ನವದೆಹಲಿ: ಬೆಂಗಳೂರು (Bengaluru) ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಡಿಸೆಂಬರ್ 1ರಂದು ರಿಟೇಲ್ ಅಥವಾ ಚಿಲ್ಲರೆ ಬಳಕೆಯ ಡಿಜಿಟಲ್ ರೂಪಾಯಿಯನ್ನು (Digital Rupee) ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಆರ್ಬಿಐ (RBI) ಮಂಗಳವಾರ ತಿಳಿಸಿದೆ. ಎಸ್ಬಿಐ (SBI), ಐಸಿಐಸಿಐ ಬ್ಯಾಂಕ್ (ICICI Bank) ಸೇರಿದಂತೆ ನಾಲ್ಕು ಬ್ಯಾಂಕ್‌ಗಳು ಆರಂಭದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ವ್ಯವಹಾರದಲ್ಲಿ ತೊಡಗಿಕೊಳ್ಳಲಿವೆ. ನವೆಂಬರ್ 1ರಂದು ಆರ್ಬಿಐ ಹೋಲ್ಸೇಲ್ ಅಥವಾ ಸಗಟು ವಿಭಾಗದ ಪ್ರಾಯೋಗಿಕ ಡಿಜಿಟಲ್ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಆಯ್ದ ಪ್ರದೇಶಗಳಲ್ಲಿ ನಿರ್ದಿಷ್ಟ ಗ್ರಾಹಕರು ಮತ್ತು ಉದ್ಯಮಿಗಳನ್ನು ಒಳಗೊಂಡ ಬಳಕೆದಾರರ ಗುಂಪಿನಲ್ಲಿ ಮಾತ್ರ ಆರಂಭದಲ್ಲಿ ಡಿಜಿಟಲ್ ರೂಪಾಯಿ ಚಲಾವಣೆಗೆ ಬರಲಿದೆ. ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಸದ್ಯ ಬಳಕೆಯಲ್ಲಿರುವ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮುಖ ಬೆಲೆಯಲ್ಲೇ ಡಿಜಿಟಲ್ ರೂಪಾಯಿಯೂ ಮುದ್ರಿತವಾಗಿರಲಿದೆ ಎಂದು ಆರ್ಬಿಐ ತಿಳಿಸಿದೆ.
ಬ್ಯಾಂಕ್‌ಗಳ ಮೂಲಕ ಡಿಜಿಟಲ್ ರೂಪಾಯಿ ವಿತರಿಸಲಾಗುವುದು. ಪ್ರಾಯೋಗಿಕ ಹಂತದ ಯೋಜನೆಯಲ್ಲಿ ಭಾಗವಹಿಸುವ ಬ್ಯಾಂಕ್‌ಗಳು ಪರಿಚಯಿಸುವ ಡಿಜಿಟಲ್ ವ್ಯಾಲೆಟ್ ಮೂಲಕ ಇ-ರೂಪಾಯಿ ವಹಿವಾಟು ನಡೆಯಲಿದೆ. ಬಳಕೆದಾರರಿಗೆ ಇದನ್ನು ಮೊಬೈಲ್ ಫೋನ್‌ಗಳು/ಸಾಧನಗಳಲ್ಲಿ ಸಂಗ್ರಹಿಸಡಲು ಸಾಧ್ಯವಾಗಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ಉದ್ಯಮಿಗಳ ಮಧ್ಯೆ ಟ್ರಾನ್ಸಾಕ್ಷನ್ ನಡೆಸಬಹುದು ಎಂದು ಆರ್ಬಿಐ ಹೇಳಿದೆ. ಬೆಂಗಳೂರು, ನವದೆಹಲಿ, ಮುಂಬೈ ಹಾಗೂ ಭುವನೇಶ್ವರ ನಗರಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೆ ಬರಲಿದೆ.
ಇದನ್ನೂ ಓದಿ: eRupee: ಬಂತು ಇ-ರೂಪಾಯಿ; ಕ್ರಿಪ್ಟೋ ಕರೆನ್ಸಿ ಮೇಲೆ ತೂಗುಗತ್ತಿ
ನವೆಂಬರ್ 1ರಂದು ಆರ್ಬಿಐ ಹೋಲ್ಸೇಲ್ ವಿಭಾಗದ ಇ-ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಈ ಮಾದರಿಯ ಡಿಜಿಟಲ್ ರೂಪಾಯಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್ಎಸ್ಬಿಸಿ ಬ್ಯಾಂಕ್ಗಳಲ್ಲಿ ಪ್ರಾಯೋಗಿಕ ಚಲಾವಣೆಯಲ್ಲಿವೆ.
ಹಣಕಾಸು ಅಕ್ರಮ ಮತ್ತು ಹಣದ ದುರ್ಬಳಕೆಯನ್ನು ತಡೆಗಟ್ಟಲು ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕವಾಗಿ ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಆರ್ಬಿಐ ಕೆಲವು ತಿಂಗಳುಗಳ ಹಿಂದೆ ಹೇಳಿತ್ತು. ಕೆಲವು ಸಮಯದಿಂದ ಡಿಜಿಟಲ್ ಕರೆನ್ಸಿಯ ಸಾಧಕ-ಬಾಧಕಗಳನ್ನು ಅನ್ವೇಷಿಸಲಾಗುತ್ತಿದೆ ಮತ್ತು ಪ್ರಸ್ತುತ ಹಂತ ಹಂತದ ಅನುಷ್ಠಾನದ ಕಾರ್ಯತಂತ್ರದ ಕಡೆಗೆ ಗಮನಹರಿಸಲಾಗುತ್ತಿದೆ. ಹಣಕಾಸಿನ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗದ ರೀತಿಯಲ್ಲಿ ಡಿಜಿಟಲ್ ರೂಪಾಯಿ ಬಳಕೆ ಮಾಡಲಾಗುವುದು ಮತ್ತು ಇದಕ್ಕೆ ಸಂಬಂಧಿದ ಕಾರ್ಯವ್ಯಾಪ್ತಿಯನ್ನು ಶೀಘ್ರದಲ್ಲೇ ನಿರ್ಧಾರಿಸಲಾಗುವುದು. ಇದೀಗ ಇದನ್ನು ಅನುಷ್ಠಾನಗೊಳಿಸುವ ಕಾರ್ಯತಂತ್ರಗಳ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರ್ಬಿಐ ಹೇಳಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ