ಎಂಥೆಂಥವರೋ ಕಂಪನಿ ಕಟ್ಟುತ್ತಿದ್ದಾರೆ… ಕೋಟಿ ಕೋಟಿಗಳಿಗೆ ಲೆಕ್ಕವಿಲ್ಲದಂತೆ ಬಂಡವಾಳ ಸಿಗುತ್ತಿದೆ… ನಾನ್ಯಾಕೆ ದೊಡ್ಡ ಕಂಪನಿ ಕಟ್ಟಬಾರದು ಎಂದು ವ್ಯಕ್ತಿಯೊಬ್ಬ ಕೆಲಸ ಬಿಟ್ಟು ಕಂಪನಿ ಕಟ್ಟಿ ಈಗ ಪರಿತಪಿಸುತ್ತಿರುವ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಅನುಭವ ಹಂಚಿಕೊಂಡಿರುವ ಈತ, ಸ್ಟಾರ್ಟಪ್ ಫೌಂಡರ್ ಆಗಬೇಕೆನ್ನುವ ಭ್ರಮೆಯಲ್ಲಿದ್ದ ತನಗೆ ವಾಸ್ತವ ಏನೆಂದು ಅರಿವಾಯಿತು ಎಂದು ಹೇಳಿಕೊಂಡಿದ್ದಾನೆ. ಎರಡು ವರ್ಷಗಳಿಂದ ಕಂಪನಿ ನಿರ್ವಹಿಸಿ, ಅದು ಲಾಭ ಕಾಣುವಂತೆ ಮಾಡಿದ್ದರೂ ಎಲ್ಲೋ ಒಂದು ಕಡೆ ಈತನಿಗೆ ಭ್ರಮನಿರಸನ ಆಗಿರುವುದು ಇವರ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಎದ್ದುಕಾಣುತ್ತದೆ.
ಈ ವ್ಯಕ್ತಿ ತನ್ನದೇ ಕಂಪನಿ ಸ್ಥಾಪಿಸುವ ಉಮೇದಿಗೆ ಬೀಳುವ ಮುನ್ನ ಒಂದು ಕಂಪನಿಯಲ್ಲಿ ವೈಸ್ ಪ್ರೆಸಿಡೆಂಟ್ ಹುದ್ದೆಯನ್ನು ನಿರ್ವಹಿಸುತ್ತಿರುತ್ತಾರೆ. ವರ್ಷಕ್ಕೆ 50 ಲಕ್ಷ ರೂ ಸಂಬಳ ಪಡೆಯುತ್ತಿರುತ್ತಾರೆ. ಲಿಂಕ್ಡ್ಇನ್ ಪೋಸ್ಟ್ಗಳನ್ನು, ವಿವಿಧ ಪೋಡ್ಕ್ಯಾಸ್ಟ್ಗಳನ್ನು ನೋಡಿದಾಗ ಬಹಳಷ್ಟು ಜನರು ಸುಲಭವಾಗಿ ಕಂಪನಿ ಕಟ್ಟುತ್ತಿರುವುದು ಕಂಡು ಅಚ್ಚರಿ ಆಯಿತು. 2021ರಲ್ಲಿ ತಾನೂ ಕಂಪನಿ ಸ್ಥಾಪಕನಾಗಬೇಕೆಂಬ ಆಸೆ ಈತನಿಗೆ ಹುಟ್ಟಿತು. ಬೃಹತ್ ಸಂಸ್ಥೆ ಕಟ್ಟುವ ಬದಲು ಸುಮ್ಮನೆ ವ್ಯರ್ಥ ಜೀವನ ನಡೆಸುತ್ತಿದ್ದೇನಲ್ಲ ಎಂದನಿಸಿದೆ ಈತನಿಗೆ.
ಇದನ್ನೂ ಓದಿ: Fact Check: ಗೌತಮ್ ಅದಾನಿಯನ್ನು ಬಂಧಿಸಿರುವುದು ನಿಜವೇ?: ವೈರಲ್ ಫೋಟೋದ ಸತ್ಯಾಂಶ ಏನು?
ತಡಮಾಡದೆ ಕ್ಷಿಪ್ರವಾಗಿ ನಿರ್ಧಾರ ಕೈಗೊಂಡು, 50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕಂಪನಿಯೊಂದನ್ನೂ ಸ್ಥಾಪಿಸಿದರು. ಅದು ಲಾಭವೂ ಕಾಣತೊಡಗಿತು. ‘ಒಳ್ಳೆಯ ಪ್ರಾಡಕ್ಟ್ ನಿರ್ಮಿಸಿದೆವು. ಜನರೂ ಅದನ್ನು ಕೊಳ್ಳತೊಡಗಿದರು. ಕಾರ್ಯಾಚರಣಾತ್ಮಕವಾಗಿ ಲಾಭವನ್ನೂ ಕಾಣತೊಡಗಿದೆವು. ಪ್ರಮುಖ ಹಿನ್ನಡೆಗಳೇನೂ ಇರಲಿಲ್ಲ. ಬರ್ನ್ ರೇಟ್ (ಕೆಲಸದ ಹೊರೆ) ಕೂಡ ಕಡಿಮೆ ಇತ್ತು. ಎಲ್ಲಾ ರೀತಿಯಿಂದಲೂ ಬಿಸಿನೆಸ್ ಚೆನ್ನಾಗಿತ್ತು’ ಎನ್ನುತ್ತಾರೆ ಈ ವ್ಯಕ್ತಿ.
ಆದರೆ, ಎಲ್ಲವೂ ಚೆನ್ನಾಗಿದ್ದ ಮೇಲೆ ಬಿಸಿನೆಸ್ ಲೈಫ್ ಸಕ್ಸಸ್ ತಾನೇ ಎಂದು ನೀವು ಕೇಳಬಹುದು. ಆದರೆ, ಗ್ರೇಪ್ವೈನ್ ಪ್ಲಾಟ್ಫಾರ್ಮ್ನಲ್ಲಿ ಈ ವ್ಯಕ್ತಿ ಹಾಕಿರುವ ಪೋಸ್ಟ್ನಲ್ಲಿ, ತನ್ನ ಭ್ರಮನಿರಸನಕ್ಕೆ ಕಾರಣ ತಿಳಿಸಿದ್ದಾರೆ. ‘ಇಡೀ ಸಮಯ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ತಂಡದಲ್ಲಿ ಬೇರೆಲ್ಲರೂ ಕೂಡ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದರೆ, ನಾನು ನಿರುತ್ಸಾಹಿಯಾಗಿದ್ದೆ. ಪ್ರತೀ ದಿನ ಬೆಳಗೆ ಎದ್ದು, ಇದು ಇಷ್ಟೇನಾ ಎನಿಸುತ್ತಿತ್ತು’ ಎಂದು ಈತ ಬರೆದಿದ್ದಾರೆ.
ಇದನ್ನೂ ಓದಿ: ಶೇ. 97ರಷ್ಟು ವಿದ್ಯುದೀಕರಣಗೊಂಡ ಬ್ರಾಡ್ಗೇಜ್ ರೈಲ್ವೆ ನೆಟ್ವರ್ಕ್; ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಗುರಿ
ಆದರೆ, ಒಂದು ಸ್ಟಾರ್ಟಪ್ ಅನ್ನು ನಡೆಸಲು ಏನು ಅಗತ್ಯವೋ ಅದಕ್ಕೆ ಹೊಂದಿಕೊಳ್ಳಲು ಈತನಿಗೆ ಸಾಧ್ಯವಾಗಲಿಲ್ಲ. ಅದು ಒಂದು ರೀತಿಯಲ್ಲಿ ಈತನಿಗೆ ಪ್ಯಾನಿಕ್ ಅಟ್ಯಾಕ್ ತರತೊಡಗಿದೆ. ಅಂತ್ಯವೇ ಇಲ್ಲದ ಅನಿಶ್ಚಿತತೆ, ನಿರ್ಧಾರಗಳನ್ನು ಕೈಗೊಳ್ಳುವ ಹೊರೆ ಇವೆಲ್ಲವೂ ಕಾಡುತ್ತಿತ್ತು. ಈ ಕೆಲಸಕ್ಕೆ ತಾನು ಹೇಳಿ ಮಾಡಿಸಿದವನಲ್ಲ. ತನಗೆ ಸಂಸ್ಥಾಪಕ ಆಗಬೇಕೆಂದು ಆಲೋಚನೆಯೇ ಪ್ರಧಾನವಾಗಿತ್ತು ಅಷ್ಟೇ ಎಂದು ಈತ ಹೇಳಿಕೊಂಡಿದ್ದಾನೆ.
‘ಒತ್ತಡ ಹೆಚ್ಚತೊಡಗಿತು. ತಿಂಗಳು ಕಾಲ ಸರಿಯಾಗಿ ನಿದ್ರಿಸಲಿಲ್ಲ. ಸಂಬಂಧಗಳು ಹಾಳಾಗತೊಡಗಿದವು. ನನ್ನ ಮಾನಸಿಕ ಆರೋಗ್ಯದ ಕಥೆ ಹೇಳುವುದೇ ಬೇಡ. ಯಶಸ್ವಿಯಾಗಿರುವ ಯಾವುದನ್ನೋ ನಾನು ಕಟ್ಟಿದ್ದೇನೆ. ಆದರೆ, ನನ್ನ ಜೀವನವೇ ನನ್ನಿಂದ ಹೊರಟು ಹೋಗಿ ಭಾವಶೂನ್ಯತೆ ನೆಲಸಿದೆ. ಅಂತೆಯೇ ಈ ಕಂಪನಿಯನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ’ ಎಂದು ಈತ ವಿವರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ