ಜನರ ಪ್ರತಿ ಉಸಿರಿಗೆ ತೆರಿಗೆ ಹಾಕುವ ಅಪಾಯವಿದೆ: UPI ಸೇರಿ ಎಲ್ಲ ಡಿಜಿಟಲ್ ಪಾವತಿಗೆ ಶುಲ್ಕದ ಪ್ರಸ್ತಾವಕ್ಕೆ ತೀವ್ರ ವಿರೋಧ

|

Updated on: Aug 21, 2022 | 10:03 AM

ಈಗ ಜನ ತಮ್ಮ ಕಿಸೆಯಲ್ಲಿಟ್ಟುಯ್ಕೊಂಡು ತಿರುಗುವ ದುಡ್ಡನ್ನೂ ಡಿಜಿಟಲ್ ಮಾಡಿ, ಅದರಲ್ಲೂ ಪಾಲಿಗೆ ಬರುತ್ತಿದ್ದೀರಲ್ಲಾ ಉದ್ದೇಶ ಏನು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಲಾಗುತ್ತಿದೆ.

ಜನರ ಪ್ರತಿ ಉಸಿರಿಗೆ ತೆರಿಗೆ ಹಾಕುವ ಅಪಾಯವಿದೆ: UPI ಸೇರಿ ಎಲ್ಲ ಡಿಜಿಟಲ್ ಪಾವತಿಗೆ ಶುಲ್ಕದ ಪ್ರಸ್ತಾವಕ್ಕೆ ತೀವ್ರ ವಿರೋಧ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಜನಪ್ರಿಯ ಪಾವತಿ ಆ್ಯಪ್​ಗಳಾದ ಫೋನ್​ ಪೆ (PhonePe), ಗೂಗಲ್​ ಪೆಗಳು (GooglePe) ಬಳಸುವ ಯುಪಿಐ (Unified Payments Interface – UPI) ತಂತ್ರಜ್ಞಾನವೂ ಸೇರಿದಂತೆ ಎಲ್ಲ ರೀತಿಯ ಡಿಜಿಟಲ್ ಪಾವತಿ ವ್ಯವಸ್ಥೆಗಳಿಗೆ (NEFT, RTGS, IMPS) ಶುಲ್ಕ ವಿಧಿಸುವ ಕುರಿತು ಭಾರತೀಯ ರಿಸರ್ವ್​ ಬ್ಯಾಂಕ್​ (Reserve Bank of India – RBI) ಮುಂದಿಟ್ಟಿರುವ ಪ್ರಸ್ತಾವಕ್ಕೆ ಕರ್ನಾಟಕದ ಚಿಂತಕ ರಾಜಾರಾಂ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಬರೆದಿರುವ ವಿದ್ವತ್ಪೂರ್ಣ ಬರಹದ ಫೇಸ್​ಬುಕ್ ಪೋಸ್ಟ್​ ವೈರಲ್ ಆಗಿದೆ. 172ಕ್ಕೂ ಅಧಿಕ ಲೈಕ್ ಹಾಗು 19 ಕಾಮೆಂಟ್​ಗಳಿರುವ ಈ ಪೋಸ್ಟ್​ ಅನ್ನು ಸುಮಾರು 150 ಮಂದಿ ಶೇರ್ ಮಾಡಿದ್ದಾರೆ.

ರಾಜಾರಾಂ ತಲ್ಲೂರು ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಅರುಣ್ ದೀಪಕ್ ಮೆಂಡೊನ್​ಕ, ‘ಇದೊಂದು ಮೂರ್ಖತನ ಅಲ್ಲವೇ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಒಂದು ವ್ಯವಸ್ಥೆ ಮಾಡುವುದನ್ನು ಬಿಟ್ಟು ಇಮೇಲ್ ಕಳಿಸಿ ಎನ್ನುವುದು ಅರ್ಥ ಏನು? ಇಂದೂ ಸಹ ಎಷ್ಟೋ ಜನ ಮೊಬೈಲ್ ಯೂಸ್ ಮಾಡುತ್ತಿದ್ದರೂ ಕೂಡ ಆಂಡ್ರಾಯ್ಡ್ ಆಕ್ಟಿವೇಶನ್ ಗೆ ಬೇಕಾದ ಇಮೇಲನ್ನು ಕೂಡ ಉಪಯೋಗಿಸುತ್ತಿಲ್ಲ. ಇದು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಂದು ನನಗೆ ಅನಿಸುತ್ತಿದೆ. ನಾನು ಇಮೇಲ್ ಮಾಡುತ್ತಿದ್ದೇನೆ ಆದರೆ ದಯವಿಟ್ಟು ಯಾರಾದರೂ ಇ-ಮೇಲ್ ಕಂಟೆಂಟ್ ಡ್ರಾಫ್ಟ್ ಮಾಡಿ ಹಾಕಿದರೆ ಒಳ್ಳೆಯದು ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: UPI: ಫೋನ್ ಪೆ, ಗೂಗಲ್​ ಪೆ, ಭೀಮ್ ವಹಿವಾಟು ಆಗಬಹುದು ದುಬಾರಿ; ಯುಪಿಐ ಆಧರಿತ ವಹಿವಾಟಿಗೆ ಶುಲ್ಕ ವಿಧಿಸಲು ಆರ್​​ಬಿಐ ಚಿಂತನೆ

‘ಸಾವಿರಾರು ಕೋಟಿ ಜನ ಬಳಸುವ ಸಾವಿರಾರು ಕೋಟಿ ವ್ಯವಹಾರ ಖಾಸಗಿಯವರ ಪಾಲಾಗಿದೆ. ಕೇವಲ ವರ್ಗಾವಣೆಗೆ ಮಾತ್ರ ಇವರ ವ್ಯವಹಾರ ಸೀಮಿತವಾಗದೆ, ಇನ್ನಿತರ ವ್ಯಾಪಾರ, ವ್ಯವಹಾರವನ್ನು ಮಾಡುತ್ತವೆಯಾದ್ದರಿಂದ ಈ ಫೋನ್ ಪೇ, ಪೇಟಿಮ್​ನಂತಹ ಕಂಪನಿಗಳಿಗೆ ಬೇಕಿದ್ದರೆ ಶುಲ್ಕ ವಿಧಿಸಲಿ. ಭೀಮ್ ಆ್ಯಪ್​ ಮೂಲಕದ ವರ್ಗಾವಣೆಗೆ ವಿನಾಯಿತಿ ನೀಡಲಿ. ಇನ್ನು ಒಂದು ಹೇಳಬೇಕೆಂದರೆ ಇವತ್ತಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ರಿಸರ್ವ್ ಬ್ಯಾಂಕ್ ಶುಲ್ಕವನ್ನು ವಿಧಿಸಿದರೂ, ಈ ಖಾಸಗಿ ಯುಪಿಐನವರು ಕ್ಯಾಶ್ ಬ್ಯಾಕ್ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ ಎಂದೆನಿಸುತ್ತದೆ’ ಎಂದು ಕಾಮೆಂಟ್ ಒಂದಕ್ಕೆ ಪ್ರತಿಕ್ರಿಯಿಸುವಾಗ ರಾಜಾರಾಂ ತಲ್ಲೂರು ಸಲಹೆ ಮಾಡಿದ್ದಾರೆ.

ರಾಜಾರಾಂ ತಲ್ಲೂರು ಅವರ ಫೇಸ್​ಬುಕ್ ಪೋಸ್ಟ್​ ಹೀಗಿದೆ…

‘ಭಾರತೀಯ ರಿಸರ್ವ್ ಬ್ಯಾಂಕ್ ಈಗ UPI ಸಹಿತ ಎಲ್ಲ ಡಿಜಿಟಲ್ ಪಾವತಿಗಳಿಗೆ ವೆಚ್ಚ ವಿಧಿಸುವ ಮಾತನ್ನಾಡುತ್ತಿದೆ. ಪಕ್ಕಾ ದಂಧೆಗೆ ಕುಳಿತವರು ಆಡಳಿತಕ್ಕೆ ಬಂದರೆ ಏನಾಗಬೇಕೋ ಅದು ಆಗತೊಡಗಿದೆ. ಜನ ಮಾತನಾಡದಿದ್ದರೆ, ನಾಳೆ ಶುದ್ಧ ಗಾಳಿ ಕೊಟ್ಟಿದ್ದಕ್ಕಾಗಿ ಪ್ರತಿ ಉಸಿರಿಗೆ ತೆರಿಗೆ ಹಾಕಲಿದ್ದಾರೆ ಇವರು. ದೇಶದಲ್ಲಿ ಬ್ಯಾಂಕುಗಳ ಖಾಸಗೀಕರಣ ಆರಂಭ ಆದಲ್ಲಿಂದ ಇಲ್ಲಿಯ ತನಕ ಯಾವಯಾವ ಲಾಜಿಕ್ ಬಳಸಿ ಜನರನ್ನುಮಂಗ ಮಾಡಲಾಯಿತು ಎಂಬುದನ್ನು ಗಮನಿಸುತ್ತಾ ಬನ್ನಿ.

[ಗಮನಿಸಿ: ಬ್ಯಾಂಕು ಖಾಸಗೀಕರಣ ಪ್ರಕ್ರಿಯೆ ಆರಂಭಗೊಂಡದ್ದು ಮನಮೋಹನ್ ಸಿಂಗ್ ಕಾಲದಲ್ಲಿ. ಹಾಗಾಗಿ ಇದು ಕೇವಲ ಈಗಿನವರಿಗೆ ಬೈಯುವ ಪೋಸ್ಟ್ ಅಲ್ಲ!]

ಮೊದಲಿಗೆ ಬ್ಯಾಂಕುಗಳಲ್ಲಿ ಸಿಬ್ಬಂದಿ ಜಾಸ್ತಿ, ಕೆಲಸ ಕಡಿಮೆ ಆಗ್ತಿದೆ, ಲಾಭ ಇಲ್ಲ, ಸ್ಟ್ರೈಕ್ ಮಾಡ್ತಾರೆ ಅಂತ ಹೇಳಿ ಕೆಲಸದ ಎಫೀಷಿಯನ್ಸಿ ಹೆಸರಲ್ಲಿ ಕಂಪ್ಯೂಟರೀಕರಣ ಬಂತು. ಸಿಬ್ಬಂದಿ ಕಡಿಮೆ ಆಯಿತು. ಆ ಬಳಿಕ ಖಾಸಗಿ ಬ್ಯಾಂಕುಗಳಿಗೆ ಅವಕಾಶ ಮಾಡಿಕೊಡಲಾಯಿತು. ಅಲ್ಲಿ ಲಾಭ ಗಳಿಕೆಯ ಹೆಸರಲ್ಲಿ, ಜನಸಾಮಾನ್ಯರನ್ನು ಬ್ಯಾಂಕುಗಳಿಂದ ದೂರ ಅಟ್ಟಲಾಯಿತು. ಬ್ಯಾಂಕುಗಳನ್ನು ದೊಡ್ಡದಾಗಿಸಲು, ಎಫೀಷಿಯಂಟ್ ಮಾಡಲು ಒಂದರೊಳಗಿನ್ನೊಂದು ವಿಲೀನಗೊಳಿಸಲಾಯಿತು.

ಬ್ಯಾಂಕುಗಳಲ್ಲಿ ಕ್ಷಿಪ್ರ ವ್ಯವಹಾರ, ಸಿಬ್ಬಂದಿ ಕಡಿಮೆ ಮಾಡಿ ಇನ್ನಷ್ಟು ಲಾಭ ಎಂದು ಹೇಳಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಆಯಿತು. ಜನ ಬ್ಯಾಂಕಿಗೆ ಬಂದರೆ ಖರ್ಚು ಜಾಸ್ತಿ ಎಂದು ಹೇಳಿ ATM, ಡಿಜಿಟಲ್ ಪಾವತಿ (RTGS, IMPS ಇತ್ಯಾದಿ) ಬಂದವು. ಮನೆ ಬಾಗಿಲಿಗೇ ಬ್ಯಾಂಕ್ ಬಂದಿದೆ ಎಂದು ಬೂಸಿ ಬಿಡಲಾಯಿತು. ಡಿಜಿಟಲ್ ಇಂಡಿಯಾದಲ್ಲಿ UPI ಆಯಿತು; ಜನ ನಗದು ಚಲಾವಣೆ ಮಾಡಲಿಕ್ಕಿಲ್ಲ, ನೋಟು ಪ್ರಿಂಟ್ ಮಾಡಿದರೆ ಖರ್ಚು ಜಾಸ್ತಿ, ಕಾಳಧನ ಹೆಚ್ಚಾಗ್ತದೆ ಎಂದೆಲ್ಲ ಹೇಳಿ ಮೊಬೈಲ್ ಬ್ಯಾಂಕಿಂಗ್ ಚಾಲ್ತಿಗೆ ಬಂತು.

ಈಗ ಎಲ್ಲ ಮುಗಿದ ಮೇಲೆ UPI ಪಾವತಿಗೂ ವೆಚ್ಚ ವಿಧಿಸುವ ಮಾತು ಆಡಲಾಗುತ್ತಿದೆ. ಅಂದರೆ ಶೀಘ್ರವೇ ನೀವು ಪಾವತಿಸುವ ಗೂಗಲ್ ಪೇ, ಫೋನ್ ಪೇ, ಪೇಟಿಯೆಂ ಇತ್ಯಾದಿಗಳಿಗೂ ಪ್ರತೀ ಪಾವತಿಗೆ “ವೆಚ್ಚ” ತೆರಬೇಕಾಗಲಿದೆ. ಮೊದಲಿಗೆ ದೊಡ್ಡ ಮೊತ್ತಕ್ಕೆ ಮಾತ್ರ ವೆಚ್ಚ ಎಂದು ಹೇಳಿ, ಮುಂದೆ ಮೂರು ಬಜೆಟ್ ಮುಗಿಯುವಾಗ ಅಂಗಡಿಯಲ್ಲಿ ನೀವು ಪಾವತಿ ಮಾಡುವ ಹದಿನೈದು ಇಪ್ಪತ್ತು ರೂಪಾಯಿಗೂ ವೆಚ್ಚ ಬರಬಹುದು!

ಸ್ವಾಮೀ, ದೇಶ ನಡೆಸುವ ತಜ್ಞರೇ ಒಂದು ಮಾತು ಹೇಳಿ ಮುಂದುವರಿಯಿರಿ: ಸಾಂಪ್ರದಾಯಿಕ ಬ್ಯಾಂಕಿಂಗ್​ನಿಂದ ಬರುವ ಆದಾಯ ಬರುತ್ತಿದ್ದರೂ (ಅಂದರೆ ಸಾಲದ ಬಡ್ಡಿ, ಠೇವಣಿಯ ಮರು ಹೂಡಿಕೆ, ಬ್ಯಾಂಕಿಂಗ್ ಸೇವೆಗಳಿಗೆ ವಿಧಿಸುವ ವೆಚ್ಚ) ಇಲ್ಲಿಯ ತನಕ ಇಷ್ಟೆಲ್ಲ ವೆಚ್ಚ ಕಡಿತ ಪ್ರಯತ್ನ ಮಾಡಿ ಕೂಡ ನಿಮ್ಮ ಹೊಟ್ಟೆ ತುಂಬಿಲ್ಲ ಯಾಕೆ? ಈಗ ಜನ ತಮ್ಮ ಕಿಸೆಯಲ್ಲಿಟ್ಟುಯ್ಕೊಂಡು ತಿರುಗುವ ದುಡ್ಡನ್ನೂ ಡಿಜಿಟಲ್ ಮಾಡಿ, ಅದರಲ್ಲೂ ಪಾಲಿಗೆ ಬರುತ್ತಿದ್ದೀರಲ್ಲಾ ಉದ್ದೇಶ ಏನು?

ಜನ ಈ ಪ್ರಶ್ನೆಗಳನ್ನು ಕೇಳದಿದ್ದರೆ ಮುಂದಿನ ದಿನಗಳು ಬಹಳ ಕಷ್ಟ ಇವೆ. ಈಗ ರಿಸರ್ವ್ ಬ್ಯಾಂಕಿಗೆ ಜನ ಅಕ್ಟೋಬರ್ ಮೂರರ ಒಳಗೆ ತಮ್ಮ ಅಭಿಪ್ರಾಯ ಹೇಳಬೇಕಂತೆ. ಬಾಯಿಬಿಟ್ಟು ಮಾತನಾಡಿ. ಅದಕ್ಕಾಗಿ ಅಭಿಯಾನವನ್ನೇ ನಡೆಸಿ. ಇಲ್ಲದಿದ್ದರೆ, ಬಾಯಿ ಮುಚ್ಚಿಕೊಂಡು ಕಿಸೆಗೆ ಕತ್ತರಿ ಹಾಕಿಸಿಕೊಂಡು ತೆಪ್ಪಗಿರಿ. ಆಯ್ಕೆ ನಿಮ್ಮದು’ ಎಂದು ರಾಜಾರಾಂ ತಲ್ಲೂರು ತಮ್ಮ ಪೋಸ್ಟ್ ಮುಗಿಸಿದ್ದಾರೆ. ರಿಸರ್ವ್ ಬ್ಯಾಂಕ್ ಕೊಟ್ಟಿರುವ ವಿವರಗಳನ್ನೂ ಕೊಟ್ಟಿದ್ದಾರೆ.