
ನವದೆಹಲಿ, ಜೂನ್ 5: ಟಾಟಾ ಗ್ರೂಪ್ ಮತ್ತು ಆ್ಯಪಲ್ ಕಂಪನಿ ನಡುವಿನ ವ್ಯವಹಾರ ದಿನೇ ದಿನೇ ಗಾಢಗೊಳ್ಳುತ್ತಿದೆ. ಆ್ಯಪಲ್ ಕಂಪನಿಗಾಗಿ ಭಾರತದಲ್ಲಿ ಐಫೋನ್ ಅಸೆಂಬ್ಲಿಂಗ್ ಮಾಡಿಕೊಡುತ್ತಿರುವ ಟಾಟಾ ಸಂಸ್ಥೆ ಈಗ ಐಫೋನ್ ದುರಸ್ತಿಯ ಬ್ಯುಸಿನೆಸ್ ಅನ್ನೂ ಪಡೆದಿದೆ. ಆ್ಯಪಲ್ ಕಂಪನಿಯ ಐಫೋನ್ ಮತ್ತು ಮ್ಯಾಕ್ಬುಕ್ ಸಾಧನಗಳ ಆಫ್ಟರ್ ಸೇಲ್ಸ್ ಸರ್ವಿಸ್ ಕಾರ್ಯಗಳನ್ನು ಟಾಟಾ ಕಂಪನಿಯೇ ಮಾಡಲಿದೆ.
ಭಾರತದಲ್ಲಿ ಐಫೋನ್ ಮಾರಾಟ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಾಗಲಿರುವುದರಿಂದ ಟಾಟಾಗೆ ಈ ಸರ್ವಿಸ್ ದೊಡ್ಡ ಬ್ಯುಸಿನೆಸ್ ಎನಿಸಲಿದೆ. ಅಷ್ಟೇ ಅಲ್ಲ, ಆ್ಯಪಲ್ ಕಂಪನಿಯ ಪ್ರಮುಖ ಸರಬರಾಜುದಾರರ ಸಾಲಿಗೆ ಟಾಟಾ ಸಂಸ್ಥೆ ಸೇರಲಿದೆ.
ಇದನ್ನೂ ಓದಿ: ಭಾರತದಲ್ಲಿ ತಯಾರಾಗಲಿದೆ ರಫೇಲ್ ಯುದ್ಧವಿಮಾನದ ಫ್ಯೂಸಲಾಜ್; ಡಸೋ ಏವಿಯೇಶನ್ ಜೊತೆ ಟಾಟಾ ಗ್ರೂಪ್ ಒಪ್ಪಂದ
ತೈವಾನ್ ಮೂಲದ ವಿಸ್ಟ್ರಾನ್ ಸಂಸ್ಥೆಯ ಐಸಿಟಿ ಸರ್ವಿಸ್ ಮ್ಯಾನೇಜ್ಮೆಂಟ್ ಸಲ್ಯೂಶನ್ಸ್ ವಿಭಾಗವು ಐಫೋನ್ನ ಆಫ್ಟರ್ ಸೇಲ್ಸ್ ಸರ್ವಿಸ್ ಕಾರ್ಯಗಳನ್ನು ಮಾಡುತ್ತದೆ. ಈಗ ಈ ವ್ಯವಹಾರವನ್ನು ಟಾಟಾ ಸಂಸ್ಥೆ ಪಡೆದಿದೆ. ಕರ್ನಾಟಕದಲ್ಲಿರುವ ಐಫೋನ್ ಅಸೆಂಬ್ಲಿಂಗ್ ಯುನಿಟ್ನಲ್ಲೇ ರಿಪೇರಿ ಸರ್ವಿಸ್ ಕೂಡ ನಡೆಯಲಿದೆ.
ಕೋಲಾರದ ನರಸಾಪುರದಲ್ಲಿ ಈಗ ಟಾಟಾ ಕಂಪನಿಯ ಐಫೋನ್ ಘಟಕ ಏನಿದೆಯೋ ಅದು ಹಿಂದೆ ವಿಸ್ಟ್ರಾನ್ನದ್ದಾಗಿತ್ತು. ಆ್ಯಪಲ್ನ ಪ್ರಮುಖ ಸರಬರಾಜುದಾರರಲ್ಲಿ ವಿಸ್ಟ್ರಾನ್ ಕೂಡ ಒಂದು. ಆದರೆ, ಭಾರತದಲ್ಲಿ ತನ್ನ ಐಫೋನ್ ಅಸೆಂಬ್ಲಿಂಗ್ ವ್ಯವಹಾರವನ್ನು ಟಾಟಾ ಕಂಪನಿಗೆ ಮಾರಿದೆ. ಅದೂ ಸೇರಿದಂತೆ ಭಾರತದಲ್ಲಿ ಟಾಟಾ ಕಂಪನಿ ಮೂರು ಐಫೋನ್ ಮ್ಯಾನುಫ್ಯಾಕ್ಚರಿಂಗ್ ಯುನಿಟ್ಗಳನ್ನು ಹೊಂದಿದೆ. ಈ ಪೈಕಿ ಒಂದು ಯುನಿಟ್ನಲ್ಲಿ ಐಫೋನ್ನ ಬಿಡಿಭಾಗಗಳನ್ನು ತಯಾರಿಸುವ ಕೆಲಸ ಮಾಡುತ್ತದೆ ಟಾಟಾ.
ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ
ಇತ್ತ, ವಿಸ್ಟ್ರಾನ್ ಸಂಸ್ಥೆಯು ಬೇರೆ ಕೆಲ ಕ್ಲೈಂಟ್ಗಳಿಗೆ ಆಫ್ಟರ್ ಸೇಲ್ಸ್ ಸರ್ವಿಸ್ ಒದಗಿಸುವುದನ್ನು ಮುಂದುವರಿಸಲಿದೆ. ಆದರೆ, ಭಾರತದಲ್ಲಿ ಆ್ಯಪಲ್ ಕಂಪನಿಯೊಂದಿಗೆ ವಿಸ್ಟ್ರಾನ್ನ ನಂಟು ಬಹುತೇಕ ಸಮಾಪ್ತಿಯಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ