ಆರ್​ಬಿಐ ರೆಪೋ ದರ ಹೆಚ್ಚಳ; ಸಾಲಗಳ ಇಎಂಐನಲ್ಲಿ ಎಷ್ಟು ಹೆಚ್ಚಳವಾಗಬಹುದು ಇತ್ಯಾದಿ ವಿವರ ಇಲ್ಲಿದೆ

ಆರ್​ಬಿಐನ ಎಂಪಿಸಿ ಸಭೆಯಲ್ಲಿ ರೆಪೊ ದರವನ್ನು 25 ಮೂಲಾಂಕಗಳಷ್ಟು ಏರಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯೋಭವಿಷ್ಯದಲ್ಲಿ ಬಡ್ಡಿದರ ಇಳಿಸುವ ಸಾಧ್ಯತೆ ಇಲ್ಲದಿರುವುದರಿಂದ ಬ್ಯಾಂಕುಗಳೂ ಕೂಡ ಬಡ್ಡಿದರ ಪರಿಷ್ಕರಿಸುವ ಸಾಧ್ಯತೆ ಹೆಚ್ಚು. ಸಾಲಗಳಿಗೆ ಬಡ್ಡಿದರ ಹೆಚ್ಚಿದರೆ ಇಎಂಐ ಹಣ ಎಷ್ಟೆಷ್ಟು ಏರಬಹುದು ಎನ್ನುವ ಲೆಕ್ಕಾಚಾರ ಇಲ್ಲಿದೆ.

ಆರ್​ಬಿಐ ರೆಪೋ ದರ ಹೆಚ್ಚಳ; ಸಾಲಗಳ ಇಎಂಐನಲ್ಲಿ ಎಷ್ಟು ಹೆಚ್ಚಳವಾಗಬಹುದು ಇತ್ಯಾದಿ ವಿವರ ಇಲ್ಲಿದೆ
ಹಣ
Image Credit source: Getty Images

Updated on: Oct 07, 2026 | 1:01 PM

ನವದೆಹಲಿ, ಅಕ್ಟೋಬರ್ 7: ಭಾರತೀಯ ರಿಸರ್ವ್ ಬ್ಯಾಂಕ್ 44 ತಿಂಗಳ ಬಳಿಕ ಮೊದಲ ಬಾರಿಗೆ ರೆಪೋ ದರವನ್ನು ಹೆಚ್ಚಿಸಿದೆ. ಶೇ. 5.25ರಷ್ಟಿದ್ದ ರೆಪೋ ದರ ಶೇ. 5.50ಕ್ಕೆ ಏರಿದೆ. ಮುಂಬರುವ ದಿನಗಳಲ್ಲಿ ದರಕಡಿತ ಸಾಧ್ಯತೆ ಇಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳೂ ಕೂಡ ತಮ್ಮ ಬಡ್ಡಿದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ. ಗೃಹ ಸಾಲ ಇತ್ಯಾದಿ ಫ್ಲೋಟಿಂಗ್ ರೇಟ್ ಆಧಾರದಲ್ಲಿ ತೆಗೆದುಕೊಳ್ಳಲಾದ ಎಲ್ಲಾ ಸಾಲಗಳಿಗೆ ಬಡ್ಡಿ ಏರಿಕೆ ಆಗಲಿದೆ. ಕಂತಿನ ಮೊತ್ತ ಹೆಚ್ಚಬಹುದು, ಅಥವಾ ಕಂತಿನ ಸಂಖ್ಯೆ ಹೆಚ್ಚಬಹುದು.

ಬೇಸಿಕ್ ಹೋಮ್ ಲೋನ್ (Basic Home Loan) ಸಂಸ್ಥೆಯ ಸ್ಥಾಪಕ ಅತುಲ್ ಮೋಂಗಾ ಪ್ರಕಾರ, 50 ಲಕ್ಷ ರೂ ಮೊತ್ತದ ಮತ್ತು 30 ವರ್ಷ ಅವಧಿಯ ಗೃಹಸಾಲವನ್ನು ಉದಾಹರಣೆಯಾಗಿ ಪರಿಗಣಿಸಿದರೆ, ಮತ್ತು ಬಡ್ಡಿದರ ಶೇ. 7.25ರಿಂದ ಶೇ. 7.50ಕ್ಕೆ ಏರಿತೆಂದರೆ, ಬ್ಯಾಂಕುಗಳಲ್ಲಿ ಇಎಂಐ 852 ರೂನಷ್ಟು ಏರುತ್ತದೆ. ಅವರ ಅಂದಾಜು ಲೆಕ್ಕಾಚಾರದ ಪ್ರಕಾರ, ಸರ್ಕಾರಿ ಬ್ಯಾಂಕುಗಳಲ್ಲಿ ಮಾಸಿಕ ಕಂತಿನ ಹಣ 34,109 ರೂ ಇದ್ದದ್ದು 34,961 ರೂ ಆಗುತ್ತದೆ.

ಇದನ್ನೂ ಓದಿ: ಆರ್​ಬಿಐ ಎಂಪಿಸಿ ಸಭೆ: ರೆಪೋ ದರ ಶೇ. 5.50 ಗೆ ಏರಿಕೆ

ಒಂದು ವೇಳೆ, ಬಡ್ಡಿದರ ಶೇ. 7.75 ಇದ್ದು ಅದು ಶೇ. 8ಕ್ಕೆ ಏರಿದಲ್ಲಿ ಮಾಸಿಕ ಕಂತಿನ ಹಣದಲ್ಲಿ 867 ರೂ ಏರಿಕೆ ಆಗಬಹುದು. 35,821 ರೂ ಇರುವ ಇಎಂಐ 36,688 ರೂಗೆ ಏರುವ ಸಾಧ್ಯತೆ ಇರುತ್ತದೆ.

ಈ ಏರಿಕೆಯು ಮೇಲ್ನೋಟಕ್ಕೆ ದೊಡ್ಡ ಹೊರೆಯಂತೆ ಅನಿಸದೇ ಹೋದರೂ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವೆನಿಸುತ್ತದೆ. ನೀವು ಕಟ್ಟುವ ಹೆಚ್ಚುವರಿ ಹಣವು 30 ವರ್ಷದಲ್ಲಿ ಬರೋಬ್ಬರಿ 3 ಲಕ್ಷ ರೂಗಿಂತ ಹೆಚ್ಚಿರುತ್ತದೆ.

ಇದನ್ನೂ ಓದಿ: 2026-27ರಲ್ಲಿ ಜಿಡಿಪಿ ಶೇ. 7.1; ಹಣದುಬ್ಬರ ಶೇ. 5.2: ಆರ್​ಬಿಐ ಅಂದಾಜು

25 ಲಕ್ಷ ರೂ ಸಾಲ; 15 ವರ್ಷ ಇಎಂಐ ಇದ್ದರೆ?

ಒಂದು ವೇಳೆ, ಶೇ. 8ರ ಬಡ್ಡಿಗೆ 25 ಲಕ್ಷ ರೂ ಮೊತ್ತದ ಸಾಲವನ್ನು 15 ವರ್ಷ ಅವಧಿಗೆ ತೆಗೆದುಕೊಂಡಿದ್ದರೆ ಮಾಸಿಕ ಕಂತು 23,891 ರೂ ಆಸುಪಾಸು ಇರಬಹುದು. ಬಡ್ಡಿದರವನ್ನು ಶೇ. 8ರಿಂದ ಶೇ. 8.25ಕ್ಕೆ ಪರಿಷ್ಕರಿಸಿದರೆ ಇಎಂಐ ಮೊತ್ತ 24,254 ರೂ ಆಗಬಹುದು. ಅಂದರೆ, ಸುಮಾರು 362 ರೂಗಳಷ್ಟು ಹೆಚ್ಚುವರಿ ಬಡ್ಡಿ ಹೊರೆ ನಿಮ್ಮ ಮೇಲಿರುತ್ತದೆ. 15 ವರ್ಷದಲ್ಲಿ ಈ ಹೆಚ್ಚುವರಿ ಬಡ್ಡಿ ಹೊರೆ 65,197 ರೂ ಆಗಿರುತ್ತದೆ. ಈ ಮೇಲೆ ಮಾಡಿರುವುದು ಒಂದು ಅಂದಾಜು ಮಾತ್ರ. ಬ್ಯಾಂಕುಗಳು ಮಾಡುವ ಲೆಕ್ಕಾಚಾರದಲ್ಲಿ ತುಸು ಮಾತ್ರವೇ ವ್ಯತ್ಯಾಸ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us