ಕ್ಯಾಲಿಫೋರ್ನಿಯಾ: ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರ ತರಗೆಲೆಯಂತೆ ಉರುಳಿಬೀಳಲು ಮುನ್ನುಡಿ ಹಾಕಿದ್ದು ಸಿಲಿಕಾನ್ ವ್ಯಾಲಿ ಬ್ಯಾಂಕ್. ಕೆಲ ತಿಂಗಳ ಹಿಂದೆ ದಿವಾಳಿ ಎದ್ದ ಈ ಬ್ಯಾಂಕ್ನ ಮಾಜಿ ಸಿಇಒ ಮತ್ತೆ ಸುದ್ದಿಯಲ್ಲಿದ್ದಾರೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB- Silicon Valley Bank) ದಿವಾಳಿ ಏಳುತ್ತಿದ್ದರೂ 2022ರ ವರ್ಷಕ್ಕೆ ಭರ್ಜರಿ ಕಾಂಪೆನ್ಸೇಷನ್ ಪ್ಯಾಕೇಜ್ ಪಡೆದಿದ್ದ ಗ್ರೆಗ್ ಬೆಕರ್ (SVB Ex-CEO Greg Becker) ಇದೀಗ ಆ ಹಣವನ್ನು ಮರಳಿಸಲು ನಿರಾಕರಿಸಿದ್ದಾರೆ. ನೈತಿಕತೆಯ ದೃಷ್ಟಿಯಿಂದ ಅವರು ತಮಗೆ ಸಿಕ್ಕಿದ್ದ ಪರಿಹಾರ ಹಣವನ್ನು ಮರಳಿಸಬೇಕೆಂಬ ಒತ್ತಾಯ ಹಲವು ಕಡೆಗಳಿಂದ ಕೇಳಿಬರುತ್ತಿದೆ. ಆದರೆ, ತಾನ್ಯಾಕೆ ಅದನ್ನು ವಾಪಸ್ ಕೊಡಲಿ. ಬ್ಯಾಂಕ್ ಮುಚ್ಚಿಹೋಗಲು ತಾನು ಹೊಣೆಯಲ್ಲ ಎಂದು ಮಾಜಿ ಎಸ್ವಿಬಿ ಸಿಇಒ ಆದ ಗ್ರೆಗ್ ಬೆಕರ್ ಹೇಳಿದ್ದಾರೆ.
ವಿಪರ್ಯಾಸ ಎಂದರೆ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಘೋಷಿಸುವ ಮುನ್ನ ಸಿಇಒ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿರುವವರು ಮನಸೋಯಿಚ್ಛೆ ಕಾಂಪೆನ್ಸೇಷನ್ ಪಡೆದಿದ್ದಾರೆ. ಆಗ ಸಿಇಒ ಆಗಿದ್ದ ಗ್ರೆಗ್ ಬೆಕರ್ ಅವರಿಗೆ 2022ರ ವಾರ್ಷಿಕ ಕಾಂಪೆನ್ಸೇಷನ್ ಮೊತ್ತ 10 ಮಿಲಿಯನ್ ಡಾಲರ್. ಅಂದರೆ ಸುಮಾರು 82 ಕೋಟಿ ರುಪಾಯಿ.
ಇದೊಂದೇ ಅಲ್ಲ, ಎಸ್ವಿಬಿ ಪತನಗೊಳ್ಳುವ ಕೆಲ ದಿನಗಳ ಮೊದಲು ಗ್ರೆಗ್ ಬೆಕರ್ ಅವರು ಸಂಸ್ಥೆ ಷೇರುಗಳನ್ನು ಮಾರಿದ್ದರು. ಒಟ್ಟು 3.6 ಮಿಲಿಯನ್ ಡಾಲರ್ ಮೊತ್ತದ ಷೇರುಗಳನ್ನು ಬಿಕರಿ ಮಾಡಿದ್ದರು. ದುರಂತ ಅಂದರೆ ಎಸ್ವಿಬಿ ದಿವಾಳಿ ಎದ್ದು ಹೇಳಹೆಸರಿಲ್ಲದಂತಾಗುತ್ತದೆ ಎಂಬುದು ಟಾಪ್ ಎಕ್ಸಿಕ್ಯೂಟಿವ್ಸ್ಗೆ ಚೆನ್ನಾಗಿ ಗೊತ್ತಿತ್ತು. ಅದರಿಂದ ಸಾಧ್ಯವಾದಷ್ಟೂ ಹಣ ಮಾಡಿಕೊಳ್ಳುವುದು ಅವರ ತಂತ್ರವಾಗಿದ್ದಿರಬಹುದು ಎಂಬ ಟೀಕೆ ಕೇಳಿಬರುತ್ತಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿಯಾಗಿದ್ದು ಮಾರ್ಚ್ ತಿಂಗಳಲ್ಲಿ. ಇದಕ್ಕೆ ಬ್ಯಾಂಕ್ನ ಅಸಮಪರ್ಕ ನಿರ್ವಹಣೆಯೇ ಕಾರಣ ಎಂಬುದು ಹಲವರ ಅನಿಸಿಕೆ. ಆದರೆ, ಮಾಜಿ ಸಿಇಒ ಗ್ರೆಗ್ ಬೆಕರ್ ಬೇರೆಯೇ ವಿಶ್ಲೇಷಣೆ ಮಾಡುತ್ತಾರೆ. ಅವರ ಪ್ರಕಾರ ಅಸಾಧಾರಣ ಬೆಳವಣಿಗೆಗಳಿಂದಾಗಿ ಎಸ್ವಿಬಿ ಪತನಗೊಳ್ಳಬೇಕಾಯಿತು. ಬಡ್ಡಿ ದರ ಏರಿಕೆ, ಸೋಷಿಯಲ್ ಮೀಡಿಯಾದಲ್ಲಿ ನೆಗಟಿವ್ ಪ್ರಚಾರ ಇವೆಲ್ಲವೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಿಹೋಗಲು ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ನಿಂದ ತಾನು ಪಡೆದ ಗಳಿಕೆಯ ಹಣವನ್ನು ಮರಳಿಸುವ ಪ್ರಶ್ನೆಯೇ ಇಲ್ಲ. ಮರಳಿಸುತ್ತೇನೆ ಎಂದು ಹಿಂದೆ ಯಾವತ್ತೂ ಹೇಳಿಲ್ಲ ಎಂದು ಮಾಜಿ ಸಿಇಒ ಗ್ರೆಗ್ ಬೆಕರ್ ಹೇಳಿದ್ದಾರೆ. ಈ ಬ್ಯಾಂಕ್ ಪತನದ ಬಗ್ಗೆ ಅಲ್ಲಿನ ಪ್ರಾಧಿಕಾರಗಳು ತನಿಖೆ ನಡೆಸುತ್ತಿವೆ. ಈ ತನಿಖೆಗೆ ತಾನು ಸಹಕರಿಸುತ್ತೇನೆ ಹೊರತು ನನಗೆ ಸಿಕ್ಕಿರುವ ಕಾಂಪೆನ್ಸೇಷನ್ ಹಣವನ್ನು ವಾಪಸ್ ಮಾಡುವುದಿಲ್ಲ ಎಂದು ಬೆಕರ್ ಸ್ಪಷ್ಟಪಡಿಸಿದ್ದಾರೆ.
Published On - 12:44 pm, Wed, 17 May 23