Suryoday Expense: ಸೂರ್ಯೋದಯ್ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್

|

Updated on: Feb 09, 2024 | 12:00 PM

Solar System Installation On Rooftop: ಮರುಬಳಕೆ ಇಂಧನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಸರ್ಕಾರ ಮಹತ್ವ ಕೊಡುತ್ತಿದೆ. ಮನೆಗಳ ಛಾವಣಿ ಮೇಲೆ ಸೋಲಾರ್ ಸಿಸ್ಟಂ ಅಳವಡಿಸಲು ಉತ್ತೇಜಿಸುವ ಸೂರ್ಯೋದಯ್ ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ಸೋಲಾರ್ ಸಿಸ್ಟಂ ಅಳವಡಿಕೆಯಲ್ಲಿ ಶೇ. 40ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಅದನ್ನು ಶೇ. 60ಕ್ಕೆ ಹೆಚ್ಚಿಸುವ ಪ್ರಸ್ತಾಪ ಇದೆ.

Suryoday Expense: ಸೂರ್ಯೋದಯ್ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್
ಸೋಲಾರ್ ಸಿಸ್ಟಂ
Follow us on

ದೇಶದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಮರುಬಳಕೆ ಇಂಧನ (renewable energy) ಉತ್ಪಾದನೆಗೆ ಹೆಚ್ಚು ಒತ್ತು ಕೊಡುತ್ತಿದೆ. ಮರುಬಳಕೆ ಇಂಧನದಲ್ಲಿ ಸೌರವಿದ್ಯುತ್ ಒಂದು. ಇದನ್ನು ಉತ್ತೇಜಿಸಲು ಸರ್ಕಾರ ಸೂರ್ಯೋದಯ್ ಯೋಜನೆಯನ್ನು (Suryoday scheme) ಜಾರಿಗೆ ತಂದಿದೆ. ಇದು ಮನೆ ಮಾಳಿಗೆಯ ಮೇಲೆ ಸೌರಫಲಕ ಅಳವಡಿಸುವ ಯೋಜನೆಯಾಗಿದೆ. ಸೌರ ಫಲಕಗಳ ಆಳವಡಿಕೆ ವೆಚ್ಚ ದುಬಾರಿಯಾಗಿರುವುದರಿಂದ ಸರ್ಕಾರ ಸಬ್ಸಿಡಿ ಒದಗಿಸುತ್ತದೆ. ಸದ್ಯಕ್ಕೆ ಶೇ. 40ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ. ಕೆಲ ವರದಿಗಳ ಪ್ರಕಾರ ಸಬ್ಸಿಡಿಯನ್ನು ಶೇ 60ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ, ಸೌರ ವಿದ್ಯುತ್ ವ್ಯವಸ್ಥೆ ಅಳವಡಿಕೆಯು ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ.

300 ಯೂನಿಟ್ ಉಚಿತ ವಿದ್ಯುತ್

ಸೂರ್ಯೋದಯ್ ಸ್ಕೀಮ್​ನಲ್ಲಿ ಮನೆ ಮಾಳಿಗೆಯ ಮೇಲೆ ಸೌರಫಲಕ ಅಳವಡಿಸಿಕೊಂಡವರಿಗೆ ಪ್ರತೀ ತಿಂಗಳು 300 ಯೂನಿಟ್​ಗಳಷ್ಟು ವಿದ್ಯುತ್ ಉಚಿತವಾಗಿ ಸಿಗುತ್ತದೆ. ಈ ಸೌರಫಲಕಗಳನ್ನು ವಿದ್ಯುತ್ ಗ್ರಿಡ್​ಗೆ ಅವಳಡಿಸಲಾಗುತ್ತದೆ. ಇದರಿಂದ ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಬಹಳಷ್ಟು ಕಡಿಮೆ ಆಗುತ್ತದೆ.

ಇದನ್ನೂ ಓದಿ: ಇಟಿಎಫ್​ನಲ್ಲಿನ ಹೂಡಿಕೆಯಿಂದ ಬಂದ ಶೇ. 50ರಷ್ಟು ಲಾಭದ ಹಣ ಈಕ್ವಿಟಿಗಳಲ್ಲಿ ಮರುಹೂಡಿಕೆ: ಇಪಿಎಫ್​ಒ ಚಿಂತನೆ

ಸೌರ ಫಲಕಗಳ ಸ್ಥಾಪನೆಗೆ ಆಗುವ ವೆಚ್ಚವನ್ನು ವಿದ್ಯುತ್ ಉಳಿತಾಯದ ಮೂಲಕ ಸರಿದೂಗಿಸಬಹುದು. 300 ಯೂನಿಟ್ ವಿದ್ಯುತ್ ಬಳಸುವವರು ಒಂದು ವರ್ಷದಲ್ಲಿ 15,000 ರೂಗೂ ಹೆಚ್ಚು ಹಣ ಉಳಿಸಬಹುದು. ಆ ಮೂಲಕ ಒಂದೆರಡು ವರ್ಷದಲ್ಲಿ ಸೌರ ವಿದ್ಯುತ್ ಅಳವಡಿಕೆಯ ವೆಚ್ಚವನ್ನು ಸರಿದೂಗಿಸಬಹುದು.

ಸೌರಫಲಕ ಅಳವಡಿಕೆಗೆ ಎಷ್ಟು ವೆಚ್ಚವಾಗುತ್ತದೆ?

  • 1 ಕಿ.ವ್ಯಾ. ಸೋಲಾರ್: 65,000ರೂನಿಂದ 75,000 ರೂ
  • 2 ಕಿ.ವ್ಯಾ.: 1,40,000 ರೂನಿಂದ 1,50,000 ರೂ
  • 3 ಕಿ.ವ್ಯಾ.: 1,80,000 ರೂನಿಂದ 1,90,000 ರೂ
  • 5 ಕಿ.ವ್ಯಾ: 2,50,000 ರೂನಿಂದ 2,70,000 ರೂ
  • 7.5 ಕಿ.ವ್ಯಾ: 3,70,000 ರೂನಿಂದ 3,90,000 ರೂ
  • 10 ಕಿ.ವ್ಯಾ: 4,90,000 ರೂನಿಂದ 5,10,000 ರೂ

ಇಲ್ಲಿ 1 ಕಿಲೋ ವ್ಯಾಟ್ ಸೋಲಾರ್ ಸಿಸ್ಟಂನಿಂದ ದಿನಕ್ಕೆ 4 ಯೂನಿಟ್ ವಿದ್ಯುತ್ ಪಡೆಯಬಹುದು. ಅಂದರೆ ತಿಂಗಳಿಗೆ 120 ಯೂನಿಟ್ ವಿದ್ಯುತ್ ಆಗುತ್ತದೆ. ಎರಡು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಂನಿಂದ ತಿಂಗಳಿಗೆ 250 ಯೂನಿಟ್​ನಷ್ಟು ವಿದ್ಯುತ್ ಪಡೆಯಬಹುದು. ಒಂದು ಸಾಧಾರಣ ಮನೆಗೆ 2 ಕಿ.ವ್ಯಾ. ಸೋಲಾರ್ ಸಿಸ್ಟಂ ಸಾಕಾಗುತ್ತದೆ.

ಇದನ್ನೂ ಓದಿ: ಮತ್ತೆ 100 ಬಿಲಿಯನ್ ಡಾಲರ್ ಗುಂಪಿಗೆ ಬಂದ ಗೌತಮ್ ಅದಾನಿ; ವಿಶ್ವ ಶ್ರೀಮಂತರ ಸ್ಥಾನಪಲ್ಲಟವಾಗಿದೆಯಾ?

ಎರಡು ಕಿಲೋ ವ್ಯಾಟ್ ಸೋಲಾರ್ ಸಿಸ್ಟಂ ಸ್ಥಾಪನೆಗೆ 1.2 ಲಕ್ಷ ರೂನಿಂದ 1.50 ಲಕ್ಷ ರೂ ವೆಚ್ಚವಾಗಬಹುದು. ಇದರಲ್ಲಿ ಶೇ. 40ರಷ್ಟು ಸಬ್ಸಿಡಿ ಸಿಗುತ್ತದೆ. ಸುಮಾರು 80,000 ರೂನಷ್ಟು ಹಣವನ್ನು ನಮ್ಮ ಕೈಯಿಂದ ಭರಿಸಬೇಕಾಗುತ್ತದೆ. ಅದಕ್ಕೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ನಾವು ವಿದ್ಯುತ್ ಉಳಿತಾಯದ ಮೂಲಕ ಉಳಿಸುವ ಹಣವನ್ನು ಇಎಂಐ ಮೂಲಕ ಕಟ್ಟಿಕೊಂಡು ಹೋಗಬಹುದು. ಹೀಗಾಗಿ, ಗ್ರಾಹಕರಿಗೆ ಹೆಚ್ಚಿನ ಹೊರೆ ಎನಿಸದು.

ಇನ್ನೊಂದು ಮುಖ್ಯ ವಿಷಯ ಎಂದರೆ, ಸೌರ ಫಲಕಗಳಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಮಾರಿ ಹಣ ಕೂಡ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ