SBI ATM: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 873 ಎಟಿಎಂಗಳಿಗೆ ಬಾಗಿಲು

|

Updated on: Apr 12, 2021 | 4:49 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 873 ಎಟಿಎಂಗಳನ್ನು 2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮುಚ್ಚಲಾಗಿದೆ. ಕೊರೊನಾ ಬಿಕ್ಕಟ್ಟು ಸೇರಿದಂತೆ ಮತ್ತಿತರ ಕಾರಣಗಳಿಗೆ ಇಂಥದ್ದೊಂದು ಬೆಳವಣಿಗೆ ಆಗಿದೆ.

SBI ATM: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 873 ಎಟಿಎಂಗಳಿಗೆ ಬಾಗಿಲು
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಆಟೋಮೆಟೆಡ್ ಟೆಲ್ಲರ್ ಮಶೀನ್ (ಎಟಿಎಂ)ಗಳ ಸಂಖ್ಯೆಯಲ್ಲಿ ಸ್ಥಿರವಾಗಿ ಕಡಿಮೆಯಾಗಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ದತ್ತಾಂಶಗಳಿಂದ ತಿಳಿದುಬಂದಿದೆ. 2020- 21ನೇ ಸಾಲಿನ ಡಿಸೆಂಬರ್ ತ್ರೈಮಾಸಿಕ ಅಂತ್ಯಕ್ಕೆ 1000ಕ್ಕೂ ಹೆಚ್ಚು ಎಟಿಎಂಗಳನ್ನು ಮುಚ್ಚಲಾಗಿದೆ. 2020ರ ಸೆಪ್ಟೆಂಬರ್ ತ್ರೈಮಾಸಿಕದ ಕೊನೆಗೆ 2,34,244 ಇದ್ದ ಎಟಿಎಂಗಳ ಸಂಖ್ಯೆಯು ಡಿಸೆಂಬರ್ ಕೊನೆಗೆ 2,33,066 ಆಗಿದೆ ಎಂದು ಮಾಹಿತಿ ನೀಡಲಾಗಿದೆ. ಎಟಿಎಂ ಕಾರ್ಯ ನಿರ್ವಹಣೆ ಕಷ್ಟವಾಗಿದ್ದ ಕಾಲಘಟ್ಟದಲ್ಲಿ ಕೋವಿಡ್- 19 ಬಿಕ್ಕಟ್ಟು, ಆರ್ಥಿಕ ಹಿಂಜರಿತ ಮತ್ತು ಹೆಚ್ಚುತ್ತಿರುವ ಡಿಜಿಟೈಸೇಷನ್ ಕಾರಣಕ್ಕೆ ಇಂಥದ್ದೊಂದು ಬೆಳವಣಿಗೆ ಆಗಿದೆ. ಎಟಿಎಂ ಕಾರ್ಯ ನಿರ್ವಹಣೆ ಆರ್ಥಿಕವಾಗಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಬಳಕೆದಾರರ ಶುಲ್ಕವನ್ನು ಏರಿಸುವ ಪ್ರಸ್ತಾವಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇನ್ನೂ ಒಪ್ಪಿಗೆ ಸೂಚಿಸಬೇಕಿದೆ.

ಬ್ಯಾಂಕ್​ಗಳು ನಿರ್ವಹಣೆ ಮಾಡುತ್ತಿದ್ದ ನಗದು ಮಶೀನ್​ಗಳು ಈ ಹಿಂದೆ 1.34 ಲಕ್ಷ ಇದ್ದದ್ದು 1.32 ಲಕ್ಷಕ್ಕೆ ಇಳಿದಿವೆ. ಸ್ವತಂತ್ರ ಎಟಿಎಂ ಆಪರೇಟರ್​ಗಳು- ಇವುಗಳನ್ನು ವೈಟ್- ಲೇಬಲ್ ಎಟಿಎಂ ಆಪರೇಟರ್ಸ್ ಅಥವಾ WLAOಗಳು ಎನ್ನಲಾಗುತ್ತದೆ, ಅವುಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ, ಅಂದರೆ 24,586ಕ್ಕೆ ಏರಿಸಲಾಗಿದೆ. ಸೆಪ್ಟೆಂಬರ್ ಕೊನೆಗೆ ಈ ಸಂಖ್ಯೆ 24,195 ಇತ್ತು.

3 ತಿಂಗಳಲ್ಲಿ 873 ಎಟಿಎಂ ಮುಚ್ಚಿದ ಎಸ್​ಬಿಐ
ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 57,889 ಎಟಿಎಂಗಳ ಕಾರ್ಯಾಚರಣೆ ಮಾಡುತ್ತದೆ. ಇದು 2020ರ ಸೆಪ್ಟೆಂಬರ್​ನಲ್ಲಿ 58,762 ಇತ್ತು. ಇನ್ನು ಖಾಸಗಿ ಬ್ಯಾಂಕ್​ಗಳ ಪೈಕಿ ಎಸ್​ಬಿಐ ನಂತರದಲ್ಲಿ ಹೆಚ್ಚಿನ ಎಟಿಎಂ ಹೊಂದಿರುವುದು ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್. ಕ್ರಮವಾಗಿ 17,254, 17,246 ಮತ್ತು 14,477 ಎಟಿಎಂಗಳನ್ನು ಕಾರ್ಯ ನಿರ್ವಹಿಸುತ್ತವೆ.

ಮುಂಬೈ ಮೂಲದ WLAO ಹಿರಿಯ ಅಧಿಕಾರಿ ಮಾತನಾಡಿ, ಎಟಿಎಂ ವಲಯವು ನಿಧಾನಕ್ಕೆ ಕೋವಿಡ್- 19 ಹಿಂದಿನ ಹಂತಕ್ಕೆ ಮರುಳುತ್ತಿದೆ. 2020ರಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಎರಡನೇ ಹಂತದ ಕೊರೊನಾವು ಈಗ ಪುನಶ್ಚೇತನದ ಪ್ರಕ್ರಿಯೆಗೆ ಆತಂಕವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.

ಕಾರ್ಪೊರೇಟ್ ಪ್ಲ್ಯಾನಿಂಗ್ ಸಮೂಹದ ಭಾಗವಾಗಿರುವ ಬ್ಯಾಂಕರ್​ವೊಬ್ಬರು ಮಾತನಾಡಿ, ಬೆಳಗ್ಗೆ 9ರಿಂದ ರಾತ್ರಿ 9ರ ತನಕ ಎಟಿಎಂಗೆ ಜನ ಬರ್ತಾರೆ. ರಾತ್ರಿ 12ರಿಂದ ಬೆಳಗ್ಗೆ 6ರ ತನಕ ಯಾವುದೇ ಜನರು ಬರಲ್ಲ. ಸಾವಿರಾರು ಎಟಿಎಂಗಳ ಸಾಮರ್ಥ್ಯ ಈ ಅವಧಿಯಲ್ಲಿ ವ್ಯರ್ಥವಾಗುತ್ತದೆ. ಆದರೂ ವಿದ್ಯುತ್ ದೀಪಗಳು, ಏಸಿಗಳು ಮುಂತಾದವಕ್ಕೆ ಬ್ಯಾಂಕ್​ಗಳು ಹಣ ಪಾವತಿಸಲೇ ಬೇಕು. ಎಟಿಎಂಗಳನ್ನು 24X7 ತೆರೆದಿರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒತ್ತಾಯಿಸಬಾರದು. ಬ್ಯಾಂಕ್​ಗಳು ತಮಗೆ ಹೊಂದಾಣಿಕೆ ಆಗುವಂತೆ ನಡೆಸಿಕೊಂಡು ಹೋಗಲು ಅನುಕೂಲ ಮಾಡಿಕೊಡಬೇಕು ಎಂದಿದ್ದಾರೆ.

ಅವರು ಹೇಳುವಂತೆ, ಆಸ್ಪತ್ರೆಗಳು, ಮೆಡಿಕಲ್ ಶಾಪ್​ಗಳು ಮತ್ತು ಪೆಟ್ರೋಲ್ ಬಂಕ್​ಗಳ ಸಮೀಪ ಇರುವ ಎಟಿಎಂಗಳನ್ನು ಮಾತ್ರ ರಾತ್ರಿ ವೇಳೆ ಬಳಸಲಾಗುತ್ತದೆ. ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಬಳಕೆ ವ್ಯಾಪಕವಾಗಿ ಇರುವುದರಿಂದ ರಾತ್ರಿ ವೇಳೆ ತುರ್ತಿನ ಕಾರಣಕ್ಕೆ ನಗದು ವಿಥ್ ಡ್ರಾ ಮಾಡುವವರನ್ನು ಹೊರತುಪಡಿಸಿ ರಾತ್ರಿ ವೇಳೆ ವಿಥ್ ಡ್ರಾ ಮಾಡುವುದು ಕಡಿಮೆ ಎಂದು ಅವರು ಹೇಳಿದ್ದಾರೆ.

ಕೆಲವು ಬ್ಯಾಂಕ್​ಗಳು ಆನ್​ಲೈನ್ ಸರ್ವೇಲನ್ಸ್ (ನಿಗಾ) ಹಾಕಿ, ಎಟಿಎಂನಿಂದ ಭದ್ರತಾ ಸಿಬ್ಬಂದಿಯನ್ನು ತೆಗೆಯಬೇಕು ಎಂದು ತೀರ್ಮಾನಿಸಿದಾಗ ಅದಕ್ಕೆ ಪೊಲೀಸರು ಒಪ್ಪಿರಲಿಲ್ಲ. ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಇದ್ದಲ್ಲಿ ನಗರಗಳಲ್ಲಿ ಕಳುವಿನ ಪ್ರಮಾಣ, ಅನೈತಿಕ ಚಟುವಟಿಕೆಗಳು ಕಡಿಮೆ ಆಗುತ್ತದೆ. ಕಾನೂನು ಸುವ್ಯವಸ್ಥೆ ಬ್ಯಾಂಕ್​ಗಳ ಜವಾಬ್ದಾರಿ ಆಗುತ್ತದೆ ಎಂಬುದು ಪೊಲೀಸರ ಅಭಿಪ್ರಾಯ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

2017ರಿಂದ ಬೆಳವಣಿಗೆ ನಿಂತುಹೋಗಿದೆ
2012ರಿಂದ 2017ರ ಮಧ್ಯೆ ಶೇ 14ರಷ್ಟು ಬೆಳವಣಿಗೆ ಕಂಡ ಮೇಲೆ ಆ ನಂತರದಿಂದ ನಿಂತುಹೋಗಿದೆ. 2020ರಿಂದ ಕೊರೊನಾ ಕಾಣಿಸಿಕೊಂಡ ಮೇಲೆ ರಾತ್ರಿ ವೇಳೆ ಎಟಿಎಂ ಬಳಕೆ ಮಾಡುವ ಬಳಕೆದಾರರ ಸ್ವಭಾವವೇ ಬದಲಾಗಿದೆ. ಎಲ್ಲಿ ಕೊರೊನಾ ವೈರಾಣು ಹಬ್ಬುತ್ತದೋ ಎಂದು ಹೆದರಿಕೊಂಡು, ಎಟಿಎಂಗಳಿಂದ ದೂರ ಉಳಿಯುತ್ತಿದ್ದಾರೆ. ಇಂಟರ್​ಚೇಂಜ್ ಶುಲ್ಕದ ಬಗ್ಗೆ ಕಣ್ಣನ್ ಸಮಿತಿ ನೀಡಿರುವ ಶಿಫಾರಸಿನ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಈ ಸಮಿತಿಯು ಶಿಫಾರಸು ಮಾಡಿದಂತೆ, ಹತ್ತು ಲಕ್ಷ ಜನಸಂಖ್ಯೆಯೊಳಗೊರುವ ಗ್ರಾಮೀಣ ಪ್ರದೇಶದಲ್ಲಿ ನಗದು ವಹಿವಾಟಿಗೆ ರೂ. 18 (ಈಗ ರೂ. 15 ಇದೆ), ನಗದುಯೇತರ ವಹಿವಾಟಿಗೆ ರೂ. 8 (5 ರೂಪಾಯಿಯಿಂದ) ವಿಧಿಸಬೇಕು ಎಂದಿತ್ತು. ಇನ್ನು ನಗರ ಪ್ರದೇಶದಲ್ಲಿ ಕ್ರಮವಾಗಿ ರೂ. 17 ಮತ್ತು ರೂ. 7 ವಿಧಿಸಲು ಸಲಹೆ ನೀಡಿತ್ತು.

ರೂ. 5000 ಮೇಲ್ಪಟ್ಟ ಎಲ್ಲ ವಹಿವಾಟುಗಳಿಗೆ ಶುಲ್ಕ ವಿಧಿಸುವಂತೆ ತಿಳಿಸಿತ್ತು. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳು ಮತ್ತು ನಗರಗಳಲ್ಲಿ ಲಭ್ಯ ಇರುವ ಉಚಿತ ವಹಿವಾಟುಗಳನ್ನು (3) ವಿಸ್ತರಿಸುವುದಕ್ಕೆ ಸಮ್ಮತಿಸಿತ್ತು.

ಇದನ್ನೂ ಓದಿ: Bank holidays: ಏಪ್ರಿಲ್ 13ರಿಂದ 16ರ ತನಕ ನಾಲ್ಕು ದಿನ ದೇಶದ ವಿವಿಧೆಡೆ ಬ್ಯಾಂಕ್​ಗಳು ರಜಾ

(Due to Covid- 19 and other reasons State Bank Of India shuts 873 atms in 2020 September quarter.)