ಭಾರತದಲ್ಲಿ ಹೂಡಿಕೆ ಎರಡು ಪಟ್ಟು ಹೆಚ್ಚಿಸುತ್ತೇವೆ: ಸಿಂಗಾಪುರದ ಕ್ಯಾಪಿಟಲ್ಯಾಂಡ್ ಸಂಸ್ಥೆ ಘೋಷಣೆ

|

Updated on: Sep 04, 2024 | 1:51 PM

Singapore's CapitaLand Investment funds in India: ಸಿಂಗಾಪುರದ ಕ್ಯಾಪಿಟಲ್ಯಾಂಡ್ ಇನ್ವೆಸ್ಟ್​ಮೆಂಟ್ ಸಂಸ್ಥೆ ಭಾರತದಲ್ಲಿ ಹೂಡಿಕೆಯನ್ನು ಎರಡು ಪಟ್ಟು ಹೆಚ್ಚಿಸುವುದಾಗಿ ಹೇಳಿದೆ. ಸದ್ಯ ಅದು ಭಾರತದಲ್ಲಿ 47,500 ಕೋಟಿ ರೂನಷ್ಟು ಹೂಡಿಕೆಗಳನ್ನು ಹೊಂದಿದ್ದು, ನಾಲ್ಕು ವರ್ಷದಲ್ಲಿ ಅದನ್ನು ಒಂದು ಲಕ್ಷ ಕೋಟಿ ರೂಗೆ ಏರಿಸುವ ಗುರಿ ಇಟ್ಟಿದೆ. ಜಾಗತಿಕವಾಗಿ ತನ್ನ ಫಂಡ್ ಪ್ರಮಾಣವನ್ನು 2028ರಷ್ಟರಲ್ಲಿ 13 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಗುರಿಯೂ ಅದಕ್ಕಿದೆ.

ಭಾರತದಲ್ಲಿ ಹೂಡಿಕೆ ಎರಡು ಪಟ್ಟು ಹೆಚ್ಚಿಸುತ್ತೇವೆ: ಸಿಂಗಾಪುರದ ಕ್ಯಾಪಿಟಲ್ಯಾಂಡ್ ಸಂಸ್ಥೆ ಘೋಷಣೆ
ಕ್ಯಾಪಿಟಲ್ಯಾಂಡ್ ಇನ್ವೆಸ್ಟ್​ಮೆಂಟ್
Follow us on

ಸಿಂಗಾಪುರ್, ಸೆಪ್ಟೆಂಬರ್ 4: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರಕ್ಕೆ ಭೇಟಿ ನೀಡಿರುವ ಹೊತ್ತಲ್ಲೇ ಅಲ್ಲಿನ ಸಂಸ್ಥೆಯೊಂದು ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸುತ್ತಿರುವುದಾಗಿ ಘೋಷಿಸಿದೆ. ಕ್ಯಾಪಿಟಲ್ಯಾಂಡ್ ಇನ್ವೆಸ್ಟ್​ಮೆಂಟ್ ಸಂಸ್ಥೆ ಪ್ರಸಕ್ತ ಭಾರತದಲ್ಲಿ 7.4 ಬಿಲಿಯನ್ ಸಿಂಗಾಪುರ ಡಾಲರ್ ಮೊತ್ತದ ಹೂಡಿಕೆ ಹೊಂದಿದೆ. ಅಂದರೆ ಭಾರತದಲ್ಲಿರುವ ಅದರ ಈಗಿನ ಹೂಡಿಕೆ ಮೊತ್ತ ಸುಮಾರು 47,500 ಕೋಟಿ ರೂಪಾಯಿ ಇದೆ. 2028ರಷ್ಟರಲ್ಲಿ ಹೂಡಿಕೆಯನ್ನು ಎರಡು ಪಟ್ಟು ಹೆಚ್ಚಿಸುವುದಾಗಿ ಹೇಳಿದೆ. ಸುಮಾರು ಒಂದು ಲಕ್ಷ ಕೋಟಿ ರೂಗೆ ಅದರ ಹೂಡಿಕೆ ಏರಬಹುದು.

ಸಿಂಗಾಪುರದ ಬಹಳಷ್ಟು ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಭಾರತ ಮತ್ತು ಸಿಂಗಾಪುರ ಮಧ್ಯೆ ಬಹಳ ಗಾಢವಾದ ವ್ಯಾಪಾರ ಸಂಬಂಧ ಇದೆ. ಭಾರತ ಮೂಲದ ಬಹಳಷ್ಟು ಜನರು ಸಿಂಗಾಪುರದಲ್ಲಿದ್ದಾರೆ. ಭಾರತದ ಮಾರುಕಟ್ಟೆ ಸಿಂಗಾಪುರದ ಉದ್ಯಮಗಳಿಗೆ ಬಹಳ ಆಕರ್ಷಕ ಎನಿಸಿದೆ.

ಇದನ್ನೂ ಓದಿ: ಶ್ರೀಮಂತರ ಶ್ರೀಮಂತಿಕೆ ಹೆಚ್ಚುತ್ತಿದೆ, ಭಾರತದ ಆರ್ಥಿಕತೆಗೇನೂ ಉಪಯೋಗ ಆಗುತ್ತಿಲ್ಲ: ವಿರಲ್ ಆಚಾರ್ಯ

‘ಭಾರತದಲ್ಲಿ ಗುಣಮಟ್ಟದ ನೈಜ ಆಸ್ತಿಗಳಿವೆ. ಜಾಗತಿಕ ಸಂಸ್ಥೆಗಳು ಮತ್ತು ಸಾಂಸ್ಥಿಕ ಹೂಡಿಕೆದಾರರು ಭಾರತದತ್ತ ಆಕರ್ಷಿತರಾಗುತ್ತಿದ್ದಾರೆ,’ ಎಂದು ಕ್ಯಾಪಿಟಲ್ಯಾಂಡ್ ಇನ್ವೆಸ್ಟ್​​ಮೆಂಟ್ ಗ್ರೂಪ್​ನ ಸಿಇಒ ಲೀ ಚೀ ಕೂನ್ ಹೇಳಿದ್ದಾರೆ.

ಭಾರತದಲ್ಲಿ ರಿನಿವಬಲ್ ಎನರ್ಜಿ ಮತ್ತು ರಿಯಲ್ ಎಸ್ಟೇಟ್ ಪ್ರೈವೇಟ್ ಕ್ರೆಡಿಟ್ ಕ್ಷೇತ್ರಗಳಲ್ಲಿ ಕ್ಯಾಪಿಟಾಲ್ಯಾಂಡ್ ಇನ್ವೆಸ್ಟ್​ಮೆಂಟ್ ಸಂಸ್ಥೆ ಹೂಡಿಕೆ ಮಾಡುವ ಇರಾದೆ ಹೊಂದಿದೆ. ಈ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶಗಳನ್ನು ಅದು ಅವಲೋಕಿಸುತ್ತಿದೆ ಎನ್ನಲಾಗುತ್ತಿದೆ. ಕಳೆದ ತಿಂಗಳು ಭಾರತದಲ್ಲಿ ಬಿಸಿನೆಸ್ ಪಾರ್ಕ್ ಡೆವಲಪ್ಮೆಂಟ್​ಗೆ ಫಂಡ್​ವೊಂದನ್ನು ಆರಂಭಿಸಿತು.

ಇದನ್ನೂ ಓದಿ: ಭಾರತದ ಇಂಧನ ಭದ್ರತೆಗೆ ಬ್ರೂನೆ ಮುಖ್ಯ; ಪ್ರಧಾನಿ ಮೋದಿ ಭೇಟಿಗೆ ಇದೆ ಮಹತ್ವ

ಜಾಗತಿಕವಾಗಿ ವಿವಿಧೆಡೆ ಸಿಂಗಾಪುರದ ಈ ಸಂಸ್ಥೆ ಹೂಡಿಕೆ ಹೆಚ್ಚಿಸುವ ಯೋಜನೆಯಲ್ಲಿದೆ. 2028ರಷ್ಟರಲ್ಲಿ ಒಟ್ಟಾರೆ ಫಂಡಿಂಗ್ ಹಣ (ಎಫ್​ಯುಎಂ) 200 ಬಿಲಿಯನ್ ಸಿಂಗಾಪುರ ಡಾಲರ್ (13 ಲಕ್ಷ ಕೋಟಿ ರೂ) ಮೊತ್ತಕ್ಕೆ ಏರಿಸುವ ಗುರಿ ಅದರದ್ದು.

ಇದೇ ವೇಳೆ ಸಿಂಗಾಪುರಕ್ಕೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಸೆ. 5) ಮರಳಲಿದ್ದಾರೆ. ಮೊನ್ನೆ ಅವರು ಬ್ರೂನೇ ದೇಶಕ್ಕೆ ಭೇಟಿ ನೀಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Wed, 4 September 24