ನವದೆಹಲಿ, ಜುಲೈ 25: ಬ್ಯಾಂಕಿಗೆ ಹೋಗಿ ಕ್ಯಾಷ್ ಪೇ ಔಟ್ ಪಡೆಯಲು ಅಥವಾ ಬ್ಯಾಂಕ್ ಖಾತೆಯೊಂದಕ್ಕೆ ನಗದು ಹಣ ಜಮೆ ಮಾಡಲು ಇರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಬ್ಯಾಂಕ್ಗಳು ನಗದು ಹಣ ಸ್ವೀಕರಿಸುವ ವ್ಯಕ್ತಿಯ ಕೆವೈಸಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಕ್ಯಾಷ್ ಡೆಪಾಸಿಟ್ ಮಾಡುವವರ ವಿವರವನ್ನೂ ಬ್ಯಾಂಕುಗಳು ಪಡೆಯುವುದು ಅವಶ್ಯಕವಾಗಿದೆ. ಇವರೆಲ್ಲರ ವಿವರಗಳನ್ನು ಬ್ಯಾಂಕುಗಳು ಪ್ರತ್ಯೇಕ ದಾಖಲೆಯಲ್ಲಿ ಇಟ್ಟುಕೊಂಡಿರಬೇಕು. ಹಾಗಂತ ಆರ್ಬಿಐ ನಿನ್ನೆ (ಜುಲೈ 24) ನಿಯಮ ಹೊರಡಿಸಿದೆ.
ಕ್ಯಾಷ್ ಪೇ ಔಟ್ ಕೊಡುವ ಬ್ಯಾಂಕುಗಳು ಹಣ ಸ್ವೀಕರಿಸುವ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಪಡೆಯುವುದು ಕಡ್ಡಾಯ. ಹಾಗೆಯೇ, ಕ್ಯಾಷ್ ಪೇ ಇನ್ ಸಂದರ್ಭದಲ್ಲಿ ನಗದು ಹಣವನ್ನು ಡೆಪಾಸಿಟ್ ಮಾಡುವ ವ್ಯಕ್ತಿಯ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿ ನೊಂದಣಿ ಮಾಡಬೇಕಾಗುತ್ತದೆ. 2016ರಲ್ಲಿ ರೂಪಿಸಲಾದ ಕೆವೈಸಿ ಮಾರ್ಗಸೂಚಿ ಪ್ರಕಾರ ಸ್ವ ಘೋಷಿತ ಒವಿಡಿ ಅಥವಾ ಅಧಿಕೃತ ದಾಖಲೆಯನ್ನೂ ಈ ನೊಂದಣಿಯಲ್ಲಿ ಬಳಸಬೇಕಾಗುತ್ತದೆ.
ಇದರ ಜೊತೆಗೆ, ಬ್ಯಾಂಕ್ ಖಾತೆಯೊಂದಕ್ಕೆ ಕ್ಯಾಷ್ ಡೆಪಾಸಿಟ್ ಮಾಡುವ ವ್ಯಕ್ತಿಯಿಂದ ಹೆಚ್ಚುವರಿ ದೃಢೀಕರಣ ಪಡೆಯಬೇಕಾಗುತ್ತದೆ. ಇವೆಲ್ಲಾ ಪರಿಷ್ಕೃತ ನಿಯಮಗಳು ನವೆಂಬರ್ನಿಂದ ಚಾಲನೆಗೆ ಬರಲಿವೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತ ಬಿಟ್ಟುಹೋಗ್ತೀರಾ? ಟ್ಯಾಕ್ಸ್ ಕಟ್ಟಿ ಹೋಗಿ; ಟಿಸಿ ಸರ್ಟಿಫಿಕೇಟ್ ಕಡ್ಡಾಯ; ಅ. 1ರಿಂದ ಕಾನೂನು ಜಾರಿ
ಇತ್ತೀಚೆಗೆ ಹೆಚ್ಚಿರುವ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಆನ್ಲೈನ್ ವ್ಯವಹಾರದಲ್ಲಿ ಗ್ರಾಹಕರಿಗೆ ಪುಸಲಾಯಿಸಿ ಥರ್ಡ್ ಪಾರ್ಟಿ ಅಕೌಂಟ್ಗಳಿಗೆ ಹಣ ವರ್ಗಾಯಿಸಿಕೊಂಡು, ಬಳಿಕ ಆ ಖಾತೆಗಳಿಂದ ವಂಚಕರು ಕ್ಯಾಷ್ ವಿತ್ಡ್ರಾ ಮಾಡಿಕೊಳ್ಳುತ್ತಿರುವ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರ್ಬಿಐ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.
ಇಲ್ಲಿ ಕ್ಯಾಷ್ ಪಡೆಯುವ ವ್ಯಕ್ತಿಯ ವಿವರಗಳು, ಕ್ಯಾಷ್ ಡೆಪಾಸಿಟ್ ಮಾಡುವ ವ್ಯಕ್ತಿಯ ವಿವರಗಳನ್ನು ಬ್ಯಾಂಕ್ಗಳು ಪಡೆದಿಟ್ಟುಕೊಳ್ಳುವುದರಿಂದ ಕ್ಯಾಷ್ ವಹಿವಾಟು ದುರ್ಬಳಕೆಯನ್ನು ತಡೆಯಬಹುದು.
ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಆದರೆ ಅದನ್ನು ಟ್ರ್ಯಾಕ್ ಮಾಡಬಹುದು. ಆದರೆ, ಕ್ಯಾಷ್ ಪೇಔಟ್ಗಳ ಮೇಲೆ ನಿಗಾ ಇಡಲಾಗುವುದಿಲ್ಲ. ಈಗಾಗಲೇ ಈ ವಿಚಾರದಲ್ಲಿ ನಿಯಮಗಳಿವೆ. 50,000 ರೂಗಿಂತ ಹೆಚ್ಚು ನಗದು ಹಣವನ್ನು ಸೇವಿಂಗ್ಸ್ ಅಕೌಂಟ್ಗೆ ಹಾಕುವವರು ಪ್ಯಾನ್ ಕಾರ್ಡ್ ಸಲ್ಲಿಸಬೇಕು. ಒಂದು ವರ್ಷದಲ್ಲಿ ಒಂದು ಉಳಿತಾಯ ಖಾತೆಗೆ ಜಮೆ ಮಾಡಲಾಗುವ ನಗದು ಹಣದ ಮಿತಿ 10 ಲಕ್ಷ ರೂ ಇದೆ. ಇದಕ್ಕಿಂತ ಹೆಚ್ಚು ಹಣವನ್ನು ಕ್ಯಾಷ್ ರೂಪದಲ್ಲಿ ವಿತ್ಡ್ರಾ ಮಾಡಿದಲ್ಲಿ ಅಥವಾ ಡೆಪಾಸಿಟ್ ಮಾಡಿದಲ್ಲಿ ಆದಾಯ ತೆರಿಗೆಗೆ ಮಾಹಿತಿ ಹೋಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ