ಭಾರತದ ಕೃಷಿ ತಂತ್ರಜ್ಞಾನ ಕ್ಷೇತ್ರಕ್ಕೆ ಪುಷ್ಟಿ ನೀಡುತ್ತಿರುವ ನಮೋ ಡ್ರೋನ್ ದೀದಿ, ಕಿಸಾನ್ ಡ್ರೋನ್ ಮತ್ತಿತರ ಸ್ಕೀಮ್ಗಳು…
Govt empowering rural women through drone and other schemes: ಸರ್ಕಾರ ಜಾರಿಗೆ ತಂದಿರುವ ನಮೋ ಡ್ರೋನ್ ದೀದಿ ಯೋಜನೆ, ಕಿಸಾನ್ ಡ್ರೋನ್ ಯೋಜನೆಗಳು ಕೃಷಿ ಕ್ಷೇತ್ರವನ್ನು ಬಲಪಡಿಸುತ್ತಿವೆ ಎನ್ನಲಾಗಿದೆ. ಮಹಿಳಾ ನೇತೃತ್ವದ 15,000 ಸ್ವಸಹಾಯ ಸಂಘಗಳನ್ನು ಬಲಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಮೋ ಡ್ರೋನ್ ದೀದಿ ಯೋಜನೆಯಲ್ಲಿ ಮಹಿಳೆಯರಿಗೆ ಡ್ರೋನ್ ಖರೀದಿಸಲು ಶೇ. 80ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

ನವದೆಹಲಿ, ಫೆಬ್ರುವರಿ 21: ಭಾರತದ ಕೃಷಿ ವಲಯದಲ್ಲಿ ತಂತ್ರಜ್ಞಾನ ಅಳವಡಿಕೆ ಗಮನಾರ್ಹ ರೀತಿಯಲ್ಲಿ ಹೆಚ್ಚುತ್ತಿದೆ. ಡ್ರೋನ್ ದೀದಿ ಯೋಜನೆ, ಕಿಸಾನ್ ಡ್ರೋನ್ ಇತ್ಯಾದಿ ವಿನೂತನ ಸ್ಕೀಮ್ಗಳು ಕೃಷಿ ತಂತ್ರಜ್ಞಾನದ ಬಳಕೆ ಹೆಚ್ಚುವಂತೆ ಮಾಡಿವೆ. ನಮೋ ಡ್ರೋನ್ ದೀದಿ ಯೋಜನೆಯಲ್ಲಿ ಮಹಿಳೆಯರ ನೇತೃತ್ವದ 15,000 ಸ್ವಸಹಾಯ ಗುಂಪುಗಳನ್ನು (self-help groups) ಸಬಲೀಕರಣಗೊಳಿಸುವ ಗುರಿ ಇದೆ. ಬೆಳೆ ಪರಿಶೀಲನೆ, ಗೊಬ್ಬರ ಸಿಂಪಡಿಸುವಿಕೆ ಇತ್ಯಾದಿ ಕೃಷಿ ಕಾರ್ಯಗಳಿಗೆ ಬಳಸಲು ಡ್ರೋನ್ಗಳನ್ನು ಈ ಮಹಿಳೆಯರಿಗೆ ನೀಡಲಾಗುತ್ತದೆ.
ಡ್ರೋನ್ ಬೆಲೆಯ ಶೇ. 80 ಭಾಗದಷ್ಟು ಸಬ್ಸಿಡಿ ನೀಡಲಾಗುತ್ತದೆ. ಇದು ಹೆಚ್ಚೂ ಕಡಿಮೆ ಒಂದು ಡ್ರೋನ್ಗೆ 8 ಲಕ್ಷ ರೂವರೆಗೆ ಸಬ್ಸಿಡಿಯೆ ಸಿಗುತ್ತದೆ. ಉಳಿದ ಹಣಕ್ಕೆ ವರ್ಷಕ್ಕೆ ಕೇವಲ 3 ಪ್ರತಿಶತದ ಬಡ್ಡಿಗೆ ಸಾಲದ ವ್ಯವಸ್ಥೆ ಇರುತ್ತದೆ. ಈ ಡ್ರೋನ್ಗಳಿಂದ ಮಹಿಳೆಯರು ಒಂದು ವರ್ಷದಲ್ಲಿ ಕನಿಷ್ಠವೆಂದರೂ ಒಂದು ಲಕ್ಷ ರೂ ಆದಾಯ ಗಳಿಸಬಹುದು ಎನ್ನುವ ಲೆಕ್ಕಾಚಾರ ಇದೆ. ಇದರಿಂದ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಉತ್ತಮ ಬದುಕು ಸಾಧ್ಯವಾಗುತ್ತದೆ.
ಸರ್ಕಾರವು ಈ ನಮೋ ಡ್ರೋನ್ ದೀದಿ ಯೋಜನೆ ಮೂಲಕ ಮುಂದಿನ ಮೂರು ವರ್ಷದಲ್ಲಿ ಮೂರು ಕೋಟಿ ಲಖಪತಿ ದೀದಿಯರನ್ನು ಸೃಷ್ಟಿಸುವ ಗುರಿ ಇಟ್ಟಿದೆ. ಅಂದರೆ, ಮೂರು ಕೋಟಿ ಮಹಿಳೆಯರಿಗೆ ಈ ಯೋಜನೆ ಮೂಲಕ ಉತ್ತಮ ಆದಾಯ ಮಾರ್ಗ ನೀಡುವ ಉದ್ದೇಶ ಸರ್ಕಾರದ್ದಾಗಿದೆ.
ಇದನ್ನೂ ಓದಿ: 2025-26ರಲ್ಲಿ ಭಾರತವೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ: ಆರ್ಬಿಐ ಬುಲೆಟಿನ್ ಅಂದಾಜು
ನಮೋ ಡ್ರೋನ್ ದೀದಿ ಯೋಜನೆಯಿಂದ ಕೃಷಿ ಕಾರ್ಯಗಳ ವೆಚ್ಚ ಕಡಿಮೆ ಆಗುತ್ತದೆ. ಸುಲಭವಾಗಿ ಕೆಲಸಗಳು ಆಗುತ್ತವೆ. ಗ್ರಾಮೀಣ ಭಾಗದ ಮಹಿಳೆಯರ ಬದುಕು ಉತ್ತಮಗೊಳ್ಳಲು ಕಾರಣವಾಗುತ್ತದೆ.
ಇನ್ನು, ಕಿಸಾನ್ ಡ್ರೋನ್ ಸ್ಕೀಮ್ನಲ್ಲಿ ರೈತರು ಸಬ್ಸಿಡಿ ದರದಲ್ಲಿ ಡ್ರೋನ್ಗಳನ್ನು ಖರೀದಿಸಬಹುದು. ಕೃಷಿಯಲ್ಲಿ ಡ್ರೋನ್ಗಳ ಬಳಕೆಯಿಂದ ಹಲವು ಉಪಯೋಗಗಳಿವೆ. ಕೃಷಿ ಉತ್ಪಾದನೆ ಹೆಚ್ಚಿಸಲು ಇದು ಸಹಾಯಕವಾಗಬಲ್ಲುದು.
ಈ ಡ್ರೋನ್ ಯೋಜನೆಗಳು ದೇಶದಲ್ಲಿ ಡ್ರೋನ್ಗೆ ಉತ್ತಮ ಮಾರುಕಟ್ಟೆ ಸೃಷ್ಟಿಸಬಲ್ಲುವು. ಭಾರತವನ್ನು ಜಾಗತಿಕ ಡ್ರೋನ್ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಮಾಡಲು ಸಹಾಯವಾಗುತ್ತದೆ. ಸದ್ಯ ದೇಶದ ಡ್ರೋನ್ ಮಾರುಕಟ್ಟೆ ಮೌಲ್ಯ 4.2 ಬಿಲಿಯನ್ ಡಾಲರ್ ಇದೆ. 2030ರೊಳಗೆ ಇದು 23 ಬಿಲಿಯನ್ ಡಾಲರ್ ಗಾತ್ರದ್ದಾಗಿ ಬೆಳೆಯಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಓಪನ್ ಅಕ್ಸೆಸ್ ಮೂಲಕ ವಿದ್ಯುತ್ ಖರೀದಿ; ಸೆಂಟ್ರಲ್ ರೈಲ್ವೆಗೆ ಆರು ಸಾವಿರ ಕೋಟಿ ರೂ ಉಳಿತಾಯ
ಗ್ರಾಂಟ್ ಥಾರ್ನ್ಟನ್ ಭಾರತ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಪರಿವರ್ತನ್ ಸಂಯೋಗದಲ್ಲಿ ನಡೆಸಲಾಗುತ್ತಿರುವ ಸ್ತ್ರೀ ಕಾರ್ಯಕ್ರಮದಿಂದಲೂ ಕೃಷಿಗಾರಿಕೆಯಲ್ಲಿ ಮಹಿಳೆಯರನ್ನು ಸನ್ನದ್ದಗೊಳಿಸಲಾಗುತ್ತಿದೆ. 1.8 ಲಕ್ಷ ಮಹಿಳೆಯರಿಗೆ ಆಧುನಿಕ ಕೃಷಿಗಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ