ಒಂದು ಮೊಟ್ಟೆಯ ಕಥೆ… ಅಮೆರಿಕದಲ್ಲಿ ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಿರುವ ಜನರು… ಕಾರಣ ಏನು ಗೊತ್ತಾ?
Bird flu in America makes egg too costly: ಅಮೆರಿಕದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬಳಿಕ ಮೊಟ್ಟೆಗಳ ಬೆಲೆ ಬಲು ದುಬಾರಿಯಾಗಿದೆ. ಮುಕ್ಕಾಲು ಭಾಗದ ಆಹಾರವೆಚ್ಚ ಮೊಟ್ಟೆಗೇ ಖರ್ಚಾಗುತ್ತಿದೆ. ಒಂದು ಮೊಟ್ಟೆ ಬೆಲೆ ಹೆಚ್ಚೂಕಡಿಮೆ ಒಂದು ಡಾಲರ್ಗೆ ಏರಿಬಿಟ್ಟಿದೆ. ಜನರು ಮೊಟ್ಟೆಯ ವೆಚ್ಚ ತಗ್ಗಿಸಲು ಹೊಸ ಉಪಾಯ ಮಾಡಿದ್ದಾರೆ. ಮೊಟ್ಟೆ ಇಡುವ ಕೋಳಿಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ನಗರ ಪ್ರದೇಶದಲ್ಲೂ ಈ ಟ್ರೆಂಡ್ ಇದೆ.

ವಾಷಿಂಗ್ಟನ್, ಫೆಬ್ರುವರಿ 23: ಅಮೆರಿಕದಲ್ಲಿ ಜನರು ಕೋಳಿಗಳನ್ನು ಬಾಡಿಗೆಗೆ ಪಡೆದು ಸಾಕುತ್ತಿದ್ದಾರೆ. ಇದು ಗ್ರಾಮೀಣ ಭಾಗದ ಜನರ ಕಥೆಯಲ್ಲ… ನಗರ ಮತ್ತು ಪಟ್ಟಣವಾಸಿಗಳದ್ದೂ ಇದೇ ಕಥೆ… ಇದು ವಿಚಿತ್ರವಾದರೂ ಸತ್ಯ… ಕಾರಣ ಕೇಳಿದರೆ ಅಚ್ಚರಿ ಎನಿಸಬಹುದು. ಅಮೆರಿಕದಲ್ಲಿ ಮೊಟ್ಟೆ ಬೆಲೆ ಸಖತ್ ದುಬಾರಿಯಾಗಿದೆ. ಒಂದು ಕಾರ್ಟನ್ ಬೆಲೆ ಸರಾಸರಿಯಾಗಿ ಐದು ಡಾಲರ್ ಇದೆ. ಕೆಲ ನಗರಗಳಲ್ಲಿ ಡಜನ್ ಮೊಟ್ಟೆಗೆ 10 ಡಾಲರ್ ಕೂಡ ಬೆಲೆ ಏರಿದೆ. ಅಂದರೆ, ಒಂದು ಮೊಟ್ಟೆಗೆ ಹತ್ತಿರಹತ್ತಿರ 80 ರುಪಾಯಿ ಆಗಿದೆ. ಅಮೆರಿಕದ ಆಹಾರಕ್ರಮದಲ್ಲಿ ಮೊಟ್ಟೆಗೆ ಪ್ರಧಾನ ಸ್ಥಾನ ಇದೆ. ಇಷ್ಟು ದುಬಾರಿ ಬೆಲೆ ತೆತ್ತು ಮೊಟ್ಟೆ ಖರೀದಿಸುವ ಬದಲು ಕೋಳಿಗಳನ್ನೇ ಬಾಡಿಗೆಗೆ ಪಡೆಯುತ್ತಿದ್ದಾರೆ ಅಮೆರಿಕನ್ನರು.
ಕೋಳಿಗಳನ್ನು ಬಾಡಿಗೆ ಪಡೆದರೆ ಏನು ಪ್ರಯೋಜನ?
ಅಮೆರಿಕದ ಸರಾಸರಿ ಕುಟುಂಬದ ಸರಾಸರಿ ಮಾಸಿಕ ಆಹಾರ ವೆಚ್ಚದಲ್ಲಿ ಮೊಟ್ಟೆ ಬೆಲೆಯೇ ಮುಕ್ಕಾಲು ಭಾಗ ಆಗುತ್ತಿದೆಯಂತೆ. ಹೀಗಾಗಿ, ಮೊಟ್ಟೆ ಖರೀದಿಸುವ ಬದಲು ಮೊಟ್ಟೆ ಕೋಳಿಗಳನ್ನೇ ಅಮೆರಿಕನ್ನರು ಸಾಕುತ್ತಿದ್ಧಾರೆ. ಆದರೆ, ಖಾಯಂ ಆಗಿ ಅಲ್ಲ. ಕೋಳಿಗಳನ್ನು ಖರೀದಿಸುವ ಬದಲು ಬಾಡಿಗೆಗೆ ಪಡೆದು ತಾತ್ಕಾಲಿಕ ಅವಧಿಗೆ ಸಾಕಿ, ಮೊಟ್ಟೆ ಪಡೆಯುತ್ತಿದ್ದಾರೆ. ಒಂದು ಆರೋಗ್ಯಯುತ ಕೋಳಿ ಒಂದು ವಾರದಲ್ಲಿ ಐದು ಮೊಟ್ಟೆಗಳನ್ನು ಇಡುತ್ತದೆ. ಕೋಳಿಗೆ ಬಾಡಿಗೆ ಹಾಗು ಫೀಡ್ಗೆ ಒಂದಷ್ಟು ಹಣ ವೆಚ್ಚವಾದರೂ ಮೊಟ್ಟೆಯ ಮಾರುಕಟ್ಟೆ ಬೆಲೆಗಿಂತ ವೆಚ್ಚ ಬಹಳ ಕಡಿಮೆ ಆಗುತ್ತದೆ. ಹೀಗಾಗಿ, ಕೋಳಿ ಸಾಕುವ ಟ್ರೆಂಡ್ ಶುರುವಾಗಿದೆ.
ಇದನ್ನೂ ಓದಿ: ‘ಚಿನ್ನ ಇದ್ಯೋ ಇಲ್ವೋ… ನಾನು ನೋಡ್ಬೇಕು’- ಅಮೆರಿಕದ ಫೋರ್ಟ್ ನಾಕ್ಸ್ಗೆ ಭೇಟಿ ನೀಡಲು ಟ್ರಂಪ್ ಸಜ್ಜು
ಮೊಟ್ಟೆಗೆ ಡಿಮ್ಯಾಂಡ್ ಸೃಷ್ಟಿಸಿದ ಹಕ್ಕಿ ಜ್ವರ
ಅಮೆರಿದಕಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಹಕ್ಕಿ ಜ್ವರ ಬಾಧೆ ಇದೆ. ಕೋಟ್ಯಂತರ ಕೋಳಿಗಳು ಈ ಸಾಂಕ್ರಾಮಿಕ ವೈರಸ್ಗೆ ಬಲಿಯಾಗಿವೆ. ಕೋಟ್ಯಂತರ ಕೋಳಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸಾಯಿಸಲಾಗಿದೆ. 2022ರಿಂದ ಈಚೆ 16.3 ಕೋಟಿ ಕೋಳಿ, ಟರ್ಕಿ ಕೋಳಿ ಮತ್ತಿತರ ಹಕ್ಕಿಗಳನ್ನು ಸಾಯಿಸಲಾಗಿದೆ ಅಥವಾ ಅವು ರೋಗಕ್ಕೆ ಬಲಿಯಾಗಿವೆ ಎಂದು ಹೇಳಲಾಗುತ್ತಿದೆ.
ಜನವರಿ ಒಂದೇ ತಿಂಗಳಲ್ಲಿ ಅಮೆರಿಕಾದ್ಯಂತ ಹತ್ತಿರಹತ್ತಿರ ಎರಡು ಕೋಟಿಯಷ್ಟು ಮೊಟ್ಟೆ ಕೋಳಿಗಳನ್ನು ಸಾಯಿಸಲಾಗಿದೆ. ಒಂದು ಕೋಳಿ ಫಾರ್ಮ್ನಲ್ಲಿ ಒಂದು ಕೋಳಿಗೆ ಹಕ್ಕಿ ಜ್ವರ ವೈರಸ್ (ಎವಿಯನ್ ಇನ್ಫ್ಲುಯೆನ್ಜಾ) ಬಂತೆಂದರೆ ಆ ಫಾರ್ಮ್ನಲ್ಲಿರುವ ಎಲ್ಲಾ ಹಕ್ಕಿಗಳನ್ನು ಸಾಯಿಸುವುದು ಅನಿವಾರ್ಯ. ಡಿಸೆಂಬರ್ನಲ್ಲಿ ಐಯೋವಾದ ಒಂದು ಫಾರ್ಮ್ನಲ್ಲಿ 42 ಲಕ್ಷ ಮೊಟ್ಟೆಕೋಳಿಗಳನ್ನು ಕೊಲ್ಲಲಾಗಿತ್ತು.
ಅಮೆರಿಕದಲ್ಲಿ ಕೋಳಿ ಸಾಕುವ ಸಂಪ್ರದಾಯ ಈಗಲೂ ಇದೆ….
ಆಗಲೇ ಹೇಳಿದಂತೆ ಅಮೆರಿಕದ ಆಹಾರಕ್ರಮದಲ್ಲಿ ಮೊಟ್ಟೆಗೆ ಪ್ರಮುಖ ಸ್ಥಾನ ಇದೆ. ಹಾಗೆಯೇ ಅಲ್ಲಿ ಪ್ರತಿಯೊಂದು ಮನೆಯಲ್ಲೂ ಕೋಳಿ ಸಾಕುವ ಸಂಪ್ರದಾಯ ಇದೆ. ನಗರ ಪ್ರದೇಶಗಳಲ್ಲಿ ಈಗಲೂ ಕೂಡ ಒಂದು ಮನೆಯಲ್ಲಿ ಒಂದು ಕೋಳಿ ಸಾಕುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: USAID: ಅಮೆರಿಕದ ಯುಎಸ್ ಏಡ್ ಇತಿಹಾಸ ಏನು, ಉದ್ದೇಶ ಯಾವುದು? ಟ್ರಂಪ್ ಬಳಗಕ್ಕೆ ಯಾಕೆ ಕೋಪ?
ಅಮೆರಿಕದಲ್ಲಿ 34 ಕೋಟಿ ಜನಸಂಖ್ಯೆ ಇದೆ. ಐದು ವರ್ಷದ ಹಿಂದೆ 50 ಕೋಟಿಗೂ ಹೆಚ್ಚು ಕೋಳಿಗಳಿದ್ದುವು. ಈಗ 30 ಕೋಟಿ ಕೋಳಿಗಳಿವೆ ಎಂದು ಅಂಕಿ ಅಂಶವೊಂದು ಹೇಳುತ್ತಿದೆ.
ಮೊಟ್ಟೆಕೋಳಿಗಳನ್ನು ಬಾಡಿಗೆಗೆ ಕೊಡುವ ಕಂಪನಿಗಳು ಅಮೆರಿಕದಾದ್ಯಂತ ಇವೆ. ಈ ಕೋಳಿಗಳನ್ನು ಖರೀದಿಸುವ ಬದಲು ಕೆಲ ತಿಂಗಳ ಕಾಲ ಸಾಕುವ ಟ್ರೆಂಡ್ ಅಲ್ಲಿ ಶುರುವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ