ಭಾರತದ ಆರ್ಥಿಕತೆ 4.3 ಟ್ರಿಲಿಯನ್ ಡಾಲರ್; 10 ವರ್ಷದಲ್ಲಿ ಡಿಜಿಪಿ ಡಬಲ್; ಜಪಾನ್ ಅನ್ನೂ ಹಿಂದಿಕ್ಕಿದೆಯಾ ಭಾರತ?
India GDP growth rate: ಭಾರತದ ಜಿಡಿಪಿ 4.3 ಟ್ರಿಲಿಯನ್ ಡಾಲರ್್ಗೆ ಏರಿದೆ ಎಂದು ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಜಪಾನ್ನ ಜಿಡಿಪಿ 4.4 ಟ್ರಿಲಿಯನ್ ಡಾಲರ್ ಇದೆ. ಭಾರತ ಈ ವರ್ಷವೇ ಜಪಾನ್ ಅನ್ನು ಹಿಂದಿಕ್ಕುವುದು ನಿಶ್ಚಿತವಾಗಿದೆ. ಕಳೆದ 10 ವರ್ಷದಲ್ಲಿ ಭಾರತದ ಆರ್ಥಿಕತೆ ದ್ವಿಗುಣಗೊಂಡಿರುವುದ ಗಮನಾರ್ಹ.

ನವದೆಹಲಿ, ಮಾರ್ಚ್ 23: ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸುವ ಕಾಲ ಬಹಳ ಸಮೀಪ ಇದೆ. ಐಎಂಎಫ್ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಭಾರತದ ಈಗಿನ ಜಿಡಿಪಿ 4.3 ಟ್ರಿಲಿಯನ್ ಡಾಲರ್ ಆಗಿದೆ. ಜಪಾನ್ ದೇಶದ ಜಿಡಿಪಿ 4.4 ಟ್ರಿಲಿಯನ್ ಡಾಲರ್ ಇದೆ. ಅತಿದೊಡ್ಡ ಆರ್ಥಿಕತೆಯಲ್ಲಿ (Largest Economy) ಐದನೇ ಸ್ಥಾನದಲ್ಲಿರುವ ಭಾರತ ಈಗ ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಲು 100 ಬಿಲಿಯನ್ ಡಾಲರ್ ಮಾತ್ರವೇ ಬಾಕಿ ಇದೆ. ಬಹಳ ಮಂದಗತಿಯಲ್ಲಿ ಜಪಾನ್ ಜಿಡಿಪಿ ಬೆಳೆಯುತ್ತಿರುವುದರಿಂದ ಈ ವರ್ಷದೊಳಗೆ ಅಥವಾ ಒಂದೆರಡು ತಿಂಗಳಳೊಳಗೆ ಭಾರತ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶ ಎನಿಸುವ ಸಾಧ್ಯತೆ ದಟ್ಟವಾಗಿದೆ. ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶವು, ಹಣದುಬ್ಬರ ಲೆಕ್ಕಾಚಾರ ಕಳೆದಿರುವ ಜಿಡಿಪಿಯದ್ದಾಗಿದೆ. ಹೀಗಾಗಿ, ಇದು ನೈಜ ಜಿಡಿಪಿ ಎನಿಸಿದೆ.
ಹತ್ತು ವರ್ಷದಲ್ಲಿ ಡಬಲ್ ಆದ ಭಾರತದ ಜಿಡಿಪಿ
ಭಾರತದ ಜಿಡಿಪಿ 2015ರಲ್ಲಿ 2.1 ಟ್ರಿಲಿಯನ್ ಡಾಲರ್ ಇತ್ತು. ಹತ್ತು ವರ್ಷಗಳ ನಂತರ, ಅಂದರೆ, 2025ರಲ್ಲಿ ಜಿಡಿಪಿ 4.3 ಟ್ರಿಲಿಯನ್ ಡಾಲರ್ ಆಗಿದೆ. ಅಂದರೆ, ಶೇ. 105ರಷ್ಟು ಜಿಡಿಪಿ ಬೆಳೆದಿದೆ. ವಿಶ್ವದ ಯಾವ ಪ್ರಮುಖ ಆರ್ಥಿಕತೆಯೂ ಈ ಹತ್ತು ವರ್ಷದಲ್ಲಿ ಭಾರತದಷ್ಟು ವೇಗವಾಗಿ ಬೆಳವಣಿಗೆ ಹೊಂದಿಲ್ಲ.
ಎಪ್ಪತರ ದಶಕದಿಂದೀಚೆ ಅಗಾಧವಾಗಿ ಬೆಳವಣಿಗೆ ಹೊಂದುತ್ತಾ ಬಂದಿದ್ದ ಚೀನಾ, 2015ರಿಂದ 2025ರವರೆಗೆ ಶೇ. 76ರಷ್ಟು ಮಾತ್ರ ಬೆಳವಣಿಗೆ ಹೊಂದಿದೆ. ಅಮೆರಿಕದ ಬೆಳವಣಿಗೆ ದರ ಈ ಅವಧಿಯಲ್ಲಿ ಶೇ. 28 ಇದೆ. ಇತರ ಪ್ರಮುಖ ಆರ್ಥಿಕತೆಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳ ಜಿಡಿಪಿ ಈ ಅವಧಿಯಲ್ಲಿ ಶೇ. 6ರಿಂದ 14ರ ಶ್ರೇಣಿಯಲ್ಲಿ ಮಾತ್ರ ಹೆಚ್ಚಳ ಕಂಡಿದೆ. ಅಂದರೆ, 10 ವರ್ಷದಲ್ಲಿ ಇವುಗಳು ಬೆಳವಣಿಗೆ ಹೊಂದಿರುವುದು ಬಹಳ ಅಲ್ಪ. ಬ್ರೆಜಿಲ್ ದೇಶದ ಜಿಡಿಪಿ 2015ರಲ್ಲಿ 2.1 ಟ್ರಿಲಿಯನ್ ಡಾಲರ್ ಇದ್ದದ್ದು ಈಗ 2.3 ಟ್ರಿಲಿಯನ್ ಡಾಲರ್ಗೆ ಮಾತ್ರವೇ ಏರಿಕೆ ಆಗಿದೆ.
ಕೆಲ ವರ್ಷಗಳ ಹಿಂದಿನವರೆಗೂ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದ ಜಪಾನ್ ಈ ವರ್ಷ ಶೇ. 1ರಷ್ಟು ಮಾತ್ರ ಬೆಳೆಯುವ ನಿರೀಕ್ಷೆ ಇದೆ. ಹೀಗಾಗಿ, ಭಾರತವು ಜಪಾನ್ ಅನ್ನು ಬಹಳ ಬೇಗ ಹಿಂದಿಕ್ಕುವ ಎಲ್ಲಾ ಸಾಧ್ಯತೆ ಇದೆ. ಇನ್ನೆರಡು ವರ್ಷದಲ್ಲಿ ಜರ್ಮನಿಯನ್ನೂ ಹಿಂದಿಕ್ಕುವ ಅವಕಾಶ ಇದೆ.
ಇದನ್ನೂ ಓದಿ: ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು
ಪ್ರಧಾನಿ ಮೋದಿ ಗುರಿ ಬಹುತೇಕ ಈಡೇರಿಕೆ
ಪ್ರಧಾನಿ ನರೇಂದ್ರ ಮೋದಿ, ಭಾರತದ ಜಿಡಿಪಿ 2025ರಲ್ಲಿ 5 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರುತ್ತದೆ ಎಂದು 2019ರಲ್ಲಿ ಹೇಳಿದ್ದರು. ಅವರ ಭವಿಷ್ಯ ಬಹುತೇಕ ನಿಜವಾಗಿದೆ. 2025ರಲ್ಲಿ ಅದು ಶೇ. 7ರಷ್ಟು ಹೆಚ್ಚಾದರೆ 4.7 ಟ್ರಿಲಿಯನ್ ಡಾಲರ್ ಆಸುಪಾಸಿನ ಗಾತ್ರದ ಆರ್ಥಿಕತೆಯಾಗಲಿದೆ.
2025ರಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳು
- ಅಮೆರಿಕ: 30.3 ಟ್ರಿಲಿಯನ್ ಡಾಲರ್
- ಚೀನಾ: 19.5 ಟ್ರಿಲಿಯನ್ ಡಾಲರ್
- ಜರ್ಮನಿ: 4.9 ಟ್ರಿಲಿಯನ್ ಡಾಲರ್
- ಜಪಾನ್: 4.4 ಟ್ರಿಲಿಯನ್ ಡಾಲರ್
- ಭಾರತ: 4.3 ಟ್ರಿಲಿಯನ್ ಡಾಲರ್
- ಬ್ರಿಟನ್: 3.7 ಟ್ರಿಲಿಯನ್ ಡಾಲರ್
- ಫ್ರಾನ್ಸ್: 3.3 ಟ್ರಿಲಿಯನ್ ಡಾಲರ್
- ಇಟಲಿ: 2.5 ಟ್ರಿಲಿಯನ್ ಡಾಲರ್
- ಕೆನಡಾ: 2.3 ಟ್ರಿಲಿಯನ್ ಡಾಲರ್
- ಬ್ರೆಜಿಲ್: 2.3 ಟ್ರಿಲಿಯನ್ ಡಾಲರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ