ಬೆಂಗಳೂರು ಮೂಲದ ಸ್ಟಾರ್ಟಪ್ನಲ್ಲಿ ಮೆಟಾ ಭಾರೀ ಹೂಡಿಕೆ; ವಾಟ್ಸಪ್ಗೆ ಕುನಾಲ್ ಶಾ ಹೊಸ ಬಾಸ್
Kunal Shah to be WhatsApp global CEO: ಮೆಟಾ ಸಂಸ್ಥೆ ಬೆಂಗಳೂರು ಮೂಲದ ತಂತ್ರಜ್ಞಾನ ಕಂಪನಿ ಕ್ರೆಡ್ನಲ್ಲಿ 900 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ಡೀಲ್ನಲ್ಲಿ ಮೆಟಾ ಕ್ರೆಡ್ನಲ್ಲಿ ಶೇ. 20ರಷ್ಟು ಪಾಲು ಖರೀದಿಸುತ್ತದೆ. ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಅವರು ವಾಟ್ಸಾಪ್‌ನ ಹೊಸ ಸಿಇಒ ಆಗಲಿದ್ದಾರೆ. ವಾಟ್ಸಾಪ್ ಅನ್ನು ಇನ್ನೂ ಎತ್ತರಕ್ಕೆ ಬೆಳೆಸುವ ಅವಕಾಶ ಇದೆ ಎಂದು ಕುನಾಲ್ ಶಾ ಹೇಳಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರು, ಜೂನ್ 22: ಜಾಗತಿಕ ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಮೆಟಾ (Meta), ಭಾರತದ ಜನಪ್ರಿಯ ಫಿನ್‌ಟೆಕ್ ಸ್ಟಾರ್ಟ್‌ಅಪ್ ‘ಕ್ರೆಡ್’ (CRED) ಮೇಲೆ ಭಾರಿ ಹೂಡಿಕೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಕಾರ್ಯತಂತ್ರದ ಭಾಗವಾಗಿ ಕ್ರೆಡ್ ಸಂಸ್ಥೆಯ ಸ್ಥಾಪಕರಾದ ಕುನಾಲ್ ಶಾ (Kunal Shah) ಅವರು ಇನ್ನು ಮುಂದೆ ವಾಟ್ಸಾಪ್ (WhatsApp) ಪ್ಲಾಟ್‌ಫಾರ್ಮ್‌ನ ನೇತೃತ್ವವನ್ನು ವಹಿಸಲಿದ್ದಾರೆ.
ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳನ್ನು ನಿರ್ವಹಿಸುವ ಮೆಟಾ ಸಂಸ್ಥೆಯು ಬೆಂಗಳೂರು ಮೂಲದ ಕ್ರೆಡ್ (CRED) ಕಂಪನಿಯಲ್ಲಿ 900 ಮಿಲಿಯನ್ ಡಾಲರ್ (ಸುಮಾರು ₹8,500 ಕೋಟಿಗೂ ಹೆಚ್ಚು) ಬೃಹತ್ ಮೊತ್ತವನ್ನು ಹೂಡಿಕೆ ಮಾಡಿದೆ. ಇದೇ ಡೀಲ್ನಲ್ಲಿ ನಡೆದ ಮಾತುಕತೆ ಪ್ರಕಾರ, ಕ್ರೆಡ್ ಸಂಸ್ಥಾಪಕ ಹಾಗೂ ನೂರಾರು ಸ್ಟಾರ್ಟಪ್ಗಳಿಗೆ ಬಂಡವಾಳ ನೀಡಿ ಏಂಜೆಲ್ ಇನ್ವೆಸ್ಟರ್ ಎನಿಸಿರುವ ಕುನಾಲ್ ಶಾ ಅವರು ವಾಟ್ಸಪ್ನ ಗ್ಲೋಬಲ್ ಸಿಇಒ ಆಗಿ ಜವಾಬ್ದಾರಿ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ವಾಟ್ಸಾಪ್ ಅನ್ನು ಕೇವಲ ಚಾಟಿಂಗ್ ಆಪ್ ಆಗಿ ಉಳಿಸದೆ, ಅದನ್ನು ಪಾವತಿ (Payments) ಮತ್ತು ವಾಣಿಜ್ಯ (Commerce) ರಂಗದ ದೈತ್ಯ ಶಕ್ತಿಯನ್ನಾಗಿ ಪರಿವರ್ತಿಸುವ ಜವಾಬ್ದಾರಿ ಇವರ ಮೇಲಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸುವುದು ತಿಳಿಯಿರಿ; ಖರ್ಚು ಹೆಚ್ಚದಂತೆ ರಿವಾರ್ಡ್ಸ್ ಪಡೆಯುವ ಸ್ಮಾರ್ಟ್ ಪ್ಲಾನ್ ತಿಳಿದಿರಿ
ಮೆಟಾ ಸಂಸ್ಥೆಯು ಭಾರತದಲ್ಲಿ ತನ್ನ ‘ವಾಟ್ಸಾಪ್ ಬಿಸಿನೆಸ್’ (WhatsApp Business) ಮತ್ತು ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿದೆ. ಭಾರತದ ಪ್ರೀಮಿಯಂ ಗ್ರಾಹಕರ ನೆಟ್‌ವರ್ಕ್ ಹೊಂದಿರುವ ಕ್ರೆಡ್‌ನ ಅನುಭವ ಮತ್ತು ಕುನಾಲ್ ಶಾ ಅವರ ಉದ್ಯಮಶೀಲತೆಯ ಚಾಕಚಕ್ಯತೆಯನ್ನು ಬಳಸಿಕೊಂಡು ಭಾರತೀಯ ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವುದು ಮೆಟಾದ ಪ್ರಮುಖ ಗುರಿಯಾಗಿದೆ.
ಭಾರತೀಯ ಮಾರುಕಟ್ಟೆಯ ಮೇಲಾಗುವ ಪ್ರಭಾವ
ಗೂಗಲ್ ಪೇ ಮತ್ತು ಫೋನ್ ಪೇಗೆ ಹೋಲಿಸಿದರೆ ವಾಟ್ಸಾಪ್ ಪೇ ಭಾರತದಲ್ಲಿ ಅಷ್ಟಾಗಿ ಯಶಸ್ಸು ಕಂಡಿರಲಿಲ್ಲ. ಆದರೆ ಈಗ ಕ್ರೆಡ್‌ನ ತಂತ್ರಜ್ಞಾನ ಮತ್ತು ಕುನಾಲ್ ಶಾ ಅವರ ನಾಯಕತ್ವದಿಂದಾಗಿ ವಾಟ್ಸಾಪ್ ಪೇ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಯಿದೆ.
ಕುನಾಲ್ ಶಾ ಅವರ ಟ್ವೀಟ್
It’s been a minute.
2015–2018 – Exited FreeCharge. Spent time learning and investing. – Pondered about: Why can’t trust be rewarded? Started with $1M of personal capital. – Launched CRED to reward people for paying credit card bills on time.
2019–2025 – Built a system run by a…
— Kunal Shah (@kunalb11) June 22, 2026
ಮೆಟಾ ಮತ್ತು ಕ್ರೆಡ್ ಮೈತ್ರಿಯು ಭಾರತದ ಇತರೆ ಫಿನ್‌ಟೆಕ್ ದೈತ್ಯರಾದ ಪೇಟಿಎಂ, ಫೋನ್ ಪೇ ಮತ್ತು ಗೂಗಲ್ ಪೇ ಸಂಸ್ಥೆಗಳಿಗೆ ಅತ್ಯಂತ ಕಠಿಣ ಪೈಪೋಟಿ ನೀಡಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಅಲ್ಪ ಹೂಡಿಕೆ; ಮೆಚ್ಯೂರಿಟಿಗೆ 35 ಲಕ್ಷ ರೂವರೆಗೆ ಗಳಿಕೆ; ಇದು ಪೋಸ್ಟ್ ಆಫೀಸ್ ಆರ್ಪಿಎಲ್ಐ ಯೋಜನೆಯ ಕೊಡುಗೆ
ಭಾರತದಲ್ಲಿ ಡಿಜಿಟಲ್ ಕ್ರಾಂತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮೆಟಾ ಈ ಮಾಸ್ಟರ್ ಪ್ಲಾನ್ ಮಾಡಿದ್ದು, ಕುನಾಲ್ ಶಾ ಅವರ ಹೆಗಲಿಗೆ ವಾಟ್ಸಾಪ್‌ನ ದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ. ಈ ಹಿಂದೆ ಫ್ರೀಚಾರ್ಜ್ ಎನ್ನುವ ಸ್ಟಾರ್ಟಪ್ ತೆರೆದು, ನಂತರ ಅದನ್ನು ಮಾರಿದ್ದ ಕುನಾಲ್ ಶಾ ಅವರು 2019ರಲ್ಲಿ ಕ್ರೆಡ್ ಕಂಪನಿ ಸ್ಥಾಪಿಸಿದ್ದರು. ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಕಟ್ಟುವ ಪ್ಲಾಟ್ಫಾರ್ಮ್ ಆಗಿದ್ದ ಕ್ರೆಡ್ ನಂತರ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿ ರೂಪುಗೊಂಡಿತು. ಈಗ ಮೆಟಾ ಶಕ್ತಿಯಲ್ಲಿ ಕ್ರೆಡ್, ಹಾಗೂ ಕ್ರೆಡ್ ಶಕ್ತಿಯಲ್ಲಿ ವಾಟ್ಸಪ್ ಇನ್ನೂ ಹೆಚ್ಚು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ.
ಕುನಾಲ್ ಶಾ ಪ್ರಕಾರ ವಾಟ್ಸಪ್ ಸಾಕಷ್ಟು ಬೆಳವಣಿಗೆ ಹೊಂದಿದೆ. ಆದರೆ, ಅದರ ಬೆಳವಣಿಗೆಯ ದಾರಿ ಇನ್ನೂ ಬಹಳ ದೂರ ಇದೆ ಎಂಬರ್ಥದಲ್ಲಿ ಅವರು ಹೇಳಿದ್ದಾರೆ. ಅವರ ನಾಯಕತ್ವದಲ್ಲಿ ವಾಟ್ಸಪ್ ಹೊಸ ಸ್ವರೂಪ ಪಡೆಯಬಹುದಾ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Mon, 22 June 26




