ಭಾರತದಲ್ಲಿ ತಯಾರಾಗಲಿದೆ ರಫೇಲ್ ಯುದ್ಧವಿಮಾನದ ಫ್ಯೂಸಲಾಜ್; ಡಸೋ ಏವಿಯೇಶನ್ ಜೊತೆ ಟಾಟಾ ಗ್ರೂಪ್ ಒಪ್ಪಂದ
Tata Advanced Systems sign agreements with Dassault Aviation: ರಫೇಲ್ ಫೈಟರ್ ಜೆಟ್ನ ಫ್ಯೂಸಲಾಜ್ ತಯಾರಿಕೆಗಾಗಿ ಡಸ್ಸೋ ಏವಿಯೇಶನ್ ಜೊತೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಒಪ್ಪಂ ಮಾಡಿಕೊಂಡಿದೆ. ಹೈದರಾಬಾದ್ನಲ್ಲಿ ಉತ್ಪಾದನಾ ಸೌಲಭ್ಯ ನಿರ್ಮಾಣವಾಗಲಿದ್ದು, 2027-28ರಲ್ಲಿ ಮೊದಲ ಫ್ಯೂಜಲಾಜ್ ತಯಾರಾಗಬಹುದು. ತಿಂಗಳಿಗೆ ಎರಡು ಫ್ಯೂಸಲಾಜ್ಗಳು ಇಲ್ಲಿ ತಯಾರಾಗುವ ಸಾಧ್ಯತೆ ಇದೆ.

ನವದೆಹಲಿ, ಜೂನ್ 5: ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್ನ ಮುಖ್ಯ ಭಾಗವು ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಾಗಲಿದೆ. ಫ್ರಾನ್ಸ್ ದೇಶದ ಡಸ್ಸೋ ಏವಿಯೇಶನ್ ಜೊತೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಒಪ್ಪಂದಗಳನ್ನು ಮಾಡಿಕೊಂಡಿದೆ. ಏರ್ಕ್ರಾಫ್ಟ್ನ ಮುಖ್ಯ ಭಾಗವಾದ ಫ್ಯೂಸಲಾಜ್ ಅನ್ನು ತಯಾರಿಸಲು ಈ ಒಪ್ಪಂದಗಳಾಗಿರುವುದು. ನಾಲ್ಕು ಉತ್ಪಾದನಾ ವರ್ಗಾವಣೆ ಒಪ್ಪಂದಗಳಿಗೆ ಟಾಟಾ ಕಂಪನಿ ಸಹಿ ಹಾಕಿದೆ. ಗಮನಾರ್ಹ ಸಂಗತಿ ಎಂದರೆ ರಫೇಲ್ ಫ್ಯೂಸಲಾಜ್ಗಳನ್ನು ಇಲ್ಲಿಯವರೆಗೆ ಫ್ರಾನ್ಸ್ ಬಿಟ್ಟು ಬೇರೆ ದೇಶಗಳಲ್ಲಿ ತಯಾರಿಸಲಾಗಿಲ್ಲ. ಭಾರತ ಈ ವಿಚಾರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ.
ವಿಮಾನದ ಮುಖ್ಯ ಅಂಗ ಫ್ಯೂಸಲಾಜ್
ಮನುಷ್ಯನಿಗೆ ಅಸ್ಥಿಪಂಜರ ಇದ್ದಂತೆ ವಿಮಾನಗಳಿಗೆ ಫ್ಯೂಸಲಾಜ್ ಇರುತ್ತದೆ. ಇದು ವಿಮಾನದ ಹೊರಕವಚ. ವಿಮಾನದ ಎಲ್ಲಾ ಭಾಗಗಳಿಗೂ ಇದು ಕೊಂಡಿ ಇದ್ದಂತೆ. ವಿಮಾನ ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬುದರ ಮೇಲೆ ಫ್ಯೂಸಲಾಜ್ನ ರೂಪುರೇಖೆಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ
ಹೈದರಾಬಾದ್ನಲ್ಲಿ ಫ್ಯೂಸಲಾಜ್ ತಯಾರಿಕಾ ಘಟಕ
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಯು ಹೈದರಾಬಾದ್ನಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದೆ. ಫ್ಯೂಜಲಾಜ್ನ ವಿವಿಧ ಭಾಗಗಳನ್ನು ಇಲ್ಲಿ ತಯಾರಿಸಲಾಗುತ್ತದೆ.
ವರದಿ ಪ್ರಕಾರ, 2027-28ರಲ್ಲಿ ಇಲ್ಲಿಂದ ಮೊದಲ ಫ್ಯೂಸಲಾಜ್ ಭಾಗ ಹೊರಬರುವ ನಿರೀಕ್ಷೆ ಇದೆ. ತಿಂಗಳಿಗೆ ಎರಡು ಫ್ಯೂಸಲಾಜ್ಗಳನ್ನು ಈ ಘಟಕದಲ್ಲಿ ತಯಾರಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜಿಎಸ್ಟಿಯಲ್ಲಿ ಬದಲಾವಣೆ? ಇನ್ಮುಂದೆ ಇರಲ್ಲವಾ ಶೇ. 12ರ ಟ್ಯಾಕ್ಸ್ ಸ್ಲ್ಯಾಬ್? ಇಲ್ಲಿದೆ ಡೀಟೇಲ್ಸ್
ಡಸ್ಸೋ ಏವಿಯೇಶನ್ ಸಪ್ಲೈ ಚೈನ್ಗೆ ಬಲ
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ರಫೇಲ್ ಫ್ಯೂಸಲಾಜ್ ತಯಾರಿಸುತ್ತಿರುವುದು ಡಸ್ಸೋ ಏವಿಯೇಶನ್ ಕಂಪನಿಯ ಜಾಗತಿಕ ಸರಬರಾಜು ಸರಪಳಿಯ ಭಾಗವಾಗಿ. ರಫೇಲ್ ತಯಾರಿಕೆಯ ಭಾಗವಾಗಿ ಭಾರತದಲ್ಲಿ ತನ್ನ ಸಪ್ಲೈ ಚೈನ್ ಅನ್ನು ಡಸ್ಸೋ ವಿಸ್ತರಿಸಿದಂತಾಗುತ್ತದೆ. ಫ್ರಾನ್ಸ್ ಹೊರಗೆ ಭಾರತದಲ್ಲಿ ಮಾತ್ರವೇ ಫ್ಯೂಸಲಾಜ್ಗಳು ತಯಾರಾಗುತ್ತಿರುವುದು ಗಮನಾರ್ಹ ಸಂಗತಿ. ಡಸ್ಸೋ ಏವಿಯೇಶನ್ ಸಂಸ್ಥೆಯ ಸಿಇಒ ಎರಿಕ್ ಟ್ರಾಪಿಯರ್ ಅವರು ಭಾರತದಲ್ಲಿ ತಯಾರಾಗುವ ಫ್ಯೂಜಲಾಜ್ಗಳು ಸಂಪೂರ್ಣ ಗುಣಮಟ್ಟ ಕಾಯ್ದುಕೊಂಡಿರುತ್ತವೆ ಎಂದು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




