ನವದೆಹಲಿ, ನವೆಂಬರ್ 22: ಭಾರತದ ಎರಡು ಅಗ್ರಗಣ್ಯ ಫೂಡ್ ಡೆಲಿವರಿ ಅಗ್ರಿಗೇಟಿಂಗ್ ಸಂಸ್ಥೆಗಳಾದ (food delivery aggregators) ಜೊಮ್ಯಾಟೋ ಮತ್ತು ಸ್ವಿಗ್ಗಿಗೆ ತೆರಿಗೆ ಅಧಿಕಾರಿಗಳ ದೃಷ್ಟಿ ತಾಕಿದೆ. ಈ ಎರಡು ಸಂಸ್ಥೆಗಳಿಂದ ಜಿಎಸ್ಟಿ ಬಾಕಿ ಇದೆ ಎಂದು ಲೆಕ್ಕ ಕೇಳಿ ನೋಟೀಸ್ ನೀಡಲಾಗಿದೆ. ಜಿಎಸ್ಟಿ ಇಂಟೆಲಿಜೆನ್ಸ್ ವಿಭಾಗದ ಮಹಾ ನಿರ್ದೇಶಕರು (ಡಿಜಿಜಿಐ) ಜೊಮ್ಯಾಟೋ ಸಂಸ್ಥೆಗೆ 400 ಕೋಟಿ ರೂ ಮೊತ್ತದ ಜಿಎಸ್ಟಿ ನೋಟೀಸ್ ಜಾರಿ ಮಾಡಿದೆ. ಇನ್ನು, ಸ್ವಿಗ್ಗಿ ಸಂಸ್ಥೆಗೆ 350 ರೂಗಳ ಜಿಎಸ್ಟಿ ನೋಟೀಸ್ ಕೊಡಲಾಗಿದೆ.
ಸಿಎನ್ಬಿಸಿ ಟಿವಿ18 ವಾಹಿನಿಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಆಹಾರ ಡೆಲಿವರಿಯನ್ನು ಸರ್ವಿಸ್ ಎಂದು ಪರಿಗಣಿಸಲಾಗಿದೆ. 2017ರ ಜುಲೈನಿಂದ 2023ರ ಮಾರ್ಚ್ವರೆಗಿನ ಅವಧಿಯಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೋ ಕಂಪನಿಗಳು ಜಿಎಸ್ಟಿ ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಜೊಮ್ಯಾಟೋ 251 ಕೋಟಿ ರೂ ನಷ್ಟ ಕಂಡಿತ್ತು. ಈ ವರ್ಷದ ಸೆಪ್ಟೆಂಬರ್ನಲ್ಲಿ 36 ಕೋಟಿ ರೂ ನಿವ್ವಳ ಲಾಭ ಪಡೆದಿದೆ. ಅದರ ಕಾರ್ಯಾಚರಣೆಗಳಿಂದ ಬಂದ ಆದಾಯ ಸೆಪ್ಟೆಂಬರ್ನಲ್ಲಿ 2,848 ಕೋಟಿ ರೂ ಇದೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ 1,661 ಕೋಟಿ ರೂ ಆದಾಯ ಬಂದಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 72ರಷ್ಟು ಆದಾಯ ಹೆಚ್ಚಳವಾಗಿದೆ.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ? 6 ದಿನ ಬ್ಯಾಂಕ್ ಮುಷ್ಕರದ ಬರೆ
ಇನ್ನು, ಸ್ವಿಗ್ಗಿ ಸಂಸ್ಥೆ 2023ರ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ನಿವ್ವಳ ಲಾಭ ಕಂಡಿತ್ತು.
ಸ್ವಿಗ್ಗಿ ಮತ್ತು ಜೊಮ್ಯಾಟೋ ಪೈಕಿ ಜೊಮ್ಯಾಟೋ ಷೇರುಪೇಟೆಯಲ್ಲಿ ಲಿಸ್ಟ್ ಆಗಿದೆ. ಜೊಮ್ಯಾಟೋದ ಷೇರು ಸದ್ಯ 115.45 ರೂ ಇದೆ. ಎರಡು ವರ್ಷದ ಹಿಂದೆ ಷೇರುಪೇಟೆಯಲ್ಲಿ ಲಿಸ್ಟ್ ಆಗಿದ್ದ ದರದಷ್ಟೇ ಈಗಲೂ ಷೇರುಬೆಲೆ ಇದೆ. 2021ರ ಜುಲೈನಲ್ಲಿ ಜೊಮ್ಯಾಟೋ 115-116 ರೂಗೆ ಲಿಸ್ಟ್ ಆಗಿತ್ತು. ಒಂದು ಹಂತದಲ್ಲಿ 44 ರುಪಾಯಿಗೆ ಬೆಲೆ ಕುಸಿದಿತ್ತು. ಈ ವರ್ಷ ಜನವರಿಯಿಂದೀಚೆ ಜೊಮ್ಯಾಟೋ ಷೇರುಬೆಲೆ ಸಾಕಷ್ಟು ಚೇತರಿಸಿಕೊಂಡಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ