ನವದೆಹಲಿ, ಫೆಬ್ರುವರಿ 21: ಸೋನಿ ಮತ್ತು ಝೀ ಸಂಸ್ಥೆಗಳು ವಿಲೀನಕ್ಕೆ ಮತ್ತೆ ಮಾತುಕತೆಗೆ ಪ್ರಯತ್ನಿಸುತ್ತಿವೆ ಎಂಬಂತಹ ಸುದ್ದಿ ಬಂದ ಬೆನ್ನಲ್ಲೇ ಈಗ ಸೆಬಿ ವತಿಯಿಂದ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿ ಸಂಸ್ಥೆಯಲ್ಲಿ (ZEEL- Zee Entertainment Enterprise Ltd) 240 ಮಿಲಿಯನ್ ಡಾಲರ್ಗೂ ಹೆಚ್ಚಿನ ಮೊತ್ತದ ಅವ್ಯವಹಾರ ನಡೆದಿರುವುದನ್ನು ಸೆಬಿ (SEBI) ಪತ್ತೆ ಮಾಡಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಝೀ ಎಂಟರ್ಟೈನ್ಮೆಂಟ್ನಿಂದ ಸುಮಾರು, 2,000 ಕೋಟಿ ರೂನಷ್ಟು ಹಣವನ್ನು ಅಕ್ರಮವಾಗಿ ಹೊರಗೆ ವರ್ಗಾವಣೆ ಆಗಿರುವುದು ಸೆಬಿ ತನಿಖೆಯಿಂದ ಗೊತ್ತಾಗಿದೆ. ಈ ಹಿಂದೆ ಸೆಬಿ ಮಾಡಿದ ಅಂದಾಜಿಗಿಂತಲೂ ಈ ಅವ್ಯವಹಾರದಲ್ಲಿನ ಮೊತ್ತ ಹತ್ತು ಪಟ್ಟು ಹೆಚ್ಚು. ಸೆಬಿ ಮಾಡಿರುವ ಈ ಆರೋಪ ಝೀ ಸಂಸ್ಥೆಗೆ ಗಂಭೀರವಾಗಿ ಪೆಟ್ಟು ಕೊಡುವ ಸಾಧ್ಯತೆ ಹೆಚ್ಚಿದೆ.
ಆದರೆ, ಈ ಬಗ್ಗೆ ಸೆಬಿಯಿಂದಾಗಲೀ ಅಥವಾ ಝೀ ಸಂಸ್ಥೆಯಿಂದಾಗಲೀ ಹೇಳಿಕೆಗಳು ಬಂದಿಲ್ಲ. ಈ ಅಕ್ರಮ ವಹಿವಾಟಿನ ಬಗ್ಗೆ ಝೀ ಸಂಸ್ಥೆಯಿಂದ ಉತ್ತರ ಬಂದ ಬಳಿಕ ಸೆಬಿ ಕೋರ್ಟ್ಗೆ ಮಾಹಿತಿ ಸಲ್ಲಿಸಬಹುದು. ವರದಿ ಪ್ರಕಾರ, ಝೀ ಸಂಸ್ಥೆಯ ಸಂಸ್ಥಾಪಕ ಸುಭಾಷ್ ಚಂದ್ರ, ಅವರ ಮಗ ಮತ್ತು ಸಿಇಒ ಪುನೀತ್ ಗೋಯಂಕಾ ಹಾಗೂ ಝೀ ಮಂಡಳಿಯ ಕೆಲ ಸದಸ್ಯರನ್ನು ಕರೆಸಿ ಸೆಬಿ ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ತೈವಾನ್ನಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ; ಭಾರತದ ಜೊತೆ ತೈವಾನ್ ಒಡಂಬಡಿಕೆ
ಮೊನ್ನೆ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಸೋನಿ ಮತ್ತು ಝೀ ಸಂಸ್ಥೆಗಳು ವಿಲೀನಕ್ಕೆ ಯತ್ನಿಸಲು ಮತ್ತೊಮ್ಮೆ ಮಾತುಕತೆಗೆ ಕೂತಿವೆ. ಇದು ನಿಜವೇ ಆಗಿದ್ದಲ್ಲಿ ಸೆಬಿ ತನಿಖಾ ಅಂಶಗಳು ಈ ವಿಲೀನ ಯತ್ನಕ್ಕೆ ಹಿನ್ನಡೆ ತರಬಹುದು.
ಝೀ ಸಂಸ್ಥೆಯಲ್ಲಿನ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಅದರ ಸಂಸ್ಥಾಪಕ ಸುಭಾಷ್ ಚಂದ್ರ ಹಾಗೂ ಪುನೀತ್ ಗೋಯಂಕಾ ಅವರ ಮೇಲೆ ಇದೆ. ಸೆಬಿ ಈ ಇಬ್ಬರನ್ನು ಯಾವುದೇ ಸಂಸ್ಥೆಯ ಉನ್ನತ ಅಧಿಕಾರದ ಸ್ಥಾನದಲ್ಲಿ ಕೂರುವಂತಿಲ್ಲ ಎಂದು ನಿರ್ಬಂಧಿಸಿತ್ತು. ಅದಾದ ಬಳಿಕ ಉನ್ನತ ಮೇಲ್ಮನವಿ ಪ್ರಾಧಿಕಾರವೊಂದು ಈ ಆದೇಶವನ್ನು ಸಡಿಲಿಸಿ, ಪುನೀತ್ ಗೋಯಂಕಾ ಅವರಿಗೆ ಸಿಇಒ ಸ್ಥಾನದಲ್ಲಿ ಉಳಿಯಲು ಅವಕಾಶ ಕೊಟ್ಟಿದೆ.
ಇದನ್ನೂ ಓದಿ: ಸಿಡಿದೆದ್ದಿದ್ದ ಝೀ ಮತ್ತು ಸೋನಿ ಮಧ್ಯೆ ಮತ್ತೆ ಮಾತುಕತೆ ಶುರು; ವಿಲೀನ ಯತ್ನ ಈ ಬಾರಿ ಯಶಸ್ವಿಯಾಗುತ್ತಾ?
ಆದರೆ, ಸುಭಾಷ್ ಚಂದ್ರ ಮತ್ತು ಪುನೀತ್ ಗೋಯಂಕಾಗೆ ಮತ್ತಿಕೊಂಡಿರುವ ಅವ್ಯವಹಾರದ ಕಳಂಕವು ಸೋನಿ ಮತ್ತು ಝೀ ವಿಲೀನಕ್ಕೆ ಅಡ್ಡಿಯಾಗಿದೆ. ವಿಲೀನಗೊಂಡ ಬಳಿಕ ಸಂಸ್ಥೆಗೆ ಪುನೀತ್ ಗೋಯಂಕಾ ಸಿಇಒ ಆಗುವ ವಿಚಾರದಲ್ಲಿ ಎರಡೂ ಸಂಸ್ಥೆಗಳ ಮಧ್ಯೆ ಭಿನ್ನಾಭಿಪ್ರಾಯ ಇದೆ. ಈ ವಿಲೀನ ಪ್ರಕ್ರಿಯೆ ಮುರಿದುಬೀಳಲು ಈ ವಿಚಾರವೇ ಪ್ರಮುಖವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ