ನವದೆಹಲಿ: ಭಾರತೀಯ ಸೇನೆಯು (Indian Army) ಅಗ್ನಿಪಥ (Agnipath Scheme) ಯೋಜನೆ ಅಡಿಯಲ್ಲಿ ನೇಮಕವಾಗುವ ಅಗ್ನಿವೀರರ (Agniveer) ವೇತನ ಖಾತೆಗಳನ್ನು (Salary Account) ತೆರೆಯಲು ಮತ್ತು ಅವರಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಸಲುವಾಗಿ 11 ಬ್ಯಾಂಕ್ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಸೇನೆಯ ಮಾನವಸಂಪನ್ಮೂಲ ಯೋಜನೆ ಮತ್ತು ವ್ಯಕ್ತಿಗತ ಸೇವೆಗಳ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿ. ಶ್ರೀಹರಿ ಹಾಗೂ ಬ್ಯಾಂಕ್ಗಳ ಹಿರಿಯ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಲೆಫ್ಟಿನೆಂಟ್ ಜನರಲ್ ಸಿ. ಬನ್ಸಿ ಪೊನ್ನಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅಗ್ನಿವೀರರ ವೇತನ ಪ್ಯಾಕೇಜ್ ರಕ್ಷಣಾ ಇಲಾಖೆಯ ವೇತನ ಪ್ಯಾಕೇಜ್ಗೆ ಸಮನಾಗಿರಲಿದೆ ಎಂದು ಸಚಿವಾಲಯ ಹೇಳಿದೆ. ಅಗ್ನಿವೀರರಿಗೆ ತಮ್ಮ ಉದ್ಯಮ ಕೌಶಲವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಸಾಲಗಳನ್ನು ನೀಡುವ ಬಗ್ಗೆಯೂ ಬ್ಯಾಂಕ್ಗಳು ಭರವಸೆ ನೀಡಿವೆ.
ಈ ಬ್ಯಾಂಕ್ಗಳಲ್ಲಿ ಅಗ್ನಿವೀರರಿಗೆ ಸಿಗಲಿದೆ ಸೇವೆ:
1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
2. ಪಂಜಾಬ್ ನ್ಯಾಷನಲ್ ಬ್ಯಾಂಕ್
3. ಬ್ಯಾಂಕ್ ಆಫ್ ಬರೋಡಾ
4. ಐಡಿಬಿಐ ಬ್ಯಾಂಕ್
5. ಐಸಿಐಸಿಐ ಬ್ಯಾಂಕ್
6. ಎಚ್ಡಿಎಫ್ಸಿ ಬ್ಯಾಂಕ್
7. ಆ್ಯಕ್ಸಿಸ್ ಬ್ಯಾಂಕ್
8. ಯೆಸ್ ಬ್ಯಾಂಕ್
9. ಕೋಟಕ್ ಮಹೀಂದ್ರಾ ಬ್ಯಾಂಕ್
10. ಐಡಿಎಫ್ಸಿ ಬ್ಯಾಂಕ್
11. ಬಂಧನ್ ಬ್ಯಾಂಕ್
ಇದನ್ನೂ ಓದಿ: SBI Interest Rate on FD: ಎಫ್ಡಿ ಬಡ್ಡಿ ಹೆಚ್ಚಿಸಿದ ಎಸ್ಬಿಐ, ಇಲ್ಲಿದೆ ಪರಿಷ್ಕೃತ ಬಡ್ಡಿ ದರ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜೂನ್ 14ರಂದು ಸೇನೆಯ ಮೂರು ಪಡೆಗಳಿಗೆ (ಭೂಸೇನೆ, ವಾಯುಪಡೆ, ನೌಕಾಪಡೆ) ಅಲ್ಪಾವಧಿ ನೇಮಕಾತಿ ಮಾಡುವ ಅಗ್ನಿಪಥ ಯೋಜನೆಯನ್ನು ಘೋಷಿಸಿತ್ತು. ಸೇನೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಹೇಳಿತ್ತು.
ಅಗ್ನಿಪಥ ಯೋಜನೆಯ ಅಡಿಯಲ್ಲಿ ಅಗ್ನಿವೀರರ ಮೊದಲ ಬ್ಯಾಚ್ 2023ರ ಜನವರಿಯಲ್ಲಿ ತರಬೇತಿಗೆ ಹಾಜರಾಗಲಿದೆ.
ಅಗ್ನಿಪಥ ಯೋಜನೆ ಘೊಷಣೆಯಾದ ಆರಂಭದಲ್ಲಿ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅನೇಕ ಕಡೆಗಳಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಆದರೆ, ಕೇಂದ್ರ ಸರ್ಕಾರ ಮಾತ್ರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದಲ್ಲದೆ, ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ದೃಢ ನಿರ್ಧಾರ ತಳೆದಿತ್ತು. ಯಾವುದೇ ಕಾರಣಕ್ಕೂ ಯೋಜನೆ ಹಿಂಪಡೆಯುವುದಲ್ಲಿ ಎಂದು ತಿಳಿಸಿತ್ತು.
ಅಗ್ನಿಪಥ ಯೋಜನೆ ಅಡಿ ನೇಮಕವಾಗುವ ಅಗ್ನಿವೀರರಿಗೆ ಸೇವೆಯಿಂದ ನಿವೃತ್ತರಾದ ಬಳಿಕ ಸ್ವ-ಉದ್ಯಮಕ್ಕೆ ಪ್ರೋತ್ಸಾಹ, ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡುವ ವೇಳೆ ಆದ್ಯತೆ ನೀಡುವುದಾಗಿಯೂ ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ