
ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದರೆ, ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ. ಆರ್ಬಿಐ ಶುಕ್ರವಾರ ಈ ಹೇಳಿಕೆ ನೀಡಿದೆ. 2,000 ರೂ ನೋಟು ಹೊಂದಿರುವವರು ಅದನ್ನು ಮರಳಿಸಲು ಸಮಯಾವಕಾಶ ಕೊಡಲಾಗುತ್ತದೆ. ಆರ್ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು. ಮೇ 23ರಿಂದ ನೋಟು ವಿನಿಮಯಕ್ಕೆ ಅವಕಾಶ ಕೊಡಲಾಗುತ್ತದೆ.
ಇದನ್ನೂ ಓದಿ: RBI: ಆರ್ಬಿಐನಿಂದ ಕೇಂದ್ರಕ್ಕೆ 87,416 ಕೋಟಿ ಡಿವಿಡೆಂಡ್; ರಿಸರ್ವ್ ಬ್ಯಾಂಕ್ಗೆ ಆದಾಯ ಎಲ್ಲಿಂದ? ಇಲ್ಲಿದೆ ಡೀಟೇಲ್ಸ್
2018ರ ಮಾರ್ಚ್ 31ರಲ್ಲಿ 2,000 ರೂ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿ ರೂ ಇತ್ತು. ಎಲ್ಲಾ ಕರೆನ್ಸಿ ನೋಟುಗಳ ಒಟ್ಟು ಮೊತ್ತದ ಶೇ. 37.3 ರಷ್ಟು ನೋಟುಗಳು 2,000 ರೂ ಮುಖಬೆಲೆಯದ್ದಾಗಿದ್ದವು. ಈ ಸಂಖ್ಯೆಯು 2023 ಮಾರ್ಚ್ 31ಕ್ಕೆ ಶೇ. 10.8ಕ್ಕೆ ಬಂದಿಳಿದಿದೆ.
ಅಲ್ಲದೇ ಜನರೂ ಕೂಡ 2,000 ರೂ ನೋಟಿನ ಚಲಾವಣೆಯನ್ನೂ ತೀರಾ ಕಡಿಮೆ ಮಾಡಿದ್ದಾರೆ. 500 ರೂ ಮುಖಬೆಲೆಯ ನೋಟುಗಳಿಗೆ ಹೆಚ್ಚು ಬೇಡಿಕೆ ಇದೆ.
ಇದನ್ನೂ ಓದಿ: Flying Taxis: ಹಾರುವ ಕಾರು, ಡ್ರೋನ್ಗಳ ನಿರ್ಮಾಣಕ್ಕೆ ಮೈಸೂರು, ಬೆಂಗಳೂರಿನ ಟೆಕ್ ಕಂಪನಿಗಳ ಒಪ್ಪಂದ
ಸಾರ್ವಜನಿಕರು ತಮ್ಮ ಬಳಿ 2,000 ರೂ ಮುಖಬೆಲೆಯ ನೋಟುಗಳಿದ್ದರೆ ಅದನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಯಾವುದೇ ಬ್ಯಾಂಕ್ ಬ್ರ್ಯಾಂಚ್ಗೆ ಹೋಗಿ ಹಣ ಡೆಪಾಸಿಟ್ ಮಾಡಲು ಅವಕಾಶ ಇರುತ್ತದೆ. 2016ರ ನೋಟ್ ಬ್ಯಾನ್ ಸಂದರ್ಭದಲ್ಲಿ ಇದ್ದ ನಿಯಮಗಳನ್ನು ಈಗ ಮಾಡಲಾಗುತ್ತಿಲ್ಲ. 2,000 ರೂ ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆ ಕೊಡಬೇಕಿಲ್ಲ. ಈ ನೋಟನ್ನು ಅಮಾನ್ಯ ಮಾಡಲಾಗಿಲ್ಲ. ಚಲಾವಣೆಯಿಂದ ಹಿಂಪಡೆಯಲಾಗಿದೆ ಅಷ್ಟೇ. ಈ ನೋಟುಗಳ ವಿನಿಮಯಕ್ಕೆ ಸರ್ಕಾರ ಕೊಟ್ಟಿರುವ ಕಾಲಾವಕಾಶ ಮುಗಿದ ಬಳಿಕ ಈ ನೋಟು ಅಸಿಂಧುಗೊಳ್ಳಬಹುದಾ ಎಂಬ ಮಾಹಿತಿ ತಿಳಿದಿಲ್ಲ.
Published On - 7:10 pm, Fri, 19 May 23