ನವದೆಹಲಿ: 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (FDs) ಬಡ್ಡಿ ದರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 20 ಮೂಲಾಂಶಗಳ ವರೆಗೆ ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿ ದರ ಇಂದಿನಿಂದಲೇ (ಅಕ್ಟೋಬರ್ 15) ಜಾರಿಗೆ ಬರಲಿದೆ. ಎಲ್ಲ ಅವಧಿಯ ಸ್ಥಿರ ಠೇವಣಿಗಳ ಬಡ್ಡಿ ದರವನ್ನೂ ಹೆಚ್ಚಿಸಲಾಗಿದೆ. ಇದಲ್ಲದೆ, ಹಿರಿಯ ನಾಗರಿಕರು ಹೆಚ್ಚಿನದ ಬಡ್ಡಿ ಪಡೆಯಲಿದ್ದಾರೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ ಪೈಕಿ 7ರಿಂದ 45 ದಿನಗಳ ಅವಧಿಯ ಠೇವಣಿಯ ಬಡ್ಡಿ ದರವನ್ನು ಶೇಕಡಾ 3ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಶೇಕಡಾ 3.5ರ ಬಡ್ಡಿ ದರ ನಿಗದಿಪಡಿಸಲಾಗಿದೆ.
46ರಿಂದ 179 ದಿನಗಳ ಅವಧಿಯ ಸ್ಥಿರ ಠೇವಣಿಗೆ ಪರಿಷ್ಕೃತ ದರದ ಪ್ರಕಾರ ಶೇಕಡಾ 4ರ ಬಡ್ಡಿ ದೊರೆಯಲಿದೆ. ಹಿರಿಯ ನಾಗರಿಕರಿಗೆ ಇದು ಶೇಕಡಾ 4.5 ಆಗಿರಲಿದೆ. 180 ಮತ್ತು 210 ದಿನಗಳ ನಡುವಣ ಅವಧಿಯಲ್ಲಿ ಮೆಚೂರ್ ಆಗುವ ಸ್ಥಿರ ಠೇವಣಿಯ ಬಡ್ಡಿ ದರವನ್ನು ಕ್ರಮವಾಗಿ ಶೇಕಡಾ 4.65 ಹಾಗೂ ಶೇಕಡಾ 5.15ರಷ್ಟು ಹೆಚ್ಚಿಸಲಾಗಿದೆ.
ಮೂರು ವರ್ಷ ಮೇಲ್ಪಟ್ಟ ಹಾಗೂ ಐದು ವರ್ಷಕ್ಕಿಂತ ಮೊದಲು ಅವಧಿ ಪೂರೈಸುವ ಸ್ಥಿರ ಠೇವಣಿ ಬಡ್ಡಿ ದರವನ್ನು ಶೇಕಡಾ 5.60ಯಿಂದ 5.80ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರಿಗೆ ಇದನ್ನು ಶೇಕಡಾ 6.10ರಿಂದ 6.30ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: HDFC Bank Net Profit: ಎಚ್ಡಿಎಫ್ಸಿ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರಿ ಜಿಗಿತ
ಐದು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯ ಸಾಲಗಳ ಬಡ್ಡಿ ದರವನ್ನೂ ಶೇಕಡಾ 5.65ರಿಂದ 5.85ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಬಡ್ಡಿ ದರವನ್ನು ಶೇಕಡಾ 6.45ರಿಂದ 6.65ಕ್ಕೆ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರೆಪೊ ದರ ಹೆಚ್ಚಿಸಿದಾಗಲೆಲ್ಲ ಸಾಮಾನ್ಯವಾಗಿ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಬಡ್ಡಿ ದರ ಪರಿಷ್ಕರಿಸುತ್ತವೆ. ಅದೇ ರೀತಿ ಎಸ್ಬಿಐ ಕೂಡ ಸ್ಥಿರ ಠೇವಣಿ ಮತ್ತು ಸಾಲದ ಬಡ್ಡಿ ದರ ಪರಿಷ್ಕರಣೆ ಮಾಡಿದೆ. ಸೆಪ್ಟೆಂಬರ್ 30ರಂದು ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ಆರ್ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿತ್ತು. ಇದರೊಂದಿಗೆ ಪರಿಷ್ಕೃತ ರೆಪೊ ದರ ಶೇಕಡಾ 5.9 ಆಗಿತ್ತು. ಇದಕ್ಕೂ ಮುನ್ನ ಸತತ 3 ಬಾರಿ ಆರ್ಬಿಐ ರೆಪೊ ದರ ಹೆಚ್ಚಳ ಮಾಡಿತ್ತು. ಆವಾಗಲೂ ಪ್ರಮುಖ ಬ್ಯಾಂಕ್ಗಳು ಬಡ್ಡಿ ದರವನ್ನು ಹೆಚ್ಚಿಸಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ