AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​ಸಿಬಿ ಗೆಲುವಿನಿಂದ ಹಿಗ್ಗಿದ್ದು ಅಭಿಮಾನಿಗಳು ಮಾತ್ರವಲ್ಲ, ಈ ವಿದೇಶೀ ಕಂಪನಿಯ ಷೇರುಸಂಪತ್ತೂ ಏರಿಕೆ

Link of RCB's real owner with Vijay Mallya: ಆರ್‌ಸಿಬಿ ತಂಡದ ಮಾಲಕತ್ವವು ಯುನೈಟೆಡ್ ಬ್ರೆವರೀಸ್ ಕಂಪನಿಯದ್ದಾಗಿದೆ. ಇದು ಲಂಡನ್ ಮೂಲದ ಡಿಯಾಜಿಯೋ ಕಂಪನಿಯ ಮಾಲಕತ್ವದಲ್ಲಿದೆ. ಆರ್​​ಸಿಬಿ ತಂಡ ಐಪಿಎಲ್ ಗೆದ್ದ ಬಳಿಕ ಈ ಎರಡೂ ಕಂಪನಿಗಳ ಷೇರುಬೆಲೆ ಹೆಚ್ಚಾಗಿದೆ. ಯುನೈಟೆಡ್ ಬ್ರಿವರೀಸ್ ಭಾರತದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದರೆ, ಡಿಯಾಜಿಯೋ ಲಂಡನ್ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ.

ಆರ್​​ಸಿಬಿ ಗೆಲುವಿನಿಂದ ಹಿಗ್ಗಿದ್ದು ಅಭಿಮಾನಿಗಳು ಮಾತ್ರವಲ್ಲ, ಈ ವಿದೇಶೀ ಕಂಪನಿಯ ಷೇರುಸಂಪತ್ತೂ ಏರಿಕೆ
ಆರ್​​ಸಿಬಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 04, 2025 | 4:05 PM

Share

ಬೆಂಗಳೂರು, ಜೂನ್ 4: ನಿನ್ನೆ ಆರ್​​ಸಿಬಿ (RCB) ಮೊತ್ತಮೊದಲ ಬಾರಿಗೆ ಐಪಿಎಲ್ (IPL 2025) ಟ್ರೋಫಿ ಎತ್ತಿ ಹಿಡಿದು 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿದೆ. ಅಹ್ಮದಾಬಾದ್​​ನಲ್ಲಿ ನಿನ್ನೆ ನಡೆದ ಫೈನಲ್​​ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್​​ಸಿಬಿ ಅಮೋಘ ಗೆಲುವು ಸಾಧಿಸಿತು. ಈ ಫೈನಲ್ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 20 ಕೋಟಿ ರೂ ಸಿಕ್ಕಿತು. ಆರ್​​ಸಿಬಿಯ ನಿಷ್ಠಾತಿನಿಷ್ಠ ಅಭಿಮಾನಿಗಳು ಸಂತುಷ್ಟರಾದರು. ಆರ್​​ಸಿಬಿಯ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಯಿತು. ಈ ಮಧ್ಯೆ ಆರ್​​ಸಿಬಿಯ ಮಾಲೀಕರ ಬಗ್ಗೆ ಯಾರದ್ದೂ ಸೊಲ್ಲು ಕೇಳಿಬರುತ್ತಿಲ್ಲ. ವಿಜಯ್ ಮಲ್ಯ ನಿರ್ಗಮಿಸಿದ ಬಳಿಕ ಆರ್​​​ಸಿಬಿ ಮಾಲೀಕರು ಯಾರು ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಅಷ್ಟರಮಟ್ಟಿಗೆ ಮಲ್ಯ ಅವರು ಬೆಂಗಳೂರು ತಂಡದ ಬುಡವನ್ನು ಭದ್ರಗೊಳಿಸಿದ್ದರು. ಈ ಮಧ್ಯೆ ಆರ್​​ಸಿಬಿ ಐಪಿಎಲ್ ಎತ್ತಿ ಹಿಡಿದಾಗ ವಿದೇಶೀ ಕಂಪನಿಯೊಂದರ ಸಂಪತ್ತು ಗರಿಗೆದರಿದಿದೆ. ಆ ಕಂಪನಿಯೇ ಡಯಾಜಿಯೊ ರಿಲೇ (Diageo Relay BV). ಲಂಡನ್​​ನಲ್ಲಿರುವ ಈ ಡಯಾಜಿಯೋ ಒಂದೇ ದಿನದಲ್ಲಿ 3,300 ಕೋಟಿ ರೂ ಮಾರುಕಟ್ಟೆ ಸಂಪತ್ತು ಹೆಚ್ಚಿಸಿಕೊಂಡಿದೆ. ಇದಕ್ಕೆ ಕಾರಣವೇ ಒನ್ ಅಂಡ್ ಓನ್ಲಿ ಆರ್​​​ಸಿಬಿ.

ಡಿಯಾಜಿಯೊ ರಿಲೇ 3,300 ಕೋಟಿ ರೂ. ಗಳಿಸಿದ್ದು ಹೇಗೆ?

ಇಲ್ಲಿ ಆರ್​​​ಸಿಬಿ ತಂಡದ ಮಾಲೀಕ ಸಂಸ್ಥೆ ಡಯಾಜಿಯೋ ರಿಲೇ. ವಿಶ್ವಖ್ಯಾತ ಮದ್ಯ ತಯಾರಕ ಸಂಸ್ಥೆಯಾದ ಡಯಾಜಿಯೋದ ಅಂಗಸಂಸ್ಥೆಯಾದ ಡಯಾಜಿಯೋ ರಿಲೇ ಬಿವಿ ವಿಜಯ್ ಮಲ್ಯ ಮಾಲಕತ್ವದ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಖರೀದಿಸಿತ್ತು. ಯುನೈಟೆಡ್ ಸ್ಪಿರಿಟ್ಸ್ ಹೆಸರು ಈಗ ಯುನೈಟೆಡ್ ಬ್ರೆವರೀಸ್ ಎಂದಾಗಿದೆ. ಈ ಕಂಪನಿಯಲ್ಲಿ ಡಿಯಾಜಿಯೋದ ಷೇರುಪಾಲು ಶೇ. 55.88ರಷ್ಟಿದೆ. ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಗೂ ಇದೇ ಮಾಲೀಕನಾಗಿದೆ.

ಇದನ್ನೂ ಓದಿ: RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು ಈಗ ಉಲ್ಟಾ ಪಲ್ಟಾ

ಯುನೈಟೆಡ್ ಬ್ರಿವರೀಸ್ ಸಂಸ್ಥೆಯ ಷೇರುಬೆಲೆ ಗರಿಗೆದರಿದೆ. ಆರ್​​ಸಿಬಿ ಫೈನಲ್ ತಲುಪಿದಾಗಿನಿಂದ ಇದರ ಷೇರುಬೆಲೆ ಏರಿಕೆಯ ಹಾದಿಯಲ್ಲಿದೆ. 1,976 ರೂ ಇದ್ದ ಷೇರುಬೆಲೆ ಇವತ್ತು 2,030 ರೂಗೆ ಏರಿದೆ. ಅದರ ಮಾರುಕಟ್ಟೆ ಬಂಡವಾಳ 1,16,034 ಕೋಟಿ ರೂ ಆಗಿದೆ. ಸುಮಾರು 6,000 ಕೋಟಿ ರೂ ನಷ್ಟು ಮಾರ್ಕೆಟ್ ಕ್ಯಾಪ್ ಹೆಚ್ಚಾಗಿದೆ.

ಇನ್ನೊಂದೆಡೆ, ಲಂಡನ್​​ನ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಡಿಯಾಜಿಯೊ ರಿಲೇ ಸಂಸ್ಥೆಯ ಷೇರು ಬೆಲೆ ಕೂಡ ಏರಿದೆ. ಇದರ ಮಾರುಕಟ್ಟೆ ಬಂಡವಾಳವು 61,472 ಕೋಟಿ ರೂನಿಂದ 64,871 ಕೋಟಿ ರೂಗೆ ಏರಿದೆ. ಇಲ್ಲಿಯೂ ಕೂಡ ಕಂಪನಿಯ ಷೇರುಸಂಫತ್ತು 3,300 ಕೋಟಿ ರೂನಷ್ಟು ಹೆಚ್ಚಳ ಆಗಿದೆ.

ವಿಜಯ್ ಮಲ್ಯಗೂ 12 ಲಕ್ಷ ರೂ ಗಳಿಕೆ

ಆರ್​​ಸಿಬಿಯನ್ನು ಕಟ್ಟಿದ ವಿಜಯ್ ಮಲ್ಯಗೆ ಈಗ ಇದರಲ್ಲಿ ಯಾವುದೇ ಅಧಿಕಾರ ಮತ್ತು ನಿಯಂತ್ರಣ ಹೊಂದಿಲ್ಲ. ಆದರೆ, ಯುನೈಟೆಡ್ ಬ್ರಿವರೀಸ್​​ನಲ್ಲಿ 62,550 ಷೇರುಗಳನ್ನು ಹೊಂದಿದ್ದಾರೆ. ಈ ಕಂಪನಿಯ ಷೇರುಮೌಲ್ಯ ಹೆಚ್ಚಾದ ಪರಿಣಾಮ ವಿಜಯ್ ಮಲ್ಯ ಅವರ ಷೇರು ಸಂಪತ್ತು ಕೂಡ 12 ಲಕ್ಷ ರೂಗಳಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ: ಒದ್ದೆಯಾದ ಕಣ್ಣುಗಳು, ದುಃಖದ ಮುಖ: ಸೋತ ನಂತರ ಮೈದಾನಕ್ಕೆ ಕಣ್ಣೀರಿಡುತ್ತ ಬಂದ ಪ್ರೀತಿ ಝಿಂಟಾ

ಆರ್​​ಸಿಬಿ ಗೆಲುವಿನಿಂದ ಷೇರುಬೆಲೆ ಹೆಚ್ಚಾಯಿತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಗೆಲ್ಲುವ ಮುನ್ನವೇ ಅತಿದೊಡ್ಡ ಬ್ರ್ಯಾಂಡ್ ವ್ಯಾಲ್ಯು ಇರುವ ಟಾಪ್-3 ತಂಡಗಳಲ್ಲಿ ಒಂದೆನಿಸಿತ್ತು. ಚೆನ್ನೈ, ಮುಂಬೈ ಇಂಡಿಯನ್ಸ್ ತಂಡಗಳನ್ನು ಹಿಂದಿಕ್ಕಿ ಈಗ ಆರ್​​ಸಿಬಿ ಬ್ರ್ಯಾಂಡ್ ವ್ಯಾಲ್ಯೂನಲ್ಲಿ ನಂಬರ್ ಒನ್ ಎನಿಸಿರಬಹುದು. ಈ ಕಾರಣಕ್ಕೆ ಯುನೈಟೆಡ್ ಬ್ರಿವರೀಸ್ ಮತ್ತು ಡಿಯಾಜಿಯೋ ರಿಲೇ ಷೇರುಗಳ ಬೆಲೆ ಏರುತ್ತಿರಬಹುದು.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಲ್ಲಿ ವಿಜಯ್ ಮಲ್ಯ ಅವರ ಶೇ. 0.01 ಷೇರು ಪಾಲು ಇದೆ. ಹಾಗೆಯೇ, ವಿಟ್ಟಲ್ ಇನ್ವೆಸ್ಟ್​​ಮೆಂಟ್ಸ್ ಸಂಸ್ಥೆಯ ಷೇರು ಪಾಲು ಶೇ. 0.02ರಷ್ಟಿದೆ. ಈ ವಿಟ್ಟಲ್ ಇನ್ವೆಸ್ಟ್​​ಮೆಂಟ್ಸ್ ವಿಜಯ್ ಮಲ್ಯ ಮಾಲಕತ್ವದ ಕಂಪನಿಯಾಗಿತ್ತು. ಇದು ಹೊಂದಿರುವ ಷೇರುಪಾಲು ಇತ್ಯಾದಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ