‘ಚಿನ್ನ ಇದ್ಯೋ ಇಲ್ವೋ… ನಾನು ನೋಡ್ಬೇಕು’- ಅಮೆರಿಕದ ಫೋರ್ಟ್ ನಾಕ್ಸ್ಗೆ ಭೇಟಿ ನೀಡಲು ಟ್ರಂಪ್ ಸಜ್ಜು
Gold Knox and Donald Trump: ಅಮೆರಿಕದ ಪ್ರಮುಖ ಚಿನ್ನದ ಸಂಗ್ರಹಗಾರವಾದ ಗೋಲ್ಡ್ ನಾಕ್ಸ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಫೋರ್ಟ್ ನಾಕ್ಸ್ನಲ್ಲಿ ನಿಜವಾಗಿಯೂ ಚಿನ್ನ ಇದೆಯೋ, ಅಥವಾ ಖಾಲಿ ಡಬ್ಬ ಇದೆಯೋ ನೋಡಬೇಕು. ಚಿನ್ನ ಇಲ್ಲದಿದ್ದರೆ ಸಖತ್ ಬೇಜಾರಾಗುತ್ತದೆ ಎಂದಿದ್ದಾರೆ. ಅಮೆರಿಕದಲ್ಲಿ ಸುಮಾರು ಎಂಟು ಸಾವಿರ ಮೆಟ್ರಿಕ್ ಟನ್ ಚಿನ್ನದ ಸಂಗ್ರಹ ಇದ್ದು, ಅದರಲ್ಲಿ ಫೋರ್ಟ್ ನಾಕ್ಸ್ನಲ್ಲೇ ಅರ್ಧದಷ್ಟಿದೆ ಎನ್ನಲಾಗಿದೆ.

ವಾಷಿಂಗ್ಟನ್, ಫೆಬ್ರುವರಿ 21: ಅಮೆರಿಕದ ಗೋಲ್ಡ್ ರಿಸರ್ವ್ಸ್ನ ಹೆಚ್ಚಿನ ಚಿನ್ನವನ್ನು ಸಂಗ್ರಹಿಸಿ ಇಟ್ಟಿರುವ ಫೋರ್ಟ್ ನಾಕ್ಸ್ನಲ್ಲಿ ನಿಜವಾಗಿಯೂ ಚಿನ್ನ ಇದೆಯೋ ಇಲ್ಲವೋ ಎಂಬ ಅನುಮಾನವನ್ನು ಅಮೆರಿಕದ ಸರ್ಕಾರಿ ಕ್ಷಮತಾ ಇಲಾಖೆಯ ಮುಖ್ಯಸ್ಥ ಇಲಾನ್ ಮಸ್ಕ್ ವ್ಯಕ್ತಪಡಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಅನುಮಾನಕ್ಕೆ ಧ್ವನಿಗೂಡಿಸಿದ್ದಾರೆ. ಕೆಂಟುಕಿಯಲ್ಲಿರುವ ಫೋರ್ಟ್ ನಾಕ್ಸ್ (Fort Knox) ಮಿಲಿಟರಿ ನೆಲೆಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿ ಚಿನ್ನ ಇದೆಯೋ ಇಲ್ಲವೋ ಎಂದು ತಿಳಿದುಕೊಂಡು ಬರುತ್ತೇನೆ ಎಂದು ಟ್ರಂಪ್ ಅಬ್ಬರಿಸಿದ್ದಾರೆ.
‘ಅಲ್ಲಿ ಏನಿದೆ ಎಂಬುದು ಗೊತ್ತಾಗಬೇಕು. ಬಾಗಿಲು ತೆರೆದು ನೋಡಲಿದ್ದೇವೆ. ಫೋರ್ಟ್ ನಾಕ್ಸ್ನಲ್ಲಿಲ್ಲಿ ಚಿನ್ನ ಇದೆಯಾ ಇಲ್ಲವೋ, ಯಾರಾದರೂ ಚಿನ್ನ ಲಪಟಾಯಿಸಿದ್ದಾರಾ ನೋಡಬೇಕು’ ಎಂದು ಟ್ರಂಪ್ ಹೇಳಿದ್ದಾರೆ.
Why Do Trump & Musk Suddenly Want To Check The Gold At Fort Knox? | Explained
President #DonaldTrump said Musk would be looking at #FortKnox, the legendary depository for American #GoldReserves in #Kentucky, to ‘make sure the gold is there’. pic.twitter.com/phN16RZOTU
— Mint (@livemint) February 21, 2025
‘ಅಲ್ಲಿ ನಿಜವಾಗಿಯೂ 400 ಟನ್ ಚಿನ್ನ ಇದೆಯೋ ಎಷ್ಟು ಇದೆಯೋ ಖಾತ್ರಿಪಡಿಸಿಕೊಳ್ಳಬೇಕು. ಭಾರೀ ಪ್ರಮಾಣದಲ್ಲಂತೂ ಚಿನ್ನ ಇರಬೇಕು. ನಾನು ಬಾಗಿಲು ತೆರೆದರೆ ಕಪ್ಬೋರ್ಡ್ಗಳು ಖಾಲಿಯಾಗಿರುವುದನ್ನು ನೋಡಲು ಬಯಸೋದಿಲ್ಲ. ಅಲ್ಲಿ ಚಿನ್ನ ಇಲ್ಲದೇ ಹೋದರೆ ನಮಗೆ ಸಿಟ್ಟು ಬಂದೀತು’ ಎಂದು ಟ್ರಂಪ್ ಅಬ್ಬರಿಸಿದ್ದಾರೆ.
ಇದನ್ನೂ ಓದಿ: ಆ್ಯಪಲ್ಗೆ ಅತ್ತ ಪುಲಿ, ಇತ್ತವೂ ಪುಲಿ; ಕಾಡುತ್ತಿದೆ ಅಮೆರಿಕದ ಟ್ಯಾರಿಫ್ ಗುಮ್ಮ; ಟ್ರಂಪ್ ಭೇಟಿ ಮಾಡಿದ ಸಿಇಒ
ಕಟ್ಟುನಿಟ್ಟಿನ ಭದ್ರತೆ ಇರುವ ಫೋರ್ಟ್ ನಾಕ್ಸ್ನಲ್ಲಿ ಎಷ್ಟಿದೆ ಚಿನ್ನ..?
ಫೋರ್ಟ್ ನಾಕ್ಸ್ಗೆ 9 ದಶಕಗಳ ಇತಿಹಾಸ ಇದೆ. ಅಮೆರಿಕದ ಪ್ರಮುಖ ಗೋಲ್ಡ್ ಡೆಪಾಸಿಟರಿಗಳಲ್ಲಿ ಇದು ಒಂದು. ಸದ್ಯ ಅಮೆರಿಕದಲ್ಲಿ 8,133.46 ಮೆಟ್ರಿಕ್ ಟನ್ನಷ್ಟು ಚಿನ್ನ ಇದೆ. ಇದರಲ್ಲಿ ಫೋರ್ಟ್ ನಾಕ್ಸ್ನಲ್ಲೇ 4,000 ಮೆಟ್ರಿಕ್ ಟನ್ಗೂ ಅಧಿಕ ಚಿನ್ನ ಇದೆ. ಅಂದರೆ, ಅಮೆರಿಕದ ಅರ್ಧದಷ್ಟು ಗೋಲ್ಡ್ ರಿಸರ್ವ್ಸ್ ಈ ಮಿಲಿಟರಿ ನೆಲೆಯಲ್ಲಿ ಅಡಕವಾಗಿದೆ.
ಕೆಂಟುಕಿ ರಾಜ್ಯದಲ್ಲಿ ಒಂದು ಲಕ್ಷ ಎಕರೆಯಷ್ಟು ವಿಸ್ತಾರ ಪ್ರದೇಶದಲ್ಲಿ ಮಿಲಿಟರಿ ನೆಲೆ ಇದೆ. ಮೊದಲ ವಿಶ್ವ ಮಹಾಯುದ್ಧದಲ್ಲಿ ಇದು ಆರ್ಟಿಲರಿ ತರಬೇತಿ ಕೇಂದ್ರವಾಗಿತ್ತು. 1932ರಲ್ಲಿ ಖಾಯಂ ಮಿಲಿಟರಿ ನೆಲೆ ನಿರ್ಮಿಸಲಾಯಿತು. 1936ರಲ್ಲಿ ಚಿನ್ನವನ್ನು ಸಂಗ್ರಹಿಸಲು ಬೃಹತ್ ಕಟ್ಟಡ ನಿರ್ಮಿಸಲಾಯಿತು. ಗ್ರಾನೈಟ್, ಕಾಂಕ್ರೀಟ್, ರೀಇನ್ಫೋರ್ಸಿಂಗ್ ಸ್ಟೀಲ್, ಸ್ಟ್ರಕ್ಚರಲ್ ಸ್ಟೀಲ್ ಬಳಸಿ ಗೋಲ್ಡ್ ವೋಲ್ಟ್ಗಳಿರುವ ಫೋರ್ಟ್ ನಾಕ್ಸ್ ನಿರ್ಮಿಸಲಾಯಿತು. 1937ರಲ್ಲಿ ಇಲ್ಲಿ ಮೊದಲ ಬಾರಿಗೆ ಚಿನ್ನವನ್ನು ತಂದು ಇಡಲಾಯಿತು.
ಫೋರ್ಟ್ ನಾಕ್ಸ್ನಲ್ಲಿ ಅಪಾರ ಚಿನ್ನವನ್ನು ರಕ್ಷಿಸಲು ದೊಡ್ಡ ಭದ್ರತಾ ವ್ಯವಸ್ಥೆಯೇ ಇದೆ. ಕೆಲವೇ ಸಿಬ್ಬಂದಿಗೆ ಮಾತ್ರ ಬಾಗಿಲುಗಳನ್ನು ತೆರೆಯಲು ಅನುಮತಿ ಇರುವುದು, ಮತ್ತು ವಿಧಾನಗಳು ತಿಳಿದಿರುವುದು.
ತೊಂಬತ್ತು ವರ್ಷದ ಇತಿಹಾಸದಲ್ಲಿ ಈ ಸಿಬ್ಬಂದಿ ಬಿಟ್ಟರೆ ಅನ್ಯರಿಗೆ ಪ್ರವೇಶ ಸಿಕ್ಕಿರುವುದು ಮೂರೇ ಬಾರಿಯಂತೆ. 1974ರಲ್ಲಿ ಈಗಿನ ರೀತಿಯಲ್ಲೇ ಫೋರ್ಟ್ ನಾಕ್ಸ್ನಲ್ಲಿ ಚಿನ್ನ ಇದೆಯೋ ಇಲ್ಲವೋ ಎಂದು ಅನುಮಾನ ಬಂದ ಹಿನ್ನೆಲೆಯಲ್ಲಿ ಸಂಸತ್ನ ನಿಯೋಗ ಹಾಗೂ ಪತ್ರಕರ್ತರ ಗುಂಪೊಂದಕ್ಕೆ ಅಲ್ಲಿಗೆ ಭೇಟಿ ನೀಡಲು ಅನುಮತಿಸಲಾಗಿತ್ತು.
2017ರಲ್ಲಿ ಅಮೆರಿಕದ ಹಣಕಾಸು ಕಾರ್ಯದರ್ಶಿಯಾಗಿದ್ದ ಸ್ಟೀವ್ ಮುನುಚಿನ್ , ಕೆಂಟುಕಿ ರಾಜ್ಯಪಾಲ ಮ್ಯಾಟ್ ಬೆವಿನ್ ಹಾಗೂ ಸಂಸದೀಯ ಪ್ರತಿನಿಧಿಗಳು ಫೋರ್ಟ್ ನಾಕ್ಸ್ಗೆ ಹೋಗಿ ಬಂದಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Fri, 21 February 25