ಗಾಂಧಿನಗರ: ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಅವಶ್ಯವಾಗಿರುವ ಬ್ಯಾಟರಿಗೆ ಲಿಥಿಯಮ್ ಅಯಾನ್ ಸೆಲ್ಗಳು (Lithium Ion Cell) ತಯಾರಿಕೆಗಾಗಿ ಗುಜರಾತ್ನಲ್ಲಿ ಫ್ಯಾಕ್ಟರಿ ಸ್ಥಾಪನೆಯಾಗಲಿದೆ. ಭಾರತದಲ್ಲಿ ಲಿಥಿಯಮ್ ಅಯಾನ್ ಸೆಲ್ಗಳು ತಯಾರಾಗಲಿರುವುದು ಇದೇ ಮೊದಲು. ಟಾಟಾ ಗ್ರೂಪ್ ಗುಜರಾತ್ನಲ್ಲಿ ಗೀಗಾ ಫ್ಯಾಕ್ಟರಿ ಸ್ಥಾಪನೆ ಮಾಡುತ್ತಿದೆ. ಗುಜರಾತ್ ಸರ್ಕಅರ ಮತ್ತು ಟಾಟಾ ಗ್ರೂಪ್ ಮಧ್ಯೆ ಒಡಂಬಡಿಕೆ ಆಗಿದ್ದು, ಬರೋಬ್ಬರಿ 13,000 ಕೋಟಿ ರೂಗಳಷ್ಟು ಆರಂಭಿಕ ಬಂಡವಾಳ ಹೂಡಿಕೆ ಆಗುವ ನಿರೀಕ್ಷೆ ಇದೆ.
ಈ ಗಿಗಾ ಫ್ಯಾಕ್ಟರಿಯಲ್ಲಿ 20 ಗಿಗಾಹರ್ಟ್ಜ್ನಷ್ಟು ಲಿಥಿಯಂ ಅಯಾನ್ ಸೆಲ್ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 13,000 ಕೋಟಿ ರೂಗಳ ಆರಂಭಿಕ ಹೂಡಿಕೆಯಿಂದ ನೇರವಾಗಿ ಮತ್ತು ಪರೋಕ್ಷವಾಗಿ 13,000 ಮಂದಿಗೆ ಉದ್ಯೋಗ ಸೃಷ್ಟಿ ಆಗುವ ಅಂದಾಜಿದೆ.
ಗುಜರಾತ್ ರಾಜಧಾನಿ ಗಾಂಧಿನಗರ್ನಲ್ಲಿ ಅಲ್ಲಿನ ಸರ್ಕಾರ ಮತ್ತು ಟಾಟಾ ಗ್ರೂಪ್ ಮಧ್ಯೆ ಎಂಒಯು ಆಗಿದೆ. ಟಾಟಾ ಗ್ರೂಪ್ನ ಅಂಗಸಂಸ್ಥೆ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸಲ್ಯೂಷನ್ಸ್ ಪ್ರೈ ಲಿ ಸಂಸ್ಥೆಯ ಸಿಇಒ ಹಾಗೂ ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿಜಯ್ ನೆಹ್ರಾ ಅವರು ಸಿಎಂ ಭೂಪೇಂದ್ರ ಪಟೇಲ್ ಉಪಸ್ಥಿತಿಯಲ್ಲಿ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗೆ ಲಿಥಿಯಮ್ ಅಯಾನ್ ಸೆಲ್ಗಳು ಅಗತ್ಯವಿವೆ. ವಿಶ್ವಸಂಸ್ಥೆಯ ನಿರ್ದೇಶನದ ಮೇರೆಗೆ ಭಾರತ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸುವತ್ತ ಗಮನ ಕೊಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ 2030ರಷ್ಟರಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆ ಕಡಿಮೆ ಮಾಡಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಕೆಯಾಗಬೇಕು ಹಾಗೂ ದೇಶದಲ್ಲಿ ಇಂಗಾಲ ಹೊರಸೂಸುವಿಕೆಯು ಶೇ. 50ರಷ್ಟು ಕಡಿಮೆ ಆಗಬೇಕೆಂದು ಗುರಿ ಇಟ್ಟಿದೆ.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚೆಚ್ಚು ತಯಾರಾಗುವ ನಿರೀಕ್ಷೆ ಇದೆ. ಇದರಿಂದ ಲಿಥಿಯಂ ಅಯಾನ್ ಬ್ಯಾಟರಿಗಳಿಗೆ ಬೇಡಿಕೆ ವಿಪರೀತ ಇರಲಿದೆ. ಈಗ ಸದ್ಯ ಈ ಬ್ಯಾಟರಿಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಟಾಟಾ ಗ್ರೂಪ್ನಿಂದ ಗಿಗಾ ಫ್ಯಾಕ್ಟರಿ ಸ್ಥಾಪನೆ ಆಗುವುದರಿಂದ ಭಾರತಕ್ಕೆ ನಾನಾ ಅನುಕೂಲಗಳಾಗುತ್ತವೆ. ಆಮದು ವೆಚ್ಚ ಕಡಿಮೆ ಆಗುವುದು, ಹಾಗೂ ಕಡಿಮೆ ಬೆಲೆಗೆ ಬ್ಯಾಟರಿ ದೊರೆಯುವುದು ಮತ್ತು ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆ ಆಗುವುದು ಸಾಧ್ಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ