RBI Sachet: ಆನ್​ಲೈನ್ ಫ್ರಾಡ್ ಆದರೆ, ಹೂಡಿಕೆ ಸ್ಕೀಮ್ ಬಗ್ಗೆ ಅನುಮಾನ ಬಂದರೆ ಆರ್​ಬಿಐನ ಸಚೇತ್ ಪೋರ್ಟಲ್ ಮೊರೆಹೋಗಿ

RBI Sachet Portal helps filing complaint against online fraud: ವಂಚನೆಯ ಸ್ಕೀಮ್​ಗಳಲ್ಲಿ ಹಣ ಕಳೆದುಕೊಂಡಿದ್ದೀರಾ? sachet.rbi.org.in ನಲ್ಲಿ ನಿಮ್ಮ ದೂರು ದಾಖಲಿಸಬಹುದು. RBI ನ ಸಚೇತ್ ಪೋರ್ಟಲ್​ನಲ್ಲಿ ದಾಖಲಾಗುವ ದೂರಿಗೆ ಸಂಬಂಧಿಸಿ ಕ್ರಮಕ್ಕಾಗಿ ಸೂಕ್ತ ಅಧಿಕಾರಿಗಳಿಗೆ ಪ್ರಕರಣ ರವಾನಿಸುತ್ತದೆ. ಸ್ಕೀಮ್ ಆಫರ್ ಮಾಡುವ ಕಂಪನಿಗಳು ರೆಗ್ಯುಲೇಟರಿ ಮಾನ್ಯತೆ ಹೊಂದಿದೆಯಾ ಎಂದು ಈ ಪೋರ್ಟಲ್​ನಲ್ಲಿ ಪರಿಶೀಲಿಸಬಹುದು.

RBI Sachet: ಆನ್​ಲೈನ್ ಫ್ರಾಡ್ ಆದರೆ, ಹೂಡಿಕೆ ಸ್ಕೀಮ್ ಬಗ್ಗೆ ಅನುಮಾನ ಬಂದರೆ ಆರ್​ಬಿಐನ ಸಚೇತ್ ಪೋರ್ಟಲ್ ಮೊರೆಹೋಗಿ
ಆರ್​ಬಿಐ

Updated on: Jan 09, 2026 | 1:35 PM

ಕಳ್ಳತನ, ದರೋಡೆ ಮಾಡುವವರ ಒಂದು ವರ್ಗವಾದರೆ, ಆನ್​ಲೈನ್​ನಲ್ಲಿ ವಿವಿಧ ಸ್ಕೀಮ್​ಗಳ ಮೂಲಕ ಒಮ್ಮೆಗೇ ನೂರಾರು, ಸಾವಿರಾರು, ಲಕ್ಷಾಂತರ ಜನರನ್ನು ಯಾಮಾರಿಸಿ ಕೋಟ್ಯಂತ ರೂ ಗುಳುಂ ಮಾಡುವ ವಂಚಕರು (Fraudsters) ಹೆಚ್ಚಾಗುತ್ತಿದ್ದಾರೆ. ಹಣ ಡಬಲ್ ಮಾಡುತ್ತೇವೆ, ಷೇರು ಹೂಡಿಕೆಯಿಂದ ಭರ್ಜರಿ ಲಾಭ ಕೊಡಿಸುತ್ತೇವೆ, ಅತ್ಯಧಿಕ ರಿಟರ್ನ್ ಕೊಡುತ್ತೇವೆ ಇತ್ಯಾದಿ ನಾನಾ ಪ್ರಲೋಬನೆಗಳನ್ನು ಒಡ್ಡಿ ಜನರಿಂದ ಹಣ ಪಡೆದು ಯಾಮಾರಿಸುವ ವಂಚಕರು ಹಲವರಿದ್ದಾರೆ.

ತಾವು ಸಾಚಾ ಎಂದು ತೋರಿಸಿಕೊಳ್ಳಲು ಸೆಬಿ, ಆರ್​ಬಿಐ, ಐಆರ್​ಡಿಎ ಇತ್ಯಾದಿ ರೆಗ್ಯುಲೇಟಿ ಸಂಸ್ಥೆಗಳ ನೊಂದಣಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಳ್ಳುವುದುಂಟು. ಕೆಲವೊಮ್ಮೆ ಹೂಡಿಕೆದಾರರು ಅಧಿಕ ರಿಟರ್ನ್ಸ್​ನ ಆಶೆಗೆ ಒಳಗಾಗಿ ಆಫರ್ ಕೊಟ್ಟ ಕಂಪನಿಯ ಹಿನ್ನೆಲೆ ಕೂಡ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ನಿಮ್ಮಿಂದ ಹೂಡಿಕೆ ಪಡೆಯುತ್ತಿರುವ ಕಂಪನಿಯ ಹಿನ್ನೆಲೆ ಮತ್ತು ಸಾಚಾತನ ಪರಿಶೀಲಿಸಬೇಕಾದ್ದು ಬಹಳ ಮುಖ್ಯ. ನೀವು ಆರ್​ಬಿಐನ ಸಚೇತ್ ಪೋರ್ಟಲ್ ನೆರವು ಪಡೆಯಬಹುದು.

ಸಚೇತ್ ಪೋರ್ಟಲ್​ನಲ್ಲಿ ಸಂಸ್ಥೆಗಳ ಮಾನ್ಯತೆ ಪರಿಶೀಲಿಸಿ…

ಹಣಕಾಸು ಸ್ಕೀಮ್ ಆಫರ್ ಮಾಡುವ ಒಂದು ಕಂಪನಿಯು ಯಾವುದಾದರೂ ರೆಗ್ಯುಲೇಟರ್​ನಲ್ಲಿ ಮಾನ್ಯತೆ ಹೊಂದಿರಬೇಕು. ಷೇರು ಟಿಪ್ಸ್ ಕೊಡುವವರು ಸೆಬಿ ನೊಂದಾವಣಿ ಪಡೆದಿರಬೇಕು. ಠೇವಣಿ ಪಡೆಯುವವರು ಆರ್​ಬಿಐ ನೊಂದಾವಣಿ ಹೊಂದಿರಬೇಕು. ಹೀಗೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ರೆಗ್ಯುಲೇಟರ್​ಗಳ ಮಾನ್ಯತೆ ಹೊಂದಿರಬೇಕು.

ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

ನಿಮಗೆ ಆಫರ್ ಮಾಡಿರುವ ಕಂಪನಿ ಮಾನ್ಯತೆ ಹೊಂದಿದೆಯಾ ಎಂದು ಪರಿಶೀಲಿಸಲು ಆರ್​ಬಿಐನ ಸಚೇತ್ ಪೋರ್ಟಲ್​ಗೆ ಭೇಟಿ ನೀಡಿ. ಅದರ ವಿಳಾಸ ಇಂತಿದೆ: sachet.rbi.org.in/

ಇಲ್ಲಿ ಮುಖ್ಯಪುಟದ ತಳದಲ್ಲಿ ರಿಜಿಸ್ಟರ್ಡ್ ಎಂಟಿಟೀಸ್ ಎನ್ನುವ ಟ್ಯಾಬ್ ಕಾಣುತ್ತದೆ. ಅದರಲ್ಲಿ ಆರ್​ಬಿಐ, ಸೆಬಿ, ಎನ್​ಎಚ್​ಬಿ ಇತ್ಯಾದಿ ರೆಗ್ಯುಲೇಟರ್​ಗಳ ಪಟ್ಟಿ ಇದೆ. ಸಂಬಂಧಿತ ರೆಗ್ಯುಲೇಟರ್ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ, ಅದರಲ್ಲಿ ಮಾನ್ಯತೆ ಪಡೆದ ಎಲ್ಲಾ ಸಂಸ್ಥೆಗಳ ಅಪ್​ಡೇಟೆಡ್ ಪಟ್ಟಿ ಕಾಣುತ್ತದೆ. ಅದನ್ನು ಪರಿಶೀಲಿಸಿ.

ವಂಚನೆಯಾಗಿದ್ದರೆ ದೂರು ಕೊಡಲು ಅವಕಾಶ

ನಿಮಗೆ ಆನ್​ಲೈನ್ ಫ್ರಾಡ್ ಆಗಿದ್ದರೆ ಇದೇ ಸಚೇತ್ ಪೋರ್ಟಲ್​​ನಲ್ಲಿ ದೂರು ಕೊಡುವ ಅವಕಾಶ ಇದೆ. ಪೋರ್ಟಲ್ ಮುಖಪುಟದಲ್ಲಿ ‘ಫೈಲ್ ಎ ಕಂಪ್ಲೇಂಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ.

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ನಿಮ್ಮನ್ನು ವಂಚಿಸಿದ ಸಂಸ್ಥೆ ಯಾವ ರೆಗ್ಯುಲೇಟರ್ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿದ್ದರೆ ಅದನ್ನು ಆಯ್ದುಕೊಂಡು ದೂರು ಕೊಡಬಹುದು. ಒಂದು ವೇಳೆ ರೆಗ್ಯುಲೇಟರ್ ಯಾವುದು ಎಂದು ಗೊತ್ತಿಲ್ಲದಿದ್ದರೆ ಅದನ್ನೂ ಪರಿಗಣಿಸಲಾಗುತ್ತದೆ. ಅಂಥ ಸಂದರ್ಭದಲ್ಲಿ ನಿಮ್ಮ ದೂರು ಯಾವ ರೆಗ್ಯುಲೇಟರ್ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಅಡ್ಮಿನಿಸ್ಟ್ರೇಟರ್ ನಿರ್ಧರಿಸಿ ದೂರನ್ನು ಸಂಬಂಧಿತ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ