ಡಿಜಿಟಲ್ ಪಾವತಿಗೆ ಶುಲ್ಕ: ರಿಸರ್ವ್ ಬ್ಯಾಂಕ್ ಜೊತೆಗೆ ಮಾತುಕತೆ ಆರಂಭಿಸಿದ ಪೇಮೆಂಟ್ಸ್ ಕಾರ್ಪೊರೇಷನ್
ಡಿಸೆಂಬರ್ 31ರಿಂದ ಡಿಜಿಟಲ್ ಪಾವತಿಗಳಿಗೆ ಗರಿಷ್ಠ ವಹಿವಾಟು ಮಿತಿ ವಿಧಿಸುವ ಸಾಧ್ಯತೆ ಕುರಿತು ಏಕೀಕೃತ ಪಾವತಿ ವ್ಯವಸ್ಥೆಗಳನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಮಾಲೋಚನೆ ಆರಂಭಿಸಿದೆ.
ದೆಹಲಿ: ಡಿಸೆಂಬರ್ 31ರಿಂದ ಡಿಜಿಟಲ್ ಪಾವತಿಗಳಿಗೆ ಗರಿಷ್ಠ ವಹಿವಾಟು ಮಿತಿ ವಿಧಿಸುವ ಸಾಧ್ಯತೆ ಕುರಿತು ಏಕೀಕೃತ ಪಾವತಿ ವ್ಯವಸ್ಥೆಗಳನ್ನು (Unified Payments Interface – UPI) ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India – NPCI) ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಜೊತೆಗೆ ಸಮಾಲೋಚನೆ ಆರಂಭಿಸಿದೆ. ಪ್ರಸ್ತುತ ವಹಿವಾಟು ಗಾತ್ರವನ್ನು ನಿರ್ವಹಿಸುವ ಯಾವುದೇ ಮಿತಿ ಪ್ರಸ್ತುತ ಚಾಲ್ತಿಯಲ್ಲಿಲ್ಲ. ಡಿಜಿಟಲ್ ಪಾವತಿ ಆ್ಯಪ್ ಕ್ಷೇತ್ರದಲ್ಲಿ ಗೂಗಲ್ ಪೇ ಮತ್ತು ಫೋನ್ ಪೇ ಶೇ 80ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಇದು ಮುಂದೊಂದು ದಿನ ಏಕಸ್ವಾಮ್ಯದ ಅಪಾಯಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಎನ್ಪಿಸಿಐ ಗರಿಷ್ಠ ಮಿತಿ ವಿಧಿಸುವ ಕುರಿತು ಪ್ರಸ್ತಾವ ಸಲ್ಲಿಸಿತ್ತು. ಕೆಲವೇ ಥರ್ಡ್ ಪಾರ್ಟಿ ಆ್ಯಪ್ಗಳಲ್ಲಿ ಹೆಚ್ಚಿನ ವಹಿವಾಟು ಕೇಂದ್ರೀಕೃತಗೊಳ್ಳುವುದರಿಂದ ಅಪಾಯ ಎದುರಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಗರಿಷ್ಠ ಮಿತಿ ವಿಧಿಸುವ ಪ್ರಸ್ತಾವ ಮುಂದಿಡಲಾಗಿತ್ತು. ಈ ಸಂಬಂಧ ನಡೆದ ಸಭೆಯಲ್ಲಿ ಎನ್ಪಿಸಿಐ ಅಧಿಕಾರಿಗಳೊಂದಿಗೆ ಹಣಕಾಸು ಸಚಿವಾಲಯ ಮತ್ತು ಆರ್ಬಿಐನ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಆದರೆ ಡಿಸೆಂಬರ್ 31ರ ಗಡುವು ವಿಸ್ತರಿಸುವ ಸಾಧ್ಯತೆಗಳನ್ನು ಎನ್ಪಿಸಿಐ ಪ್ರಸ್ತಾಪಿಸಿತು ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಪೇಮೆಂಟ್ ಗೇಟ್ವೇ ಉದ್ಯಮದ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು. ವಹಿವಾಟಿನ ಗರಿಷ್ಠ ಮಿತಿಯ ಬಗ್ಗೆ ಈ ತಿಂಗಳ ಕೊನೆಯ ಒಳಗೆ ಎನ್ಪಿಸಿಐ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಎರಡು ವರ್ಷದ ಹಿಂದೆಯೇ ಎನ್ಪಿಸಿಐ ಗರಿಷ್ಠ ವಹಿವಾಟು ಮಿತಿಯ ಬಗ್ಗೆ ಪ್ರಸ್ತಾವ ಮುಂದಿಟ್ಟಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಈ ಪ್ರಸ್ತಾವದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಡಿಜಿಟಲ್ ವಹಿವಾಟಿಗೆ ಶುಲ್ಕ ವಿಧಿಸುವ ಕುರಿತು ತಮ್ಮ ಸಂಶೋಧನಾ ವರದಿಯಲ್ಲಿ ಪ್ರಸ್ತಾವ ಮುಂದಿಟ್ಟಿತ್ತು. ಐಎಂಪಿಎಸ್ (Immediate Payment Service – IMPS) ವಹಿವಾಟುಗಳಿಗೆ ಶುಲ್ಕ ವಿಧಿಸಬಹುದು ಎಂಬ ಚರ್ಚೆಯನ್ನು ಇದು ಆರಂಭಿಸಿತ್ತು. ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರದ ದಿನಗಳಲ್ಲಿ ಸರ್ಕಾರವು ಶುಲ್ಕ ವಿಧಿಸುವ ಯಾವುದೇ ಪ್ರಸ್ತಾವ ತನ್ನೆದುರು ಇಲ್ಲ ಎಂದು ಸ್ಪಷ್ಟಪಡಿಸಿತು. ಇದೀಗ ಎನ್ಪಿಸಿಐ ಮತ್ತೊಮ್ಮೆ ಇಂಥದ್ದೇ ಪ್ರಸ್ತಾವದ ಸಮಾಲೋಚನೆ ಆರಂಭಿಸಿರುವುದು ಹಣಕಾಸು ಕ್ಷೇತ್ರದಲ್ಲಿ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಹೆಚ್ಚುತ್ತಿಲ್ಲ ಬ್ಯಾಂಕ್ ಠೇವಣಿ; ನಾಳೆ ಬ್ಯಾಂಕ್ ಸಿಇಒಗಳ ಜತೆ ಆರ್ಬಿಐ ಗವರ್ನರ್ ಸಭೆ
Published On - 9:27 am, Mon, 21 November 22