Gold Loan Interest: ಕಡಿಮೆ ಬಡ್ಡಿಗೆ ಚಿನ್ನದ ಅಡಮಾನ ಸಾಲ ನೀಡುತ್ತಿವೆ ಈ ಬ್ಯಾಂಕ್​ಗಳು

| Updated By: ಗಣಪತಿ ಶರ್ಮ

Updated on: Nov 29, 2022 | 4:38 PM

ಚಿನ್ನದ ಅಡಮಾನ ಸಾಲದ ಬಡ್ಡಿ ದರ ವಿವಿಧ ಬ್ಯಾಂಕ್​ಗಳಲ್ಲಿ ವ್ಯತ್ಯಾಸವಿರುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವ ಐದು ಬ್ಯಾಂಕ್​ಗಳ ವಿವರ ಇಲ್ಲಿದೆ.

Gold Loan Interest: ಕಡಿಮೆ ಬಡ್ಡಿಗೆ ಚಿನ್ನದ ಅಡಮಾನ ಸಾಲ ನೀಡುತ್ತಿವೆ ಈ ಬ್ಯಾಂಕ್​ಗಳು
ಸಾಂದರ್ಭಿಕ ಚಿತ್ರ
Follow us on

ತುರ್ತಾಗಿ ಸಾಲ ಪಡೆಯಬೇಕು ಎಂದಾಗ ಹೆಚ್ಚಿನವರಿಗೆ ಚಿನ್ನದ ಅಡಮಾನ ಸಾಲ (Gold Loan) ತಕ್ಷಣ ನೆನಪಾಗುತ್ತದೆ. ಅದು ಉದ್ಯಮದ ಉದ್ದೇಶಕ್ಕೆ ಇರಬಹುದು, ಅನಿರೀಕ್ಷಿತ ಖರ್ಚು-ವೆಚ್ಚಗಳಿಗೆ ಇರಬಹುದು ಅಥವಾ ವೈದ್ಯಕೀಯ ತುರ್ತು ಅಗತ್ಯಗಳಿಗೆ ಇರಬಹುದು. ಇಂಥ ಸಂದರ್ಭದಲ್ಲಿ ಜನ ಚಿನ್ನವನ್ನು ಅಡವಿಟ್ಟು ಸಾಲ (Loan) ಪಡೆಯಲು ಮುಂದಾಗುತ್ತಾರೆ. ಈ ವಿಧಾನದಲ್ಲಿ ಗ್ರಾಹಕರ ಚಿನ್ನವನ್ನು ಆಧಾರವಾಗಿಟ್ಟುಕೊಂಡು ಬ್ಯಾಂಕ್​ಗಳು ಸಾಲ ನೀಡುತ್ತವೆ. ಹೀಗೆ ನೀಡುವ ಸಾಲಕ್ಕೆ ಬ್ಯಾಂಕ್​ಗಳು ಬಡ್ಡಿಯನ್ನು (Interest rates) ವಿಧಿಸುತ್ತವೆ. ಸಾಲದ ಎಲ್ಲ ಮೊತ್ತವನ್ನು ಮರು ಪಾವತಿಸಿದ ಬಳಿಕ ಅಡವಿಟ್ಟ ಚಿನ್ನವನ್ನು ಬ್ಯಾಂಕ್​ಗಳು ಗ್ರಾಹಕರಿಗೆ ವಾಪಸ್ ನೀಡುತ್ತವೆ.

ಚಿನ್ನದ ಅಡಮಾನ ಸಾಲದ ಬಡ್ಡಿ ದರ ವಿವಿಧ ಬ್ಯಾಂಕ್​ಗಳಲ್ಲಿ ವ್ಯತ್ಯಾಸವಿರುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವ ಐದು ಬ್ಯಾಂಕ್​ಗಳ ವಿವರ ಇಲ್ಲಿದೆ.

ಇಂಡಿಯನ್ ಬ್ಯಾಂಕ್

ಇಂಡಿಯನ್ ಬ್ಯಾಂಕ್ ಶೇಕಡಾ 7ರ ಫ್ಲೋಟಿಂಗ್ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತಿದೆ. ಇದಕ್ಕೆ ಶೇಕಡಾ 0.056ರ ಪ್ರೊಸೆಸಿಂಗ್ ಶುಲ್ಕ ಇರುತ್ತದೆ. ಇಲ್ಲಿ ಫ್ಲೋಟಿಂಗ್ ಬಡ್ಡಿ ದರ ಅಂದರೆ ಬದಲಾಗುವ ಬಡ್ಡಿದರ. ಆರ್​ಬಿಐ ರೆಪೊ ದರಕ್ಕೆ ಅನುಗುಣವಾಗಿ ಅಥವಾ ಬೇರೆ ಕಾರಣಗಳಿಗಾಗಿ ಬ್ಯಾಂಕ್ ಈ ಬಡ್ಡಿ ದರವನ್ನು ಪರಿಷ್ಕರಿಸಬಹುದು. ಹೀಗೆ ಬ್ಯಾಂಕ್ ಬಡ್ಡಿ ದರ ಪರಿಷ್ಕರಿಸಿದರೆ ಹೊಸ ಬಡ್ಡಿ ದರಬವನ್ನೇ ಗ್ರಾಹಕರು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Home Loan Interest Rates: ಗೃಹ ಸಾಲ ಪಡೆಯಲಿದ್ದೀರಾ? ಈ 5 ಬ್ಯಾಂಕ್​ಗಳಲ್ಲಿ ಬಡ್ಡಿ ದರ ಕಡಿಮೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 7.10 ರಿಂದ 7.20ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತಿದೆ. ಸಾಲದ ಒಟ್ಟು ಮೊತ್ತದ ಶೇಕಡಾ 0.75ರ ಪ್ರೊಸೆಸಿಂಗ್ ಶುಲ್ಕ ಇರುತ್ತದೆ.

ಯೂನಿಯನ್ ಬ್ಯಾಂಕ್

ಯೂನಿಯನ್ ಬ್ಯಾಂಕ್ ಶೇಕಡಾ 7.25 ರಿಂದ 7.50ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತದೆ. ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ.

ಯುಸಿಒ ಬ್ಯಾಂಕ್

ಯುಸಿಒ ಬ್ಯಾಂಕ್ ಶೇಕಡಾ 7.40 ರಿಂದ 7.90ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತದೆ. 250 ರೂಪಾಯಿಯಿಂದ ಗರಿಷ್ಠ 5000 ರೂ.ವರೆಗೆ ಪ್ರೊಸೆಸಿಂಗ್ ಶುಲ್ಕ ಇರುತ್ತದೆ.

ಎಚ್​ಡಿಎಫ್​ಸಿ ಬ್ಯಾಂಕ್

ಎಚ್​ಡಿಎಫ್​ಸಿ ಬ್ಯಾಂಕ್ ಶೇಕಡಾ 7.60 ರಿಂದ 16.81ರ ಬಡ್ಡಿ ದರದಲ್ಲಿ ಚಿನ್ನದ ಅಡಮಾನ ಸಾಲ ನೀಡುತ್ತದೆ. ಸಾಲದ ಮೊತ್ತದ ಶೇಕಡಾ 1ರಷ್ಟು ಪ್ರೊಸೆಸಿಂಗ್ ಶುಲ್ಕ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ