
ನವದೆಹಲಿ, ಅಕ್ಟೋಬರ್ 23: ಬ್ಯಾಂಕ್ನ ಕಸ್ಟಮರ್ ಕೇರ್ ನಂಬರ್ ಪಡೆಯಲು ನೀವು ಆನ್‌ಲೈನ್‌ನಲ್ಲಿ ಸರ್ಚ್ ಮಾಡುತ್ತಿರುವಿರಾದರೆ ಜಾಗ್ರತೆ..! ಆನ್ಲೈನ್ ಈಗ ಸೈಬರ್ ಅಪರಾಧಿಗಳ ದೊಡ್ಡ ಅಡ್ಡೆಯಾಗಿದೆ. ಬಹಳ ಸುಲಭವಾಗಿ ನಕಲಿ ಹೆಲ್ಪ್ಲೈನ್ ಲಿಸ್ಟಿಂಗ್ ಮಾಡಿ ಬ್ಯಾಂಕ್ ಗ್ರಾಹಕರನ್ನು ಯಾಮಾರಿಸುವ ಕೆಲಸ ಮಾಡುತ್ತಾರೆ. ಇಂಥ ಪ್ರಕರಣಗಳು ಅಲ್ಲಲ್ಲಿ ಜರುಗುತ್ತಲೇ ಇದೆ. ಭಾರತದ ನಂಬರ್ ಒನ್ ಸರ್ಕಾರಿ ಬ್ಯಾಂಕ್ ಆದ ಎಸ್ಬಿಐ ಈ ಸಂಬಂಧ ಅಡ್ವೈಸರಿಯೊಂದನ್ನು ಬಿಡುಗಡೆ ಮಾಡಿದೆ.
ಆರನೇ ಆವೃತ್ತಿಯ ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ವಿಶೇಷ ಅಭಿಯಾನದ ಭಾಗವಾಗಿ ಎಸ್ಬಿಐ ಬಿಡುಗಡೆ ಮಾಡಿರುವ ಅಡ್ವೈಸರಿಯಲ್ಲಿ, ಕಸ್ಟಮರ್ ಸಪೋರ್ಟ್ ನಂಬರ್ ವಿಚಾರದಲ್ಲಿ ಗ್ರಾಹಕರು ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ವಿವರಿಸಲಾಗಿದೆ.
ಗ್ರಾಹಕರು ಕಸ್ಟಮರ್ ಕೇರ್ ನಂಬರ್ನಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಎಸ್ಬಿಐನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ಥರ್ಡ್ ಪಾರ್ಟಿ ಪೇಜ್ಗಳಿಂದ ಮಾಹಿತಿ ಪಡೆಯಲು ಹೋಗಬೇಡಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಕ್ಸ್ ಪೋಸ್ಟ್ವೊಂದರಲ್ಲಿ ತಿಳಿಸಿದೆ.
ಇದನ್ನೂ ಓದಿ: ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇರಲೇಬೇಕು: ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಸರ್ಕಾರದ ಹೊಸ ರೂಲ್ಸ್
ಸೈಬರ್ ಅಪರಾಧಿಗಳು ಒಂದು ಬ್ಯಾಂಕ್ನ ನಕಲಿ ನಂಬರ್ಗಳನ್ನು ಆನ್‌ಲೈನ್‌ನಲ್ಲಿ ಸಿಗುವ ರೀತಿಯಲ್ಲಿ ಲಿಸ್ಟಿಂಗ್ ಮಾಡುತ್ತಾರೆ. ಬ್ಯಾಂಕೆಂದೇ ಅಲ್ಲ, ಯಾವುದೇ ಪ್ರಮುಖ ಸಂಸ್ಥೆಗಳ ನಕಲಿ ನಂಬರ್ ಸೃಷ್ಟಿಸಿ ಆನ್‌ಲೈನ್‌ನಲ್ಲಿ ಸಿಗುವ ರೀತಿಯಲ್ಲಿ ಲಿಸ್ಟ್ ಮಾಡಬಹುದು.
ಬ್ಯಾಂಕ್ನ ಗ್ರಾಹಕರು ಕಸ್ಟಮರ್ ಕೇರ್ ನಂಬರ್ ಪಡೆಯಲು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದಾಗ, ಈ ನಕಲಿ ನಂಬರ್ಗಳು ಪಟ್ಟಿಯಲ್ಲಿ ಕಾಣಬಹುದು. ಲಿಸ್ಟಿಂಗ್ನಲ್ಲಿ ಅಸಲಿ ಬ್ಯಾಂಕ್ನ ನಂಬರೇ ಎಂದು ಅನಿಸುವಷ್ಟು ಸಾಮ್ಯತೆ ಇರುತ್ತದೆ.
ಎಸ್ಬಿಐನ ಎಕ್ಸ್ ಪೋಸ್ಟ್
ಈ ನಕಲಿ ನಂಬರ್ ಅನ್ನು ಗ್ರಾಹಕ ಕರೆ ಮಾಡಿದಾಗ, ಅಲ್ಲಿಂದ ಬಹಳ ವೃತ್ತಿಪರವಾಗಿ ಮಾತನಾಡಿ ವಿಶ್ವಾಸ ಕುದುರಿಸಬಹುದು. ನಂತರ, ಬ್ಯಾಂಕ್ ಅಕೌಂಟ್ ವಿವರ, ಆ್ಯಪ್ ಡೌನ್ಲೋಡ್, ಲಾಗಿನ್, ಒಟಿಪಿ, ಪೇಮೆಂಟ್ ಇತ್ಯಾದಿ ಆಟಗಳನ್ನು ಶುರುವಿಟ್ಟುಕೊಳ್ಳಬಹುದು. ಅವರು ಹೇಳಿದಂತೆ ಕೇಳಿದರೆ ನಿಮ್ಮ ಹಣವೆಲ್ಲವೂ ದುರುಳರ ಪಾಲಾಗಬಹುದು.
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು
ಒಂದು ವೇಳೆ ನಿಮಗೆ ವಂಚನೆ ನಡೆಯುತ್ತಿದೆ, ಅಥವಾ ನಡೆದಿದೆ ಎಂದೆನಿಸಿದರೆ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ (cybercrime.gov.in) ದೂರು ನೀಡಿ. ಅಥವಾ 1930 ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Fri, 23 October 26