EPFO Updates: ಇಟಿಎಫ್ನಲ್ಲಿನ ಹೂಡಿಕೆಯಿಂದ ಬಂದ ಶೇ. 50ರಷ್ಟು ಲಾಭದ ಹಣ ಈಕ್ವಿಟಿಗಳಲ್ಲಿ ಮರುಹೂಡಿಕೆ: ಇಪಿಎಫ್ಒ ಚಿಂತನೆ
ಇಟಿಎಫ್ಗಳಲ್ಲಿನ ತನ್ನ ಹೂಡಿಕೆಯಲ್ಲಿ ಹಿಂಪಡೆಯಲಾದ ಶೇ. 50ರಷ್ಟು ಮೊತ್ತವನ್ನು ಈಕ್ವಿಟಿಗಳಲ್ಲಿ ಮರುಹೂಡಿಕೆ ಮಾಡಲು ಇಪಿಎಫ್ಒ ಯೋಜಿಸಿದೆ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಈ ಪ್ರಸ್ತಾಪ ಮಾಡಲಾಗಿದೆ. ಫೆ. 10ರಂದು ನಡೆಯುವ ಇಪಿಎಫ್ಒನ ಸಿಬಿಟಿ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ.
ನವದೆಹಲಿ, ಫೆಬ್ರುವರಿ 8: ಇಪಿಎಫ್ಒ ತಾನು ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇಟಿಎಫ್ಗಳಿಂದ (ETF) ಹಿಂಪಡೆದ ಶೇ. 50ರಷ್ಟು ಹೂಡಿಕೆಯನ್ನು ಈಕ್ವಿಟಿಗಳಲ್ಲಿ ಮರುಹೂಡಿಕೆ ಮಾಡಲು ಆಲೋಚಿಸುತ್ತಿದೆ. ಉದ್ಯೋಗಿಗಳು ಹಾಗೂ ಸಂಸ್ಥೆಗಳಿಂದ ಸಂಗ್ರಹಿಸಲಾಗುವ ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿ ಅದರಿಂದ ಹೆಚ್ಚಿನ ಲಾಭ ಮಾಡುವುದು ಇಪಿಎಫ್ಒನ ಇರಾದೆಯಾಗಿದೆ. ಷೇರುಗಳಲ್ಲಿನ ಹೆಚ್ಚಿನ ಹೂಡಿಕೆಯಿಂದ ಸಿಗುವ ಲಾಭವನ್ನು ಇಪಿಎಫ್ ಸದಸ್ಯರಿಗೆ ವರ್ಗಾಯಿಸಲಾಗುತ್ತದೆ. ಇಂಥದ್ದೊಂದು ಸಾಧ್ಯತೆಯನ್ನು ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಸಂಸ್ಥೆ ಅವಲೋಕಿಸುತ್ತಿದೆ.
2023ರ ಅಕ್ಟೋಬರ್ ತಿಂಗಳಲ್ಲಿ ಇನ್ವೆಸ್ಟ್ಮೆಂಟ್ ಕಮಿಟಿ ಸಭೆಯಲ್ಲಿ ಈ ಪ್ರಸ್ತಾಪದ ಕುರಿತು ಚರ್ಚೆಯಾಗಿತ್ತು. ಇಪಿಎಫ್ಒದ ಕೇಂದ್ರೀಯ ಟ್ರಸ್ಟೀ ಮಂಡಳಿಯ (CBT- Central Board of Trustees) ಗಮನಕ್ಕೆ ಇದನ್ನು ತರಲಾಗುತ್ತಿದೆ. ಇದೇ ಶನಿವಾರ (ಫೆ. 10) ಸಿಬಿಟಿ ಸಭೆ ನಡೆಯಲಿದ್ದು ಇಟಿಎಫ್ನಿಂದ ಬಂದ ರಿಟರ್ನ್ ಅನ್ನು ಈಕ್ವಿಟಿಗಳಿಗೆ ಹೂಡಿಕೆ ಮಾಡಬೇಕೋ ಬೇಡವೋ ಎಂದು ನಿರ್ಧರಿಸಲಿದೆ.
ಇದನ್ನೂ ಓದಿ: ಮತ್ತೆ 100 ಬಿಲಿಯನ್ ಡಾಲರ್ ಗುಂಪಿಗೆ ಬಂದ ಗೌತಮ್ ಅದಾನಿ; ವಿಶ್ವ ಶ್ರೀಮಂತರ ಸ್ಥಾನಪಲ್ಲಟವಾಗಿದೆಯಾ?
ಇಪಿಎಫ್ಒ 2023-24ರ ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಅಕ್ಟೋಬರ್ವರೆಗೂ ಇಟಿಎಫ್ಗಳಲ್ಲಿ ಮಾಡಿದ ಹೂಡಿಕೆ 27,105 ಕೋಟಿ ರೂ ಆಗಿದೆ. ಕಳೆದ ಏಳು ವರ್ಷಗಳಲ್ಲಿ ಇಟಿಎಫ್ಗಳಲ್ಲಿ ಇಪಿಎಫ್ನಿಂದ ಆದ ಒಟ್ಟು ಹೂಡಿಕೆ ಬರೋಬ್ಬರಿ ಎರಡೂವರೆ ಲಕ್ಷ ಕೋಟಿ ರೂ ದಾಟಿದೆ.
ಇದೇ ವೇಳೆ, ಇಟಿಎಫ್ಗಳಲ್ಲಿ ಹೂಡಿಕೆ ಅವಧಿಯನ್ನು ಹೆಚ್ಚಿಸುವ ಪ್ರಸ್ತಾಪವೂ ಇದೆ. ಸದ್ಯ ಇಟಿಎಫ್ಗಳಲ್ಲಿ ಮಾಡಿರುವ ಹೂಡಿಕೆಯನ್ನು 4 ವರ್ಷದಲ್ಲಿ ಹಿಂಪಡೆಯಲಾಗುತ್ತಿದೆ. ಈ ಹೂಡಿಕೆ ಅವಧಿಯನ್ನು ನಾಲ್ಕು ವರ್ಷದಿಂದ ಏಳು ವರ್ಷಕ್ಕೆ ಹೆಚ್ಚಿಸಬೇಕೆನ್ನುವ ಪ್ರಸ್ತಾವವನ್ನು ಸಿಬಿಟಿ ಪರಿಶೀಲಿಸಲಿದ್ದು, ಶನಿವಾರ ನಿರ್ಧಾರ ತೆಗೆದುಕೊಳ್ಳಲಿದೆ.
ಇದನ್ನೂ ಓದಿ: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಇರುಪಾಯಿ ಬಳಕೆ: ಆರ್ಬಿಐ ಆಲೋಚನೆ
ಇಪಿಎಫ್ಒ ಸಂಸ್ಥೆ ಇಟಿಎಫ್ಗಳಿಂದ ಬಂದ ಲಾಭದ ಹಣವನ್ನು ಇಪಿಎಫ್ ಖಾತೆಗಳಿಗೆ ಬಡ್ಡಿ ರವಾನಿಸಲು ಬಳಸುತ್ತದೆ. ಸದ್ಯಕ್ಕೆ ಇಪಿಎಫ್ಗೆ ಸರ್ಕಾರ ಒಂದು ವರ್ಷದಲ್ಲಿ ಶೇ. 8.15ರಷ್ಟು ಬಡ್ಡಿ ನೀಡುತ್ತದೆ. ಅತಿಹೆಚ್ಚು ಬಡ್ಡಿ ತರುವ ಸರ್ಕಾರಿ ಪ್ರಾಯೋಜಿತ ಹೂಡಿಕೆ ಯೋಜನೆಗಳ ಪೈಕಿ ಇಪಿಎಫ್ ಕೂಡ ಒಂದು. ಈಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿ ಅದರಿಂದ ಹೆಚ್ಚಿನ ರಿಟರ್ನ್ ಸಿಕ್ಕರೆ ಇಪಿಎಫ್ ಖಾತೆಗಳಿಗೆ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ