ಏರುತ್ತಿರುವ ಹಣದುಬ್ಬರ (Inflation) ಮತ್ತು ಹೆಚ್ಚುತ್ತಿರುವ ಗೋಧಿ ಬೆಲೆಗಳ ಮಧ್ಯೆ, ಬಹುದೊಡ್ಡ ಸಂಖ್ಯೆಯ ಭಾರತೀಯರ ಮುಖ್ಯ ಆಹಾರವಾದ ಅಕ್ಕಿಯ ಬೆಲೆ ಏರಿಕೆಗೆ ಸಾಕ್ಷಿಯಾಗಿದೆ. ಅದು ಈಗ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ಐದು ದಿನಗಳಲ್ಲಿ ಶೇಕಡಾ 10ರಷ್ಟು ಏರಿಕೆಯಾಗಿದೆ. ನೆರೆಯ ಬಾಂಗ್ಲಾದೇಶವು ಆಮದು ಸುಂಕ ಮತ್ತು ಅಕ್ಕಿ ಮೇಲಿನ ಸುಂಕವನ್ನು ಶೇ 62.5ರಿಂದ ಶೇ 25ಕ್ಕೆ ಇಳಿಸಿದ ನಂತರ ಭಾರತೀಯ ಅಕ್ಕಿ ಬೆಲೆ ಏರಿಕೆಯಾಗಿದ್ದು, ಇದು ಭಾರತೀಯ ವ್ಯಾಪಾರಿಗಳನ್ನು ದೇಶದೊಂದಿಗೆ ರಫ್ತು ಒಪ್ಪಂದಗಳಿಗೆ ಸಹಿ ಮಾಡಲು ಪ್ರೇರೇಪಿಸುತ್ತದೆ. “ಕಳೆದ ಐದು ದಿನಗಳಲ್ಲಿ ಭಾರತೀಯ ಬಾಸ್ಮತಿಯೇತರ ಅಕ್ಕಿ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಟನ್‌ಗೆ ಯುಎಸ್ಡಿ 350ರಿಂದ ಯುಎಸ್ಡಿ 360ಕ್ಕೆ ಏರಿದೆ. ಬಾಂಗ್ಲಾದೇಶದಿಂದ ಸುದ್ದಿ ಬಂದ ನಂತರ ಈ ಬೆಳವಣಿಗೆ ಆಗಿದೆ,” ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಅವರು ಎಕನಾಮಿಕ್ ಟೈಮ್ಸ್‌ಗೆ ತಿಳಿಸಿರುವುದಾಗಿ ವರದಿ ಆಗಿದೆ.
ಬಾಂಗ್ಲಾದೇಶ ಆಮದು ಸುಂಕ, ಅಕ್ಕಿ ಮೇಲಿನ ಸುಂಕ
ನೆರೆಯ ರಾಷ್ಟ್ರವಾದ ಬಾಂಗ್ಲಾದೇಶವು ಬುಧವಾರ, ಜೂನ್ 22 ರಂದು ಘೋಷಿಸಿರುವಂತೆ, ಅಕ್ಟೋಬರ್ 31ರ ವರೆಗೆ ಬಾಸ್ಮತಿ ಅಲ್ಲದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಅನುಮತಿಸುವ ಅಧಿಸೂಚನೆಯನ್ನು ಹೊರಡಿಸಿತು. ಅಕ್ಕಿ ರಫ್ತು ನಿಷೇಧದ ಭಯದ ನಡುವೆ ಬಾಂಗ್ಲಾದೇಶವು ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿರುವುದು ಇದೇ ಮೊದಲು. ಬಾಂಗ್ಲಾದೇಶವು ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸುತ್ತದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ದೇಶವು ಬಿತ್ತನೆಯ ಅಗತ್ಯ ವಸ್ತುಗಳ ಕೊರತೆಯಿಂದ ತತ್ತರಿಸುತ್ತಿದೆ ಮತ್ತು ಗೋಧಿ ರಫ್ತಿನ ಮೇಲಿನ ಭಾರತದ ನಿಷೇಧವು ಗೋಧಿ ಆಮದು ಕುಸಿತಕ್ಕೆ ಕಾರಣವಾಗಿದೆ. ಅಲ್ಲದೆ, ಪ್ರವಾಹದಿಂದಾಗಿ ದೇಶದಲ್ಲಿ ಭತ್ತದ ಕೃಷಿಗೆ ಹೊಡೆತ ಬಿದ್ದಿದೆ.
ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರದಲ್ಲಿ ಅಕ್ಕಿ ಬೆಲೆ
“ಅಕ್ಕಿಯ ಬೆಲೆಗಳು ಈಗಾಗಲೇ ಶೇಕಡಾ 10ರಷ್ಟು ಹೆಚ್ಚಾಗಿದೆ ಮತ್ತು ಇನ್ನೂ ಏರುತ್ತಿದೆ. ಬಾಂಗ್ಲಾದೇಶವು ಸಾಮಾನ್ಯವಾಗಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರದಿಂದ ಅಕ್ಕಿಯನ್ನು ಖರೀದಿಸುತ್ತದೆ. ಈ ಮೂರು ರಾಜ್ಯಗಳಲ್ಲಿ ಸಾಮಾನ್ಯ ಅಕ್ಕಿಯ ಬೆಲೆಗಳು ಶೇಕಡಾ 20ರಷ್ಟು ಏರಿಕೆಯಾಗಿದೆ. ಈ ಮೂರು ರಾಜ್ಯಗಳಲ್ಲಿನ ಬೆಲೆ ಏರಿಕೆಯು ಇತರ ಪ್ರದೇಶಗಳಲ್ಲಿ ಅಕ್ಕಿಯ ಬೆಲೆಗಳ ಮೇಲೆ ಪರಿಣಾಮ ಬೀರಿದ್ದು, ಅಲ್ಲಿ ಅದು ಶೇಕಡಾ 10 ರಷ್ಟು ಹೆಚ್ಚಾಗಿದೆ,” ಎಂದು ತಿರುಪತಿ ಅಗ್ರಿ ಟ್ರೇಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂರಜ್ ಅಗರ್ವಾಲ್ ವಿವರಿಸಿದ್ದಾರೆ.
ಇನ್ನು ಈ ಮಧ್ಯೆ ಹಣಕಾಸು ವರ್ಷ 2021ರಲ್ಲಿ ಬಾಂಗ್ಲಾದೇಶ 13.59 ಲಕ್ಷ ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿದೆ. ಬಾಂಗ್ಲಾದೇಶದ ದಿ ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಮತ್ತು ಅಂಕಿ- ಅಂಶಗಳ ಇಲಾಖೆ ಪ್ರಕಾರ, ಚೀನಾದ ನಂತರ ವಿಶ್ವದ ಅತಿದೊಡ್ಡ ಅಕ್ಕಿ ಗ್ರಾಹಕ ಭಾರತವು 2021-22ರಲ್ಲಿ 6.11 ಶತಕೋಟಿ ಯುಎಸ್ಡಿ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ. ಈ ಪ್ರಮಾಣವು ಹಣಕಾಸು ವರ್ಷ 2021ರಲ್ಲಿ ಯುಎಸ್ಡಿ 4.8 ಶತಕೋಟಿಗೆ ಇತ್ತು.
ಇದನ್ನೂ ಓದಿ: WPI Based Inflation: ಸಗಟು ದರ ಹಣದುಬ್ಬರ ದರ ಮೇ ತಿಂಗಳಲ್ಲಿ ದಾಖಲೆಯ ಶೇ 15.88ರ ಗರಿಷ್ಠ ಮಟ್ಟಕ್ಕೆ