿರುವ ವಿಡಿಯೋ ದೃಶ್ಯಗಳು ಸಾಕ್ಷಿಯಾಗಿವೆ. ಆದರೆ, ಬಿವೈಡಿ ಸಂಸ್ಥೆ ಎಲ್ಲೂ ಕೂಡ ಈ ಮೆಗಾ ಫ್ಯಾಕ್ಟರಿಯ ವಿಸ್ತಾರದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ, ಹೆನಾನ್ ಪ್ರಾಂತ್ಯದ ಝೆಂಗ್ ಝೌ ನಗರದಲ್ಲಿ ಬಿವೈಡಿ ಫ್ಯಾಕ್ಟರಿ ನಿರ್ಮಾಣ ಆಗಿರುರುವುದು ಹೌದಾದರೂ, ಅದರ ವಿಸ್ತಾರ ಎಷ್ಟು ಎಂಬುದು ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ ಎನ್ನುತ್ತಿವೆ ಕೆಲ ವರದಿಗಳು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ