
ನವದೆಹಲಿ, ಜೂನ್ 23: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದ ಬಳಿಕ ಜನರಿಗೆ ಮಾತ್ರವಲ್ಲ ಉದ್ದಿಮೆಗಳಿಗೂ ಗೊಂದಲ ಮನೆ ಮಾಡಿದೆ. ಎಐ ಹೇಗೆ ಬಳಸಬೇಕು, ಎಐನ ಆಳ ಅಗಲ ಏನು ಇವೆಲ್ಲವನ್ನೂ ಜಗತ್ತಿನ ಹೆಚ್ಚಿನ ಜನರು ಮೂಕ ಪ್ರೇಕ್ಷಕರಂತೆ ನೋಡುವಂತಾಗಿದೆ. ಕೆಲವೇ ವರ್ಷಗಳ ಹಿಂದೆ ಭಾರತದ ಕಾರ್ಪೊರೇಟ್ ದಿಗ್ಗಜರೊಂದಿಗೆ ಮಾತನಾಡುತ್ತಿದ್ದಾಗ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ (Sam Altman) ಅವರು, ಭಾರತವು ಸ್ವಂತವಾಗಿ ಎಐ ಮಾಡಲ್ ನಿರ್ಮಿಸುವುದು ಸಾಧ್ಯವಿಲ್ಲ ಎಂಬರ್ಥದಲ್ಲಿ ಹೇಳಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು. ಚೀನಾ ದೇಶದ ಒಂದು ಪುಟ್ಟ ಕಂಪನಿಯು ಬಹಳ ಕಡಿಮೆ ಬಜೆಟ್ನಲ್ಲಿ ಚ್ಯಾಟ್ಜಿಪಿಟಿಗೆ ಸಮನಾದ ಶಕ್ತಿಯ ಡೀಪ್ಸೀಕ್ ಮಾಡಲ್ ಅನ್ನು ಬಿಡುಗಡೆ ಮಾಡಿತು. ಭಾರತವೂ ಕೂಡ ಸ್ವಂತ ಎಐ ಮಾಡಲ್ಗಳ ಅಭಿವೃದ್ಧಿಗೆ ಹೆಜ್ಜೆಗಳನ್ನು ಇಟ್ಟಿತು. ಹೊಸ ನೀರು ಹರಿಯುತ್ತಿದೆ. ಈ ಸಂದರ್ಭದಲ್ಲಿ ಸ್ಯಾಮ್ ಆಲ್ಟ್‌ಮನ್ ಅವರು ಭಾರತದ ಪೋಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಕಳೆದ ವಾರ ನಡೆದ ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ‘ಎಕ್ಸ್‌ಪ್ರೆಸ್ ಅಡ್ಡಾ’ (Express Adda) ಕಾರ್ಯಕ್ರಮದಲ್ಲಿ ಗ್ರೂಪ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಂತ್ ಗೋಯೆಂಕಾ ಜೊತೆಗಿನ ಸಂವಾದದಲ್ಲಿ ಓಪನ್‌ಎಐ (OpenAI) ಸಿಇಒ ಭಾಗವಹಿಸಿ ಮಾತನಾಡಿದ್ದಾರೆ. ಈ ವೇಳೆ, ಚಾಟ್‌ಜಿಪಿಟಿ, ಎಐ ಸುರಕ್ಷತೆ, ಉದ್ಯೋಗಗಳ ಮೇಲಿನ ಪ್ರಭಾವ ಮತ್ತು ಕೃತಕ ಬುದ್ಧಿಮತ್ತೆಯ (AI) ಭವಿಷ್ಯದ ಕುರಿತು ವಿಚಾರ ಮಂಡಿಸಿದ್ದಾರೆ. ಭಾರತದಿಂದ ಜನರೇಟಿವ್ ಎಐ ಮಾಡಲ್ ನಿರ್ಮಿಸಲು ಸಾಧ್ಯವಿಲ್ಲ ಎಂದು ತಾವು ಅಂದು ಹೇಳಿದ್ದ ಮಾತುಗಳನ್ನು ಅವರು ನುಂಗಿಕೊಂಡಿದ್ದಾರೆ.
“ಭಾರತದಲ್ಲಿ ಎಐ ಅಳವಡಿಕೆ ಮತ್ತು ತಂತ್ರಜ್ಞಾನ ಬಿಲ್ಡರ್‌ಗಳ ಎನರ್ಜಿ ಅದ್ಭುತವಾಗಿದೆ. ಭಾರತವು ಜಾಗತಿಕವಾಗಿ ಎಐ ತಂತ್ರಜ್ಞಾನದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಲಿದ್ದು, ಭವಿಷ್ಯದಲ್ಲಿ ದೊಡ್ಡ ಪ್ರಭಾವ ಬೀರಲಿದೆ” ಎಂದು ಆಲ್ಟ್‌ಮನ್ ಹೇಳಿದ್ದಾರೆ.
ಎಐ ಅಳವಡಿಕೆ ವಿಚಾರದಲ್ಲಿ ಕಂಪನಿಗಳು ಮಾಡುತ್ತಿರುವ ತಪ್ಪೇನಿರಬಹುದು ಎನ್ನುವ ಪ್ರಶ್ನೆಗೆ ಸ್ಯಾಮ್ ಆಲ್ಟ್‌ಮನ್ ಉತ್ತರಿಸಿದ್ದಾರೆ. ಅವರ ಪ್ರಕಾರ, ಕಂಪನಿಗಳು ಎಐ ಅಳವಡಿಕೆಯಲ್ಲಿ ಬಹಳ ಚುರುಕಾಗಿರಬೇಕು. ಇಲ್ಲದಿದ್ದರೆ ರೈಲ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡಾಗಬಹುದು. ‘ನಿನ್ನೆ ಒಂದು ಕಂಪನಿಯನ್ನು ಭೇಟಿ ಮಾಡಿದ್ದೆ. 2026ರಲ್ಲಿ ಎಐ ಕಲಿತು, 2028ರಲ್ಲಿ ಅದನ್ನು ಜಾರಿಗೊಳಿಸಲು ಯೋಜಿಸುತ್ತಿದೆ. ಕಂಪನಿಗಳು ಎಐ ಅನ್ನು ಜಾರಿಗೊಳಿಸಬೇಕಾದ ವೇಗ ಇದಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಒರಾಕಲ್ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ
“ನೀವು ಚಾಟ್‌ಜಿಪಿಟಿಗೆ ಎಂದಿಗೂ ಕೇಳದ ಒಂದು ಪ್ರಶ್ನೆ ಯಾವುದು?” ಎಂದು ಪಾಡ್ಕ್ಯಾಸ್ಟ್ನಲ್ಲಿ ಸ್ಯಾಮ್ರನ್ನು ಕೇಳಲಾಯಿತು. ಅದಕ್ಕೆ ಅವರು ಕೊಟ್ಟ ಉತ್ತರ ಇಂಟರೆಸ್ಟಿಂಗ್ ಆಗಿದೆ. “ನಾನು ‘ಖುಷಿಯಾಗಿರುವುದು ಹೇಗೆ?’ (How to be happy) ಎಂದು ಯಾವತ್ತೂ ಕೇಳುವುದಿಲ್ಲ. ಥೆರಪಿ ಅಥವಾ ಸಲಹೆಗಳಿಗೆ ಎಐ ಓಕೆ, ಆದರೆ ಜೀವನದ ತತ್ವಶಾಸ್ತ್ರಕ್ಕೆ (Life Philosophy) ಅಲ್ಲ” ಎಂದಿದ್ದಾರೆ.
ಈ ಪಾಡ್ಕ್ಯಾಸ್ಟ್ನಲ್ಲಿ ಸ್ಯಾಮ್ ಆಲ್ಟ್‌ಮನ್ ಮತ್ತೊಂದು ಕುತೂಹಲಕಾರಿ ರಹಸ್ಯ ಬಿಚ್ಚಿಟ್ಟಿದ್ದಾರೆ. ಓಪನ್‌ಎಐ ಕಂಪನಿಯಲ್ಲಿ ಅವರಿಗೆ ಯಾವುದೇ ಇಕ್ವಿಟಿ (ಷೇರು/ಲಾಭದ ಪಾಲು) ಇಲ್ಲವಂತೆ. ಇದು ತಾವು ತೆಗೆದುಕೊಂಡ “ಅತ್ಯಂತ ಮೂರ್ಖತನದ ನಿರ್ಧಾರ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಆರಂಭದಲ್ಲಿ ಇದೊಂದು ಲಾಭರಹಿತ (Non-profit) ಸಂಸ್ಥೆಯಾಗಿದ್ದರಿಂದ ಬೋರ್ಡ್ ಸದಸ್ಯರಾಗಬೇಕೆಂದರೆ ಈಕ್ವಿಟಿ ಒಡೆತನ ಇರಬಾರದು ಈ ನಿಯಮವಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. ಓಪನ್‌ಎಐ ಇದೀಗ ಐಪಿಒ ಆರಂಭಿಸುತ್ತಿದ್ದು, ಸ್ಯಾಮ್ ಆಲ್ಟ್‌ಮನ್ ಅವರಿಗೆ ಷೇರುಪಾಲು ಇದ್ದಿದ್ದರೆ ಅವರ ನೆಟ್ವರ್ತ್ ಸಿಕ್ಕಾಪಟ್ಟೆ ಹೆಚ್ಚಿರುತ್ತಿತ್ತು.
ಎಐ ತಂತ್ರಜ್ಞಾನದಿಂದಾಗಿ ಸದ್ಯ ಚಾಲ್ತಿಯಲ್ಲಿರುವ ಹಲವು ಉದ್ಯೋಗಗಳು ಅಥವಾ ವೃತ್ತಿಗಳು ಖಂಡಿತವಾಗಿಯೂ ಕೊನೆಗೊಳ್ಳಲಿವೆ. ಆದರೆ, ಮಾನವ ಇತಿಹಾಸದಲ್ಲಿ ಪ್ರತಿ ತಂತ್ರಜ್ಞಾನ ಕ್ರಾಂತಿಯಲ್ಲೂ ಆದಂತೆ, ಈ ಬಾರಿಯೂ ಇದಕ್ಕಿಂತಲೂ ಉತ್ತಮವಾದ ಮತ್ತು ಹೊಸ ಮಾದರಿಯ ಹಲವಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಭರವಸೆಯನ್ನು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ನೀಡಿದ್ದಾರೆ.
ಜಗತ್ತಿನ ಯಾವುದೇ ಒಂದು ದೇಶ ಅಥವಾ ಸಂಸ್ಥೆಯ ಕೈಯಲ್ಲಿ ಇಡೀ ಎಐ ನಿಯಂತ್ರಣ ಇರಬಾರದು. ಜಾಗತಿಕ ಶಕ್ತಿಯ ಸಮತೋಲನ ಮುಖ್ಯವಾಗಿದೆ. ಎಐ ತಂತ್ರಜ್ಞಾನವನ್ನು ಎಲ್ಲರ ಕೈಗೂ ತಲುಪಿಸುವ (Democratization) ಜೊತೆಗೆ ಅದಕ್ಕೊಂದು ಸುರಕ್ಷತಾ ಚೌಕಟ್ಟು (Guardrails) ಇರಬೇಕು. ಇದಕ್ಕಾಗಿ ತಂತ್ರಜ್ಞಾನ ಕಂಪನಿಗಳು ಜಾಗತಿಕ ಸರ್ಕಾರಗಳೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಸ್ಯಾಮ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೂಲದ ಸ್ಟಾರ್ಟಪ್ನಲ್ಲಿ ಮೆಟಾ ಭಾರೀ ಹೂಡಿಕೆ; ವಾಟ್ಸಪ್ಗೆ ಕುನಾಲ್ ಶಾ ಹೊಸ ಬಾಸ್
“ಕೇವಲ ಒಂದೆರಡು ವರ್ಷಗಳ ಹಿಂದೆ ಎಐಗೆ ಪ್ರಾಥಮಿಕ ಶಾಲೆಯ ಗಣಿತ ಮಾಡಲು ಆಗುತ್ತಿರಲಿಲ್ಲ. ಕಳೆದ ವರ್ಷ ಹೈಸ್ಕೂಲ್ ಗಣಿತ ಮಾಡುತ್ತಿತ್ತು. ಆದರೆ ಕಳೆದ ವಾರವಷ್ಟೇ ನಮ್ಮ ಸಂಶೋಧಕರು ಬಿಡುಗಡೆ ಮಾಡಿದ ಅತ್ಯಾಧುನಿಕ ಎಐ ಮಾಡೆಲ್, ಸಂಕೀರ್ಣವಾದ ಜ್ಯಾಮಿತಿ ಮತ್ತು ಭೌತಶಾಸ್ತ್ರದ ಪ್ರಮೇಯಗಳನ್ನು ಬಿಡಿಸಿದೆ. ಇದು ಕೇವಲ ಒಂದು ವರ್ಷದಲ್ಲಿ ಆದ ಭಾರಿ ಬದಲಾವಣೆ” ಎಂದಿದ್ದಾರೆ.
ಇಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್‌ಮನ್ ಮಧ್ಯೆ ವೈಯಕ್ತಿಕವಾಗಿ ಬಹಳ ವೈರತ್ವ ಮೇಲ್ನೋಟಕ್ಕೆ ಕಾಣುತ್ತದೆ. ಇಬ್ಬರೂ ಕೂಡ ಬಹಿರಂಗವಾಗಿ ಪರಸ್ಪರ ಟೀಕೆ ಟಿಪ್ಪಣಿಗಳನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಇಲಾನ್ ಮಸ್ಕ್ ಅವರ ಬಗ್ಗೆ ಒಂದು ಒಳ್ಳೆಯ ವಿಷಯ ಹೇಳಲು ಕೇಳಿದಾಗ, “ಅವರು ಫಿಸಿಕಲ್ ಎಂಜಿನಿಯರಿಂಗ್ (ರೊಬೊಟಿಕ್ಸ್/ರಾಕೆಟ್ ಇತ್ಯಾದಿ) ಮತ್ತು ಜನರಿಂದ ಕೆಲಸ ತೆಗೆಸುವಲ್ಲಿ ಅತ್ಯಂತ ನಿಪುಣರು” ಎಂದು ಸ್ಯಾಮ್ ಉತ್ತರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ