ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೆರಿಕದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರಿಗೆ ಸಖತ್ ಬೇಡಿಕೆ
US struggling to fill skilled jobs like mechanics, plumbers despite offering upto Rs 1 crore salary: ಅಮೆರಿಕದಲ್ಲಿ ಮೆಕ್ಯಾನಿಕ್, ಪ್ಲಂಬರ್, ಎಲೆಕ್ಟ್ರಿಶಿಯನ್ ಕೆಲಸಗಳಿಗೆ ಕೋಟಿ ರೂವರೆಗೆ ಸಂಬಳ ಆಫರ್ ಮಾಡಲಾಗುತ್ತಿದೆ. ಇಷ್ಟು ದೊಡ್ಡ ಸಂಬಳ ಕೊಟ್ಟರೂ ಕೆಲಸಗಾರರು ಸಿಗುತ್ತಿಲ್ಲ. ನುರಿತ ಕೆಲಸಗಾರರ ಕೊರತೆ ಅಮೆರಿಕದಲ್ಲಿ ಕಾಡುತ್ತಿದೆ. ಅಮೆರಿಕನ್ನರು ಐಟಿ, ಎಐ ಇತ್ಯಾದಿ ಹೈ ಎಂಡ್ ವಿದ್ಯೆ ಕಲಿಯಲು ಒತ್ತು ಕೊಟ್ಟ ಪರಿಣಾಮ, ಕೈಕೆಲಸ ಗೊತ್ತಿರುವವರು ಇಲ್ಲವಾಗಿದೆ.

ವಾಷಿಂಗ್ಟನ್, ನವೆಂಬರ್ 14: ವಲಸಿಗರಿಗೆ ವೀಸಾ ಕಡಿವಾಣ ಹಾಕಿದ ಬಳಿಕ ಅಮೆರಿಕದಲ್ಲಿ ಕೌಶಲ್ಯವಂತ ಕಾರ್ಮಿಕರ ಕೊರತೆ ಸಿಕ್ಕಾಪಟ್ಟೆ ಆಗಿದೆ. ವಾಹನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಕಂಪನಿಗಳು ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳಲು ಹೆಣಗಾಡುತ್ತಿವೆ. ಅದರಲ್ಲೂ ಮೆಕ್ಯಾನಿಕ್ಸ್, ಪ್ಲಂಬಿಂಗ್, ಎಲೆಕ್ಟ್ರಿಶಿಯನ್ ಮೊದಲಾದ ಕೌಶಲ್ಯವಂತ ಕಾರ್ಮಿಕರ (skilled workers) ಕೊರತೆ ಸೃಷ್ಟಿಯಾಗಿದೆ. ಕಂಪನಿಗಳು ಭಾರೀ ಮೊತ್ತದ ಸಂಬಳ ಆಫರ್ ಮಾಡುತ್ತಿದ್ದರೂ ಕೆಲಸಗಾರರು ಸಿಗುತ್ತಿಲ್ಲ ಎನ್ನಲಾಗುತ್ತಿದೆ.
ಫೋರ್ಟ್ ಮೋಟಾರ್ ಕಂಪನಿಯ ಸಿಇಒ ಜಿಮ್ ಫಾರ್ಲೀ (Ford CEO Jim Farley) ಇತ್ತೀಚೆಗೆ ಇಂಥ ಒಂದು ಸಂದಿಗ್ಧ ಸ್ಥಿತಿ ಏರ್ಪಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾರೆ. 5,000 ಮೆಕ್ಯಾನಿಕ್ ಹುದ್ದೆಗಳನ್ನು ಭರ್ತಿ ಮಾಡಲು ಕಂಪನಿಗೆ ಸಾಧ್ಯವಾಗುತ್ತಿಲ್ಲ. ವರ್ಷಕ್ಕೆ ಒಂದು ಕೋಟಿ ರೂವರೆಗೆ ಸಂಬಳ ಆಫರ್ ಮಾಡುತ್ತಿದ್ದರೂ ನೇಮಕಾತಿ ಆಗುತ್ತಿಲ್ಲ ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆರ್ಥಿಕತೆಯ ಉಸಿರುಗಟ್ಟಿಸುವ ಉಚಿತ ಕೊಡುಗೆಗಳು; ಕರ್ನಾಟಕದಂಥ ಕರ್ನಾಟಕವೇ ಥರಗುಟ್ಟುತ್ತಿರುವಾಗ ಬಿಹಾರ ನಿಲ್ಲಬಲ್ಲುದಾ?
ಕೈಕೆಲಸ ಗೊತ್ತಿರುವವರಿಗೆ ಡಿಮ್ಯಾಂಡ್
ಮೆಕ್ಯಾನಿಕ್, ಪ್ಲಂಬರ್, ಟ್ರಕ್ ಡ್ರೈವರ್, ಫ್ಯಾಕ್ಟರಿ ವರ್ಕರ್, ಎಲೆಕ್ಟ್ರಿಶಿಯನ್ ಇತ್ಯಾದಿ ಕೈಕೆಲಸಗಳಿಗೆ ಅಮೆರಿಕದಲ್ಲಿ ಬೇಡಿಕೆ ಇದೆ. ಇಂಥ ಕೌಶಲ್ಯ ಇರುವ ಸ್ಥಳೀಯರ ಸಂಖ್ಯೆ ತೀರಾ ಕಡಿಮೆ. ಅಮೆರಿಕನ್ನರು ಎಐ, ಚಿಪ್ ಡಿಸೈನ್ ಇತ್ಯಾದಿ ಹೈ ಎಂಡ್ ಕೆಲಸಗಳಲ್ಲಿ ನೈಪುಣ್ಯ ಹೊಂದಿದ್ದಾರೆ. ಕೈಕೆಲಸಗಳ ವಿದ್ಯೆ ಕಲಿತಿಲ್ಲ. ಹೀಗಾಗಿ, ಅಮೆರಿಕದಲ್ಲಿ ಕಾರ್ಮಿಕರು ಸಿಗುವುದು ದುಸ್ತರವಾಗಿದೆ.
ಅಮೆರಿಕದಲ್ಲಿ ಕಾರ್ಮಿಕರು ಯಾಕೆ ಸಿಗುತ್ತಿಲ್ಲ?
ಫೋರ್ಡ್ ಮೋಟಾರ್ ಸಿಇಒ ಅವರು ಕೈಕೆಲಸದ ಪರಿಣಿತಿ ಎಷ್ಟು ಮುಖ್ಯ ಎಂಬುದಕ್ಕೆ ಒಂದು ನಿದರ್ಶನ ನೀಡಿದ್ದಾರೆ. ಫೋರ್ಡ್ ಸೂಪರ್ ಡ್ಯೂಟಿ ಟ್ರಕ್ನಿಂದ ಡೀಸಲ್ ಎಂಜಿನ್ ಅನ್ನು ಹೊರತೆಗೆಯುವುದು ಅಷ್ಟು ಸುಲಭವಲ್ಲ. ಅದರ ಪರಿಣಿತಿ ಸಾಧಿಸಲು ಐದು ವರ್ಷ ಬೇಕಾಗುತ್ತದೆ. ಅಮೆರಿಕನ್ ಯುವಕರಿಗೆ ಈ ತಾಂತ್ರಿಕ ಕೌಶಲ್ಯ ಗೊತ್ತಿಲ್ಲ. ತಮ್ಮ ಅಜ್ಜಂದಿರ ಕಾಲದಲ್ಲಿ ಸಿಗುತ್ತಿದ್ದ ರೀತಿಯ ಶಿಕ್ಷಣ ಇವತ್ತಿನ ಕಾಲದಲ್ಲಿ ಸಿಗುತ್ತಿಲ್ಲ ಎಂದೆನ್ನುತ್ತಾರೆ ಜಿಮ್ ಫಾರ್ಲೀ.
ಇದನ್ನೂ ಓದಿ: ಭಾರತದ ಈ ವರ್ಷದ ಜಿಡಿಪಿ ದರ ಶೇ. 8.8 ಕೂಡ ಮುಟ್ಟಬಲ್ಲುದು: ಎನ್ಐಪಿಎಫ್ಪಿ ನಿರೀಕ್ಷೆ
ಒಂದು ಆರ್ಥಿಕತೆಯು ಎಐ ಅಥವಾ ಸಾಫ್ಟ್ವೇರ್ ಅಭಿವೃದ್ಧಿಯನ್ನಷ್ಟೇ ನೆಚ್ಚಿಕೊಳ್ಳಲು ಆಗುವುದಿಲ್ಲ. ಮಧ್ಯ ವರ್ಗದವರನ್ನು ನಿರ್ಮಿಸಲು ಕೈಕೆಲಸಗಳ ವಿದ್ಯೆ ಕಲಿಸಬೇಕು. ಮೆಕ್ಯಾನಿಕ್ಸ್, ಟ್ರಕ್ ಡ್ರೈವರ್, ಎಲೆಕ್ಟ್ರಿಶಿಯನ್ ಇತ್ಯಾದಿ ಕೌಶಲ್ಯಗಳನ್ನು ಯುವಕರಿಗೆ ಕಲಿಸಲು ಒತ್ತುಕೊಡಬೇಕು ಎಂದು ಅಮೆರಿಕದ ವಿಶ್ಲೇಷಕರು ಹೇಳುತ್ತಾರೆ.
ಫೋರ್ಡ್ನಂತಹ ಕಂಪನಿಗಳಲ್ಲಿ ಈಗ ಕಾರ್ಮಿಕರ ಕೊರತೆ ಆತಂಕಪಡುವಷ್ಟು ಎದುರಾಗಿದೆ. ನಿಪುಣ ಮೆಕ್ಯಾನಿಕ್ಗಳಿಲ್ಲದೆ ಅನೇಕ ಕಾರುಗಳು ಅಸೆಂಬ್ಲಿ ಲೈನ್ನಿಂದ ಹೊರಬರದೇ ಉಳಿದುಕೊಂಡಿವೆ. ಕೆಲ ನಗರಗಳಲ್ಲಿ ಕಂಪನಿಗಳು ಎಲೆಕ್ಟ್ರಿಶಿಯನ್, ಪ್ಲಂಬರ್ಗಳಿಗೆ ವರ್ಷಕ್ಕೆ 1,20,000 ಡಾಲರ್ವರೆಗೂ ಸಂಬಳ ಆಫರ್ ಮಾಡಲಾಗುತ್ತಿದೆಯಂತೆ. 1.20 ಲಕ್ಷ ಡಾಲರ್ ಎಂದರೆ ಬಹುತೇಕ ಒಂದು ಕೋಟಿ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




