ಪ್ರಸಕ್ತ ಹಣಕಾಸು ವರ್ಷದ ಸವರನ್ ಗೋಲ್ಡ್ ಬಾಂಡ್ (Sovereign Gold Bond) ನಾಲ್ಕನೇ ಕಂತು ಇಂದಿನಿಂದ (ಜುಲೈ 12, 2021) ಸಬ್ಸ್ಕ್ರಿಪ್ಷನ್ಗೆ ಆರಂಭವಾಗಿದೆ. ಪ್ರತಿ ಗ್ರಾಮ್ ಚಿನ್ನಕ್ಕೆ ರೂ. 4807 ದರ ನಿಗದಿ ಮಾಡಲಾಗಿದೆ. ಯಾರು ಆನ್ಲೈನ್ನಲ್ಲಿ ಹೂಡಿಕೆ ಮಾಡುತ್ತಾರೋ ಅಂಥವರಿಗೆ 50 ರೂಪಾಯಿ ರಿಯಾಯಿತಿ ದೊರೆಯುತ್ತದೆ. ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021-22- ಸಿರೀಸ್ IV ಅಥವಾ ನಾಲ್ಕನೇ ಕಂತಿನ ಸಬ್ಸ್ಕ್ರಿಪ್ಷನ್ ಶುಕ್ರವಾರದಂದು (ಜುಲೈ 16, 2021) ಕೊನೆ ಆಗಲಿದೆ. ಗೋಲ್ಡ್ ಬಾಂಡ್ಗಳಿಗೆ ವಾರ್ಷಿಕವಾಗಿ ಬಡ್ಡಿ ದರ ಶೇ 2.5ರಷ್ಟು ದೊರೆಯುತ್ತದೆ.
ಸವರನ್ ಗೋಲ್ಡ್ ಬಾಂಡ್ ಯೋಜನೆಯ ಬಗ್ಗೆ ಗೊತ್ತಿರಬೇಕಾದ 10 ಸಂಗತಿಗಳು:
1. ಮಿಲ್ವುಡ್ ಕೇನ್ ಇಂಟರ್ನ್ಯಾಷನಲ್ ಸಿಇಒ ನಿಶ್ ಭಟ್ ಹೇಳುವಂತೆ, ಭೌತಿಕ ಅಲ್ಲದ ಚಿನ್ನದ ಮೇಲೆ ಹೂಡಿಕೆ, ಡಿಜಿಟಲ್ ಅಥವಾ ಪೇಪರ್ ಚಿನ್ನ ವೇಗವನ್ನು ಪಡೆದುಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಕೊಂಡಿರುವುದರಿಂದ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ.
2. 2015ರಲ್ಲಿ ಸವರನ್ ಗೋಲ್ಡ್ ವಿತರಣೆ ಆರಂಭ ಆದಾಗಿನಿಂದ 2021ರ ಮಾರ್ಚ್ ಕೊನೆಯ ತನಕ 25,702 ಕೋಟಿ ರೂಪಾಯಿ ಮೊತ್ತವನ್ನು ಈ ಯೋಜನೆ ಮೂಲಕ ಸಂಗ್ರಹಿಸಲಾಗಿದೆ.
3. ಕರೆನ್ಸಿ ಮತ್ತು ವಿತ್ತೀಯ ಕೊರತೆ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸರ್ಕಾರದಿಂದ ನಿರಂತರವಾಗಿ ಪ್ರಯತ್ನ ನಡೆಯುತ್ತಿದ್ದು, ಭೌತಿಕವಾದ ಚಿನ್ನದ ಹೂಡಿಕೆಯನ್ನು ಡಿಜಿಟಲ್/ಪೇಪರ್ ಚಿನ್ನದ ಮೇಲೆ ಹರಿಸಲು ಮುಂದಾಗಿದೆ. ಭೌತಿಕವಾದ ಚಿನ್ನದ ಹೂಡಿಕೆಗೆ ಪ್ರಮುಖ ಪರ್ಯಾಯ ಅಂದರೆ ಅದು ಸವರನ್ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆ. ಹೀಗೆ ಸವರನ್ ಗೋಲ್ಡ್ ಬಾಂಡ್ನಲ್ಲಿ ಹೂಡುವುದರಿಂದ ಚಿನ್ನದ ನಾಣ್ಯವೋ ಅಥವಾ ಗಟ್ಟಿಯೋ ಖರೀದಿ, ವೆಚ್ಚ, ಸಂಗ್ರಹ ಮತ್ತು ಮಾರಾಟ ವೆಚ್ಚದ ಉಳಿತಾಯ ಆಗುತ್ತದೆ.
4. ಕೇಂದ್ರ ಸರ್ಕಾರವು ಈ ಹಿಂದೆ ಘೋಷಣೆ ಮಾಡಿದಂತೆ, 2021ರ ಮೇ ತಿಂಗಳಿನಿಂದ 2021ರ ಸೆಪ್ಟೆಂಬರ್ ಮಧ್ಯೆ ಆರು ಕಂತುಗಳಲ್ಲಿ ಸವರನ್ ಗೋಲ್ಡ್ ಬಾಂಡ್ (ಎಸ್ಜಿಬಿ) ವಿತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಪರವಾಗಿ ಆರ್ಬಿಐನಿಂದ ಬಾಂಡ್ಗಳನ್ನು ವಿತರಿಸಲಾಗುತ್ತದೆ.
5. ಸವರನ್ ಗೋಲ್ಡ್ ಬಾಂಡ್ ಯೋಜನೆ ಮೊದಲಿಗೆ ಆರಂಭವಾದದ್ದು 2015ರ ನವೆಂಬರ್ನಲ್ಲಿ. ಭೌತಿಕವಾದ ಚಿನ್ನದ ಬೇಡಿಕೆ ಕಡಿಮೆ ಮಾಡಲು ಹಾಗೂ ದೇಶೀಯ ಉಳಿತಾಯದ ಒಂದಿಷ್ಟು ಭಾಗವನ್ನು ಈ ಕಡೆಗೆ ತಿರುಗಿಸಲು ಸರ್ಕಾರ ನಿರ್ಧರಿಸಿತು. ಚಿನ್ನದ ಖರೀದಿ ಮೇಲೆ ಹಾಕುತ್ತಿದ್ದ ಹಣವು ಉಳಿತಾಯವಾಗಿ ಪರಿವರ್ತನೆ ಆಗುತ್ತದೆ.
6. ಸವರನ್ ಗೋಲ್ಡ್ ಬಾಂಡ್ಗೆ ದರ ನಿಗದಿ ಮಾಡುವುದಕ್ಕೆ ಒಂದು ಪದ್ಧತಿ ಅನುಸರಿಸಲಾಗುತ್ತದೆ. 999 ಶುದ್ಧತೆಯ ಚಿನ್ನದ ಸರಾಸರಿ ಬೆಲೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ನಿಂದ ಕಳೆದ ವಾರದ ಕೊನೆ ಮೂರು ದಿನದ (ಸಬ್ಸ್ಕ್ರಿಪ್ಷನ್ ಅವಧಿಯ ಹಿಂದಿನ ವಾರದ್ದು) ಸರಾಸರಿ ದರವನ್ನು ಗಣನೆಗೆ ತೆಗೆದುಕೊಂಡು ಗೋಲ್ಡ್ಬಾಂಡ್ ಬೆಲೆ ನಿಗದಿ ಮಾಡಲಾಗುತ್ತದೆ.
7. ಸವರನ್ ಗೋಲ್ಡ್ ಬಾಂಡ್ಗಳು ಗ್ರಾಮ್ ಲೆಕ್ಕದಲ್ಲಿ ಇರುತ್ತದೆ. ಕನಿಷ್ಠ 1 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಲೇಬೇಕು.
8. ಸವರನ್ ಗೋಲ್ಡ್ ಬಾಂಡ್ನ ಅವಧಿ 8 ವರ್ಷಗಳು. ಆದರೆ 5ನೇ ವರ್ಷದ ನಂತರ ಹೂಡಿಕೆಯಿಂದ ಹಣ ವಾಪಸ್ ಪಡೆಯುವುದಕ್ಕೆ ಅವಕಾಶ ಇರುತ್ತದೆ.
9. ಆಗ ವಾಪಸ್ ತೆಗೆದುಕೊಳ್ಳುವಾಗ ಚಿನ್ನದ ದರ ಎಷ್ಟಿರುತ್ತದೋ ಆ ಮೊತ್ತವು ದೊರೆಯುತ್ತದೆ.
10. ಮೆಚ್ಯೂರಿಟಿ ಅವಧಿಯಲ್ಲಿ ಬಂದ ಲಾಭಕ್ಕೆ ಕ್ಯಾಪಿಟಲ್ ಗೇಯ್ನ್ಸ್ನಿಂದ ತೆರಿಗೆ ಬೀಳುವುದಿಲ್ಲ. ಗೋಲ್ಡ್ ಬಾಂಡ್ಗಳ ಮೇಲೆ ಸಿಗುವ ಎಕ್ಸ್ಕ್ಲೂಸಿವ್ ಅನುಕೂಲ ಇದು.
ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?
(Sovereign Gold Bond Scheme 2021- 22 series IV open for subscription from today. Price fixed at Rs 4807 per gram. Here is the more details about SGB subscription
Published On - 11:32 am, Mon, 12 July 21