ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?
Reasons why many tax payers not yet received refunds: 2024-25ರ ಹಣಕಾಸು ವರ್ಷಕ್ಕೆ ಸಲ್ಲಿಸಲಾದ ಐಟಿ ರಿಟರ್ನ್ನಲ್ಲಿ ಬಹಳ ಜನರಿಗೆ ಕ್ಲೇಮ್ ಮಾಡಿರುವ ರೀಫಂಡ್ ಇನ್ನೂ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಹೆಚ್ಚಿನ ಮೌಲ್ಯದ ರೀಫಂಡ್ ಕ್ಲೇಮ್ ಮಾಡಿದ್ದರೆ, ಅಥವಾ ಐಟಿಆರ್ನಲ್ಲಿ ದೋಷ ಮತ್ತು ವ್ಯತ್ಯಾಸಗಳು ಕಂಡುಬಂದಲ್ಲಿ ಇಲಾಖೆ ಪರಿಶೀಲಿಸುತ್ತದೆ. ಈ ಕಾರಣಕ್ಕೆ ರೀಫಂಡ್ ವಿಳಂಬವಾಗುತ್ತಿರಬಹುದು ಎನ್ನಲಾಗಿದೆ.

ನವದೆಹಲಿ, ಜನವರಿ 8: ಈ ಬಾರಿ ಐಟಿ ರಿಟರ್ನ್ಸ್ (Income Tax) ಸಲ್ಲಿಸಿರುವ ಬಹಳ ತೆರಿಗೆ ಪಾವತಿದಾರರಿಗೆ ರೀಫಂಡ್ಗಳು ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ರೀಫಂಡ್ ಆಗದೇ ಇರುವ ಪ್ರಕರಣಗಳು ಕಡಿಮೆ ಇದ್ದವು. ಈ ವರ್ಷ ಇದು ಹೆಚ್ಚಾಗಿದೆ. ರೀಫಂಡ್ಗಳು ಬರುವುದಕ್ಕೆ ಇನ್ನೂ ಸಮಯಾವಕಾಶ ಇದೆಯಾದರೂ ಬಹಳ ಜನರು ತಮಗೆ ರೀಫಂಡ್ ಸಿಗುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.
ಆದಾಯ ತೆರಿಗೆ ಇಲಾಖೆ ಈ ಬಾರಿ ಹಲವು ಐಟಿಆರ್ಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚು ಸಮಯ ತೆಗೆದುಕೊಂಡಿದೆ. ಕಾನೂನು ಪ್ರಕಾರ ಡಿಸೆಂಬರ್ 31ರವರೆಗೂ ಇಲಾಖೆಗೆ ಐಟಿಆರ್ಗಳ ಪ್ರೋಸಸ್ ಮಾಡಲು ಕಾಲಾವಕಾಶ ಇದೆ. ಹೀಗಾಗಿ, ರೀಫಂಡ್ಗಳು ವಿಳಂಬವಾಗುವುದು ಸಹಜ.
ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು
ಹೆಚ್ಚಿನ ಮೌಲ್ಯದ ರೀಫಂಡ್ಗಳನ್ನು ಕ್ಲೇಮ್ ಮಾಡಿದ್ದರೆ ವಿಳಂಬ
ತೆರಿಗೆ ಪಾವತಿದಾರರು ತಮ್ಮ ಐಟಿಆರ್ನಲ್ಲಿ ಹೆಚ್ಚಿನ ಮೌಲ್ಯದ ರೀಫಂಡ್ಗಳಿಗೆ ಕ್ಲೇಮ್ ಮಾಡಿದ್ದರೆ, ಅಂಥ ಪ್ರಕರಣಗಳನ್ನು ಇಲಾಖೆ ಕೂಲಂಕಷವಾಗಿ ಪರಿಶೀಲಿಸುತ್ತದೆ. ರೀಫಂಡ್ ವಿಳಂಬವಾಗಲು ಇದೂ ಒಂದು ಪ್ರಮುಖ ಕಾರಣ.
ಹಾಗೆಯೇ, ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸುವಾಗ ಏನಾದರೂ ತಪ್ಪು ಮಾಡಿದ್ದರೆ ಆಗಲೂ ಕೂಡ ರೀಫಂಡ್ ವಿಳಂಬವಾಗುತ್ತದೆ. ಈ ವರ್ಷ ಇಂಥ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ. ಐಟಿಆರ್ನಲ್ಲಿ ದೋಷವಾಗಿದ್ದರೆ ಇಲಾಖೆಯು ತೆರಿಗೆಪಾವತಿದಾರರಿಗೆ ನೋಟೀಸ್ ಕೊಟ್ಟು, ಆ ದೋಷ ಸರಿಪಡಿಸಲು ತಿಳಿಸುತ್ತದೆ. ಹೀಗಾಗಿ, ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿ ಶುರು ಮಾಡಿ ಕೆಲಸಗಾರರ ಆಟಕ್ಕೆ ಬೇಸ್ತು ಬಿದ್ದ ಆಸ್ಟ್ರೇಲಿಯನ್ ಉದ್ಯಮಿ
ಕೆಲ ಉದ್ಯೋಗಸ್ಥ ವ್ಯಕ್ತಿಗಳು ತಮ್ಮ ಐಟಿಆರ್ನಲ್ಲಿ ಸೆಕ್ಷನ್ 80ಸಿ, 80ಡಿ ಇತ್ಯಾದಿ ಅಡಿ ಡಿಡಕ್ಷನ್ ಕ್ಲೇಮ್ ಮಾಡಿರುವುದುಂಟು. ಆದರೆ, ತಾವು ಕೆಲಸ ಮಾಡುವ ಕಂಪನಿ ಬಳಿ ಅದನ್ನು ಡಿಕ್ಲೇರ್ ಮಾಡದೇ ಇದ್ದಿರಬಹುದು. ಇಂಥ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಪರಿಶೀಲನೆ ನಡೆಸುತ್ತದೆ. ಇದೂ ಸೇರಿದಂತೆ ಬೇರೆ ಯಾವುದಾದರೂ ವ್ಯತ್ಯಾಸಗಳು ಐಟಿಆರ್ನಲ್ಲಿ ಕಂಡು ಬಂದಲ್ಲಿ ಇಲಾಖೆ ತೆರಿಗೆ ಪಾವತಿದಾರರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ನೋಟೀಸ್ ನೀಡಿ, ಸರಿಪಡಿಸಲು ತಿಳಿಸುತ್ತದೆ. ಇವೆಲ್ಲಾ ಪ್ರಕ್ರಿಯೆಗಳಿಗೆ ಸಮಯ ಹಿಡಿಯುವುದರಿಂದ ಹಲವರಿಗೆ ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




