ಟ್ವಿಟ್ಟರ್ ಲೋಗೋ ಹರಾಜು, 30 ಲಕ್ಷ ರೂಗೆ ಮಾರಾಟ; ಈ ಲೋಗೋ ಹಿಂದಿದೆ ಸಣ್ಣ ಸ್ವಾರಸ್ಯಕರ ಕಥೆ
Twitter logo sold in auction: ಎಕ್ಸ್ ಎಂದು ಬದಲಾಗುವ ಮುನ್ನ ಅಸ್ತಿತ್ವದಲ್ಲಿದ್ದ ಟ್ವಿಟ್ಟರ್ ಲೋಗೋವನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. 12 X 9 ಗಾತ್ರದ, 254 ಕಿಲೋ ತೂಕದ ಈ ಲೋಗೋ ಫಲಕ ಸುಮಾರು 35,000 ಡಾಲರ್ಗೆ ಮಾರಾಟವಾಗಿದೆ. ಹಕ್ಕಿಯ ಚಿತ್ರ ಇರುವ ಈ ಲೋಗೋಗೆ ಲ್ಯಾರಿ ಬರ್ಡ್ ಎಂದು ಹೆಸರಿತ್ತು. ಈ ಹೆಸರಿಡುವುದರ ಹಿಂದಿನ ಒಂದು ಕುತೂಹಲಕಾರಿ ಕಥೆ ಇದೆ.

ಸ್ಯಾನ್ ಫ್ರಾನ್ಸಿಸ್ಕೋ, ಮಾರ್ಚ್ 24: ಎಕ್ಸ್ ಎನ್ನುವ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಬಳಸುತ್ತಿರುವವರಿಗೆ ಹಿಂದಿನ ಟ್ವಿಟ್ಟರ್ ಲೋಗೋ (Twitter Logo) ನೆನಪಿರಬಹುದು. ಇಲಾನ್ ಮಸ್ಕ್ ಅವರಿಂದ ಖರೀದಿ ಆಗುವ ಮುನ್ನ ಎಕ್ಸ್ ಟ್ವಿಟ್ಟರ್ ಆಗಿತ್ತು. ಅದರ ಹಕ್ಕಿಯ ಲೋಗೋ ಬಹಳ ಜನಪ್ರಿಯವಾಗಿತ್ತು. ಈ ಲೋಗೋವನ್ನು ಹರಾಜಿನಲ್ಲಿ ಮಾರಲಾಗಿದೆ. ಆರ್ ಆರ್ ಆಕ್ಷನ್ (RR Auction) ಎನ್ನುವ ಸಂಸ್ಥೆ ಆಯೋಜಿಸಿದ ಹರಾಜಿನಲ್ಲಿ ಟ್ವಿಟ್ಟರ್ ಲೋಗೋ 34,375 ಡಾಲರ್ಗೆ ಮಾರಾಟವಾಗಿದೆ. ಅಂದರೆ, ಸುಮಾರು 30 ಲಕ್ಷ ರುಪಾಯಿಗೆ ಇದರ ಸೇಲ್ ಆಗಿದೆ. ಆದರೆ, ಇದನ್ನು ಖರೀದಿಸಿದ್ದು ಯಾರು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ.
ಈ ಲೋಗೋ 12 ಅಡಿ ಎತ್ತರ, 9 ಅಡಿ ಅಗಲದ ಫಲಕವಾಗಿದ್ದು, ಒಟ್ಟು ತೂಕ 254 ಕಿಲೋ ಇದೆ. ಈ ಲೋಗೋ ಹರಾಜಿನಲ್ಲಿ ಮಾರಾಟವಾಗಿರುವ ವಿಷಯವನ್ನು ಇಲಾನ್ ಮಸ್ಕ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
2022ರಲ್ಲಿ ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು 2022ರ ಕೊನೆಯ ಕ್ವಾರ್ಟರ್ನಲ್ಲಿ ಖರೀದಿಸಿದ್ದರು. ಆ ಬಳಿಕ ಹಂತ ಹಂತವಾಗಿ ಟ್ವಿಟ್ಟರ್ ಅನ್ನು ಎಕ್ಸ್ ಆಗಿ ಬದಲಿಸುತ್ತಾ ಹೋಗಿದ್ದರು. ಯುಆರ್ಎಲ್ ಟ್ವಿಟ್ಟರ್ ಡಾಟ್ ಕಾಮ್ ಬದಲು ಎಕ್ಸ್ ಡಾಟ್ ಕಾಮ್ ಆಯಿತು.
ಇದನ್ನೂ ಓದಿ: ಸರ್ಕಾರಿ ಬ್ಯಾಂಕುಗಳ ಕಥೆ.. ಅಂದು ದಾಖಲೆಯ ನಷ್ಟ; ಇಂದು 27,830 ಕೋಟಿ ರೂ ಲಾಭಾಂಶ ಬಿಡುಗಡೆ
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್ ಮುಖ್ಯ ಕಚೇರಿಯಲ್ಲೂ ಸಾಕಷ್ಟು ಬದಲಾವಣೆಗಳಾದವು. ಹೆಚ್ಚಿನ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಯಿತು. ಸಿಇಒ ಸೇರಿದಂತೆ ಅಗ್ರ ಸ್ತರದ ಟೀಮ್ ಅನ್ನು ಹೊರಗೆ ಕಳುಹಿಸಲಾಯಿತು. ಟ್ವಿಟ್ಟರ್ ಕಚೇರಿಯನ್ನು ಎಕ್ಸ್ ಥೀಮ್ ಪ್ರಕಾರ ಮರುವಿನ್ಯಾಸ ಮಾಡಲಾಯಿತು.
ಕಚೇರಿ ಕಟ್ಟಡಕ್ಕೆ ಶೃಂಗಾರಗೊಂಡಿದ್ದ 12X9 ವಿಸ್ತಾರದ ಲೋಗೋ ಫಲಕವನ್ನು ತೆಗೆಯಲಾಯಿತು. ಈಗ ಇದನ್ನು ಹರಾಜಿನಲ್ಲಿ ಮಾರಲಾಗಿದೆ. ಟ್ವಿಟ್ಟರ್ನ ನೆನಪುಗಳಂತಿರುವ ಈ ವಸ್ತುವನ್ನು ಮಾರಿದ್ದು ಇದೇ ಮೊದಲಲ್ಲ. ಕಚೇರಿ ಮರುವಿನ್ಯಾಸ ಮಾಡುವಾಗ ತೆಗೆಯಲಾಗಿದ್ದ ಪೀಠೋಪಕರಣ, ಅಡುಗೆ ಉಪಕರಣ ಇತ್ಯಾದಿ ಹಲವು ವಸ್ತುಗಳನ್ನೂ ಈ ಹಿಂದೆ ಹರಾಜಿನಲ್ಲಿ ಮಾರಲಾಗಿತ್ತು.
ಟ್ವಿಟ್ಟರ್ ಲೋಗೋಗೆ ಲ್ಯಾರಿ ಬರ್ಡ್ ಹೆಸರು, ಅದರ ಹಿಂದಿನ ಇಂಟರೆಸ್ಟಿಂಗ್ ಕಥೆ…
ಟ್ವಿಟ್ಟರ್ನ ಹಕ್ಕಿಯ ಲೋಗೋ ಯಾರ ಚಿತ್ತದಿಂದಲೂ ಕಣ್ಮರೆಯಾಗದಷ್ಟು ನಿಕಟವಾಗಿ ಹೋಗಿದೆ. ಈ ಲೋಗೋಗೆ ಲ್ಯಾರಿ ಬರ್ಡ್ ಎಂದು ಹೆಸರಿಡಲಾಗಿತ್ತು. ಲ್ಯಾರಿ ಬರ್ಡ್ ಅಮೆರಿಕದ ಖ್ಯಾತ ಬ್ಯಾಸ್ಕೆಟ್ಬಾಲ್ ಆಟಗಾರ. ಇವರ ಹೆಸರನ್ನು ಟ್ವಿಟ್ಟರ್ ಲೋಗೋಗೆ ಇಟ್ಟಿದ್ದು ನಿಜಕ್ಕೂ ಇಂಟರೆಸ್ಟಿಂಗ್ ವಿಷಯ.
ಇದನ್ನೂ ಓದಿ: ಚೀನಾದಲ್ಲಿ ಒಂದಿಡೀ ನಗರದಷ್ಟು ಬೃಹತ್ ಮೆಗಾಫ್ಯಾಕ್ಟರಿ; ಘೋಸ್ಟ್ ಸಿಟಿಯಾಗುತ್ತಾ ಈ ಕಾರ್ಖಾನೆ?
ಟ್ವಿಟ್ಟರ್ನ ಮೂವರು ಸಂಸ್ಥಾಪಕರಲ್ಲಿ ಬಿಜ್ ಸ್ಟೋನ್ ಒಬ್ಬರು. ಅಮೆರಿಕದ ಬೋಸ್ಟೋನ್ನ ಬಿಜ್ ಸ್ಟೋನ್ ಅವರು ಅಪ್ಪಟ ಬ್ಯಾಸ್ಕೆಟ್ಬಾಲ್ ಕ್ರೀಡಾಭಿಮಾನಿ. ತಮ್ಮ ತವರಿನ ಬೋಸ್ಟೋನ್ ಸೆಲ್ಟಿಕ್ಸ್ನ ಡೈ ಹಾರ್ಡ್ ಫ್ಯಾನ್. ಬೋಸ್ಟೋನ್ ಸೆಲ್ಟಿಕ್ಸ್ ತಂಡದ ಜನಪ್ರಿಯ ಆಟಗಾರನೇ ಲ್ಯಾರಿ ಬರ್ಡ್. ಟ್ವಿಟ್ಟರ್ಗೆ ಹಕ್ಕಿ ಇರುವ ಲೋಗೋ ಸಿದ್ಧಪಡಿಸಿದಾಗ ಲ್ಯಾರಿ ಬರ್ಡ್ ಅವರ ಹೆಸರನ್ನು ಇಡಲು ಸೂಚಿಸಿದ್ದು ಬಿಜ್ ಸ್ಟೋನ್ ಅವರೆಯೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ