Digital Wallets: ಡಿಜಿಟಲ್ ವಾಲೆಟ್​ನಲ್ಲಿ ಹೆಚ್ಚು ಹಣ ಇಡುವುದು ಉತ್ತಮಲ್ಲ; ತಜ್ಞರು ಹೀಗೆನ್ನಲು ಕಾರಣವಿದೆ

Digital Wallets; ಸ್ಮಾರ್ಟ್​ಫೋನ್ ಕಳವಾದರೂ ಅದರಲ್ಲಿರುವ ಡಿಜಿಟಲ್ ವಾಲೆಟ್ ದುರ್ಬಳಕೆಯಾಗದಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಇಷ್ಟಾದರೂ ಡಿಜಿಟಲ್ ವಾಲೆಟ್​​ನಲ್ಲಿ ದೊಡ್ಡ ಮೊತ್ತದ ಹಣ ಇಡುವುದು ಬೇಡ ಎನ್ನಲು ಕಾರಣವೇನು? ಇಲ್ಲಿದೆ ಮಾಹಿತಿ.

Digital Wallets: ಡಿಜಿಟಲ್ ವಾಲೆಟ್​ನಲ್ಲಿ ಹೆಚ್ಚು ಹಣ ಇಡುವುದು ಉತ್ತಮಲ್ಲ; ತಜ್ಞರು ಹೀಗೆನ್ನಲು ಕಾರಣವಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Nov 21, 2022 | 4:31 PM

ಪ್ರಸ್ತುತ ಹೆಚ್ಚಿನ ಕಡೆಗಳಲ್ಲಿ ಡಿಜಿಟಲ್ ವಹಿವಾಟು (Digital Transactions), ಡಿಜಿಟಲ್ ಪಾವತಿ (Digital Payments) ವಿಧಾನ ಹೆಚ್ಚು ಚಾಲ್ತಿಯಲ್ಲಿದೆ. ದೊಡ್ಡ ಶಾಪಿಂಗ್ ಮಾಲ್​ಗಳಿಂದ ತೊಡಗಿ ಚಿಕ್ಕ ಅಂಗಡಿಗಳ ವರೆಗೂ ಡಿಜಿಟಲ್ ಪಾವತಿ ಮಾಮೂಲಾಗಿಬಿಟ್ಟಿದೆ. ಅದೇ ರೀತಿ ಅನೇಕ ಡಿಜಿಟಲ್ ವಾಲೆಟ್​ಗಳೂ (Digital Wallets) ಸ್ಮಾರ್ಟ್​ಫೋನ್​ಗಳಿಗೆ ಲಗ್ಗೆ ಇಟ್ಟಿವೆ, ಇಡುತ್ತಿವೆ. ಕೆಲವರು ಡಿಜಿಟಲ್ ವಾಲೆಟ್​ನಲ್ಲಿ ಹೆಚ್ಚು ಮೊತ್ತದ ಹಣವನ್ನು ಇಡುತ್ತಾರೆ. ಆದರೆ, ಇದು ಅಷ್ಟೊಂದು ಉತ್ತಮವಲ್ಲ ಎಂದಿದ್ದಾರೆ ಹಣಕಾಸು ತಜ್ಞರು.

ಸುರಕ್ಷತೆ ಬಗ್ಗೆ ಬೇಡ ಆತಂಕ

ಡಿಜಿಟಲ್ ವಾಲೆಟ್​ಗಳಲ್ಲಿ ಹಣ ಇಡುವ ವಿಚಾರಕ್ಕೆ ಬಂದಾಗ ಸುರಕ್ಷತೆ ಬಗ್ಗೆ ಹೆಚ್ಚಿನ ಅನುಮಾನ ಪಡಬೇಕಾದ ಅಗತ್ಯವಿಲ್ಲ. ಸಾಂಪ್ರದಾಯಿಕ ವಾಲೆಟ್​ಗಳಿಗಿಂತಲೂ ಇವು ಹೆಚ್ಚು ಸುರಕ್ಷಿತ ಎನ್ನುತ್ತಾರೆ ತಜ್ಞರು. ಯಾಕೆಂದರೆ, ಟೋಕನೈಸೇಷನ್, ಎನ್​ಕ್ರಿಪ್ಷನ್​​ನಂಥ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ವಾಲೆಟ್​ಗಳು ಭದ್ರವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಕೆಲವು ಡಿಜಿಟಲ್​ ವಾಲೆಟ್​ಗಳಲ್ಲಂತೂ ಪಾಸ್​ವರ್ಡ್ ಪ್ರೊಟೆಕ್ಷನ್ ಅಥವಾ ಫೇಸ್​​ ರೆಕಗ್ನಿಷನ್​ನಂಥ ತಂತ್ರಜ್ಞಾನ ಅಳವಡಿಸಿರಲಾಗುತ್ತದೆ. ಸ್ಮಾರ್ಟ್​ಫೋನ್ ಕಳವಾದರೂ ಅದರಲ್ಲಿರುವ ಡಿಜಿಟಲ್ ವಾಲೆಟ್ ದುರ್ಬಳಕೆಯಾಗದಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಇರುತ್ತದೆ. ಇಷ್ಟಾದರೂ ಡಿಜಿಟಲ್ ವಾಲೆಟ್​​ನಲ್ಲಿ ದೊಡ್ಡ ಮೊತ್ತದ ಹಣ ಇಡುವುದು ಬೇಡ ಎನ್ನಲು ಕಾರಣವೇನು? ಇಲ್ಲಿದೆ ಮಾಹಿತಿ.

ಇದನ್ನೂ ಓದಿ
Image
ಯುಪಿಐ ಮೂಲಕ ಎಟಿಎಂನಿಂದ ಹಣ ವಿತ್​ಡ್ರಾ ಮಾಡುವುದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ
Image
ಇ-ಕಾಮರ್ಸ್ ವೆಬ್​​ಸೈಟ್​ಗಳಲ್ಲಿ ನಕಲಿ ರಿವ್ಯೂಗೆ ಬೀಳಲಿದೆ ಕಡಿವಾಣ; ಶೀಘ್ರದಲ್ಲೇ ಬರಲಿದೆ ನಿಯಮ
Image
It Jobs; ಐಟಿ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದೀರಾ? ಶೀಘ್ರದಲ್ಲೇ ನಿಮಗಿದೆ ಸಿಹಿ ಸುದ್ದಿ
Image
ಡಿಜಿಟಲ್ ಪಾವತಿಗೆ ಶುಲ್ಕ: ರಿಸರ್ವ್ ಬ್ಯಾಂಕ್ ಜೊತೆಗೆ ಮಾತುಕತೆ ಆರಂಭಿಸಿದ ಪೇಮೆಂಟ್ಸ್ ಕಾರ್ಪೊರೇಷನ್

ಡಿಜಿಟಲ್ ವಾಲೆಟ್​​ನಲ್ಲಿ ರಿಟರ್ನ್ಸ್ ಶೂನ್ಯ

ಆರ್​ಬಿಐ ಮಾರ್ಗಸೂಚಿ ಪ್ರಕಾರ, ಡಿಜಿಟಲ್‌ ವಾಲೆಟ್‌ನಲ್ಲಿ ಗರಿಷ್ಠ 2 ಲಕ್ಷ ರೂಪಾಯಿಯಷ್ಟು ಹಣ ಇಟ್ಟುಕೊಳ್ಳಬಹುದು. ಹಾಗೆಂದು ದೊಡ್ಡ ಮೊತ್ತದ ಹಣ ಇಟ್ಟುಕೊಂಡರೆ ಪ್ರಯೋಜನವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬೇಕೆನಿಸಿದಾಗ ಪಾವತಿ ಮಾಡಲು ಇದು ಸುಲಭವಾಗಬಹುದು. ಆದರೆ, ಡಿಜಿಟಲ್ ವಾಲೆಟ್​ನಲ್ಲಿ ಇಟ್ಟ ಹಣಕ್ಕೆ ಬಡ್ಡಿ ಬರುತ್ತದೆಯೇ? ಇಲ್ಲ. ಡಿಜಿಟಲ್ ವಾಲೆಟ್​ನಲ್ಲಿ ನೀವು ಎಷ್ಟೇ ಹಣ ಇಟ್ಟರೂ ಅದಕ್ಕೆ ರಿಟರ್ನ್ಸ್ ಬರುವುದಿಲ್ಲ. ಡಿಜಿಟಲ್ ವಾಲೆಟ್​ನಲ್ಲಿ ಹಣ ಕೂಡಿಟ್ಟು ಅದನ್ನು ಬೇಗ ಖರ್ಚು ಮಾಡುವುದಾದರೆ ಸರಿ. ಖರ್ಚು ಮಾಡುವ ಸಂದರ್ಭವೂ ಇಲ್ಲದಿರುವಾಗ ತಿಂಗಳುಗಟ್ಟಲೆ ಅದರಲ್ಲಿ ಕೂಡಿಡುವ ಹಣ ವ್ಯರ್ಥ ಹೂಡಿಕೆಯಾಗುತ್ತದೆ. ಅಂದರೆ, ಅದರಿಂದ ಯಾವುದೇ ಆದಾಯ ದೊರೆಯಲಾರದು.

ಇದರ ಬದಲು ಉಳಿತಾಯ ಖಾತೆಯಲ್ಲಿಯೇ ಇಟ್ಟುಕೊಂಡರೂ ಅಲ್ಪ ಮೊತ್ತದ ಬಡ್ಡಿಯಾದರೂ ದೊರೆಯಬಹುದು. ಎಸ್​ಐಪಿ ಅಥವಾ ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಹಾಗೂ ಬೇರೆಡೆ ಹೂಡಿಕೆ ಮಾಡಿದರೆ ರಿಟರ್ನ್ಸ್ ದೊರೆಯಬಹುದು.

ಹೂಡಿಕೆಯೇ ಉತ್ತಮ ಆಯ್ಕೆ

ಡಿಜಿಟಲ್ ವಾಲೆಟ್​​ನಲ್ಲಿ 2ರಿಂದ 3 ತಿಂಗಳ ಅವಧಿಗೆ 10,000 ರೂ. ಹಾಕಿಟ್ಟುಕೊಳ್ಳುತ್ತೀರಿ ಎಂದುಕೊಳ್ಳೋಣ. 3 ತಿಂಗಳ ಬಳಿಕವೂ ನಿಮ್ಮ ಡಿಜಿಟಲ್ ವಾಲೆಟ್​​ನಲ್ಲಿ 10,000 ರೂ. ಅಷ್ಟೇ ದೊರೆಯುತ್ತದೆ. ಅದರ ಬದಲು ಸರಿಯಾದ ಸಮಾಲೋಚನೆ ನಡೆಸಿ ಅದೇ ಮೊತ್ತವನ್ನು ಉತ್ತಮ ಎಸ್​ಐಪಿ ಯೋಜನೆಯಲ್ಲಿ ಇಡುತ್ತೀರಿ ಎಂದಿಟ್ಟುಕೊಳ್ಳಿ. 3 ತಿಂಗಳ ಬಳಿಕ ವಾಪಸ್ ಪಡೆಯುವಾಗ ಉತ್ತಮ ರಿಟರ್ನ್ಸ್ ನಿಮ್ಮದಾಗಬಹುದು. ಎಲ್ಲಿಯೂ ಹೂಡಿಕೆ ಮಾಡಲು ಮನಸಿಲ್ಲದಿದ್ದರೆ ಉಳಿತಾಯ ಖಾತೆಯಲ್ಲಿಯೇ ಇಟ್ಟುಕೊಂಡರೂ ಕನಿಷ್ಠ ಬಡ್ಡಿಯಾದರೂ ದೊರೆಯುವುದು ಖಂಡಿತ.

ಅನೇಕ ವಾಲೆಟ್​​ಗಳನ್ನು ಬಳಸಬೇಡಿ

ಹೆಚ್ಚೆಚ್ಚು ಡಿಜಿಟಲ್ ವಾಲೆಟ್​ಗಳನ್ನು ಬಳಸುವುದೂ ಸಹ ಅಷ್ಟು ಉತ್ತಮವಲ್ಲ ಎಂದಿದ್ದಾರೆ ತಜ್ಞರು. ಮೊಬೈಲ್ ವಾಲೆಟ್ ಡೌನ್​ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅನೇಕ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಹೀಗೆ ಹಲವು ವಾಲೆಟ್​ಗಳ ಜತೆ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದು ಒಳ್ಳೆಯದಲ್ಲ. ದೊಡ್ಡ ಮೊತ್ತದ ಪಾವತಿಗಳನ್ನು ಮಾಡಬೇಕಿದ್ದರೆ ಯುಪಿಐ ಪಾವತಿ ಅಥವಾ ಬ್ಯಾಂಕ್​ಗಳು ನೀಡುವ ಇತರ ಸೌಲಭ್ಯಗಳನ್ನು ಮಾಡಿಕೊಂಡು ಪಾವತಿ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.

ಶಾಪಿಂಗ್ ಆ್ಯಪ್​ಗಳ ಇ-ವಾಲೆಟ್​ಗಳು

ಅನೇಕ ಶಾಪಿಂಗ್‌ ಆ್ಯಪ್‌ಗಳಿಗೆ ಅವುಗಳದ್ದೇ ಆದ ಸ್ವಂತ ಇ-ವಾಲೆಟ್‌ಗಳಿವೆ. ದೂರಸಂಪರ್ಕ, ಆನ್‌ಲೈನ್‌ ಪ್ರವಾಸೋದ್ಯಮ ಹಾಗೂ ವಿಮಾನಯಾನ ಬುಕಿಂಗ್‌ಗಳಂತಹ ಇತರ ಸೇವೆಗಳನ್ನು ಒದಗಿಸುತ್ತಿರುವ ಕಂಪನಿಗಳೂ ಸಹ ತಮ್ಮದೇ ಆದ ಇ-ವಾಲೆಟ್‌ಗಳನ್ನು ಹೊಂದಿವೆ. ವಿವಿಧ ಶಾಪಿಂಗ್ ಆ್ಯಪ್​ಗಳಿಗೆ ವಿವಿಧ ಇ-ವಾಲೆಟ್​ಗಳ ಬಳಕೆ ಕೂಡ ಸರಿಯಲ್ಲ. ಇದರ ಬದಲು ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಿ ದುಡಿದ ಹಣಕ್ಕೆ ರಿಟರ್ನ್ಸ್ ಪಡೆಯುವ ನಿಟ್ಟಿನಲ್ಲಿ ಯೋಚಿಸಿ ಎಂದು ಸಲಹೆ ನೀಡಿದ್ದಾರೆ ಹಣಕಾಸು ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ