Mutual Fund: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಆರಂಭಿಸಲು ಇದು ಸಕಾಲವೇ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 27, 2022 | 6:47 PM

ಮೂರು ವರ್ಷಗಳ ಲಾಕಿಂಗ್ ಅವಧಿ ಇರುವುದರಿಂದ ಹೂಡಿಕೆಯಲ್ಲಿ ಶಿಸ್ತು ಕಲಿಯಲು, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಆರಂಭಿಸಲು ELSS ಸೂಕ್ತ ಮತ್ತು ಯೋಗ್ಯವಾದ ಮೊದಲ ಮೆಟ್ಟಿಲಾಗಿದೆ.

Mutual Fund: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಆರಂಭಿಸಲು ಇದು ಸಕಾಲವೇ
ಸಾಂದರ್ಭಿಕ ಚಿತ್ರ
Follow us on

ಉಕ್ರೇನ್ ಮೇಲಿನ ರಷ್ಯಾ ದಾಳಿಯ ಸಂಭವನೀಯ ಪರಿಣಾಮಗಳ ಬಗ್ಗೆ ವಿಶ್ವದಾದ್ಯಂತ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ಮೊದಲ ದಿನ ಭಾರತದಲ್ಲಿಯೂ ಷೇರುಪೇಟೆ ಕುಸಿತ ದಾಖಲಿಸಿತಾದರೂ ಮಾರನೇ ದಿನವೇ ಪುಟಿಯಿತು. ಆದರೆ ಮುಂದಿನ ದಿನಗಳಲ್ಲಿ ಈ ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆಗೆ ನಿಖರ ಉತ್ತರ ಸಿಕ್ಕಿಲ್ಲ. ಈಗಂತೂ ಭಾರತದಲ್ಲಿ ತೆರಿಗೆ ವಿವರಗಳನ್ನು ಸಲ್ಲಿಸುವ ಸಮಯ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್​ಗಳಲ್ಲಿ (Equity Linked Savings Scheme – ELSS) ಹಣ ವಿನಿಯೋಗಿಸಲು ಸಾಕಷ್ಟು ಜನರು ಅಲೋಚಿಸುತ್ತಿದ್ದಾರೆ. ಮಾರುಕಟ್ಟೆ ಇನ್ನಷ್ಟು ಬೀಳಬಹುದು, ತುಸು ಕಾದರೆ ಒಳ್ಳೇ ಪ್ರತಿಫಲ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ಜನರು ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ.

ಆದರೆ ಮುಗಿಬಿದ್ದು ಷೇರುಪೇಟೆಗೆ ಧಾವಿಸುವ ಬದಲು ನಿಧಾನಿಸಬೇಕು, ಯೋಚಿಸಿ ಹೂಡಿಕೆ ಮಾಡಬೇಕು ಎನ್ನುವುದು ಹೂಡಿಕೆ ತಜ್ಞರ ಅಭಿಪ್ರಾಯ. ಹಣದುಬ್ಬರ ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರದಲ್ಲಿ ಬದಲಾವಣೆ ತರುವ ಮೂಲಕ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿದರ ಹೆಚ್ಚಿಸಬಹುದು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾದರೆ ಅದು ಬೆಲೆ ಏರಿಕೆಯ ಮತ್ತೊಂದು ವರ್ತುಲಕ್ಕೆ ಕಾರಣವಾಗಿ ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಎರಡು ವರ್ಷಗಳ ಹಿಂದೆ ಆದಂತೆ ಮಾರುಕಟ್ಟೆ ಒಮ್ಮೆ ಬಿದ್ದು ಮತ್ತೆ ಪುಟಿದೇಳಲಿದೆ ಎಂದು ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಜಗತ್ತಿಗೆ ಕೊವಿಡ್ ಅಪ್ಪಳಿಸಿದಾಗ ಷೇರುಪೇಟೆಗಳು ನೆಲಕಚ್ಚಿದ್ದವು. ಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಚ್ಚರಿ ಎನ್ನುವಂತೆ ಮಾರುಕಟ್ಟೆಗಳು ಪುಟಿದೆದ್ದಿದ್ದವು. ಐತಿಹಾಸಿಕ ಗರಿಷ್ಠ ಮಟ್ಟ ಮುಟ್ಟುವ ಮೂಲಕ ಎಲ್ಲರ ಲೆಕ್ಕಾಚಾರಗಳನ್ನು ತಪ್ಪು ಮಾಡಿದ್ದವು. ಇಂದಿಗೂ ಹಲವು ಹೂಡಿಕೆದಾರರಲ್ಲಿ ಅದೇ ಮನೋಭಾವ ಇದೆ.

ಷೇರುಪೇಟೆಯಲ್ಲಿ ಯಾರ ಲೆಕ್ಕಾಚಾರವನ್ನೂ ತಪ್ಪು ಎಂದು ಹೇಳಲು ಆಗುವುದಿಲ್ಲ. ಅವರ ಪ್ರಕಾರ ಅದು ಸರಿಯಿರಬಹುದು. ಆದರೆ ಮಾರುಕಟ್ಟೆಯನ್ನು ಕಾದು ಹೂಡಿಕೆ ಮಾಡುವುದು ಯಾವಾಗಲೂ ಅಪಾಯ. ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಎಸ್​ಐಪಿ (Systematic Investment Plan – SIP) ಮೂಲಕ ಮಾರುಕಟ್ಟೆ ಪ್ರವೇಶಿಸುವವರು ದೀರ್ಘಾವಧಿ ಮತ್ತು ನಿಶ್ಚಿತ ಹಣಕಾಸು ಗುರಿಗಳೊಂದಿಗೆ ಹೂಡಿಕೆ ಪಯಣ ಆರಂಭಿಸಬೇಕು. ಫಂಡ್​ಗಳ ಗುಣಮಟ್ಟ ಮತ್ತು ಅವುಗಳ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಅಳೆಯಬೇಕೇ ಹೊರತು ​ನಾವು ಹೂಡಿಕೆ ಅರಂಭಿಸುವಾಗ ಷೇರುಪೇಟೆ ಯಾವ ಸ್ಥಿತಿಯಲ್ಲಿದೆ ಎನ್ನುವುದು ಮುಖ್ಯವಾಗುವುದಿಲ್ಲ. ಏಕೆಂದರೆ ಐದು ವರ್ಷಕ್ಕೂ ಅಧಿಕ ಅವಧಿಯಲ್ಲಿ ಷೇರುಪೇಟೆಯಲ್ಲಿ ಹಣ ಹೂಡುವ ಎಸ್​ಐಪಿಗಳು ಉತ್ತಮ ಪ್ರತಿಫಲವನ್ನೇ ಕೊಡುತ್ತವೆ. ಆದರೆ ಒಂದು ವರ್ಷಕ್ಕೂ ಕಡಿಮೆ ಅವಧಿಯ ಅಲ್ಪಾವಧಿ ಹೂಡಿಕೆಯ ಬಗ್ಗೆ ಈ ಮಾತು ಹೇಳಲು ಆಗುವುದಿಲ್ಲ.

ಮಾರುಕಟ್ಟೆ ಕುಸಿಯಿತು ಅಥವಾ ಮೇಲೇರಿ ವಿಜೃಂಭಿಸಿತು ಎನ್ನುವುದು ನಿಮ್ಮ ದೀರ್ಘಾವಧಿ ಹೂಡಿಕೆ ನಿರ್ಧಾರವನ್ನು ಎಂದಿಗೂ ಪ್ರಭಾವಿಸಬಾರದು. ಉದಾಹರಣೆಗೆ ಇತ್ತೀಚೆಗಷ್ಟೇ ಮುಂಬೈ ಸೆನ್ಸೆಕ್ಸ್​ 2000 ಅಂಶಗಳ ಕುಸಿತ ದಾಖಲಿಸಿತು. ನೀವು ತರಾತುರಿಯಲ್ಲಿ ನಿಮ್ಮ ಮ್ಯೂಚುವಲ್ ಫಂಡ್ ಯೂನಿಟ್​ಗಳನ್ನು ಮಾರಿ ಹೊರಬಂದಿದ್ದರೆ ನಷ್ಟ ಅನುಭವಿಸುತ್ತಿದ್ದಿರಿ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನಷ್ಟು ಕುಸಿಯಬಹುದು ಎಂದು ಹೇಳಲು ಯಾವುದೇ ಗಟ್ಟಿ ಆಧಾರಗಳು ಸಿಗುತ್ತಿಲ್ಲ. ಈ ಮೊದಲೇ ಹೇಳಿದಂತೆ ಷೇರುಪೇಟೆ ಮುಂದೆ ಹೇಗೆ ವರ್ತಿಸಲಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರೂ ತಮಗೆ ತೋಚಿದಂತೆ ಲೆಕ್ಕಾಚಾರಗಳನ್ನು ಮಾಡುತ್ತಾರೆ. ಆದರೆ ಎಷ್ಟೋ ಸಲ ಈ ಲೆಕ್ಕಾಚಾರಗಳು ಉಲ್ಪಾಪಲ್ಟಾ ಆಗುತ್ತವೆ. ನೀವು ಎಸ್​ಐಪಿ ಯೋಜನೆಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಾಗಿದ್ದೀರಿ ಅಂದುಕೊಳ್ಳೋಣ. ಒಂದು ವೇಳೆ ಮಾರುಕಟ್ಟೆ ಕುಸಿಯಿತು ಎಂದಾದರೆ ಏನಾಗುತ್ತದೆ? ಅದು ನಿಮಗೆ ಒಳ್ಳೆಯದೇ ಅಲ್ಲವೇ, ಹೆಚ್ಚು ಯೂನಿಟ್​ಗಳು ಖರೀದಿಯಾಗುತ್ತವೆ. ನಿಮ್ಮ ಬಳಿ ಹೆಚ್ಚುವರಿ ಹಣವಿದ್ದರೆ ಅದನ್ನೂ ಈ ವೇಳೆ ಹೂಡಿಕೆಗೆ ತೊಡಗಿಸಬಹುದು.

ಈಕ್ವಿಟಿ ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆ ಎನ್ನುವುದು ದೀರ್ಘಾವಧಿಯದ್ದೇ ಆಗಿರಬೇಕು. ಕನಿಷ್ಠ ಮೂರು ವರ್ಷ ಹೂಡಿಕೆಯ ಅವಧಿ ಇರಿಸಿಕೊಳ್ಳದೆ ಯಾವುದೇ ಕಾರಣಕ್ಕೂ ಈಕ್ವಿಟಿ ಮ್ಯೂಚುವಲ್ ಫಂಡ್​ ಹೂಡಿಕೆಗೆ ಮುಂದಾಗಬೇಡಿ. ಹೀಗೆ ಹೂಡಿಕೆ ಮಾಡುವಾಗ ಮಾರುಕಟ್ಟೆಯ ಕುಸಿತದಿಂದ ಹೆಚ್ಚು ಲಾಭ ಪಡೆಯುವ ಆಸೆಯಿದ್ದರೆ ಪ್ರತಿಬಾರಿ ಷೇರುಪೇಟೆ ಕುಸಿದಾಗಲೂ ಶೇ 5ರಿಂದ 10ರಷ್ಟು ಹಣವನ್ನು ಹೆಚ್ಚುವರಿಯಾಗಿ ಷೇರುಪೇಟೆಯಲ್ಲಿ ತೊಡಗಿಸಿ. ಮಾರುಕಟ್ಟೆ ಬಿದ್ದಾಗ ಹೂಡಿಕೆ ಆರಂಭಿಸುತ್ತೇನೆ, ಎದ್ದಾಗ ನಿರ್ಗಮಿಸುತ್ತೇನೆ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಒಂದು ರೀತಿ ಲಾಟರಿಯಿದ್ದಂತೆ. ಎಲ್ಲ ಸಂದರ್ಭದಲ್ಲಿಯೂ ಲಾಟರಿ ನಿಮಗೇ ಹೊಡೆಯಬೇಕು ಎಂದೇನು ಇಲ್ಲ.

ಇಎಲ್​ಎಸ್​ಎಸ್ ಮೂಲಕ ಹೂಡಿಕೆ ಆರಂಭಿಸುವುದು ಯಾವಾಗಲೂ ಒಳ್ಳೆಯ ನಿರ್ಧಾರ ಎನಿಸಿಕೊಳ್ಳುತ್ತದೆ. ಮೂರು ವರ್ಷಗಳ ಲಾಕಿಂಗ್ ಅವಧಿ ಇರುವುದರಿಂದ ಹೂಡಿಕೆಯಲ್ಲಿ ಶಿಸ್ತು ಕಲಿಯಲು, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಆರಂಭಿಸಲು ಇದು ಸೂಕ್ತ ಮತ್ತು ಯೋಗ್ಯವಾದ ಮೊದಲ ಮೆಟ್ಟಿಲಾಗಿದೆ. ಆದಾಯ ತೆರಿಗೆ ನಿಯಮ 80 ಸಿ ಪ್ರಕಾರ ₹ 1.5 ಲಕ್ಷ ಮೊತ್ತದಷ್ಟು ಹೂಡಿಕೆಗೆ ನೇರ ವಿಚಾಯ್ತಿಯೂ ಲಭ್ಯವಿರುವುದು ಇಎಲ್​ಎಸ್​ಎಸ್​ ಫಂಡ್​ಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Mutual funds AUM: 2030ರ ಹೊತ್ತಿಗೆ ಭಾರತದ ಮ್ಯೂಚುವಲ್ ಫಂಡ್ಸ್ ಎಯುಎಂ 90 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ

ಇದನ್ನೂ ಓದಿ: ಮ್ಯೂಚುವಲ್ ಫಂಡ್​ನ ಫಂಡ್ ಮ್ಯಾನೇಜರ್​ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್​ಗಳಿದ್ದಂತೆ: ಡಾ ಬಾಲಾಜಿ ರಾವ್