ನವದೆಹಲಿ, ಫೆಬ್ರುವರಿ 19: ಭಾರತದ ಸಕ್ಕರೆ ಉತ್ಪಾದನೆ (sugar production) ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ. ಭಾರತೀಯ ಸಕ್ಕರೆ ಕಾರ್ಖಾನೆ ಸಂಘಟನೆಯಾದ ಇಸ್ಮಾ ಪ್ರಕಾರ 2023-24ರ ಮಾರುಕಟ್ಟೆ ವರ್ಷದಲ್ಲಿ (Marketing year) ಭಾರತದಲ್ಲಿ ಸಕ್ಕರೆ ಉತ್ಪಾದನೆ 33.05 ಮಿಲಿಯನ್ ಟನ್ನಷ್ಟು ಆಗಬಹುದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 10ರಷ್ಟು ಕಡಿಮೆ ಸಕ್ಕರೆ ಉತ್ಪಾದನೆ ಈ ವರ್ಷದ್ದಿರಲಿದೆ. ಅಕ್ಟೋಬರ್ 31ರಿಂದ ಸೆಪ್ಟೆಂಬರ್ 30ರವರೆಗೆ ಮಾರುಕಟ್ಟೆ ವರ್ಷ ಎಂದು ಪರಿಗಣಿಸಲಾಗುತ್ತದೆ. ಈ ಬಾರಿಯ ಮಾರ್ಕೆಟಿಂಗ್ ವರ್ಷದಲ್ಲಿ ಫೆಬ್ರುವರಿ 15ರವರೆಗೂ ಸಕ್ಕರೆ ಉತ್ಪಾದನೆ 22.36 ಮಿಲಿಯನ್ ಟನ್ನಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 22.93 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಅಂದರೆ ಶೇ. 2.48ರಷ್ಟು ಉತ್ಪಾದನೆ ಕುಂಠಿತವಾಗಿದೆ. ಆದರೆ, ಇಡೀ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆ ಶೇ. 10ರಷ್ಟು ಕಡಿಮೆ ಆಗಬಹುದು ಎಂಬುದು ಇಸ್ಮಾ ಅಂದಾಜು.
ಉತ್ತರಪ್ರದೇಶ ಹೊರತುಪಡಿಸಿದರೆ ಸಕ್ಕರೆ ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಇಳುವರಿ ಬಹಳ ಕಡಿಮೆ ಆಗಿದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಸಕ್ಕರೆ ಉತ್ಪಾದನೆ ಸದ್ಯ ಕಡಿಮೆಗೊಂಡಿದೆ. ಆದರೆ, ಉತ್ತರಪ್ರದೇಶದಲ್ಲಿ ಇದು ಹೆಚ್ಚಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಆರ್ಥಿಕತೆಗಿಂತಲೂ ದೊಡ್ಡದು ಟಾಟಾ ಗ್ರೂಪ್ ಮಾರುಕಟ್ಟೆ ಬಂಡವಾಳ
ಮಹಾರಾಷ್ಟ್ರ ಅತಿಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ರಾಜ್ಯವಾಗಿದೆ. ಅದು ಬಿಟ್ಟರೆ ಉತ್ತರಪ್ರದೇಶದಲ್ಲಿ ಹೆಚ್ಚು ಸಕ್ಕರೆ ಉತ್ಪಾದನೆ ಆಗುತ್ತದೆ. ಕರ್ನಾಟಕದ್ದು ಮೂರನೇ ಸ್ಥಾನ. ದೇಶಾದ್ಯಂತ 505 ಸಕ್ಕರೆ ಕಾರ್ಖಾನೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ
ಇಡೀ ವಿಶ್ವದಲ್ಲಿ 150ರಿಂದ 180 ಮಿಲಿಯನ್ ಟನ್ನಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ. ಬ್ರೆಜಿಲ್ನಲ್ಲಿ ಅತಿಹೆಚ್ಚು ಸಕ್ಕರೆ ತಯಾರಾಗುತ್ತದೆ. ಬ್ರೆಜಿಲ್ ಮತ್ತು ಭಾರತದಲ್ಲಿ ಈ ವಿಶ್ವದ ಅರ್ಧದಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ