RCB secrets: ಆರ್ಸಿಬಿಗೆ ಈ ಪರಿ ಹುಚ್ಚು ಅಭಿಮಾನಿಗಳು ಸಿಕ್ಕಿದ್ದು ಹೇಗೆ? ಇತರ ಫ್ರಾಂಚೈಸಿಗಳಿಗಿಂತ ಇದು ಹೇಗೆ ಭಿನ್ನ?
Secrets of RCB's great fan following: ಆರ್ಸಿಬಿ ಐಪಿಎಲ್ ಗೆದ್ದಾಗ ಇಡೀ ರಾತ್ರಿ ಬೆಂಗಳೂರು ಸಂಭ್ರಮಿಸಿದ್ದು, ಮಾರನೆ ದಿನ ಸಂಭ್ರಮಾಚರಣೆಯಲ್ಲಿ ನೂಕುನುಗ್ಗಲು ದುರಂತವಾಗಿದ್ದು ಆ ತಂಡಕ್ಕೆ ಅದೆಂಥ ಪ್ರಬಲ ಅಭಿಮಾನಿ ಸಮುದಾಯ ಇದೆ ಎಂದು ಯಾರಿಗಾದರೂ ಅರ್ಥವಾಗಬಹುದು. ಇಷ್ಟು ಹುಚ್ಚು ಅಭಿಮಾನಿಗಳನ್ನು ಆರ್ಸಿಬಿ ಹೇಗೆ ಸಂಪಾದಿಸಿತು ಎನ್ನುವುದೇ ಬಹಳ ಕುತೂಹಲ ಎನಿಸುವ ವಿಷಯ.

ಬೆಂಗಳೂರು, ಜೂನ್ 5: ನಿನ್ನೆ ಆರ್ಸಿಬಿ (RCB) ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭೀಕರ ನೂಕುನುಗ್ಗಲುಗಳಾಗಿ 10-11 ಮಂದಿ ಬಲಿಯಾದ ದುರಂತ ಘಟನೆ ಸಂಭವಿಸಿತು. ಆರ್ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯು ಶೋಕಾಚರಣೆಯಾಯಿತು. ಐಪಿಎಲ್ ಗೆಲುವಿನ ಗುಂಗಿನಲ್ಲಿದ್ದ ತಂಡದ ಆಟಗಾರರಿಗೆ ಒಂದು ರೀತಿಯಲ್ಲಿ ಇದು ಆ್ಯಂಟಿ-ಕ್ಲೈಮ್ಯಾಕ್ಸ್ ಎನಿಸಿತ್ತು. ಜೂನ್ 3ರಂದು ರಾತ್ರಿ ಐಪಿಎಲ್ ಫೈನಲ್ ಮುಗಿದಾಗಲೇ ಇಡೀ ಬೆಂಗಳೂರು ದೀಪಾವಳಿ ಹಬ್ಬದ ರೀತಿಯಲ್ಲಿ ಕಂಗೊಳಿಸಿತ್ತು. ಮಾರನೆ ದಿನವೇ ಸಂಭ್ರಮಾಚರಣೆ ಆಯೋಜಿಸಿ ಯಡವಟ್ಟು ಮಾಡಲಾಯಿತು. ಗರಿಷ್ಠ 40-50 ಸಾವಿರ ಜನರನ್ನು ಹಿಡಿದಿಡಬಲ್ಲ ಸ್ಟೇಡಿಯಂನೊಳಗೆ ಆವೇಶಭರಿತರಾದ ಲಕ್ಷಕ್ಕೂ ಹೆಚ್ಚು ಜನರು ಸೇರಿದರೆ ನೂಕುನುಗ್ಗಲುಗಳಾಗದೇ ಮತ್ತಿನ್ನೇನು?
ಆರ್ಸಿಬಿಗೆ ಇಷ್ಟೊಂದು ಬಲಿಷ್ಠ, ನಿಷ್ಠ ಅಭಿಮಾನಿಗಳು ಸಿಕ್ಕಿದ್ದು ಹೇಗೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದ ಐಪಿಎಲ್ನ ಎಂಟು ತಂಡಗಳಲ್ಲಿ ಒಂದು. ಲಲಿತ್ ಮೋದಿ ಮಾಸ್ಟರ್ ಮೈಂಡ್ನಲ್ಲಿ ರೂಪುಗೊಂಡ ಐಪಿಎಲ್ ಎನ್ನುವುದೇ ಬಹಳ ದೊಡ್ಡ ಸಕ್ಸಸ್ ಎನಿಸಿತು. ಫ್ರಾಂಚೈಸಿ ಮಾಡಲ್ನಲ್ಲಿ ಟೂರ್ನಿ ನಡೆಸುವ ನಿರ್ಧಾರ ವರ್ಕೌಟ್ ಆಗಿತ್ತು. ಎಲ್ಲಾ ತಂಡಗಳಿಗೂ ಸಮಾನವಾದ ಅವಕಾಶ ನೀಡಲಾಯಿತು. ಸಮಾನವಾಗಿ ಪರಿಮಿತಿಗಳನ್ನೂ ಹಾಕಲಾಯಿತು. ಇಷ್ಟರ ಮಧ್ಯೆ ಸಿಎಸ್ಕೆ, ಆರ್ಸಿಬಿಯಂತಹ ತಂಡಗಳ ಜನಪ್ರಿಯತೆ ಮತ್ತು ಅಭಿಮಾನಿಗಳ ಬಳಗ ಬಹಳ ಏರಿಕೆ ಆಯಿತು.
ವಿಜಯ್ ಮಲ್ಯ ಎನ್ನುವ ಮೋಡಿ ಮನುಷ್ಯ ಹಾಕಿದ ಅಡಿಪಾಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸೀಸನ್ನಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿತು. ಆರ್ಸಿಬಿ ಎಂದರೇ ಒಂದು ವಿಶಿಷ್ಠ ಬ್ರ್ಯಾಂಡ್ ಆಗಿ ಹೋಗಿತ್ತು. ಅದಕ್ಕೆ ಹೆಚ್ಚಿನ ಕಾರಣ ವಿಜಯ್ ಮಲ್ಯ. ಇವರು ಆಗ ಬಹಳ ದೊಡ್ಡ ಉದ್ಯಮಿ. ಮದ್ಯದ ದೊರೆ ಎನಿಸಿದವರು. ಕಿಂಗ್ಫಿಶರ್ ಏರ್ಲೈನ್ಸ್ ನಡೆಸುತ್ತಿದ್ದವರು. ವೈಯಕ್ತಿಕವಾಗಿ ಬಹಳ ಶೋಕಿಯ ಮನುಷ್ಯ. ಈತನ ಸುತ್ತಲೂ ಸುಂದರಿಯರು, ಸ್ಟಾರ್ಗಳೇ ಇರುತ್ತಿದ್ದರು. ಐಪಿಎಲ್ ಪಂದ್ಯ ಮುಗಿದ ಮೇಲೆ ಇವರು ಆಯೋಜಿಸುತ್ತಿದ್ದ ನೈಟ್ ಪಾರ್ಟಿಗಳಲ್ಲಿ ಸ್ಟಾರ್ ನಟ ನಟಿಯರು, ಮಾಡಲ್ಗಳು ಮತ್ತು ಕ್ರಿಕೆಟಿಗರು ಸಮ್ಮಿಳನವೇ ಆಗುತ್ತಿತ್ತು. ಇಂಥದ್ದೊಂದು ಇಮೇಜ್ ಆರ್ಸಿಬಿ ತಂಡದ ವರ್ಚಸ್ಸು ಬೆಳೆಸಲು ಸಹಾಯಕವಾಯಿತು.
ಇದನ್ನೂ ಓದಿ: ಗಗನಕ್ಕೇರಿತಾ ಆರ್ಸಿಬಿ ಬ್ರ್ಯಾಂಡ್ ಮೌಲ್ಯ? ಜಾಗತಿಕ ಬ್ರ್ಯಾಂಡ್ಗಳಿಗೆ ಹೋಲಿಸಿದರೆ ಹೇಗಿದೆ ರಾಯಲ್ ಚಾಲೆಂಜರ್ಸ್?
ಬಿಡುಬೀಸು ಬ್ಯಾಟುಗಾರರ ಬಳಗವಾಗಿತ್ತು ಆರ್ಸಿಬಿ
ನೀವು ಆರ್ಸಿಬಿಯ 18 ವರ್ಷದ ಇತಿಹಾಸ ತೆಗೆದುಕೊಂಡರೆ ಐಪಿಎಲ್ನ ಲೆಜೆಂಡ್ರಿ ಬ್ಯಾಟುಗಾರರು ಅದರ ಭಾಗವಾಗಿದ್ದಾರೆ. ಐಪಿಎಲ್ನ ಮೊದಲ ಸೀಸನ್ನಿಂದಲೂ ವಿರಾಟ್ ಕೊಹ್ಲಿ ಇದ್ದಾರೆ. ಆರಂಭದಲ್ಲಿ ವಿರಾಟ್ ಎಂದರೆ ಆ್ಯಂಗ್ರಿ ಯಂಗ್ ಮ್ಯಾನ್ ಎನ್ನುವ ಇಮೇಜ್ ಎದ್ದು ಕಾಣುತ್ತಿತ್ತು. ಕ್ರಿಸ್ ಗೇಲ್, ಎಬಿ ಡೀವಿಲಿಯರ್ಸ್, ಗ್ಲೆನ್ ಮ್ಯಾಕ್ಸ್ವೆಲ್ ಅವರಂಥ ಕ್ರಿಕೆಟಿಗರು ಈ ತಂಡದಲ್ಲಿ ಹಲವು ವರ್ಷ ಆಡಿ ಹೋಗಿದ್ದಾರೆ. ಈ ಮೂವರೂ ಕೂಡ ಕ್ರಿಕೆಟ್ ದಂತಕಥೆಗಳೇ. ಅಬ್ಬರದ ಬ್ಯಾಟಿಂಗ್ ಮಾಡುವವರು. ಗೇಲ್ ಉತ್ತುಂಗದ ಫಾರ್ಮ್ನಲ್ಲಿದ್ದಾಗ ಅವರಿಗೆ ಬೌಲರ್ಗಳು ಚೆಂಡೆಸೆಯಲು ಹೆದರುತ್ತಿದ್ದುಂಟು.
ಇನ್ನು, ಸೌತ್ ಆಫ್ರಿಕನ್ ಕ್ರಿಕೆಟಿಗ ಎಬಿ ಡೀವಿಲಿಯರ್ಸ್ ಮಿಸ್ಟರ್ 360 ಡಿಗ್ರಿ ಎಂದು ಹೆಸರಾದವರು. ಇವರು ಸಿಕ್ಸರ್ ಹೊಡೆದರೆ ಬೌಲರ್ ಕೂಡ ಚಪ್ಪಾಳೆ ತಟ್ಟುತ್ತಿದ್ದುದು ಉಂಟು. ಅಂಥ ಅದ್ಭುತ ಇಮೇಜ್ ಇರುವ ಆಟಗಾರ. ಎಬಿಡಿ ರೀತಿಯವರೇ ಗ್ಲೆನ್ ಮ್ಯಾಕ್ಸ್ವೆಲ್. ಇಂಥ ಅಮೋಘ ಬ್ಯಾಟರ್ಗಳಿದ್ದ ಆರ್ಸಿಬಿ ತಂಡಕ್ಕೆ ಅಭಿಮಾನಿಗಳ ಬಳಗ ಹೆಚ್ಚದೇ ಇರಲು ಕಾರಣಗಳೇ ಇಲ್ಲ.
ಹೊರ ರಾಜ್ಯಗಳಲ್ಲೂ ಆರ್ಸಿಬಿಗೆ ಅಭಿಮಾನಿಗಳು ಹುಟ್ಟಲು ಏನು ಕಾರಣ?
ಇದಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಆರ್ಸಿಬಿಗೆ ಬಂದ ಹೊಸದರಲ್ಲಿ ವಿರಾಟ್ ಅವರು ಭಾರತದ ಭರವಸೆಯ ಕ್ರಿಕೆಟಿಗರೆನಿಸಿದ್ದರು. ಆನ್ಫೀಲ್ಡ್ನಲ್ಲಿ ತಮ್ಮ ಆಕ್ರಮಣಕಾರಿ ವೈಖರಿಯಿಂದ ಯುವಜನರನ್ನು ಸೂಜಿಗಲ್ಲಿನಂತೆ ಸೆಳೆದವರು. ಹೀಗಾಗಿ, ರಾಷ್ಟ್ರಾದ್ಯಂತ ಬಹಳ ಕ್ರಿಕೆಟ್ ಅಭಿಮಾನಿಗಳು ಆರ್ಸಿಬಿ ಪರ ಒಂದು ರೀತಿಯಲ್ಲಿ ಆಸಕ್ತಿ, ಕುತೂಹಲ, ಒಲವು ಬೆಳೆಸಿಕೊಂಡಿದ್ದುಂಟು.
ಇದನ್ನೂ ಓದಿ: ಆರ್ಸಿಬಿ ಗೆಲುವಿನಿಂದ ಹಿಗ್ಗಿದ್ದು ಅಭಿಮಾನಿಗಳು ಮಾತ್ರವಲ್ಲ, ಈ ವಿದೇಶೀ ಕಂಪನಿಯ ಷೇರುಸಂಪತ್ತೂ ಏರಿಕೆ
ಈ ಮೊದಲು ತಿಳಿಸಿದಂತೆ, ಕ್ರಿಸ್ ಗೇಲ್, ಎಬಿಡಿ, ಮ್ಯಾಕ್ಸ್ವೆಲ್ನಂತಹ ಅದ್ಭುತ ಬ್ಯಾಟರುಗಳ ಉಪಸ್ಥಿತಿಯೂ ರಾಷ್ಟ್ರವ್ಯಾಪಿ ಆರ್ಸಿಬಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ.
ಸ್ಥಳೀಯ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ ಈ ಸಲ ಕಪ್ ನಮ್ದೇ
ಆರ್ಸಿಬಿ ತಂಡದಲ್ಲಿ ಆರಂಭದ ಸೀಸನ್ಗಳಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿನಯ್ ಕುಮಾರ್ ಇದ್ದದ್ದು ಬಿಟ್ಟರೆ ಹೆಚ್ಚಿನ ಸೀಸನ್ಗಳಲ್ಲಿ ಕನ್ನಡದ ಐಡೆಂಟಿಟಿ ಇರುವ ಸ್ಥಳೀಯ ಆಟಗಾರರ ಉಪಸ್ಥಿತಿ ತೀರಾ ಕಡಿಮೆ. ಆದರೂ ಕೂಡ ಕರ್ನಾಟಕಾದ್ಯಂತ ಹುಚ್ಚು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.
ಇದಕ್ಕೆ ಕಾರಣ, ಕೆಲ ಮಾರ್ಕೆಟಿಂಗ್ ತಂತ್ರಗಳು. ಮಿಸ್ಟರ್ ನಾಗ್ಸ್ (ಡೇನಿಯಲ್ ಸೇಠ್) ಮೂಲಕ ಕನ್ನಡಿಗರಿಗೆ ಖುಷಿಪಡಿಸುವ ಮೀಮ್ಸ್ಗಳನ್ನು ಆರ್ಸಿಬಿ ನಿರಂತರವಾಗಿ ಹೊರತರುತ್ತಿತ್ತು. ‘ಈ ಸಲ ಕಪ್ ನಮ್ದೇ’ ಎನ್ನುವ ಸ್ಲೋಗನ್ ಆರ್ಸಿಬಿಗೆ ಪವರ್ ಕೊಟ್ಟಿತು.
ಪ್ರತೀ ಸೀಸನ್ನಲ್ಲೂ ಅದ್ಭುತ ಕ್ರಿಕೆಟಿಗರಿದ್ದರೂ ಆರ್ಸಿಬಿಗೆ ಕಪ್ ಗೆಲ್ಲಲು ಆಗುತ್ತಿರಲಿಲ್ಲ. ಅಭಿಮಾನಿಗಳಿಗೆ ನಿರಾಸೆಯಾದರೂ ತಂಡದ ಮೇಲೆ ಭರವಸೆ ಮಾತ್ರ ಹೋಗದೇ ಇರಲು ಸಾಧ್ಯವಾಗಿದ್ದು ಈ ಲೆಜೆಂಡ್ರಿ ಕ್ರಿಕೆಟಿಗರ ಉಪಸ್ಥಿತಿ. ಈ ಸಲ ಅಲ್ಲವಾದರೂ ಮುಂದಿನ ಸಲ ತಂಡ ಗೆಲ್ಲುತ್ತೆ ಎನ್ನುವ ಭರವಸೆ ಮುಂದುವರಿದೇ ಇತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ