India GDP: ಎಲ್ಲರ ನಿರೀಕ್ಷೆ ಮೀರಿಸುತ್ತಾ ಭಾರತದ ಆರ್ಥಿಕ ಬೆಳವಣಿಗೆ? ಎಕ್ಸಿಸ್ ಬ್ಯಾಂಕ್ ಅಂದಾಜು ಇದು
India's GDP may grow by 7.5pc in 2027fy: ಭಾರತದ ಜಿಡಿಪಿ ಮುಂದಿನ ಹಣಕಾಸು ವರ್ಷದಲ್ಲಿ ಶೇ 7.5ರಷ್ಟು ಹೆಚ್ಚಬಹುದು ಎಂದು ಎಕ್ಸಿಸ್ ಬ್ಯಾಂಕ್ ಔಟ್ಲುಕ್ 2026 ವರದಿಯಲ್ಲಿ ಅಂದಾಜಿಸಲಾಗಿದೆ. ಸರ್ಕಾರ ತಂದಿರುವ ವಿವಿಧ ಸುಧಾರಣೆಗಳು ಸುಲಭ ಬಂಡವಾಳ ಇತ್ಯಾದಿ ಅಂಶಗಳು ಬೆಳವಣಿಗೆಗೆ ಪುಷ್ಟಿ ಕೊಡಬಹುದೆಂದು ನಿರೀಕ್ಷಿಸಲಾಗಿದೆ. ಕ್ರಿಸಿಲ್ ವರದಿ ಪ್ರಕಾರ ಈ ವರ್ಷ ಭಾರತದ ಜಿಡಿಪಿ ಶೇ 7ರಷ್ಟು ಹೆಚ್ಚುವ ನಿರೀಕ್ಷೆ ಇದೆ.

ನವದೆಹಲಿ, ಡಿಸೆಂಬರ್ 16: ಭಾರತದ ಆರ್ಥಿಕ ಬೆಳವಣಿಗೆಯು (GDP) ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಅಮೋಘವಾಗಿದೆ. ಎರಡು ಕ್ವಾರ್ಟರ್ಗಳಲ್ಲಿ ಶೇ. 7.8 ಮತ್ತು ಶೇ. 8.2ರಷ್ಟು ಜಿಡಿಪಿ ಹೆಚ್ಚಿದೆ. ಈ ಇಡೀ ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ (2026-27) ಆರ್ಥಿಕತೆ ಶೇ. 6.50ರಷ್ಟು ಮಾತ್ರ ಹೆಚ್ಚಬಹುದು ಎಂದು ಹಲವು ಏಜೆನ್ಸಿಗಳು ನಿರೀಕ್ಷಿಸಿವೆ. ಆದರೆ, ಎಕ್ಸಿಸ್ ಬ್ಯಾಂಕ್ನ 2026 ಔಟ್ಲುಕ್ ರಿಪೋರ್ಟ್ ಪ್ರಕಾರ 2026-27ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 7.5ರಷ್ಟು ಹಿಗ್ಗಬಹುದು ಎಂದು ಅಂದಾಜು ಮಾಡಲಾಗಿದೆ.
ಸರ್ಕಾರವು ಕಾನೂನು ನಿಯಮಾವಳಿಗಳಲ್ಲಿ ಮತ್ತು ಒಟ್ಟಾರೆ ಸ್ವರೂಪದಲ್ಲಿ ಸುಧಾರಣೆಗಳನ್ನು ತಂದಿದೆ. ಸಾಲದ ದರ ಕಡಿಮೆ ಇದೆ. ಬಂಡವಾಳ ಸುಲಭವಾಗಿ ಸಿಗುತ್ತಿದೆ. ಇವೆಲ್ಲಾ ಅಂಶಗಳು 2026-27ರಲ್ಲಿ ಭಾರತದ ಬೆಳವಣಿಗೆಗೆ ಪುಷ್ಟಿ ಕೊಡಬಹುದು ಎಂದು ಎಕ್ಸಿಸ್ ಬ್ಯಾಂಕ್ನ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಡಾಲರ್ vs ರುಪಾಯಿ; 90 ಆಯ್ತು 91ರ ಮೈಲಿಗಲ್ಲೂ ಮುಟ್ಟಿತು ಭಾರತದ ಕರೆನ್ಸಿ; ಈ ಕುಸಿತ ಮುಂದುವರಿಯಲು ಏನು ಕಾರಣ?
ಹಣದುಬ್ಬರ ಶೇ. 4ಕ್ಕೆ ಮಿತಿಗೊಳ್ಳಬಹುದು
ಹಣದುಬ್ಬರ ಇತ್ತೀಚಿನ ತಿಂಗಳಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ಎರಡು ತಿಂಗಳು ಸತತವಾಗಿ ಹಣದುಬ್ಬರ ಶೇ. 1ಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ. ಎಕ್ಸಿಸ್ ಬ್ಯಾಂಕ್ನ ಆರ್ಥಿಕ ತಜ್ಞರು ಮಾಡಿರುವ ಅಂದಾಜು ಪ್ರಕಾರ 2026-27ರಲ್ಲಿ ಹಣದುಬ್ಬರವು ಶೇ. 4ರ ಆಸುಪಾಸಿನಲ್ಲಿ ಇರಲಿದೆ. ಆಹಾರ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ ಇರುವುದರಿಂದ ಹಣದುಬ್ಬರ ಈಗಿರುವುದಕ್ಕಿಂತ ತುಸು ಹೆಚ್ಚಾಗಬಹುದು ಎಂಬುದು ಈ ವರದಿಯಲ್ಲಿ ಬಂದಿರುವ ಅನಿಸಿಕೆ. ಸರ್ಕಾರವು ನಿಗದಿ ಮಾಡಿಕೊಂಡಿರುವ ಹಣದುಬ್ಬರ ಗುರಿಯೂ ಶೇ. 4 ಆಗಿದೆ.
ಈ ವರ್ಷ ಜಿಡಿಪಿ ಬೆಳವಣಿಗೆ ಶೇ. 7 ಸಾಧ್ಯತೆ: ಕ್ರಿಸಿಲ್
ಈ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆ ಶೇ. 7.0 ದರದಲ್ಲಿ ಹೆಚ್ಚಬಹುದು ಎಂದು ಕ್ರಿಸಿಲ್ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ಅಂದಾಜು ಮಾಡಿದೆ. ಮೊದಲೆರಡು ಕ್ವಾರ್ಟರ್ಗಳಲ್ಲಿ ಸಾಧಿಸಿದ ಅದ್ವಿತೀಯ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡು ಕ್ರಿಸಿಲ್ ಈ ಪ್ರೊಜೆಕ್ಷನ್ ಕೊಟ್ಟಿದೆ.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ತಕ್ಕ ಉತ್ತರ; ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಹಿಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಹೆಚ್ಚಾಗಿತ್ತು. ಈ ವರ್ಷ ಜಿಡಿಪಿ ದರ ಶೇ. 7 ದಾಟಬೇಕಾದರೆ ಕೊನೆಯ ಎರಡು ಕ್ವಾರ್ಟರ್ಗಳಲ್ಲಿ ಶೇ 6ರಷ್ಟಾದರೂ ಆರ್ಥಿಕತೆ ಬೆಳೆಯಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




