ಮುಂಬೈ: ಕೆಫೆ ಕಾಫಿ ಡೇಯ (Cafe Coffee Day) ಮಾಲೀಕತ್ವ ಹೊಂದಿರುವ ಕಾಫಿ ಡೇ ಎಂಟರ್ಪ್ರೈಸಸ್ಗೆ (Coffee Day Enterprises) ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (Sebi) 26 ಕೋಟಿ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು 45 ದಿನಗಳ ಒಳಗೆ ಪಾವತಿಸುವಂತೆ ಸೂಚಿಸಿದೆ. ಪ್ರವರ್ತಕರಿಗೆ ಸಂಬಂಧಿಸಿದ ಕಂಪನಿಗೆ ಕಾಫಿ ಡೇ ಎಂಟರ್ಪ್ರೈಸಸ್ ಅಂಗಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ಸೆಬಿ ಆದೇಶದಲ್ಲಿ ತಿಳಿಸಿದೆ. ಜತೆಗೆ, ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ (MACEL) ಮತ್ತು ಅದಕ್ಕೆ ಸಂಬಂಧಿತ ಸಂಸ್ಥೆಗಳಿಗೆ ನೀಡಿರುವ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಫಿ ಡೇ ಎಂಟರ್ಪ್ರೈಸಸ್ಗೆ ಸೆಬಿ ಸೂಚಿಸಿದೆ. ಬಾಕಿ ಇರುವ ಮೊತ್ತದ ವಸೂಲಾತಿಗಾಗಿ ಕಂಪನಿಯು ಎನ್ಎಸ್ಇಯೊಂದಿಗೆ ಸಮಾಲೋಚಿಸಿ ಸ್ವತಂತ್ರ ಕಾನೂನು ಸಂಸ್ಥೆಯೊಂದನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ ಎಂದೂ ಸೆಬಿ ಹೇಳಿದೆ.
ಕಾಫಿ ಡೇ ಎಂಟರ್ಪ್ರೈಸಸ್ನ 7 ಅಂಗಸಂಸ್ಥೆಗಳ ಮೂಲಕ ಕಂಪನಿಯ ಪ್ರವರ್ತಕರಿಗೆ ಸಂಬಂಧಿಸಿದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ 3,535 ಕೋಟಿ ರೂ. ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ ಎಂದು ಸೆಬಿ 43 ಪುಟಗಳ ಆದೇಶದಲ್ಲಿ ತಿಳಿಸಿದೆ. ಕಾಫಿ ಡೇ ಗ್ಲೋಬಲ್, ಟಂಗ್ಲಿಂನ್ ರಿಟೇಲ್ ರಿಯಲ್ಟಿ ಡೆವಲಪ್ಮೆಂಟ್ಸ್, ಟಂಗ್ಲಿಂನ್ ಡೆವಲಪ್ಮೆಂಟ್ಸ್, ಗಿರಿ ವಿದ್ಯುತ್ (ಇಂಡಿಯಾ) ಲಿಮಿಟೆಡ್, ಕಾಫಿ ಡೇ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್, ಕಾಫಿ ಡೇ ಟ್ರೇಡಿಂಗ್ ಆ್ಯಂಡ್ ಕಾಫಿ ಡೇ ಎಕಾನ್ ಕಂಪನಿಗಳ ಮೂಲಕ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಸೆಬಿ ಹೇಳಿದೆ.
ಇದನ್ನೂ ಓದಿ: Gold Price Today: ಮುಂದುವರಿದ ಬೆಳ್ಳಿ ಬೆಲೆ ಏರಿಕೆ, ಚಿನ್ನವೂ ದುಬಾರಿ; ಇಲ್ಲಿದೆ ನೋಡಿ ಪೂರ್ಣ ವಿವರ
ಕಾಫಿ ಡೇ ಎಂಟರ್ಪ್ರೈಸಸ್ನ ಅಂಗಸಂಸ್ಥೆಗಳ ಮೂಲಕ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ ವರ್ಗಾವಣೆ ಮಾಡಲಾದ ಹಣ ಕಂಪನಿಯ ಪ್ರವರ್ತಕರ (ವಿಜಿ ಸಿದ್ಧಾರ್ಥ), ಅವರ ಕುಟುಂಬದವರ ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿತ್ತು ಎಂದು ಸೆಬಿ ಹೇಳಿದೆ. ವಿಜಿ ಸಿದ್ಧಾರ್ಥ ಅವರು ಕಾಫಿ ಡೇ ಸಮೂಹದ ಅಧ್ಯಕ್ಷರಾಗಿದ್ದರು. 2019ರ ಜುಲೈಯಲ್ಲಿ ಮಂಗಳೂರು ಸಮೀಪ ನೇತ್ರಾವತಿ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಸ್ತುತ ಕಂಪನಿಯು ಅವರ ಕುಟುಂಬದವರ ಒಡೆತನದಲ್ಲಿದೆ.
Published On - 10:09 am, Wed, 25 January 23