ಚೀನಾದಲ್ಲಿ ಉಚಿತ ಊಟ ಪಡೆಯಲು ಕೋಡ್ ವರ್ಡ್; ಅವಶ್ಯಕತೆ ಇದ್ದವರ ಸಹಾಯಕ್ಕೆ ನಿಂತ ಸಮುದಾಯ
Code words to get free meals in China: ಆರ್ಥಿಕ ಹಿನ್ನಡೆಯಲ್ಲಿರುವ ಚೀನಾದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಅಲ್ಲಿ ಅಗತ್ಯ ಆಹಾರ ಖರೀದಿಗೆ ಶಕ್ತಿ ಇಲ್ಲದವರ ಸಂಖ್ಯೆ ಹೆಚ್ಚುತ್ತಿದೆ. ಇಂಥವರ ಸಹಾಯಕ್ಕೆ ಅಲ್ಲಿ ಸಾಮುದಾಯಿಕ ಪ್ರಯತ್ನಗಳಾಗಿವೆ. ರೆಸ್ಟೋರೆಂಟ್ಗಳು, ಮಾಲ್ಗಳು ಮೊದಲಾದವು ವಿನೂತನ ಮಾರ್ಗಗಳಿಂದ ನೆರವು ನೀಡುತ್ತಿವೆ. ರೆಸ್ಟೋರೆಂಟ್ಗಳಲ್ಲಿ ಉಚಿತ ಊಟ ಪಡೆಯಬೇಕೆಂದರೆ ಕೆಲ ಕೋಡ್ ವರ್ಡ್ಗಳನ್ನು ಹೇಳಿದರೆ ಸಾಕು. ಊಟ ಸಿಗುತ್ತದೆ.

ಬೀಜಿಂಗ್, ಫೆಬ್ರುವರಿ 23: ಚೀನಾದಲ್ಲಿ ಈಗ ಕೆಲ ವರ್ಷಗಳಿಂದ ತುಸು ಆರ್ಥಿಕ ಹಿನ್ನಡೆಯ ಕಾಲಘಟ್ಟ ಇದೆ. ಇದರ ಪರಿಣಾಮವಾಗಿ ಅಲ್ಲಿ ನಿರುದ್ಯೋಗ ಪ್ರಮಾಣ ಶೇ.16ಕ್ಕೆ ಏರಿದೆ. ಊಟಕ್ಕೆ ವ್ಯಯಿಸಲು ಹಣದ ಕೊರತೆ ಎದುರಿಸುತ್ತಿರುವವರ ಸಂಖ್ಯೆ ಇತ್ತೀಚೆಗೆ ಏರುತ್ತಿದೆ. ಈ ಸಮಯದಲ್ಲಿ ಊಟದ ಅವಶ್ಯಕತೆ ಇದ್ದವರ ಸಹಾಯಕ್ಕೆ ಅಲ್ಲಿನ ಸಮಾಜ ನಿಂತುಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಚೀನಾದ ಹಲವು ರೆಸ್ಟೋರೆಂಟ್ಗಳು ಇಂಥವರಿಗೆ ಉಚಿತ ಊಟ ಅಥವಾ ರಿಯಾಯಿತಿ ದರದಲ್ಲಿ ಊಟ ಕೊಡುತ್ತಿವೆ ಎಂದು ದಿ ಎಕನಾಮಿಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಹೇಳಲಾಗಿದೆ.
ಈ ವರದಿಯಲ್ಲಿ ಚೆಂಗ್ಡು ಪ್ರಾಂತ್ಯದಲ್ಲಿ ರೆಸ್ಟೋರೆಂಟ್ ಇಟ್ಟುಕೊಂಡಿರುವ ಹುವಾಂಗ್ ಮಿಂಗ್ ಎಂಬುವರ ಅನುಭವ ಹಂಚಿಕೊಳ್ಳಲಾಗಿದೆ. ಹುವಾಂಗ್ ಮಿಂಗ್ ಅವರು ರೆಸ್ಟೋರೆಂಟ್ ಆರಂಭಿಸಿದಾಗ ಉಚಿತ ಊಟದ ಒಂದು ಆಯ್ಕೆಯನ್ನೂ ನೀಡಿದ್ದರು. ಎಂಟು ವರ್ಷಗಳ ಹಿಂದೆ ತಿಂಗಳಿಗೆ ಕೆಲವೇ ಕೆಲ ಉಚಿತ ಊಟಕ್ಕೆ ಆರ್ಡರ್ ಬರುತ್ತಿದ್ದವು. ಕಳೆದ ಎಂಟು ವರ್ಷದಲ್ಲಿ ಉಚಿತ ಊಟಕ್ಕೆ ಬೇಡಿಕೆ ಸಿಕ್ಕಾಪಟ್ಟೆ ಏರಿದೆಯಂತೆ.
ಇದನ್ನೂ ಓದಿ: ಒಂದು ಮೊಟ್ಟೆಯ ಕಥೆ… ಅಮೆರಿಕದಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಿರುವ ಜನರು… ಕಾರಣ ಏನು ಗೊತ್ತಾ?
ಉಚಿತ ಊಟಕ್ಕೆ ಕೋಡ್ವರ್ಡ್ಗಳು…
ರೆಸ್ಟೋರೆಂಟ್ಗಳಿಗೆ ಹೋಗಿ ಉಚಿತ ಊಟ ಕೊಡಿ ಎಂದು ಕೇಳುವುದು ಮುಜುಗರವಾಗಬಹುದು. ಆದರೆ, ಈ ಮುಜುಗರ ತಪ್ಪಿಸಲು ರೆಸ್ಟೋರೆಂಟ್ಗಳು ಹೊಸ ಉಪಾಯ ಮಾಡಿವೆ. ಪಾನ್ ಕೇಕ್, ಪೆಪ್ಪರ್ ಬೀಫ್ ಸ್ಟಿರ್ ಫ್ರೈ, ಮಸ್ಟರ್ ಗ್ರೀನ್ ಮಿಶ್ರಿತ ಮೀನು ಇತ್ಯಾದಿ ಕೆಲ ಚೀನೀ ತಿನಿಸುಗಳ ಹೆಸರನ್ನು ಕೋಡ್ ವರ್ಡ್ಗಳಾಗಿ ಉಪಯೋಗಿಸಲಾಗುತ್ತಿದೆ. ರೆಸ್ಟೋರೆಂಟ್ಗಳಲ್ಲಿ ಗ್ರಾಹಕರು ಈ ತಿನಿಸುಗಳ ಹೆಸರು ಹೇಳಿದರೆ, ಅದು ಉಚಿತ ಊಟದ ಅವಶ್ಯಕತೆ ಇದೆ ಎಂಬುದು ಅಲ್ಲಿನ ಸಿಬ್ಬಂದಿಗೆ ಅರಿವಾಗುತ್ತದೆ. ಊಟವನ್ನು ಉಚಿತವಾಗಿ ನೀಡುತ್ತದೆ ಆ ರೆಸ್ಟೋರೆಂಟ್. ಈ ಸಂಪ್ರದಾಯ ಬಹಳ ದಿನಗಳಿಂದಲೂ ಇದೆ. ಆದರೆ, ಕೋಡ್ ವರ್ಡ್ಗಳನ್ನ ಬಳಸುವ ಗ್ರಾಹಕರ ಸಂಖ್ಯೆ ಇತ್ತೀಚೆಗೆ ಏರಿಕೆ ಆಗುತ್ತಿದೆ ಎಂದು ಅಲ್ಲಿನ ಹಲವು ರೆಸ್ಟೋರೆಂಟ್ಗಳು ಹೇಳುತ್ತಿವೆ.
ಚೀನಾದಲ್ಲಿ ಊಟಕ್ಕೆ ವೆಚ್ಚ ಮಾಡುವಷ್ಟು ಹಣ ಇಲ್ಲದವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಎಂದರೆ ಹಿರಿಯ ನಾಗರಿಕರ ಕ್ಯಾಂಟೀನ್ಗಳಲ್ಲಿ ಯುವಜನರು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಕ್ಯಾಂಟೀನ್ಗಳಲ್ಲಿ ರಿಯಾಯಿತಿ ದರದಲ್ಲಿ ಪೌಷ್ಟಿಕಾಂಶಯುತ ಊಟ ಲಭ್ಯ ಇರುತ್ತದೆ. ಇಲ್ಲಿ ಚಿಕ್ಕ ವಯಸ್ಸಿನವರೂ ಭೇಟಿ ನೀಡುತ್ತಿರುವ ಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಚೀನೀ ಏರ್ಪೋರ್ಟ್; ವಿಮಾನ ಇಲ್ಲ, ಪ್ರಯಾಣಿಕರಿಲ್ಲ, ಪ್ರಯೋಜನವೂ ಇಲ್ಲ…
ಹಾಗೆಯೇ, ಮಾಲ್ಗಳಲ್ಲಿ ಅಗ್ಗದ ದರದಲ್ಲಿ ಊಟ ಸಿಗುವ ಫೂಡ್ ಕೋರ್ಟ್ಗಳಿರುತ್ತವೆ. ಆಫೀಸ್ ಬ್ಯುಲ್ಡಿಂಗ್ಗಳಲ್ಲೂ ಇಂಥ ಅಗ್ಗದ ಕ್ಯಾಂಟೀನ್ಗಳಿರುತ್ತವೆ. ಇಂಥ ಸ್ಥಳಗಳಲ್ಲಿ ಊಟಕ್ಕೆ ಹೋಗುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಎಕನಾಮಿಸ್ಟ್ ಪತ್ರಿಕೆಯಲ್ಲಿ ವರದಿಯಲ್ಲಿ ಹೇಳಲಾಗಿದೆ.
ಊಟದ ನೆರವು ರೆಸ್ಟೋರೆಂಟ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಂಘೈ, ಶೆಂಜೆನ್ ಮೊದಲಾದ ನಗರಗಳಲ್ಲಿ ಶಾಪಿಂಗ್ ಮಾಲ್ಗಳು ಹೊರಗೆ ಲಾಕ್ ಮಾಡದ ಫ್ರೀಜರ್ಗಳನ್ನು ಇಟ್ಟಿವೆ. ದಾನಿಗಳು ನೀಡಿದ ಆಹಾರವನ್ನು ಇಲ್ಲಿ ಇಟ್ಟಿರಲಾಗುತ್ತದೆ. ಕೊರಿಯರ್ ಬಾಯ್ಗಳು, ಸ್ವಚ್ಛತಾ ಕರ್ಮಿಗಳು ಮೊದಲಾದವರಿಗೆಂದು ಈ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲವೂ ಸಮುದಾಯ ಬೆಂಬಲಿತ ಉಪಕ್ರಮಗಳೇ ಆಗಿವೆ.
ಇದನ್ನೂ ಓದಿ: ಷೇರು ಮಾರುಕಟ್ಟೆ ಸದ್ಯದಲ್ಲೇ ಮತ್ತೆ ಗರಿಗೆದರುತ್ತೆ ಅನ್ನೋದಕ್ಕೆ ಇಲ್ಲಿವೆ ಪ್ರಬಲ ಸಾಕ್ಷ್ಯಗಳು
ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಭಾರತದಲ್ಲೂ ಈ ರೀತಿಯ ಸಾಯುದಾಯಿಕ ಸಹಭಾಗಿತ್ವವನ್ನು ನಾವು ನೋಡಿದ್ದೇವೆ. ಸರ್ಕಾರದಿಂದ ಬೆಂಬಲ ಮಾತ್ರವಲ್ಲ, ಸಾಕಷ್ಟು ಖಾಸಗಿ ಸಂಸ್ಥೆಗಳು, ಸಂಘಟನೆಗಳು, ವ್ಯಕ್ತಿಗಳು ತಮ್ಮ ಶಕ್ತ್ಯಾನುಸಾರವಾಗಿ ಆಹಾರವಸ್ತುಗಳನ್ನು ಮನೆಬಾಗಿಲುಗಳಿಗೆ ತಲುಪಿಸಿದ ನಿದರ್ಶನಗಳು ಎಲ್ಲೆಲ್ಲೂ ಕಾಣಸಿಕ್ಕಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ