Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಸ್ಟಾರ್ಟಪ್ ಬ್ಲೂಲರ್ನ್ ಅಂತ್ಯ; ಹೂಡಿಕೆದಾರರಿಗೆ ಶೇ. 70 ಹಣ ಮರಳಿಸಿದ ಸಂಸ್ಥಾಪಕರು; ಕಂಪನಿ ಮುಚ್ಚಿದರೂ ಯುವಕರಿಗೆ ಕುಂದದ ಉತ್ಸಾಹ

Bengaluru's startup Bluelearn close down: ಕಾಲೇಜು ಓದುತ್ತಿರುವಾಗ ಇಬ್ಬರು ವಿದ್ಯಾರ್ಥಿಗಳು ಆರಂಭಿಸಿದ ಆನ್​ಲೈನ್ ಕಲಿಕಾ ಪ್ಲಾಟ್​ಫಾರ್ಮ್ ಬ್ಲೂಲರ್ನ್ ಇದೀಗ ಬಂದ್ ಆಗಿದೆ. ಬಾಗಿಲು ಮುಚ್ಚಿದ ಹಲವು ಸ್ಟಾರ್ಟಪ್​ಗಳ ಸಾಲಿಗೆ ಬೆಂಗಳೂರಿನ ಈ ಕಂಪನಿ ಸೇರಿದೆ. ಹರೀಶ್ ಉದಯಕುಮಾರ್ ಮತ್ತು ಶ್ರೇಯಾನ್ಸ್ ಸಂಕೇತಿ ಎಂಬಿಬ್ಬರು ಸಹಪಾಠಿಗಳು ಕಟ್ಟಿದ ಬ್ಲೂಲರ್ನ್ ಆದಾಯ ಗಳಿಕೆ ಸಾಧ್ಯತೆ ಕಡಿಮೆ ಇದ್ದರಿಂದ ಮುಚ್ಚಿದೆ.

ಬೆಂಗಳೂರಿನ ಸ್ಟಾರ್ಟಪ್ ಬ್ಲೂಲರ್ನ್ ಅಂತ್ಯ; ಹೂಡಿಕೆದಾರರಿಗೆ ಶೇ. 70 ಹಣ ಮರಳಿಸಿದ ಸಂಸ್ಥಾಪಕರು; ಕಂಪನಿ ಮುಚ್ಚಿದರೂ ಯುವಕರಿಗೆ ಕುಂದದ ಉತ್ಸಾಹ
ಬ್ಲೂಲರ್ನ್ ಸಂಸ್ಥಾಪಕರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2024 | 12:39 PM

ಬೆಂಗಳೂರು, ಜುಲೈ 25: ಕಾಲೇಜು ಓದುವಾಗ ಟೆಲಿಗ್ರಾಮ್​ನಲ್ಲಿ ಸಹ-ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಶುರುವಾದ ಗ್ರೂಪ್ ಮುಂದೆ ಪ್ರಮುಖ ಅಪ್​ಸ್ಕಿಲಿಂಗ್ ಪ್ಲಾಟ್​ಫಾರ್ಮ್ ಆಗಿ ಬದಲಾಗಿತ್ತು. ಬಿಟ್ಸ್ ಪಿಲಾನಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಯುವಕರು ಬೆಂಗಳೂರಿನಲ್ಲಿ ಬ್ಲೂಲರ್ನ್ ಎಂಬ ಸ್ಟಾರ್ಟಪ್ ಸ್ಥಾಪಿಸಿದ್ದರು. ಭಾರತದ ಮೂರನೇ ಅತಿದೊಡ್ಡ ವಿದ್ಯಾರ್ಥಿ ಬಳಗ ಸದಸ್ಯತ್ವ ಹೊಂದಿದ್ದ ಈ ಕಂಪನಿ ಈಗ ಗತ ಇತಿಹಾಸ ಸೇರುತ್ತಿದೆ. ಆನ್​ಲೈನ್ ಶಿಕ್ಷಣ ಪ್ಲಾಟ್​ಫಾರ್ಮ್​ವೊಂದು ಮುರುಟಿ ಹೋಗಿದೆ.​ ನೌಕರಿ ಹುಡುಕುವ ಮತ್ತು ಕೌಶಲ್ಯಾಭಿವೃದ್ಧಿಪಡಿಸುವ ಪ್ಲಾಟ್​ಫಾರ್ಮ್ ಆದ ಬ್ಲೂಲರ್ನ್ ಮುಚ್ಚುತ್ತಿರುವ ವಿಚಾರವನ್ನು ಅದರ ಸಂಸ್ಥಾಪಕ ಹರೀಶ್ ಉದಯಕುಮಾರ್ ಕೆಲ ದಿನಗಳ ಹಿಂದೆ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಬ್ಲೂಲರ್ನ್ ಮಿಷನ್ ವಿಫಲ ಆಗಿದ್ದು ಯಾಕೆ?

ಬ್ಲೂಲರ್ನ್ ಸಂಸ್ಥೆಯನ್ನು 2021ರಲ್ಲಿ ಹರೀಶ್ ಉದಯಕುಮಾರ್ ಮತ್ತು ಶ್ರೇಯಾಂಶ್ ಸಂಕೇತಿ ಎಂಬಿಬ್ಬರು ಬಿಟ್ಸ್ ಪಿಲಾನಿ ಸಹಪಾಠಿಗಳು ಸ್ಥಾಪಿಸಿದ್ದರು. ಎಂಜಿನಿಯರಿಂಗ್​ನ ಮೂರನೇ ವರ್ಷದಲ್ಲಿ ಓದುವಾಗ ಟೆಲಿಗ್ರಾಂ ಗ್ರೂಪ್ ಮಾಡಿ ಸಹ-ವಿದ್ಯಾರ್ಥಿಗಳಿಗೆ ವಿವಿಧ ಸಬ್ಜೆಕ್ಟ್​ಗಳಲ್ಲಿ ಇದ್ದ ಅನುಮಾನಗಳನ್ನು ತಜ್ಞರ ಮೂಲಕ ಬಗೆಹರಿಸುವ ಪ್ಲಾಟ್​ಫಾರ್ಮ್ ಸೃಷ್ಟಿಸಿದ್ದರು.

ಇದನ್ನೂ ಓದಿ: 24 ವರ್ಷದೊಳಗಿನ ಯುವಕರಿಗೆ ತಿಂಗಳಿಗೆ 5,000 ರೂ ಸಿಗುವ ಇಂಟರ್ನ್​ಶಿಪ್ ಸ್ಕೀಮ್; ಕೌಶಲ್ಯಾಭಿವೃದ್ಧಿ ಹೆಚ್ಚಿಸುವ ಯೋಜನೆ ಬಜೆಟ್​ನಲ್ಲಿ ಘೋಷಣೆ

ಮುಂದೆ ಆ ವಿದ್ಯಾರ್ಥಿ ಸಮುದಾಯದ ಸಂಖ್ಯೆ 2.5 ಲಕ್ಷಕ್ಕೆ ಏರಿತ್ತು. ಎರಡು ಮತ್ತು ಮೂರನೇ ಸ್ತರಗಳ ನಗರಗಳಲ್ಲಿನ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಕಲಿಯಲು ಅವಕಾಶ ಕೊಡುವ ದೊಡ್ಡ ಆನ್​ಲೈನ್ ಯೂನಿವರ್ಸಿಟಿ ನಿರ್ಮಿಸುವ ಗುರಿ ಈ ಇಬ್ಬರು ಯುವಕರಿಗೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅವರ ಕನಸು ಹಾಗೇ ಉಳಿದುಹೋಗಿದೆ.

‘ಆದಾಯ ಸೃಷ್ಟಿಸಬಲ್ಲ ಸಂಸ್ಥೆಯಾಗಿ ಬ್ಲೂಲರ್ನ್ ಅನ್ನು ಕಟ್ಟುವುದು ಕಷ್ಟ ಎನ್ನುವುದು ಅರಿವಿಗೆ ಬಂದಿತು. ಬಂಡವಾಳ ವಿಚಾರದಲ್ಲಿ ಬಹಳ ಹಿಡಿತ ಇಟ್ಟುಕೊಂಡಿದ್ದೆವು. ಹೀಗಾಗಿ, ಶೇ. 70ರಷ್ಟು ಬಂಡವಾಳವನ್ನು ಹೂಡಿಕೆದಾರರಿಗೆ ಮರಳಿಸಲು ಸಾಧ್ಯವಾಯಿತು,’ ಎಂದು ಹರೀಶ್ ಉದಯ್ ಕುಮಾರ್ ಹೇಳುತ್ತಾರೆ.

ಎಲಿವೇಶನ್ ಕ್ಯಾಪಿಟಲ್, ಟೈಟಾನ್ ಕ್ಯಾಪಿಟಲ್, ಲೈಟ್​ಸ್ಪೀಡ್, 100 ಎಕ್ಸ್ ವಿಸಿ ಸಂಸ್ಥೆಗಳಷ್ಟೇ ಅಲ್ಲದೇ, ಮೀಶೋ ಸಂಸ್ಥಾಪಕರಾದ ವಿದಿತ್ ಆಟ್ರೇ, ಸಂಜೀವ್ ಬರ್ನವಾಲ್, ಪಿಕ್ಸೆಲ್ ಸ್ಥಾಪಕ ಅವೇಸ್ ಅಹ್ಮದ್ ಮೊದಲಾದವರಿಂದ ಬ್ಲೂಲರ್ನ್ ಒಟ್ಟಾರೆ 40 ಲಕ್ಷ ಡಾಲರ್ (33 ಕೋಟಿ ರೂ) ಬಂಡವಾಳ ಪಡೆದಿತ್ತು.

ಇದನ್ನೂ ಓದಿ: ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರ ಬದಲಾವಣೆ; ಇಂಡೆಕ್ಸೇಶನ್ ಬೆನಿಫಿಟ್ ಇವುಗಳ ಬಗ್ಗೆ ನೀವು ತಿಳಿಯಬೇಕಾದ್ದು

ಆಟ ಮುಗಿಯಿತು, ಓಟ ಮುಗಿದಿಲ್ಲ…

ಬೆಂಗಳೂರಿನ ಬ್ಲೂಲರ್ನ್ ಸಂಸ್ಥಾಪಕರು ತಮ್ಮ ಕಂಪನಿ ಮುಚ್ಚಿದರೂ ಅವರ ಉತ್ಸಾಹ ಬತ್ತಿಲ್ಲ. ಬ್ಲೂಲರ್ನ್ ಬಹಳ ಪ್ರಭಾವಯುಕ್ತ ಅಧ್ಯಾಯವಾಗಿತ್ತು. ನಮ್ಮ ಮುಂದಿನ ಕನಸಿನತ್ತ ಸಾಗುವ ಸಮಯ ಬಂದಿದೆ ಎಂದು ಉದಯಕುಮಾರ್ ತಿಳಿಸುತ್ತಾರೆ. ಆದರೆ, ಅವರ ಮುಂದಿನ ಸಾಹಸ ಯಾವುದು ಎಂಬುದು ಬಹಿರಂಗವಾಗಿಲ್ಲ.

‘ಹೆಚ್ಚೆಚ್ಚು ಜನರು ಭಾರತದಲ್ಲಿ ಸ್ಟಾರ್ಟಪ್ ಶುರು ಮಾಡಬೇಕೆಂದು ಬಯಸುತ್ತೇನೆ. ಜನರು ರಿಸ್ಕ್ ತೆಗೆದುಕೊಂಡು, ತಮ್ಮ ಕನಸಿನ ಐಡಿಯಾ ಎಷ್ಟೇ ನಿರುಪಯುಕ್ತ ಎನಿಸಿದರೂ ಅದನ್ನು ಪ್ರಯತ್ನಿಸುವುದು ಮುಖ್ಯ. ಅದು ವಿಫಲವಾದರೂ ಸರಿ,’ ಎಂದು ಅವರು ಉತ್ತೇಜನಕಾರಿ ಮಾತುಗಳನ್ನಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ