
ನವದೆಹಲಿ, ಡಿಸೆಂಬರ್ 16: ಭಾರತದ ಕರೆನ್ಸಿಯಾದ ರುಪಾಯಿಯ (Dollar vs Rupee) ಕುಸಿತ ಮುಂದುವರಿಯುತ್ತಲೇ ಇದೆ. ಈ ವರ್ಷ ಶೇ. 6ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದು ಮೌಲ್ಯ ಕಳೆದುಕೊಂಡಿದೆ. ಇಂದು ಮಂಗಳವಾರ ರುಪಾಯಿ ಮೌಲ್ಯ ಮೊದಲ ಬಾರಿಗೆ 91ರ ಗಡಿ ದಾಟಿದೆ. ಫಾರೆಕ್ಸ್ ಟ್ರೇಡಿಂಗ್ನಲ್ಲಿ ಇಂದು ಬೆಳಗ್ಗೆ 90.87ರಲ್ಲಿ ಡಾಲರ್ ಎದುರು ಆರಂಭಗೊಂಡ ರುಪಾಯಿ ಒಂದು ಹಂತದಲ್ಲಿ 91.272ರವರೆಗೂ ಹೋಗಿ ಮುಟ್ಟಿತ್ತು. ಸದ್ಯ ಅದರ ಮೌಲ್ಯ 91.150ರ ಆಸುಪಾಸಿನಲ್ಲಿ ಇದೆ. ಡಾಲರ್ ಎದುರು ರುಪಾಯಿ ಸತತವಾಗಿ ಕುಸಿಯಲು ಏನು ಕಾರಣ?
ಭಾರತದ ಮೇಲೆ ಅಮೆರಿಕ ಶೇ. 50 ಟ್ಯಾರಿಫ್ ಹಾಕಿದಾಗಿನಿಂದ ಡಾಲರ್ ಎದುರು ರುಪಾಯಿ ಮಂಕಾಗುವುದು ತೀವ್ರಗೊಂಡಿದೆ. ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ವಿಫಲವಾಗಿರುವುದು ವಿದೇಶೀ ಹೂಡಿಕೆದಾರರಿಗೆ ನಕಾರಾತ್ಮಕ ಸಂಗತಿ ಎನಿಸಿದೆ.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ತಕ್ಕ ಉತ್ತರ; ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಡಾಲರ್ ಎದುರು ರುಪಾಯಿ ಸೊರಗಲು ಅತಿದೊಡ್ಡ ಕಾರಣ ಎಫ್ಪಿಐಗಳ ಹೊರಹರಿವು. ಈ ವರ್ಷ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆಗಳು ಸತತವಾಗಿ ಭಾರತದಿಂದ ನಿರ್ಗಮಿಸುತ್ತಿವೆ. ಡಿಸೆಂಬರ್ ತಿಂಗಳಲ್ಲೇ 17,955 ಕೋಟಿ ರೂಗಳ ವಿದೇಶೀ ಹೂಡಿಕೆಗಳು ಷೇರು ಮಾರುಕಟ್ಟೆಯಿಂದ ಹೊರಹೋಗಿವೆ. ಈ ವರ್ಷ ಒಟ್ಟಾರೆ ಆದ ಹೊರಹರಿವು 1.6 ಲಕ್ಷ ಕೋಟಿ ರೂ. ಬಹುಶಃ ಯಾವುದೇ ವರ್ಷದಲ್ಲಿ ಇಷ್ಟು ಪ್ರಮಾಣದ ವಿದೇಶೀ ಹೂಡಿಕೆಗಳು ಭಾರತದಿಂದ ನಿರ್ಗಮಿಸಿದ್ದಿಲ್ಲ.
ಈಕ್ವಿಟಿ ಮತ್ತು ಡೆಟ್ ಮಾರುಕಟ್ಟೆಗಳಿಂದ ಆಸ್ತಿಗಳನ್ನು ಮಾರುತ್ತಲೇ ಇರುವ ಎಫ್ಪಿಐಗಳು ದಿನಂಪ್ರತಿ ಡಾಲರ್ಗಳನ್ನು ಹೆಚ್ಚೆಚ್ಚು ಖರೀದಿಸುತ್ತಿವೆ. ಇದರಿಂದ ರುಪಾಯಿ ಎದುರು ಡಾಲರ್ಗೆ ಬಹಳ ಬೇಡಿಕೆ ಇದೆ. ಹೀಗಾಗಿ, ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಕರೆನ್ಸಿ ಮೌಲ್ಯ ಕಡಿಮೆ ಆಗುತ್ತಿದೆ.
ಇದನ್ನೂ ಓದಿ: 2025ರಲ್ಲಿ 44,000 ಹೊಸ ಸ್ಟಾರ್ಟಪ್ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ
ಟ್ಯಾರಿಫ್ಗಳ ನಡುವೆಯೂ ಭಾರತದ ರಫ್ತು ಹೆಚ್ಚಾಗಿದೆ. ಆದಾಗ್ಯೂ ಕೂಡ ವಿದೇಶೀ ಹೂಡಿಕೆಗಳ ಹೊರಹರಿವು ನಿಂತಿಲ್ಲ ಎನ್ನುವುದು ಸೋಜಿಗ. ಕೆಲ ತಜ್ಞರ ಪ್ರಕಾರ, ಸರ್ಕಾರ ಕೂಡ ರಫ್ತಿಗೆ ಉತ್ತೇಜನ ಕೊಡಲೆಂದು ಉದ್ದೇಶಪೂರ್ವಕವಾಗಿಯೇ ರುಪಾಯಿ ಕುಸಿತವನ್ನು ತಡೆಯಲು ಹೋಗಿಲ್ಲ ಎನ್ನುವ ಅಭಿಪ್ರಾಯ ಇದೆ.
ಮುಂದಿನ ದಿನಗಳಲ್ಲಿ ಡಾಲರ್ ಎದುರು ರುಪಾಯಿ 90-90.20 ಶ್ರೇಣಿಯಲ್ಲಿ ಇರಬಹುದು ಎಂಬುದು ತಜ್ಞರ ಲೆಕ್ಕಾಚಾರ. ಇವರ ನಿರೀಕ್ಷೆ ನಿಜವಾದರೆ ರುಪಾಯಿ ಮೌಲ್ಯ ಮತ್ತೆ 91ಕ್ಕಿಂತ ಕೆಳಗೆ ಬರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ