Kannada News Business RBI to Issue New Series of sovereign gold bond scheme from August 22 Discount for Digital Buyers
Sovereign Gold Bond: ಗೋಲ್ಡ್ ಬಾಂಡ್ ಖರೀದಿಗೆ ಇಂದಿನಿಂದ ಅವಕಾಶ: ಕೊನೆಯ ದಿನ, ದರ ಸೇರಿ ನೀವು ತಿಳಿಯಬೇಕಾದ 10 ಮುಖ್ಯಾಂಶಗಳಿವು
Digital Gold: ಆಗಸ್ಟ್ 22ರಿಂದ 26ರವರೆಗೆ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಡಿ ಚಿನ್ನದ ಬಾಂಡ್ ಖರೀದಿಸಲು ಅವಕಾಶವಿದೆ’ ಎಂದು ಎಸ್ಬಿಐ ತನ್ನ ಗ್ರಾಹಕರನ್ನು ಟ್ವೀಟ್ ಮೂಲಕ ಹುರಿದುಂಬಿಸಿದೆ
ಪ್ರಾತಿನಿಧಿಕ ಚಿತ್ರ
Follow us on
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bond – SGB) ಹೆಸರಿನ ಚಿನ್ನದ ಬಾಂಡ್ಗಳ ಹೊಸ ಸರಣಿಯನ್ನು ಮಾರುಕಟ್ಟೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಚಿನ್ನದ ಬಾಂಡ್ ಇಂದಿನಿಂದಲೇ (ಆಗಸ್ಟ್ 22) ಖರೀದಿಗೆ ಲಭ್ಯವಿದ್ದು, ಆಗಸ್ಟ್ 26ರವರೆಗೆ ಖರೀದಿಗೆ ಅವಕಾಶ ಇರುತ್ತದೆ. ಈ ಸರಣಿಯಲ್ಲಿ ಒಂದು ಗ್ರಾಂ ಚಿನ್ನಕ್ಕೆ ಆರ್ಬಿಐ ₹ 5,197 ನಿಗದಿಪಡಿಸಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (State Bank of India – SBI) ಸೇರಿದಂತೆ ಹಲವು ಬ್ಯಾಂಕ್ಗಳು ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಿವೆ. ಡಿಮ್ಯಾಟ್ ಖಾತೆ ಇರುವವರು ಡಿಮ್ಯಾಟ್ ಖಾತೆಗೆ ಬಾಂಡ್ ಜಮಾ ಮಾಡಿಸಿಕೊಳ್ಳಬಹುದು. ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಸಿದವರಿಗೆ ₹ 50 ರಿಯಾಯ್ತಿಯೂ ಸಿಗುತ್ತದೆ. ‘ಚಿನ್ನ ಖರೀದಿಸುವ ಈ ಸುವರ್ಣಾವಕಾಶವನ್ನು ಕಳೆದುಕೊಳ್ಳಬೇಡಿ. ಆಗಸ್ಟ್ 22ರಿಂದ 26ರವರೆಗೆ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನಡಿ ಚಿನ್ನದ ಬಾಂಡ್ ಖರೀದಿಸಲು ಅವಕಾಶವಿದೆ’ ಎಂದು ಎಸ್ಬಿಐ ತನ್ನ ಗ್ರಾಹಕರನ್ನು ಟ್ವೀಟ್ ಮೂಲಕ ಹುರಿದುಂಬಿಸಿದೆ. ಚಿನ್ನ ಬಾಂಡ್ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಅಂಶಗಳಿವು…
ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನದ ಬಾಂಡ್ಗಳನ್ನು ಬಿಡುಗಡೆ ಮಾಡುತ್ತದೆ.
ಬ್ಯಾಂಕ್ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (Stock Holding Corporation of India Limited – SHCIL), ನಿಗದಿತ ಅಂಚೆ ಕಚೇರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮೂಲಕ ಬಾಂಡ್ಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಪ್ರತಿ ಬಾಂಡ್ ಒಂದು ಗ್ರಾಮ್ ಚಿನ್ನದ ಮೌಲ್ಯ ಹೊಂದಿರುತ್ತದೆ. ಈ ಬಾಂಡ್ನ ಬೆಲೆಯನ್ನೂ ಚಿನ್ನದ ಬೆಲೆ ಆಧರಿಸಿಯೇ ನಿಗದಿಪಡಿಸಲಾಗುತ್ತದೆ. ವರ್ಷಕ್ಕೆ ಶೇ 2.5ರ ಬಡ್ಡಿಯನ್ನೂ ನೀಡಲಾಗುತ್ತದೆ.
ಈ ಬಾಂಡ್ಗಳ ಪರಿಪಕ್ವತಾ ಅವಧಿ 8 ವರ್ಷ. 5ನೇ ವರ್ಷದ ನಂತರ ಈ ಬಾಂಡ್ಗಳ ಮಾರಾಟಕ್ಕೆ ಅವಕಾಶ ಇರುತ್ತದೆ. ಬಡ್ಡಿ ಪಾವತಿ ದಿನಾಂಕದಂದು ಬಾಂಡ್ಗಳನ್ನು ಮಾರಬಹುದು.
ಕನಿಷ್ಠ ಖರೀದಿ ಮೌಲ್ಯ 1 ಗ್ರಾಮ್ ಚಿನ್ನ (1 ಬಾಂಡ್).
ಗರಿಷ್ಠ ಚಿನ್ನ ಖರೀದಿಗೂ ಮಿತಿಗಳಿವೆ. ವ್ಯಕ್ತಿಗಳು ಹಾಗೂ ಅವಿಭಕ್ತ ಕುಟುಂಬಕ್ಕೆ 4 ಕೆಜಿ ಖರೀದಿ ಮಿತಿಯಿದೆ. ಟ್ರಸ್ಟ್ ಮತ್ತು ಅದೇ ರೀತಿಯ ಇತರ ಸಂಸ್ಥೆಗಳಿಗೆ ಒಂದು ಹಣಕಾಸು ವರ್ಷದಲ್ಲಿ 20 ಕೆಜಿಗೆ ಸರಿಸಮನಾದ ಮೌಲ್ಯದ ಚಿನ್ನದ ಬಾಂಡ್ ಖರೀದಿಗೆ ಅವಕಾಶವಿದೆ.
ಚಿನ್ನದ ಬಾಂಡ್ ಖರೀದಿಗೆ ಕೆವೈಸಿ (Know-your-customer – KYC) ನಿಯಮಾವಳಿಯನ್ನು ಪೂರೈಸುವುದು ಅನಿವಾರ್ಯ.
ಡಿಮ್ಯಾಟ್ ಅಥವಾ ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಸುವವರಿಗೆ ಕೇಂದ್ರ ಸರ್ಕಾರವು ₹ 50 ರಿಯಾಯ್ತಿ ಕೊಡುತ್ತದೆ. ಅರ್ಜಿಯನ್ನೂ ಆನ್ಲೈನ್ನಲ್ಲಿಯೇ ಹಾಕಬೇಕು, ಪಾವತಿಯನ್ನೂ ಡಿಜಿಟಲ್ ರೂಪದಲ್ಲಿಯೇ ಮಾಡಬೇಕು ಎನ್ನುವ ನಿಯಮ ವಿಧಿಸಲಾಗಿದೆ.
ಮೊದಲ ಬಾರಿಗೆ ನವೆಂಬರ್ 2015ರಲ್ಲಿ ಬಾಂಡ್ ಸರಣಿಯನ್ನು ಬಿಡುಗಡೆ ಮಾಡಲಾಯಿತು. ಭೌತಿಕ ರೂಪದಲ್ಲಿ ಚಿನ್ನ ಖರೀದಿಗೆ ಇರುವ ಬೇಡಿಕೆ ಕಡಿಮೆ ಮಾಡುವುದು ಮತ್ತು ಹೂಡಿಕೆಯ ಭಾಗವಾಗಿ ಚಿನ್ನವನ್ನು ಪರಿಗಣಿಸುವವರಿಗೆ ಮತ್ತೊಂದು ರೀತಿಯ ಅವಕಾಶ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಗೋಲ್ಡ್ ಬಾಂಡ್ ಘೋಷಣೆಯ ಮುನ್ನಾದಿನಕ್ಕೆ ಮೊದಲಿನ ಮೂರು ದಿನಗಳ ಚಿನ್ನದ ಬೆಲೆಯ ಸರಾಸರಿಯನ್ನು ಲೆಕ್ಕಹಾಕಿ ಬಾಂಡ್ನ ಮೌಲ್ಯ ನಿರ್ಧರಿಸಲಾಗುತ್ತದೆ. ಉಳಿತಾಯ ಮತ್ತು ಹೂಡಿಕೆಗಾಗಿ ಚಿನ್ನ ಖರೀದಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.